ತಿಲಕ್ ವರ್ಮಾ ಶತಕ ವ್ಯರ್ಥ; ಪಾಕಿಸ್ತಾನ ವಿರುದ್ಧ ಸೋತ ಭಾರತ
India A vs Pakistan A: ಭಾರತ ತಂಡ ನೋ ಹ್ಯಾಂಡ್‌ಶೇಕ್ ಪಾಲಿಸಿಯನ್ನು ಈ ಪಂದ್ಯದಲ್ಲಿಯೂ ಮುಂದುವರಿಸಿತು. ಟಾಸ್ ಪ್ರಕ್ರಿಯೆ ವೇಳೆಯೂ ಉಭಯ ತಂಡಗಳ ನಾಯಕರು ಪರಸ್ಪರ ಕೈ ಕುಲುಕಲಿಲ್ಲ. ಜತೆಗೆ ಪಂದ್ಯ ಮುಕ್ತಾಯದ ನಂತರವೂ ಟೀಮ್ ಇಂಡಿಯಾ ಆಟಗಾರರು ಕೇವಲ ಅಂಪೈರ್‌ಗಳೊಂದಿಗೆ ಹ್ಯಾಂಡ್‌ಶೇಕ್ ಮಾಡಿ ಮೈದಾನ ತೊರೆದರು.
Pakistan A -
ದೋಹಾ, ನ.22: ಹಲವು ನಾಟಕೀಯ ತಿರುವ ಪಡೆದುಕೊಂಡ ಭಾರತ ಮತ್ತು ಪಾಕಿಸ್ತಾನ ನಡುವಣ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಏಕದಿನ ಟೂರ್ನಿಯ ಪಂದ್ಯದಲ್ಲಿ ಕೊನೆಗೂ ಪಾಕಿಸ್ತಾನದ ಕೈ ಮೇಲಾಯಿತು. 48 ರನ್ ಅಂತರದ ಗೆಲುವಿನೊಂದಿಗೆ ಅಜೇಯ ಓಟ ಮುಂದುವರಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ತನ್ನ ಆಯ್ಕೆಗೆ ತಕ್ಕ ಪ್ರದರ್ಶನ ತೋರಿ 49.2 ಓವರ್‌ಗಳಲ್ಲಿ 313ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಭಾರತ ಭಾರತ, ನಾಯಕ ತಿಲಕ್ ವರ್ಮಾ(100) ಮತ್ತು ಶಹಬಾಜ್ ಅಹ್ಮದ್(56) ಅವರ ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ 49.1 ಓವರ್‌ಗಳಲ್ಲಿ 265 ರನ್‌ಗೆ ಆಲೌಟ್ ಆಯಿತು.
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತ ಆರಂಭದಲ್ಲೇ ಆಘಾತ ಎದುರಿಸಿತು. ಭಾರೀ ನಿರೀಕ್ಷೆ ಮೂಡಿಸಿದ್ದ ವೈಭವ್ ಸೂರ್ಯವಂಶಿ ಕೇವಲ 2 ಬೌಂಡರಿಗೆ ಸೀಮಿತವಾಗಿ 11ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಆಯುಷ್ ಬದೋನಿ(0) ಶೂನ್ಯ ಸುತ್ತಿದರು. ಆ ಬಳಿಕ ಬಂದ ಕುಮಾರ್ ಕುಶಾಗ್ರ(2), ರಿಂಕು ಸಿಂಗ್(6) ಮತ್ತು ಸೂರ್ಯಾಂಶ್ ಶೆಡ್ಗೆ(3) ಪೆವಿಲಿಯನ್ ಪರೇಡ್ ನಡೆಸಿದರು.
ನೂರರ ಗಡಿ ದಾಟುವ ಮುನ್ನವೇ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತಕ್ಕೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಮತ್ತು ನಾಯಕ ತಿಲಕ್ ವರ್ಮಾ 67ರನ್‌ಗಳ ಜತೆಯಾಟದ ಮೂಲಕ ಸಣ್ಣ ಚೇತರಿಕೆ ನೀಡಿದರು. ಅಭಿಷೇಕ್ ಶರ್ಮ ಅರ್ಧಶಕದ ಬಾರಿಸಿದ ಬಳಿಕ ಔಟಾದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಅಭಿಷೇಕ್ ತಲಾ 6 ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ 70 ರನ್ ಬಾರಿಸಿದರು.
ಅಭಿಷೇಕ್ ವಿಕೆಟ್ ಪತನದ ಬಳಿಕ ಆಡಲಿಳಿದ ಶಹಬಾಜ್ ಅಹ್ಮದ್ ಅವರು ತಿಲಕ್ ಜತೆ ಸೇರಿಕೊಂಡು ಅಮೂಲ್ಯ ಜತೆಯಾಟವನ್ನು ಮುಂದುವರಿಸಿ ಭಾರತದ ಗೆಲುವಿನ ಆಸೆಯನ್ನು ಮತ್ತೆ ಚಿಗುರುವಂತೆ ಮಾಡಿದರು. ತಿಲಕ್ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿದರೆ, ಶಹಬಾಜ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಪಾಕ್ ಬೌಲರ್‌ಗಳನ್ನು ದಂಡಿಸಿದರು. ಗೆಲುವಿಗೆ 73 ರನ್ ಬೇಕಿದ್ದಾಗ ಶಹಬಾಜ್ ವಿಕೆಟ್ ಪತನಗೊಂಡಿತು. ಈ ವಿಕೆಟ್ ಪತನಗೊಂಡದ್ದೇ ತಡ ಭಾರತ ದಿಢೀರ್ ಕುಸಿತ ಕಂಡಿತು. ಬಳಿಕ ಬಂದ ವಿಪ್ರಜ್ ನಿಗಮ್ ಗೋಲ್ಡನ್ ಡಕ್ ಆದರು. ಶಹಬಾಜ್ ಮತ್ತು ತಿಲಕ್ ಏಳನೇ ವಿಕೆಟ್‌ಗೆ 112ರನ್‌ಗಳ ಜತೆಯಾಟ ನಡೆಸಿದರು. 49 ಎಸೆತ ಎದುರಿಸಿದ ಶಹಬಾಜ್ 6 ಸಿಕ್ಸರ್ ಮತ್ತು ಒಂದು ಬೌಂಡರಿ ನೆರವಿನಿಂದ 56 ರನ್ ಗಳಿಸಿದರು. ಒಂದೊಮ್ಮೆ ಶಹಬಾಜ್ ವಿಕೆಟ್ ಪತನಗೊಳ್ಳದೆ ಇರುತ್ತಿದ್ದರೆ ಭಾರತ ಪಂದ್ಯವನ್ನು ಸುಲಭವಾಗಿ ಗೆಲ್ಲುವ ಸಾಧ್ಯತೆಯಿತ್ತು. ಪಾಕಿಸ್ತಾನ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಅಲಿ ರಜಾ ಮತ್ತು ಹಸನ್ ನವಾಜ್ ತಲಾ 3 ವಿಕೆಟ್ ಕಿತ್ತರು. ತಿಲಕ್ ವರ್ಮ ಶತಕ ಪೂರ್ತಿಗೊಳಿಸಿ ವಿಕೆಟ್ ಕಳೆದುಕೊಂಡರು. ಈ ವಿಕೆಟ್ ಪತನದೊಂದಿಗೆ ಭಾರತದ ಇನಿಂಗ್ಸ್ ಕೂಡ ಮುಕ್ತಾಯಗೊಂಡಿತು.
ಪಾಕ್ ಆಕ್ರಮಣಕಾರಿ ಬ್ಯಾಟಿಂಗ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆದಿದ ಪಾಕಿಸ್ತಾನ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಹರ್ಷಿತ್ ರಾಣಾ ಎಸೆದ ಇನಿಂಗ್ಸ್‌ನ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಶಮೈಲ್ ಹುಸೆನ್ ಮತ್ತು ಮಾಜ್ ಸದಾಕತ್ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದರು. ಈ ಪರಿಣಾಮ ತಂಡಕ್ಕೆ ಓವರ್‌ಗೆ 10ರ ಸರಾಸರಿಯಲ್ಲಿ ರನ್ ಹರಿದುಬಂತು. ಅನುಭವಿ ಬೌಲರ್‌ಗಳಾದ ಹರ್ಷಿತ್ ರಾಣಾ ಮತ್ತು ಪ್ರಿನ್ಸ್ ಯಾದವ್ ಸರಿಯಾಗಿ ದಂಡಿಸಿಕೊಂಡರು. ಕೊನೆಗೆ ಅರೆಕಾಲಿಕ ಸ್ಪಿನ್ನರ್ ಆಯುಷ್ ಬದೋನಿ ಈ ಜೋಡಿಯನ್ನು ಬೇರ್ಪಡಿಸಿದರು. ಶಮೈಲ್ ಹುಸೆನ್(33) ವಿಕೆಟ್ ಕಿತ್ತು ಭಾರತಕ್ಕೆ ಮೊದಲ ಯಶಸ್ಸು ತಂದು ಕೊಟ್ಟರು. ಇದರ ಬೆನ್ನಲ್ಲೇ ಪಾಕ್‌ನ ಇನ್ನೊಂದು ವಿಕೆಟ್ ಕೂಡ ಪತನಗೊಂಡಿತು. ರೋಹೈಲ್ ನಜೀರ್(0) ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು.
ಹರ್ಷಿತ್ ರಾಣಾ ಆಕ್ರಮಣಕಾರಿ ವರ್ತನೆಗೆ ಬೇಸತ್ತ ಪಾಕಿಸ್ತಾನ ಬ್ಯಾಟರ್‌ಗಳು; ವಿಡಿಯೊ ವೈರಲ್
ಸತತವಾಗಿ ಎರಡು ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ತಂಡಕ್ಕೆ ಹಾನಿಯಾಗದಂತೆ ನೋಡಿಕೊಂಡರು. ಒಟ್ಟು ಮೂವರು ಅರ್ಧಶತಕ ಬಾರಿಸಿದರು. ಮಾಜ್ ಸದಾಕತ್ (59), ಹಸನ್ ನವಾಜ್(79), ಫರ್ಹಾನ್ ಯೂಸಫ್(56) ರನ್‌ಗಳಿಸಿದರು. ಉಳಿದಂತೆ ನಾಯಕ ಅಬ್ದುಲ್ ಸಮದ್(28), ಮೊಹಮ್ಮದ್ ಇಮ್ರಾನ್(23) ಕೊಡುಗೆ ನೀಡಿದರು. ಭಾರತ ಪರ ಬೌಲಿಂಗ್‌ನಲ್ಲಿ ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಸೂರ್ಯಾಂಶ ಶೆಡ್ಗೆ ಮತ್ತು ವಿಪ್ರಜ್ ನಿಗಮ್ ತಲಾ ಎರಡು ವಿಕೆಟ್ ಪಡೆದರು. ಹರ್ಷಿತ್ ರಾಣಾ ಪಂದ್ಯದುದ್ದಕ್ಕೂ ಪಾಕ್ ಆಟಗಾರರ ಜತೆ ಮಾತಿನ ಚಕಮಕಿಯಲ್ಲಿ ತೊಡಗುವ ಮೂಲಕ ಅಂಪೈರ್‌ಗಳ ಕೆಂಗಣ್ಣಿಗೂ ಕಾರಣರಾದರು. ಒಂದೆರಡು ಬಾರಿ ಅಂಪೈರ್ ಎಚ್ಚರಿಕೆಯನ್ನು ನೀಡಿದರು.
ನೋ ಹ್ಯಾಂಡ್‌ಶೇಕ್
ಭಾರತ ತಂಡ ನೋ ಹ್ಯಾಂಡ್‌ಶೇಕ್ ಪಾಲಿಸಿಯನ್ನು ಈ ಪಂದ್ಯದಲ್ಲಿಯೂ ಮುಂದುವರಿಸಿತು. ಟಾಸ್ ಪ್ರಕ್ರಿಯೆ ವೇಳೆಯೂ ಉಭಯ ತಂಡಗಳ ನಾಯಕರು ಪರಸ್ಪರ ಕೈ ಕುಲುಕಲಿಲ್ಲ. ಜತೆಗೆ ಪಂದ್ಯ ಮುಕ್ತಾಯದ ನಂತರವೂ ಟೀಮ್ ಇಂಡಿಯಾ ಆಟಗಾರರು ಕೇವಲ ಅಂಪೈರ್‌ಗಳೊಂದಿಗೆ ಹ್ಯಾಂಡ್‌ಶೇಕ್ ಮಾಡಿ ಮೈದಾನ ತೊರೆದರು.
ಟಾಸ್ ವೇಳೆ ಗೊಂದಲ
ಟಾಸ್ ಪ್ರಕ್ರಿಯೆಯ ಸಂದರ್ಭದಲ್ಲಿ ಸ್ವಲ್ಪ ಗೊಂದಲವೂ ಉಂಟಾಯಿತು. ರೆಫರಿ ಮೊದಲು 'ಟೇಲ್ಸ್' ಎಂದು ಹೇಳಿದರು. ಆದರೆ ನಾಣ್ಯವು 'ಹೆಡ್ಸ್' ಬಿದ್ದಿದೆ ಎಂದು ಪಾಕಿಸ್ತಾನ ತಂಡದ ನಾಯಕ ಅಬ್ದುಲ್ ಸಮದ್ ಗಮನಕ್ಕೆ ತಂದರು. ಪರಿಶೀಲಿಸಿದ ನಂತರ, ಪಂದ್ಯದ ಅಧಿಕಾರಿಯು ತಮ್ಮ ಘೋಷಣೆಯನ್ನು ಸರಿಪಡಿಸಿಕೊಂಡರು. ಪಾಕಿಸ್ತಾನ ತಂಡವು ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ ಎಂದು ಅವರು ಖಚಿತಪಡಿಸಿದರು.