ಉಡುಪಿ ಕೇಸರಿ ಧ್ವಜ ವಿವಾದ: ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ ಎಂದ ಜಿಲ್ಲಾಧಿಕಾರಿ, ಕ್ರಮ ಜರುಗಿಸಲು ಕಾಂಗ್ರೆಸ್ ಒತ್ತಾಯ
ಕೃಷ್ಣಮಠದ ಪರ್ಯಾಯದ ಮೆರವಣಿಗೆ ವೇಳೆ ಕೇಸರಿ ಧ್ವಜ ಪ್ರದರ್ಶಿಸಿದ ವಿಚಾರ ಇದೀಗ ವಿವಾದಕ್ಕೀಡಾಗಿದ್ದು, ಉಡುಪಿ ಜಿಲ್ಲಾಧಿಕಾರಿ ಟಿಕೆ ಸ್ವರೂಪಾ ಅವರು ತಮ್ಮ ಅಧಿಕೃತ ಕರ್ತವ್ಯದ ಭಾಗವಾಗಿ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದೆ ಮತ್ತು ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಗ್ರಹ ಚಿತ್ರ -
ಉಡುಪಿ: ಕೃಷ್ಣಮಠದ ಪರ್ಯಾಯದ ಮೆರವಣಿಗೆ ವೇಳೆ ಕೇಸರಿ ಧ್ವಜ ಪ್ರದರ್ಶಿಸಿದ ವಿಚಾರ ಇದೀಗ ವಿವಾದಕ್ಕೀಡಾಗಿದ್ದು, ಉಡುಪಿ ಜಿಲ್ಲಾಧಿಕಾರಿ ಟಿಕೆ ಸ್ವರೂಪಾ ಅವರು ತಮ್ಮ ಅಧಿಕೃತ ಕರ್ತವ್ಯದ ಭಾಗವಾಗಿ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದೆ ಮತ್ತು ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜನವರಿ 18 ರಂದು ಪರ್ಯಾಯ ಮೆರವಣಿಗೆಗೆ ಚಾಲನೆ ನೀಡುವಾಗ ಕೇಸರಿ ಧ್ವಜ ಪ್ರದರ್ಶಿಸಿದ್ದಕ್ಕಾಗಿ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.
ಜನವರಿ 18, ಭಾನುವಾರ ಬೆಳಗಿನ ಜಾವ 3.00 ಗಂಟೆಗೆ ಉಡುಪಿ ಶ್ರೀ ಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯೋತ್ಸವ ಕಾರ್ಯಕ್ರಮದ ಅಂಗವಾಗಿ, ಉಡುಪಿ ನಗರ ಪರಿಷತ್ತಿನ ಆಡಳಿತಾಧಿಕಾರಿಯಾಗಿ ನನ್ನ ಕರ್ತವ್ಯದ ಭಾಗವಾಗಿ ಸ್ವಾಮೀಜಿಯವರ ಪುರಪ್ರವೇಶ ಕಾರ್ಯಕ್ರಮಕ್ಕೆ ನಾನು ಚಾಲನೆ ನೀಡಿದ್ದೇನೆ. ಅದೇ ರೀತಿ, ನೂತನ ಪರ್ಯಾಯ ಸ್ವಾಮೀಜಿಯ ನಾಗರಿಕ ಸನ್ಮಾನ ಸಮಾರಂಭ ಮತ್ತು ಸ್ವಾಮೀಜಿ ಸರ್ವಜ್ಞ ಪೀಠವನ್ನು ಏರಿದ ನಂತರ ನಡೆದ ದರ್ಬಾರ್ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೇನೆ. ರಾಜಕೀಯ ಪ್ರೇರಿತ ಭಾಗವಹಿಸುವಿಕೆ ಇರಲಿಲ್ಲ ಎಂಬುದನ್ನು ಸಾರ್ವಜನಿಕರ ಗಮನಕ್ಕೆ ತರಲು ನಾನು ಬಯಸುತ್ತೇನೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಹರೀಶ್ ಶೆಟ್ಟಿ ಸೋಮವಾರ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ, 'ದಿನಾಂಕ 18/01/2026 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಉಡುಪಿ ನಗರದ ಜೋಡುಕಟ್ಟೆಯಿಂದ ಶ್ರೀ ಕೃಷ್ಣ ಮಠಕ್ಕೆ ಪರ್ಯಾಯ ಮೆರವಣಿಗೆ ನಡೆಸಲಾಯಿತು. ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪರ್ಯಾಯ ಮೆರವಣಿಗೆ ಪ್ರಾರಂಭವಾಗುವ ಮೊದಲು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಆರ್‌ಎಸ್‌ಎಸ್ ಧ್ವಜವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು. ನಂತರ ಜಿಲ್ಲಾಧಿಕಾರಿ ಈ ಧ್ವಜವನ್ನು ಮೇಲಕೆತ್ತಿ ಸಾರ್ವಜನಿಕವಾಗಿ ಪ್ರದರ್ಶಿಸಿದರು' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
'ಜಿಲ್ಲಾಧಿಕಾರಿಯವರ ಈ ನಡೆಯು ಸರ್ಕಾರಿ ಸೇವಾ ನಿಯಮಗಳು ಮತ್ತು ಸಂವಿಧಾನದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿದೆ ಮತ್ತು ಈ ರೀತಿಯ ಕ್ರಮವು ಅತ್ಯಂತ ಆಕ್ಷೇಪಾರ್ಹವಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸರಿಯಾದ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ' ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಶಾಸಕ ಸುನಿಲ್ ಕುಮಾರ್ ಕಿಡಿ
ಉಡುಪಿ ಪರ್ಯಾಯದ ಮೆರವಣಿಗೆಯಲ್ಲಿ ಕೇಸರಿ ಧ್ವಜ ಹಾರಿಸದೇ ಕಾಂಗ್ರೆಸ್ ಬಾವುಟ ಪ್ರದರ್ಶನ ಮಾಡಬೇಕಿತ್ತೇ ಎಂದು ಮಾಜಿ ಸಚಿವ, ಶಾಸಕ ಸುನಿಲ್ ಕುಮಾರ್ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುನಿಲ್ ಕುಮಾರ್ "ಉಡುಪಿ ಪರ್ಯಾಯದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ನಾಯಕರ ಕ್ಷುದ್ರ ಮನಸ್ಥಿತಿಗೆ ಇದು ಕೈಗನ್ನಡಿ'' ಎಂದು ಹೇಳಿದ್ದಾರೆ.
''ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಬಿಟ್ಟು ಕಾಂಗ್ರೆಸ್ ಅಥವಾ ಹಸುರು ಧ್ವಜ ಪ್ರದರ್ಶಿಸುವುದು ಮಾತ್ರ ಧರ್ಮ ನಿರಪೇಕ್ಷತೆಯೇ ?ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಾನವ ಹಕ್ಕು ಹಾಗೂ ಕಾನೂನು ವಿಭಾಗದ ಅಧ್ಯಕ್ಷ ಹರೀಶ್ ಶೆಟ್ಟಿ ಸಿಎಂ ಹಾಗೂ ಡಿಸಿಎಂಗೆ ಪತ್ರ ಬರೆದು ಡಿಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.