ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೇಡ್ತಿ ನದಿ ತಿರುವಿಗೆ ತೀವ್ರ ವಿರೋಧ; ಪಶ್ಚಿಮ ಘಟ್ಟದ ನದಿಗಳ ಸಂರಕ್ಷಣೆಗಾಗಿ ಫ್ರೀಡಂ ಪಾರ್ಕ್‌ನಲ್ಲಿ ಅ.10ರಂದು ಬೃಹತ್‌ ಪ್ರತಿಭಟನೆ

Bedti-Varada river inter-linking project: ಪಶ್ಚಿಮ ಘಟ್ಟದಿಂದ ಹರಿಯುವ ಬೇಡ್ತಿ ನದಿಯ ನೀರನ್ನು, ತುಂಗಭದ್ರಾದ ಉಪ ನದಿ ವರದಾಗೆ ಸೇರಿಸುವ ಸುಮಾರು 10 ಸಾವಿರ ಕೋಟಿ ರೂ. ವೆಚ್ಚದ ಬೃಹತ್‌ ಯೋಜನೆಗೆ ಉತ್ತರ ಕನ್ನಡ ಜಿಲ್ಲೆಯ ಜನತೆ ಹಾಗೂ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಯೋಜನೆಯನ್ನು ಕೈಬಿಡಲು ಆಗ್ರಹಿಸಿ ಬೆಂಗಳೂರಿನಲ್ಲಿ ಅ.10ಕ್ಕೆ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

‌ಬೇಡ್ತಿ ನದಿ ತಿರುವು ವಿರೋಧಿಸಿ ಬೆಂಗಳೂರಿನಲ್ಲಿ ಅ.10ಕ್ಕೆ ಪ್ರತಿಭಟನೆ

-

Prabhakara R
Prabhakara R Oct 2, 2026 8:07 PM

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುವ ಬೇಡ್ತಿ ನದಿಯ ನೀರನ್ನು ತಿರುಗಿಸಿ ವರದಾ ನದಿಗೆ ಸೇರಿಸುವ ಯೋಜನೆ (Bedti-Varada river inter-linking project) ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅ.10ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ಬೃಹತ್‌ ಪ್ರತಿಭಟನೆ ಆಯೋಜಿಸಲಾಗಿದೆ.

ಈ ಯೋಜನೆ ವಿರೋಧಿಸಿ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಗಳು, ಜಾಗೃತಿ ಜಾಥಾಗಳು ನಡೆದಿವೆ. ಇದರ ಮುಂದುವರಿದ ಭಾಗವಾಗಿ ಪಶ್ಚಿಮ ಘಟ್ಟದ ಜೀವ ನದಿಗಳ ಸಂರಕ್ಷಣೆಗಾಗಿ ಫ್ರೀಡಂ ಪಾರ್ಕ್‌ನಲ್ಲಿ ಜನಾಂದೋಲನ ನಡೆಯಲಿದೆ.

ನಿ. ನ್ಯಾ. ಸಂತೋಷ್‌ ಹೆಗ್ಡೆ, ನಿವೃತ್ತ ನ್ಯಾ. ಸಿ.ಎಂ. ಜೋಶಿ, ಚಕ್ರವರ್ತಿ ಸೂಲಿಬೆಲೆ, ಡಾ. ಗಿರಿಧರ್‌ ಕಜೆ, ಡಾ. ವಿ.ಎನ್‌. ನಾಯಕ್‌, ಅದಮ್ಯ ಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತ್‌ ಕುಮಾರ್‌, ಪರಿಸರ ತಜ್ಞರಾದ ಅ.ನ. ಯಲ್ಲಪ್ಪ ರೆಡ್ಡಿ, ಡಾ. ಶ್ರೀನಿವಾಸ ರೆಡ್ಡಿ, ಡಾ. ಟಿ.ವಿ. ರಾಮಚಂದ್ರ, ಡಾ. ಪ್ರಕಾಶ್‌ ಮೇಸ್ತ ಜತೆಗೆ ಉತ್ತರ ಕನ್ನಡ ಜಿಲ್ಲೆಯ ಸಂಸದರು ಮತ್ತು ಶಾಸಕರು ಭಾಗವಹಿಸಲಿದ್ದಾರೆ.

ಪರಿಸರ ತಜ್ಞರು, ಜಲ ಪರಿಣತರ ಜತೆಗೆ ಬೆಂಗಳೂರಿನಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಜನ ಒಂದಾಗಿ ಈ ಯೋಜನೆ ವಿರುದ್ಧ ದನಿ ಎತ್ತಲಿದ್ದಾರೆ. ಬೇಡ್ತಿ, ಅಘನಾಶಿನಿ ಮತ್ತು ಗಂಗಾವಳಿ ನದಿಗಳ ಸಂರಕ್ಷಣೆ ಪ್ರತಿಭಟನೆಯ ಪ್ರಮುಖ ವಿಷಯವಾಗಿದೆ. ಹಲವು ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ಬೆಂಗಳೂರಿನಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಮೂಲದವರು ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಈ ಕಾರ್ಯಕ್ರಮ ಸಂಘಟಿಸಿರುವ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಮನವಿ ಮಾಡಿದೆ.

ಏನಿದು ಯೋಜನೆ?

ಪಶ್ಚಿಮ ಘಟ್ಟದಿಂದ ಹರಿಯುವ ಬೇಡ್ತಿ ನದಿಯ ನೀರನ್ನು, ತುಂಗಭದ್ರಾದ ಉಪ ನದಿ ವರದಾಗೆ ಸೇರಿಸುವ ಸುಮಾರು 10 ಸಾವಿರ ಕೋಟಿ ರೂ. ವೆಚ್ಚದ ಬೃಹತ್‌ ಯೋಜನೆ ಇದು. ಈ ಯೋಜನೆಗೆ ರಾಜ್ಯ ಸರ್ಕಾರದ ಸಂಪೂರ್ಣ ಒಪ್ಪಿಗೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್‌. ಪಾಟೀಲ್‌ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ರಾಜ್ಯ ಜಲ ಸಂಪನ್ಮೂಲ ಇಲಾಖೆ ಜಂಟಿಯಾಗಿ ನಡೆಸುವ ಯೋಜನೆ ಇದು. "ಈ ಯೋಜನೆಯಿಂದ ಹಾವೇರಿ, ಗದಗ, ಕೊಪ್ಪಳ, ರಾಯಚೂರು ಭಾಗಗಳ ಜನರಿಗೆ ಕುಡಿಯಲು ಮತ್ತು ಕೃಷಿಗೆ ನೀರು ಸಿಗಲಿದೆ ಎನ್ನುವುದು ಈ ಯೋಜನೆ ಪ್ರತಿಪಾದಕರ ವಾದ.

ಆದರೆ, ಈ ಯೋಜನೆಯಿಂದ ಅಂತರ್ಜಲ ಕುಸಿಯಲಿದೆ. ಮಾನವ - ವನ್ಯ ಜೀವಿ ಸಂಘರ್ಷ ಹೆಚ್ಚಲಿದೆ. ಸಾವಿರಾರು ಹೆಕ್ಟೆರ್‌ ಭೂಮಿ ನಾಶ ಆಗಲಿದೆ. ಹಲವು ಹಳ್ಳಿಗಳ ಜನಜೀವನ ಹದಗೆಡಲಿದೆ. ನೂರಾರು ಜಾತಿಯ ಅಪರೂಪದ ಪ್ರಾಣಿ, ಪಕ್ಷಿ ಸಂಕುಲಕ್ಕೆ ಧಕ್ಕೆಯಾಗಲಿದೆ. ಕೈಗಾ, ಶರಾವತಿ ಟೇಲ್‌ರೇಸ್‌, ಕಾಳಿ ಜಲವಿದ್ಯುತ್‌, ಸೀಬರ್ಡ್‌ ಇತ್ಯಾದಿ ಯೋಜನೆಗಳಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಪರಿಸರ ಧಾರಣ ಸಾಮರ್ಥ್ಯ ಕುಸಿದಿರುವ ಬಗ್ಗೆ ವೈಜ್ಞಾನಿಕ ವರದಿಗಳೇ ಬಂದಿವೆ. ಹೀಗಿರುವಾಗ ಜೀವ ವೈವಿಧ್ಯವನ್ನು ಹದಗೆಡಿಸಿ ನದಿಯ ದಿಕ್ಕನ್ನೇ ತಿರುಗಿಸುವಂತಹ ಪರಿಸರ ಘಾತಕ ಯೋಜನೆಗಳನ್ನು ಮಾಡಲೇಬಾರದು ಎನ್ನುವುದು ಪರಿಸರವಾದಿಗಳ ಆಗ್ರಹ.