ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯೋಗ ದೃಷ್ಟಿಗೆ ಕಾಣುವುದು ವೈದ್ಯಕೀಯ ಉಪಕರಣಗಳಿಗೆ ಕಾಣಸಿಗುವುದಿಲ್ಲ: ರಾಘವೇಶ್ವರ ಭಾರತೀ ಶ್ರೀ

Sri Raghaveshwara Bharathi Swamiji: ಅಗ್ನಿಯಲ್ಲಿ ಎರಡು ಗುಣವಿದ್ದು, ಅದು ಬೆಳಕಾಗಿ ಬೆಳಗುತ್ತದೆ ಹಾಗೂ ಸುಡುವ ಗುಣವನ್ನೂ ಹೊಂದಿದೆ. ಜೀವಿಯ ಹೃದಯದಲ್ಲಿ ಜೀವಜ್ಯೋತಿಯಾಗಿ ಬೆಳಗಿದರೆ, ನಾಭಿ ಸ್ಥಾನದಲ್ಲಿ ಸುಡುವ ಗುಣದೊಂದಿಗೆ ಸ್ವೀಕರಿಸಿದ ಆಹಾರವನ್ನು ಪಚನಗೊಳಿಸಿ, ಅಮೃತವನ್ನು ದೇಹಕ್ಕೆ ಒದಗಿಸಿ, ಬೇಡದ ವಸ್ತುಗಳನ್ನು ದೇಹದಿಂದ ಹೊರಹಾಕುವಂತೆ ಮಾಡುತ್ತದೆ. ಅಗ್ನಿಯು ನಾಭಿಯ ಎಡಭಾಗದಲ್ಲಿರುವುದರಿಂದ ರಾತ್ರಿ ಎಡಮಗ್ಗಲಿನಲ್ಲಿ ಮಲಗಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಎಡಮಗ್ಗಲಿನಲ್ಲಿ ಮಲಗುವುದು ಆರೋಗ್ಯಕ್ಕೆ ಉತ್ತಮ: ರಾಘವೇಶ್ವರ ಶ್ರೀ

ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ. -

Profile
Siddalinga Swamy Aug 15, 2026 8:24 PM

ಗೋಕರ್ಣ, ಆ.15: ಯೋಗ ದೃಷ್ಟಿಗೂ ಇಂದಿನ ಆಧುನಿಕ ವೈದ್ಯ ಪದ್ಧತಿಗೂ ವ್ಯತ್ಯಾಸವಿದೆ. ಭಾರತೀಯ ಪರಂಪರೆಯಲ್ಲಿ ಉಲ್ಲೇಖಿತವಾಗಿರುವ ಹಲವು ಅಂಶಗಳು ಕೇವಲ ಯೋಗ ದೃಷ್ಟಿಗಷ್ಟೇ ಕಾಣುವಂತವಾಗಿದ್ದು, ಇಂದಿನ ವೈದ್ಯಕೀಯ ಉಪಕರಣಗಳಿಗೆ ಅವು ಕಾಣಸಿಗುವುದಿಲ್ಲ. ಯಾರು ಒಪ್ಪಿದರೂ, ಒಪ್ಪದೇ ಇದ್ದರೂ ಶಾಸ್ತ್ರಗಳಲ್ಲಿ ಉಲ್ಲೇಖಿತ ಅಂಶಗಳು ಎಲ್ಲ ಜೀವಿಗಳಲ್ಲಿಯೂ ಇದೆ. ಇವುಗಳನ್ನು ಯೋಗ ದೃಷ್ಟಿಯಿಂದ ನಮ್ಮ ಪೂರ್ವಜರು ಕಂಡುಕೊಂಡಿದ್ದು, ಇಂದಿನ ವಿಜ್ಞಾನ ಈ ವಿಚಾರಗಳನ್ನು ಇನ್ನೂ ಕಂಡುಕೊಳ್ಳಬೇಕಿದೆಯಷ್ಟೇ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Sri Raghaveshwara Bharathi Swamiji) ತಿಳಿಸಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯʼದ ಧರ್ಮಸಭೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಜಠರಾಗ್ನಿಯ ಒಂದು ಪ್ರಮುಖ ಅಭಿವ್ಯಕ್ತಿ ಹಸಿವು. ಹಸಿವು ಕಾಣಿಸಿಕೊಳ್ಳುವುದು ದೇಹದಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಶಕ್ತಿ ಕಾರ್ಯನಿರ್ವಹಿಸುತ್ತಿರುವುದರ ಸೂಚನೆಯಾಗಿದೆ. ದೇಹದ ಉಷ್ಣತೆ, ಹಸಿವು ಮತ್ತು ಆಹಾರ ಜೀರ್ಣವಾಗುವ ಪ್ರಕ್ರಿಯೆಯ ಹಿಂದೆ ಕಾರ್ಯನಿರ್ವಹಿಸುವ ಶಕ್ತಿಯನ್ನೇ ಭಾರತೀಯ ಪರಂಪರೆ ‘ಅಗ್ನಿʼ ಎಂದು ಗುರುತಿಸಿದೆ. ಅಗ್ನಿರೂಪದ ರುದ್ರ ಜೀರ್ಣಕ್ಕೆ ಕಷ್ಟವಾಗುವ ಅನೇಕ ವಿಷಗಳನ್ನು ಜೀರ್ಣವಾಗಿಸಿ, ಅಮೃತವನ್ನಷ್ಟೇ ದೇಹಕ್ಕೆ ನೀಡುತ್ತದೆ. ದೇಹದಲ್ಲಿರುವ ಶ್ಲೇಷ್ಮದ ಅಂಶ ವಿಷ್ಣುವಿನ ರೂಪವಾಗಿದ್ದು, ಅಗ್ನಿ ಜೀರ್ಣವಾಗಿಸಿದ್ದನ್ನು ದೇಹಕ್ಕೆ ಶ್ಲೇಷ್ಮವು ಉಣ ಬಡಿಸುತ್ತದೆ. ಅಗ್ನಿಯು ತನ್ನ ಕೆಲಸವನ್ನು ನಿಲ್ಲಿಸಿದರೆ ಅದಷ್ಟೇ ಜೀವಿಯ ಮರಣಕ್ಕೆ ಕಾರಣವಾಗಬಹುದು ಎಂದು ಹೇಳಿದರು.

Ramachandrapura mutt

ಅಗ್ನಿ ಇರುವುದೆಲ್ಲಿ?

ಶಂಕರಾಚಾರ್ಯರು ತಮ್ಮ ಸೌಂದರ್ಯ ಲಹರಿಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು, ಪಂಚಭೂತಗಳನ್ನು ನಮ್ಮ ದೇಹದಲ್ಲಿ ವಿವರಿಸಿದ್ದಾರೆ. ನಾಭಿಯ ಪರಿಸರದಲ್ಲಿರುವ ಮಣಿಪೂರಕ ಚಕ್ರದಲ್ಲಿ ಅಗ್ನಿ ಇದೆ ಎಂದು ಉಲ್ಲೇಖಿಸಿದ್ದಾರೆ. ಅಷ್ಟಾಂಗ ಹೃದಯದಲ್ಲಿ ನಾಭಿಯ ಎಡಭಾಗದಲ್ಲಿ ಜಠರಾಗ್ನಿಯ ಕೇಂದ್ರವಿದೆ ಎಂದಿದ್ದು, ಭಾವಪ್ರಕಾಶದಲ್ಲಿ ನಾಭಿಯ ಎಡಭಾಗದಲ್ಲಿ ನಾಭಿಗಿಂತ ಸ್ವಲ್ಪ ಮೇಲಿದೆ ಎಂದಿದೆ. ಸುಶೃತರು ನಾಭಿಸ್ಥಾನದಲ್ಲಿರುವ ಪಕ್ವಾಶಯ ಆಮಾಶಯಗಳ ಮಧ್ಯದಲ್ಲಿ ಎಂದು ಹೇಳಿದೆ.

ಅಗ್ನಿಯಲ್ಲಿ ಎರಡು ಗುಣವಿದ್ದು, ಅದು ಬೆಳಕಾಗಿ ಬೆಳಗುತ್ತದೆ ಹಾಗೂ ಅದು ಸುಡುವ ಗುಣವನ್ನೂ ಹೊಂದಿದೆ. ಜೀವಿಯ ಹೃದಯದಲ್ಲಿ ಜೀವಜ್ಯೋತಿಯಾಗಿ ಬೆಳಗಿದರೆ, ನಾಭಿ ಸ್ಥಾನದಲ್ಲಿ ಸುಡುವ ಗುಣದೊಂದಿಗೆ ಸ್ವೀಕರಿಸಿದ ಆಹಾರವನ್ನು ಪಚನಗೊಳಿಸಿ, ಅಮೃತವನ್ನು ದೇಹಕ್ಕೆ ಒದಗಿಸಿ, ಬೇಡದ ವಸ್ತುಗಳನ್ನು ದೇಹದಿಂದ ಹೊರಹಾಕುವಂತೆ ಮಾಡುತ್ತದೆ. ಅಗ್ನಿಯು ನಾಭಿಯ ಎಡಭಾಗದಲ್ಲಿರುವುದರಿಂದ ರಾತ್ರಿ ಎಡಮಗ್ಗಲಿನಲ್ಲಿ ಮಲಗಬೇಕು ಎನ್ನಲಾಗಿದ್ದು, ಆಗ ಜೀರ್ಣಕ್ರಿಯೆಗೆ ಅನುಕೂಲ ವಾತಾವರಣ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Annabrahma Chaturmasya

ಹಿರಿಯ ನ್ಯಾಯವಾದಿಗಳಾದ ಅರುಣ್ ಶ್ಯಾಮ್, ಪಿ.ಎನ್. ಮನಮೋಹನ್, ಶಂಭು ಶರ್ಮಾ, ನರಸಿಂಹ, ಸ್ಥಳೀಯ ಮುಖಂಡ ಮಹೇಶ್ ಶೆಟ್ಟಿ ಶ್ರೀಗಳಿಂದ ಆಶೀರ್ವಾದ ಪಡೆದರು. ಜಾಲತಾಣಿಗರ ಬಳಗದ ಪರವಾಗಿ ಉದಯಶಂಕರ ನೀರ್ಪಾಜೆ ದಂಪತಿ ಗುರುಭಿಕ್ಷಾಸೇವೆ ಸಮರ್ಪಿಸಿದರು. ಜಾಲತಾಣಿಗರ ಬಳಗದ ಸದಸ್ಯರು ಉಪಸ್ಥಿತರಿದ್ದರು.

Gokarna News

ಅಂಬಿಗ ಸಮಾಜ - ವಿಶ್ವಕರ್ಮ ಸಮಾಜದಿಂದ ಸ್ವರ್ಣಪಾದುಕಾ ಪೂಜೆ

ಶ್ರೀರಾಮಚಂದ್ರಾಪುರ ಮಠಕ್ಕೆ ಪಾರಂಪರಿಕವಾಗಿ ನಡೆದುಕೊಳ್ಳುತ್ತಿರುವ ಸಮಾಜಗಳಾದ ಅಂಬಿಗ ಸಮಾಜ - ವಿಶ್ವಕರ್ಮ ಸಮಾಜದ ಗುರುಬಂಧುಗಳಿಂದ ಸ್ವರ್ಣಪಾದುಕಾ ಪೂಜೆ ನೆರವೇರಿತು. ಶ್ರೀಮಠದ ಭಕ್ತ ಸಮಾಜದ ಜತೆಗೆ ಶ್ರೀಮಠ ಸದಾ ಇರಲಿದ್ದು, ಗುರುಪರಂಪರೆಯ ಅನುಗ್ರಹದಿಂದ ಸಮಾಜದ ಎಲ್ಲರಿಗೂ ಒಳಿತಾಗಲಿ ಎಂದು ಶ್ರೀಗಳು ಆಶೀರ್ವದಿಸಿ, ಮಂತ್ರಾಕ್ಷತೆಯನ್ನು ಅನುಗ್ರಹಿಸಿದರು. ಅಂಬಿಗ ಸಮಾಜದ ಗುರು ಅಂಬಿಗ, ಮಹೇಶ ಗೋವಿಂದ ಅಂಬಿಗ, ಮಂಜುನಾಥ ಶಂಕರ ಅಂಬಿಗ, ವಿಶ್ವಕರ್ಮ ಸಮಾಜದ ಶಂಭು ಅಚಾರಿ ವಂದೂರು, ಮಧುಕರ ಆಚಾರಿ ಹೊನ್ನಾವರ, ಜಗದೀಶ ಆಚಾರಿ ಮಿರ್ಜಾನ, ಗಣೇಶ ಆಚಾರಿ ಹೆಬ್ಬನಕೇರೆ ಮತ್ತಿತರರು ಉಪಸ್ಥಿತರಿದ್ದರು.