ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

World Environment Day: ಪರಿಸರ ದಿನದ ಅಪೂರ್ವ ಕೊಡುಗೆ: ಕುಂದಾಪುರದಲ್ಲಿ ಲೋಕಾರ್ಪಣೆಗೊಂಡಿತು 250ಕ್ಕೂ ಹೆಚ್ಚು ಪ್ರಬೇಧಗಳ ಚಿತ್ರಕೂಟ ಔಷಧಿ ವನ

ಪರಿಸರಕ್ಕೆ ವಿಶೇಷ ಕೊಡುಗೆ ನೀಡುವ ಹಾಗೂ ಮುಂದಿನ ಪೀಳಿಗೆಗೆ ಆಯುರ್ವೇದ ಪರಂಪರೆ ಯನ್ನು ದಾಟಿಸುವ ಉದಾತ್ತ ಉದ್ದೇಶದಿಂದ ನಿರ್ಮಿಸಲಾದ, 250ಕ್ಕೂ ಹೆಚ್ಚು ಅಪರೂಪದ ಪ್ರಬೇಧದ ಗಿಡಮೂಲಿಕೆಗಳನ್ನೊಳಗೊಂಡ ಚಿತ್ರಕೂಟ ಔಷಧೀಯ ಸಸ್ಯಗಳ ಉದ್ಯಾನವನ ಕುಂದಾಪುರ ಸಮೀಪ ಇರುವ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಯಶಸ್ವಿಯಾಗಿ ಲೋಕಾರ್ಪಣೆಗೊಂಡಿದೆ.

ಗಿಡಮೂಲಿಕೆಗಳ ಸಂರಕ್ಷಣೆಗೆ ಡಾ. ರಾಜೇಶ್ ಬಾಯರಿ ತಂಡದ ಶ್ಲಾಘನೀಯ ಹೆಜ್ಜೆ

-

Profile
Ashok Nayak Jun 6, 2026 8:59 AM

ಕುಂದಾಪುರ: ವಿಶ್ವ ಪರಿಸರ ದಿನಾಚರಣೆ(World Environment Day)ಯ ಅಂಗವಾಗಿ ಕರಾವಳಿ ಯ ಹೆಮ್ಮೆಯ ಆಯುರ್ವೇದ ಸಂಸ್ಥೆ ಕುಂದಾಪುರದ ಆಲೂರು ತಾಲೂಕಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಹಸಿರು ಕ್ರಾಂತಿಯೊಂದಿಗೆ ಆರೋಗ್ಯ ಕ್ರಾಂತಿಗೆ ಮುನ್ನುಡಿ ಬರೆಯಲಾಗಿದೆ.

ಪರಿಸರಕ್ಕೆ ವಿಶೇಷ ಕೊಡುಗೆ ನೀಡುವ ಹಾಗೂ ಮುಂದಿನ ಪೀಳಿಗೆಗೆ ಆಯುರ್ವೇದ ಪರಂಪರೆ ಯನ್ನು ದಾಟಿಸುವ ಉದಾತ್ತ ಉದ್ದೇಶದಿಂದ ನಿರ್ಮಿಸಲಾದ, 250ಕ್ಕೂ ಹೆಚ್ಚು ಅಪರೂಪದ ಪ್ರಬೇಧದ ಗಿಡಮೂಲಿಕೆಗಳನ್ನೊಳಗೊಂಡ ಚಿತ್ರಕೂಟ ಔಷಧೀಯ ಸಸ್ಯಗಳ ಉದ್ಯಾನವನ ಕುಂದಾಪುರ ಸಮೀಪ ಇರುವ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಯಶಸ್ವಿಯಾಗಿ ಲೋಕಾರ್ಪಣೆಗೊಂಡಿದೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಬರಿಗಾಲ ಸಂತನೆಂದೇ ಖ್ಯಾತಿ ಹೊಂದಿರುವ ಗುರುರಾಜ ಗಂಟಿಹೊಳೆ ಅವರು ಈ ಅತ್ಯಪೂರ್ವ ಔಷಧಿ ವನವನ್ನು ಉದ್ಘಾಟಿಸಿ, ಚಿತ್ರಕೂಟ ಸಂಸ್ಥೆಯ ಪರಿಸರ ಸ್ನೇಹಿ ಹೆಜ್ಜೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಇದನ್ನೂ ಓದಿ: World Environment Day: ಪರಿಸರ ಸಂರಕ್ಷಣೆಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5 ಲಕ್ಷ ಗಿಡಗಳ ನೆಡುವ ಮಹಾ ಅಭಿಯಾನಕ್ಕೆ ಕೈಜೋಡಿಸಿ : ನ್ಯಾಯಾಧೀಶೆ ಲತಾ ಕುಮಾರಿ ಎಂ

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಡಾ.ರಾಜೇಶ್ ಬಾಯರಿ ಅವರು ಸ್ವಂತ ಊರಿನಲ್ಲೇ ಉಳಿದು, ಸ್ಥಳೀಯ ಸಂಪನ್ಮೂಲ ಮತ್ತು ಪ್ರಕೃತಿಯನ್ನು ಬಳಸಿಕೊಂಡು ಗ್ರಾಮೀಣ ಭಾಗದಲ್ಲೂ ಜಾಗತಿಕ ಮಟ್ಟದ ಅದ್ಭುತ ಸಾಧನೆ ಮಾಡಬಹುದು ತೋರಿಸಿಕೊಟ್ಟಿದ್ದಾರೆ. ಅದಕ್ಕೆ ಚಿತ್ರಕೂಟ ಆಯುರ್ವೇದ ಸಂಸ್ಥೆಯೇ ಅತ್ಯುತ್ತಮ ಉದಾಹರಣೆ. ವೈದ್ಯರು ಇಲ್ಲಿ ನಿರ್ಮಿಸಿರುವ ಚಿಕಿತ್ಸಾ ವ್ಯವಸ್ಥೆ ಮತ್ತು ದಿವ್ಯ ಪರಿಸರವನ್ನು ಕಂಡು ನಮಗೆ ಹತ್ತು ಪಟ್ಟು ಹೆಮ್ಮೆಯಾಗುತ್ತಿದೆ. ಇದೊಂದು ಅದ್ಭುತ ಮಾದರಿಯಾಗಿದೆ. ಯಾವುದೇ ದೊಡ್ಡ ಜಾಹೀರಾತುಗಳ ಆಡಂಬರವಿಲ್ಲದೆ, ಕೇವಲ ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರ ಬಾಯಿಮಾತಿನ ಪ್ರಚಾರದಿಂದಲೇ ಇಂದು ದೇಶ-ವಿದೇಶ ಗಳಿಂದ ರೋಗಿಗಳು ಈ ಗ್ರಾಮೀಣ ಭಾಗದ ಸಂಸ್ಥೆಯನ್ನು ಹುಡುಕಿಕೊಂಡು ಬರುತ್ತಿದ್ದಾರೆ" ಎಂದು ಶಾಸಕರು ಮೆಚ್ಚುಗೆ ಸಲ್ಲಿಸಿದರು.

ಬೇರೆಲ್ಲೂ ಸುಲಭವಾಗಿ ಸಿಗದ ಅತ್ಯಪೂರ್ವ ಮತ್ತು ಅಳಿವಿನ ಅಂಚಿನಲ್ಲಿರುವ ಔಷಧೀಯ ಸಸ್ಯಗಳನ್ನು ಕಲೆ ಹಾಕಿ ಈ ವನದಲ್ಲಿ ಸಂರಕ್ಷಿಸಲಾಗಿದೆ. ಯಾವುದೇ ರಾಸಾಯನಿಕಗಳು ಸೇರದ, ಸಂಪೂರ್ಣ ನೈಸರ್ಗಿಕ ಗಿಡಮೂಲಿಕೆಗಳಿಂದಲೇ ರೋಗಿಗಳಿಗೆ ಶುದ್ಧ ಆಯುರ್ವೇದ ಚಿಕಿತ್ಸೆ ನೀಡಬೇಕು ಮತ್ತು ಇಡೀ ಜಗತ್ತಿಗೆ ಉತ್ತಮ ಆರೋಗ್ಯವನ್ನು ಕರುಣಿಸಬೇಕು ಎನ್ನುವುದು ಚಿತ್ರಕೂಟ ಸಂಸ್ಥೆಯ ಮುಖ್ಯಸ್ಥರಾದ ಖ್ಯಾತ ಆಯುರ್ವೇದ ತಜ್ಞ ಡಾ. ರಾಜೇಶ್ ಬಾಯರಿ ಅವರ ಕನಸಾಗಿದೆ. ಪ್ರಸ್ತುತ ಬಾಯರಿ ಅವರ ವೈದ್ಯರ ತಂಡವು ಇದೇ ಉದ್ಯಾನವನದ ಅಮೂಲ್ಯ ಗಿಡಮೂಲಿಕೆಗಳನ್ನು ಬಳಸಿಕೊಂಡು ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುತ್ತಿದೆ.

ಈ ಕುರಿತು ಡಾ.ರಾಜೇಶ್ ಬಾಯರಿ ಅವರು, “ಔಷಧೀಯ ಸಸ್ಯಗಳ ಸಂರಕ್ಷಣೆ ಎಂದರೆ ಕೇವಲ ಸಸ್ಯಗಳ ರಕ್ಷಣೆ ಮಾತ್ರವಲ್ಲ; ಅದು ನಮ್ಮ ಆರೋಗ್ಯ, ಸಂಸ್ಕೃತಿ ಮತ್ತು ಪ್ರಾಚೀನ ಪರಂಪರೆಯ ಸಂರಕ್ಷಣೆಯೂ ಆಗಿದೆ” ಎಂದು ತಿಳಿಸಿದರು.

ಚಿತ್ರಕೂಟ ಆಯುರ್ವೇದ ಆಸ್ಪತ್ರೆಗೆ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಪ್ರಕೃತಿ-ಆಯುರ್ವೇದ ಆಸಕ್ತರು ಕ್ಷೇತ್ರ ವೀಕ್ಷಣೆಗೆ ಆಗಮಿಸುತ್ತಾರೆ. ಇಲ್ಲಿಗೆ ಬರುವ ಆಸಕ್ತರು ವಿವಿಧ ಔಷಧೀಯ ಸಸ್ಯಗಳನ್ನು ನೇರವಾಗಿ ವೀಕ್ಷಿಸಿ, ಅವುಗಳ ಔಷಧೀಯ ಗುಣಗಳು, ರೋಗ ನಿರೋಧಕ ಶಕ್ತಿ ಹಾಗೂ ಆರೋಗ್ಯದ ದೃಷ್ಟಿಯಿಂದ ಅವುಗಳ ಮಹತ್ವವನ್ನು ಪ್ರಾಯೋಗಿಕವಾಗಿ ತಿಳಿದು ಕೊಳ್ಳಲು ಈ ಉದ್ಯಾನವನ ಅತ್ಯುತ್ತಮ ವೇದಿಕೆಯಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ 8762220168 ಸಂಪರ್ಕಿಸಬಹುದು.

ಕೇವಲ ಆಸ್ಪತ್ರೆಯ ಆವರಣಕ್ಕೆ ಮಾತ್ರ ಸೀಮಿತವಾಗದೆ, ಸಾರ್ವಜನಿಕರಲ್ಲಿ ಪರಿಸರ ಹಾಗೂ ಆರೋಗ್ಯದ ಜಾಗೃತಿ ಮೂಡಿಸುವುದು ಈ ವನದ ಮುಖ್ಯ ಉದ್ದೇಶವಾಗಿದೆ. ಇಲ್ಲಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸಸ್ಯಗಳನ್ನು ಮನೆಮಟ್ಟದಲ್ಲಿ ತುರ್ತು ಚಿಕಿತ್ಸೆಗೆ ಹೇಗೆ ಬಳಸಬಹುದು, ಅವುಗಳಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು ಹಾಗೂ ಪ್ರತಿಯೊಬ್ಬರೂ ತಮ್ಮ ಮನೆಯ ಕೈದೋಟದಲ್ಲಿ ಇವುಗಳನ್ನು ಹೇಗೆ ಸುಲಭವಾಗಿ ಬೆಳೆಸಬಹುದು ಎಂಬುದರ ಬಗ್ಗೆ ಚಿತ್ರಕೂಟದ ತಜ್ಞರು ಪ್ರಾಯೋಗಿಕ ಮಾಹಿತಿ ನೀಡುತ್ತಾರೆ.

ಪ್ರಕೃತಿ ಮತ್ತು ಪ್ರಾಣಶಕ್ತಿಯ ಸಂಯೋಜನೆಯಂತಿರುವ ಈ ಚಿತ್ರಕೂಟ ಔಷಧಿ ವನವು ಕರಾವಳಿ ಭಾಗದಲ್ಲಿ ಪರಿಸರ ಸಂರಕ್ಷಣೆ ಮತ್ತು ಆಯುರ್ವೇದ ವೈದ್ಯಕೀಯ ಕ್ಷೇತ್ರಕ್ಕೆ ಸಂದ ಬಹುದೊಡ್ಡ ಕೊಡುಗೆಯಾಗಿ ಮೂಡಿಬಂದಿದೆ ಎಂದು ಗಣ್ಯರು ಹಾಗೂ ಸಾರ್ವಜನಿಕರು ಪ್ರಶಂಸಿಸಿದ್ದಾರೆ.