ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದ ಡಿಸಿಎಂ ಡಿಕೆಶಿ; ಶ್ರೀ ಸುಗಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮನಕ್ಷತ್ರೋತ್ಸವದಲ್ಲಿ ಭಾಗಿ
DK Shivakumar: ನಾನು ಏನು ಮಾತನಾಡಿದರೂ ಅದರಲ್ಲಿ ತಪ್ಪು ಕಂಡು ಹಿಡಿಯುವುದೇ ಹೆಚ್ಚಾಗಿದೆ. ಹೀಗಾಗಿ ನನ್ನ ಬಾಯಿಂದ ಯಾವುದೇ ತಪ್ಪು ನುಡಿಸದಂತೆ ಶ್ರೀಕೃಷ್ಣ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

-

ಉಡುಪಿ: ಉಡುಪಿ ಶ್ರೀಕೃಷ್ಣ ಮಠಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರು ಶನಿವಾರ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದರು. ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಮಠಾಧೀಶರಾದ ಶ್ರೀ ಸುಗಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮನಕ್ಷತ್ರೋತ್ಸವ ಸಮಾರಂಭದಲ್ಲಿ ಭಾಗಿಯಾಗಲು ಡಿಸಿಎಂ ಉಡುಪಿಗೆ ಭೇಟಿ ನೀಡಿದ್ದರು. ಕೃಷ್ಣನಿಗೆ ಪೂಜೆ ಸಲ್ಲಿಕೆ ವೇಳೆ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಜತೆಗಿದ್ದರು.
ಬಳಿಕ ಶ್ರೀ ಪುತ್ತಿಗೆ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಮಧ್ವಾಚಾರ್ಯರ ಸ್ಮರಣಾರ್ಥ ಅಂಚೆ ಚೀಟಿಯನ್ನು ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಕೆಲವರು ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ಬಂಡೆ ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನೀವು ಬಂಡೆಯಿಂದ ಮೆಟ್ಟಿಲು, ಆಧಾರ ಸ್ತಂಭ, ಜಲ್ಲಿ, ವಿಗ್ರಹ ಮಾಡಬಹುದು. ಅದೇ ರೀತಿ ನೀವು ನನ್ನನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ನಾನು ಏನು ಮಾತನಾಡಿದರೂ ಅದರಲ್ಲಿ ತಪ್ಪು ಕಂಡು ಹಿಡಿಯುವುದೇ ಹೆಚ್ಚಾಗಿದೆ. ಹೀಗಾಗಿ ನನ್ನ ಬಾಯಿಂದ ಯಾವುದೇ ತಪ್ಪು ನುಡಿಸದಂತೆ ಶ್ರೀಕೃಷ್ಣ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ. ಶ್ರೀಕೃಷ್ಣನ ದಿವ್ಯ ದರ್ಶನ ಮಾಡಿ ಶ್ರೀಗಳ ಜೊತೆಯಲ್ಲಿ ಮಧ್ವಾಚಾರ್ಯರ ಅಂಚೆಚೀಟಿ ಬಿಡುಗಡೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ ಎಂದು ತಿಳಿಸಿದರು.

“ಧರ್ಮ, ಪೂಜೆ, ಭಕ್ತಿ ಪ್ರದರ್ಶನಕ್ಕಿರುವ ವಸ್ತುಗಳಲ್ಲ. ಎಲ್ಲರ ಆಚಾರ ವಿಚಾರಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಿರುವುದು ನಮ್ಮ ಕರ್ತವ್ಯ. ನಾನು ಅನೇಕ ಬಾರಿ ಕೃಷ್ಣನ ಮಠಕ್ಕೆ ಹಾಗೂ ಕೃಷ್ಣನ ದಿವ್ಯ ಸಾನಿಧ್ಯಕ್ಕೆ ಬಂದಿದ್ದೇನೆ. ಶ್ರೀಗಳು ನನಗೆ ಕೃಷ್ಣನ ವಿಶ್ವರೂಪ ದರ್ಶನ ತೋರಿಸಿದರು. ನಾನು ಬಂಧಿಖಾನೆ ಸಚಿವನಾಗಿದ್ದಾಗಲೂ ನನಗೆ ಮಠದಿಂದ ಆಹ್ವಾನ ಬಂದಿತ್ತು. ಈ ವಿಶ್ವರೂಪ ದರ್ಶನವನ್ನು ನೋಡಿದಾಗ ನನಗೆ ನನ್ನ 50-60 ವರ್ಷಗಳ ಬದುಕಿನ ನೆನಪು ತಲೆಯಲ್ಲಿ ಸುಳಿದವು ಎಂದರು.
ನಮ್ಮ ಧರ್ಮ ಮನುಷ್ಯನಿಗೆ ಆತ್ಮ ವಿಶ್ವಾಸ ಹೆಚ್ಚಿಸುವ ದಾರಿ. ಈ ವೇದಿಕೆ ಮೇಲೆ ಶ್ರೀಗಳು ಮೂರ್ನಾಲ್ಕು ಪುಸ್ತಕ ನೀಡಿದರು. ಅವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣವನ್ನು ನೋಡಿದೆ. ಆ ಭಾಷಣದಲ್ಲಿ ಅವರು, ‘ನಾವು ಧರ್ಮಕ್ಕೆ ಅಂಟಿಕೊಂಡಿರಬಾರದು. ಬಂಧಿಸಲ್ಪಡಬಾರದು. ಬದಲಾಗಿ ನಾವು ಬಯಸಿ ಇಚ್ಛಿಸುವ ಧರ್ಮವನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದಿದ್ದಾರೆ. ನಾನು ಅವರ ಮಾತುಗಳನ್ನು ಒಪ್ಪುತ್ತೇನೆ” ಎಂದು ಹೇಳಿದರು.
“ಧರ್ಮ ಯಾವುದಾದರೂ ತತ್ವವೊಂದೇ. ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೆ. ದೇವನೊಬ್ಬ ನಾಮ ಹಲವು. ನಾವು ಅನೇಕ ಹೆಸರಿನಲ್ಲಿ ದೇವರನ್ನು ಕರೆಯುತ್ತಿದ್ದೇವೆ. ನಾವು ಶಿವ, ಕೃಷ್ಣನನ್ನು ಬೇರೆ ಬೇರೆ ಹೆಸರಿನಲ್ಲಿ ಕರೆಯುತ್ತಾ ಬಂದಿದ್ದೇವೆ. ನಾವು ಕೃಷ್ಣನನ್ನು ಯಾಕೆ ಇಷ್ಟು ಪ್ರೀತಿಯಿಂದ ಒಪ್ಪುತ್ತೇವೆ ಎಂದರೆ ಕೃಷ್ಣ ಒಬ್ಬ ಶಿಕ್ಷಕ, ಮಾರ್ಗದರ್ಶಕ, ಚಿಂತಕ, ರಾಜಕಾರಣಿ, ಪ್ರೇಮಿ, ತತ್ವಜ್ಞಾನಿ” ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Dasa sahitya: ಬಿಎಲ್‌ಡಿಇ ಸಂಸ್ಥೆಯಿಂದ 65 ಸಂಪುಟಗಳಲ್ಲಿ ದಾಸ ಸಾಹಿತ್ಯ ಪ್ರಕಟ: ಎಂ.ಬಿ. ಪಾಟೀಲ್
“ಶ್ರೀಗಳು ಮಾತನಾಡುತ್ತಾ ಮಧ್ವಾಚಾರ್ಯರ ಆಚಾರ ವಿಚಾರಗಳನ್ನು ಯುವಕರ ಮೂಲಕ ವಿದೇಶದಲ್ಲಿ ಪಸರಿಸಬೇಕು ಎಂದು ಹೇಳಿದರು. ಆಗ ನನಗೆ ಅಲೆಕ್ಸಾಂಡರ್ ಕಥೆ ನೆನಪಾಯಿತು. ಅಲೆಕ್ಸಾಂಡರ್ ವಿಶ್ವವನ್ನು ಗೆಲ್ಲಬೇಕು ಎಂದು ಭಾರತದತ್ತ ದಾಳಿ ಮಾಡುವ ಮುನ್ನ ತನ್ನ ಗುರು ಅರಿಸ್ಟಾಟಲ್ ಭೇಟಿ ಮಾಡುತ್ತಾನೆ. ಆಗ ಅರಿಸ್ಟಾಟಲ್ ಅವರು ನೀನು ಭಾರತವನ್ನು ಗೆಲ್ಲಬೇಕಾದರೆ, ಅಲ್ಲಿಂದ ರಾಮಾಯಣ ಗ್ರಂಥ, ಭಗವದ್ಗೀತೆ ಕೃತಿ, ಗಂಗಾ ಜಲ, ಕೃಷ್ಣನ ಕೊಳಲು ಹಾಗೂ ಓರ್ವ ತತ್ವಜ್ಞಾನಿ, ಈ ಐದು ವಸ್ತುಗಳನ್ನು ತೆಗೆದುಕೊಂಡು ಬಾ. ಆಗ ನೀನು ಇಡೀ ಭಾರತವನ್ನು ಗೆದ್ದಂತೆ ಎಂದರಂತೆ. ನಮ್ಮ ಸಂಸ್ಕೃತಿಯೇ ಈ ದೇಶದ ಆಸ್ತಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕಿರಿಯ ಸ್ವಾಮೀಜಿ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಕರ್ನಾಟಕ ಸರ್ಕಲ್ ನ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕೆ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.