SSLC result: ಅಂಧ ವಿದ್ಯಾರ್ಥಿನಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕೊನೆಗೂ ಸಿಕ್ಕಿತು ನ್ಯಾಯ
ತಾಂತ್ರಿಕ ದೋಷವನ್ನು ಸರಿಪಡಿಸಿದಾಗ ಅಸಲಿ ಸತ್ಯ ಹೊರಬಂದಿದೆ. ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್ ಅವರು ಫೇಲ್ ಆಗಿರಲಿಲ್ಲ, ಬದಲಾಗಿ 603 ಅಂಕ (96.48%) ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಬೋರ್ಡ್ ತನ್ನ ತಪ್ಪನ್ನು ತಿದ್ದಿಕೊಂಡು ಹೊಸ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ.
ವಿದ್ಯಾರ್ಥಿನಿ ಲೀಸಾ ಖಾನಮ್ -
ಉತ್ತರಕನ್ನಡ, ಏ.25 : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಡವಟ್ಟಿನಿಂದಾಗಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ (SSLC result) ಅನ್ಯಾಯಕ್ಕೊಳಗಾಗಿದ್ದ ಉತ್ತರ ಕನ್ನಡದ (uttara kannada) ಶಿರಸಿಯ (Sirsi) ಅಂಧ ವಿದ್ಯಾರ್ಥಿನಿ (blind student) ಲೀಸಾ ಖಾನಮ್, ಈಗ 625ಕ್ಕೆ 603 ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಕೇವಲ 24 ಗಂಟೆಗಳಲ್ಲಿ ಇಡೀ ಫಲಿತಾಂಶವೇ ಬದಲಾಗಿದ್ದು, ಜಿಲ್ಲೆಯಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದಾಗ ಲೀಸಾ ಖಾನಮ್ ಅವರ ಅಂಕಪಟ್ಟಿಯಲ್ಲಿ ಕೆಲವು ವಿಷಯಗಳಿಗೆ ‘ಗೈರು ಹಾಜರು’ ಎಂದು ನಮೂದಿಸಲಾಗಿತ್ತು. ಇದರಿಂದಾಗಿ ಅವರು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಕಷ್ಟಪಟ್ಟು ಓದಿದ್ದ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಬರಸಿಡಿಲು ಬಡಿದಂತಾಗಿತ್ತು.
ಈ ಗೊಂದಲದ ಬಗ್ಗೆ ಶಾಸಕರು ಹಾಗೂ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿದರು. ತಾಂತ್ರಿಕ ದೋಷವನ್ನು ಸರಿಪಡಿಸಿದಾಗ ಅಸಲಿ ಸತ್ಯ ಹೊರಬಂದಿದೆ. ಲೀಸಾ ಅವರು ಫೇಲ್ ಆಗಿರಲಿಲ್ಲ, ಬದಲಾಗಿ 603 ಅಂಕ (96.48%) ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಬೋರ್ಡ್ ತನ್ನ ತಪ್ಪನ್ನು ತಿದ್ದಿಕೊಂಡು ಹೊಸ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ.
ತನ್ನ ಶ್ರಮಕ್ಕೆ ನ್ಯಾಯ ಸಿಕ್ಕಿದ್ದನ್ನು ನೋಡಿ ಲೀಸಾ ಖಾನಮ್ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ. “ನನ್ನ ಮೇಲೆ ನನಗೆ ನಂಬಿಕೆಯಿತ್ತು, ಈಗ ಫಲಿತಾಂಶ ನೋಡಿ ತುಂಬಾ ಸಂತೋಷವಾಗಿದೆ” ಎಂದು ಅವರು ಹೇಳಿದ್ದಾರೆ. ಮಗಳ ಅಸಾಧಾರಣ ಸಾಧನೆ ಕಂಡು ತಂದೆಯವರು ಆನಂದಭಾಷ್ಪ ಸುರಿಸಿದ್ದು, ತ್ವರಿತವಾಗಿ ಸ್ಪಂದಿಸಿದ ಶಾಸಕರಿಗೆ ಮತ್ತು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.