Kapu Beach Tragedy: ಕಾಪು ಬೀಚ್‌ನಲ್ಲಿ ದುರಂತ; ಪ್ರವಾಸಕ್ಕೆ ಬಂದಿದ್ದ ಇಬ್ಬರು ಸಮುದ್ರ ಪಾಲು, ಒಬ್ಬರ ರಕ್ಷಣೆ
ದಾವಣಗೆರೆ ಮೂಲದ ಒಂದೇ ಕುಟುಂಬದ 10 ರಿಂದ 12 ಸದಸ್ಯರು ಕಾಪು ಬೀಚ್‌ಗೆ ಆಗಮಿಸಿದ್ದರು. ಸಂಜೆ ಸಮುದ್ರದ ನೀರಿನಲ್ಲಿ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ಮೂವರು ಅಲೆಗಳ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಒಬ್ಬ ಬಾಲಕನನ್ನು ರಕ್ಷಿಸಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ.
-
ಉಡುಪಿ: ಪ್ರವಾಸಕ್ಕೆಂದು ಕುಟುಂಬದವರೊಂದಿಗೆ ಕಾಪು ಬೀಚ್‌ಗೆ (Kapu Beach Tragedy) ಆಗಮಿಸಿದ್ದ ಇಬ್ಬರು ಮಕ್ಕಳು ಸಮುದ್ರದ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಮುಳುಗುತ್ತಿದ್ದ ಮತ್ತೊಬ್ಬ ಬಾಲಕನನ್ನು ಲೈಫ್ ಗಾರ್ಡ್ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಿಸಿದ್ದಾರೆ.
ದಾವಣಗೆರೆ ಮೂಲದ ಒಂದೇ ಕುಟುಂಬದ 10 ರಿಂದ 12 ಸದಸ್ಯರು ಬೀಚ್‌ಗೆ ಆಗಮಿಸಿದ್ದರು. ಸಂಜೆ ಸುಮಾರು 4:30ರ ವೇಳೆಗೆ ಮಕ್ಕಳು ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಮೊಹಮ್ಮದ್ ಇಸಾಕ್, ಸಮೀರ್ ಭಾಷಾ ಹಾಗೂ ಮಲ್ಲಿಕ್ ರಿಯಾನ್ ಅಲೆಗಳ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೊಹಮ್ಮದ್ ಇಸಾಕ್‌ನನ್ನು ರಕ್ಷಿಸಿದ್ದಾರೆ. ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಮೀರ್ ಭಾಷಾ (20) ಹಾಗೂ ಮಲ್ಲಿಕ್ ರಿಯಾನ್ (15) ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಪತ್ತೆಗಾಗಿ ಸ್ಥಳೀಯರು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ಶೋಧ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಭೀಕರ ಅಪಘಾತ; ಮದುವೆಯಾದ ಒಂದೂವರೆ ತಿಂಗಳಲ್ಲೇ ನವದಂಪತಿ ದುರ್ಮರಣ!
ಶಿವಮೊಗ್ಗ: ಮದುವೆಯಾದ ಒಂದೂವರೆ ತಿಂಗಳಲ್ಲೇ ನವದಂಪತಿ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ (Shivamogga Accident) ಶಿವಮೊಗ್ಗದ ಸಾಗರ ರಸ್ತೆ ಬಳಿಯ ರಿಂಗ್ರೋಡ್ನಲ್ಲಿ ನಡೆದಿದೆ. ಶರಾವತಿ ನಗರದ ನಿವಾಸಿ ಕಿರಣ್ ಜಿ. (28) ಹಾಗೂ ಸೌಮ್ಯಾ (22) ಮೃತರು.
ಕಿರಣ್ ಅವರು ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ಶರಾವತಿ ನಗರದ ಮನೆಯಿಂದ ಸೌಮ್ಯಾ ಅವರ ತವರು ಮನೆ ಗೋವಿಂದಪುರಕ್ಕೆ ಬೈಕ್ನಲ್ಲಿ ತೆರಳುತ್ತಿದ್ದಾಗ, ರಿಂಗ್ರೋಡ್ನಲ್ಲಿ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮದುವೆಯ ಸಂಭ್ರಮದಲ್ಲಿದ್ದ ಎರಡೂ ಕುಟುಂಬಗಳಲ್ಲಿ ಸಾವಿನ ಸುದ್ದಿ ಆಘಾತ ಉಂಟುಮಾಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತುಂಗಾನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.