ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಮಕ್ಕಳೊಂದಿಗೆ ಗಾಂಧಿ ವಿಚಾರಧಾರೆ ಕುರಿತು ಪ್ರಶ್ನೋತ್ತರ; ಗಾಂಧಿ ಭವನವನ್ನು ಅನುಭವ ಕೇಂದ್ರವಾಗಿ ಅಭಿವೃದ್ಧಿಪಡಿಸಲು ರೂಪುರೇಷೆ

ಗಾಂಧೀಜಿ ಅವರ ಬಾಲ್ಯ, ಸ್ವಾತಂತ್ರ್ಯ ಹೋರಾಟ, ಸಾಧನೆಗಳು ಹಾಗೂ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದ ಜಿಲ್ಲಾಧಿಕಾರಿ, ಸತ್ಯ ಮತ್ತು ಅಹಿಂಸೆ ಗಾಂಧೀಜಿ ಅವರ ಜೀವನದ ಪ್ರಮುಖ ಆದರ್ಶಗಳಾಗಿದ್ದವು. ಅಸಹಕಾರ ಚಳವಳಿಯಂತಹ ಹೋರಾಟಗಳ ಮೂಲಕ ಭಾರತೀಯರ ಒಗ್ಗಟ್ಟು ಹಾಗೂ ಸ್ವಾತಂತ್ರ್ಯ ಹೋರಾಟದ ಶಕ್ತಿಯನ್ನು ಬ್ರಿಟಿಷರಿಗೆ ಮನವರಿಕೆ ಮಾಡಿಕೊಟ್ಟರು. ಅವರ ಶಾಂತಿ, ಸತ್ಯ ಮತ್ತು ಅಹಿಂಸೆಯ ಸಂದೇಶ ವಿಶ್ವದಾದ್ಯಂತ ಪ್ರೇರಣೆಯಾಗಿದೆ.

ಗಾಂಧಿ ಹಾದಿ ಉಜ್ವಲ ಭವಿಷ್ಯಕ್ಕೆ ಬುನಾದಿ: ಜಿಲ್ಲಾಧಿಕಾರಿ ಜಿ.ಪ್ರಭು

-

Profile
Ashok Nayak Oct 2, 2026 11:56 PM

ಚಿಕ್ಕಬಳ್ಳಾಪುರ: ಮಹಾತ್ಮ ಗಾಂಧೀಜಿ ಅವರ ಸತ್ಯ, ಅಹಿಂಸೆ, ಧೈರ್ಯ, ಛಲ ಹಾಗೂ ಸರಳ ಜೀವನದ ಆದರ್ಶಗಳನ್ನು ವಿದ್ಯಾರ್ಥಿಗಳು ಬಾಲ್ಯದಿಂದಲೇ ಮೈಗೂಡಿಸಿಕೊಂಡು ಮುನ್ನಡೆದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಹೇಳಿದರು.

ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಜಯಂತಿ(Mahatma Gandhiji Jayanti) ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ( Former Prime Minister Lal Bahadur Shastri) ಅವರ ಜನ್ಮದಿನಾಚರಣೆ ಕಾರ್ಯ ಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಗಾಂಧಿ ವಿಚಾರಧಾರೆ ಕುರಿತು ಸಂವಾದ ನಡೆಸಿ ಮಾತನಾಡಿದರು.

ಗಾಂಧೀಜಿ ಅವರ ಬಾಲ್ಯ, ಸ್ವಾತಂತ್ರ್ಯ ಹೋರಾಟ, ಸಾಧನೆಗಳು ಹಾಗೂ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದ ಜಿಲ್ಲಾಧಿಕಾರಿ, ಸತ್ಯ ಮತ್ತು ಅಹಿಂಸೆ ಗಾಂಧೀಜಿ ಅವರ ಜೀವನದ ಪ್ರಮುಖ ಆದರ್ಶಗಳಾಗಿದ್ದವು. ಅಸಹಕಾರ ಚಳವಳಿಯಂತಹ ಹೋರಾಟಗಳ ಮೂಲಕ ಭಾರತೀಯರ ಒಗ್ಗಟ್ಟು ಹಾಗೂ ಸ್ವಾತಂತ್ರ್ಯ ಹೋರಾಟದ ಶಕ್ತಿಯನ್ನು ಬ್ರಿಟಿಷರಿಗೆ ಮನವರಿಕೆ ಮಾಡಿಕೊಟ್ಟರು. ಅವರ ಶಾಂತಿ, ಸತ್ಯ ಮತ್ತು ಅಹಿಂಸೆಯ ಸಂದೇಶ ವಿಶ್ವದಾದ್ಯಂತ ಪ್ರೇರಣೆ ಯಾಗಿದೆ ಎಂದರು.

ಇದನ್ನೂ ಓದಿ: Chikkaballapur News: ಹಿರಿಯರ ಅನುಭವ ಹೊಸ ಪೀಳಿಗೆಗೆ ದಾರಿದೀಪವಾಗಲಿ: ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ

ಗಾಂಧೀಜಿ ಅವರ ತತ್ವಗಳನ್ನು ಕೇವಲ ಪುಸ್ತಕಗಳಿಗೆ ಸೀಮಿತಗೊಳಿಸದೆ, ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸತ್ಯ, ಶಿಸ್ತು, ಸರಳತೆ ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಲಾಲ್ ಬಹದ್ದೂರ್ ಶಾಸ್ತ್ರಿ ಅವರೂ ಗಾಂಧೀಜಿ ಅವರ ಚಿಂತನೆಗಳಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಕೃಷಿ ಮತ್ತು ಆಹಾರ ಉತ್ಪಾದನೆಗೆ ಉತ್ತೇಜನ ನೀಡುವ ಹಲವು ಕ್ರಮಗಳಿಗೆ ಪ್ರೋತ್ಸಾಹ ನೀಡಿದ್ದರು ಎಂದು ವಿವರಿಸಿದರು.

ಗಾಂಧಿ ಭವನ ಅನುಭವ ಕೇಂದ್ರ

ಚಿಕ್ಕಬಳ್ಳಾಪುರದ ಗಾಂಧಿ ಭವನವನ್ನು ಜಿಲ್ಲೆಯ ಶಾಲಾ ವಿದ್ಯಾರ್ಥಿಗಳು, ಯುವಕರು ಹಾಗೂ ಪ್ರವಾಸಿಗರು ಗಾಂಧೀಜಿ ಅವರ ಜೀವನ ಮತ್ತು ವಿಚಾರಧಾರೆಗಳನ್ನು ನೇರವಾಗಿ ತಿಳಿದುಕೊಳ್ಳುವ **‘ಗಾಂಧಿ ಅನುಭವ ಕೇಂದ್ರ’ವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

2cbpm4k ok

ಗಾಂಧೀಜಿ ಅವರ ಬಾಲ್ಯ, ಜೀವನ, ಸರಳ ಬದುಕು ಹಾಗೂ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟನೆಗಳನ್ನು ನೈಜವಾಗಿ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಭವದ ಮೂಲಕ ಗಾಂಧಿ ವಿಚಾರಧಾರೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ರೂಪುರೇಷೆ ಸಿದ್ಧಪಡಿಸ ಲಾಗಿದ್ದು, ಶೀಘ್ರದಲ್ಲೇ ಕಾರ್ಯಾನುಷ್ಠಾನಗೊಳಿಸಲಾಗುವುದು ಎಂದರು.

ವಿವಿಧೆಡೆ ಸ್ವಚ್ಛತಾ ಕಾರ್ಯ

ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ವತಿಯಿಂದ ನಗರದ ಅಂಬೇಡ್ಕರ್ ಕಾಲೋನಿ, ಶಿಡ್ಲಘಟ್ಟ ರಸ್ತೆ ಹಾಗೂ ಕಾನ್ವೆಂಟ್ ಶಾಲೆ ಬಳಿಯ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣಕನೂರು ಗ್ರಾಮದ ಬಳಿಯೂ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವ ಜನಿಕರಿಗೆ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸಲಾಯಿತು.

ನಿವೃತ್ತ ಪ್ರಾಧ್ಯಾಪಕ ಕೋಡಿ ರಂಗಪ್ಪ ಅವರು ಗಾಂಧೀಜಿ ಅವರ ಬಾಲ್ಯದಿಂದ ಅಂತ್ಯದವರೆಗಿನ ಜೀವನದ ಪ್ರಮುಖ ಘಟನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಸರ್ವಧರ್ಮ ಪ್ರಾರ್ಥನೆ

ಚಿಕ್ಕಬಳ್ಳಾಪುರ ಗೀತಾ ಸತ್ಸಂಗ ಸಮಿತಿ ಸದಸ್ಯೆ ನಳಿನಾಕ್ಷಿ ಹಾಗೂ ತಂಡದವರು ಭಗವದ್ಗೀತೆ ಕುರಿತು, ಜಿಲ್ಲಾ ಖಾಜಿ ಮನ್ಸೂರ್ ಅಹಮದ್ ಅವರು ಇಸ್ಲಾಂ ಧರ್ಮದ ಕುರಿತು ಹಾಗೂ ಪ್ರವೀಣ್ ಪಿ. ಫ್ರೀ ಬೈಟರ್ ಅವರು ಕ್ರೈಸ್ತ ಧರ್ಮದ ಕುರಿತು ಮಾತನಾಡಿ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ವೈ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ತಹಶೀಲ್ದಾರ್ ರಶ್ಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಆರ್. ಮಂಜುನಾಥ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.