''ಮೂರ್ತಿ ಚಿಕ್ಕದಾದರೂ ಜಠರಾಗ್ನಿಯ ಕೀರ್ತಿ ದೊಡ್ದದು'': ರಾಘವೇಶ್ವರ ಭಾರತೀ ಶ್ರೀ
Sri Raghaveshwara Bharathi Swamiji: ವಿಷ್ಣುವಿಗೆ ದಶಾವತಾರಗಳಂತೆ ಅಗ್ನಿಗೆ ಪಂಚಾವತಾರಗಳಿದ್ದು, ನಮ್ಮ ದೇಹದಲ್ಲಿ ಅಗ್ನಿಯು ಐದು ರೂಪದಲ್ಲಿ ಅಭಿವ್ಯಕ್ತವಾಗಿವೆ. ಪಾಚಕಾಗ್ನಿಯು ನಾಭಿಯ ಸ್ಥಾನದಲ್ಲಿ ಇದ್ದರೆ, ರಂಜಕಾಗ್ನಿ ನಾಭಿಗಿಂತ ಸ್ಚಲ್ಪ ಮೇಲಿದೆ. ಸಾಧಕಾಗ್ನಿ ಹೃದಯದ ಭಾಗದಲ್ಲಿದ್ದು, ಆಲೋಚಕಾಗ್ನಿ ಕಣ್ಣಿನ ಸಮೀಪ ಇದೆ. ಭ್ರಾಜಕಾಗ್ನಿ ದೇಹವನ್ನೆಲ್ಲಾ ವ್ಯಾಪಿಸಿದೆ. ಪಾಚಕಾಗ್ನಿ ಆಹಾರವನ್ನು ಪಚನಗೊಳಿಸಿ ದೇಹಕ್ಕೆ ಶಕ್ತಿತುಂಬಿದರೆ, ರಂಜಕಾಗ್ನಿ ರಕ್ತಕ್ಕೆ ಕೆಂಪುಬಣ್ಣ ಕಾರಣ. ಸಾಧಕಾಗ್ನಿಯು ಮುಕ್ತಿಗೆ ಕಾರಣವಾದರೆ, ಆಲೋಚಕಾಗ್ನಿಯು ಜ್ನಾನನೇತ್ರವಾಗಿ ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿನ ಕಾಂತಿಗೆ ಭ್ರಾಜಕಾಗ್ನಿ ಕಾರಣವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.
ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ -
ಗೋಕರ್ಣ, ಆ. 17: ಜಠರಾಗ್ನಿಯು ಆನೆಯಂತಹ ಬೃಹತ್ ಗಾತ್ರದ ಪ್ರಾಣಿಗಳಲ್ಲಿ ಬಾರ್ಲಿ ಧಾನ್ಯದಷ್ಟು ದೊಡ್ಡದಾಗಿದ್ದರೆ, ಮನುಷ್ಯರಲ್ಲಿ ಇನ್ನೂ ಸಣ್ಣ ಗಾತ್ರದಲ್ಲಿದೆ. ಕೀಟಗಳಲ್ಲಿ ಅತಿ ಸೂಕ್ಷ್ಮವಾಗಿರುತ್ತದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದು ಎಂಬ ಮಾತು ಜಠರಾಗ್ನಿಗೆ ಹೋಲಿಕೆಯಾಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Sri Raghaveshwara Bharathi Swamiji) ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಸೋಮವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಇಂತಹ ಅನೇಕ ಅಪೂರ್ವ ಮಾಹಿತಿಗಳಿವೆ. ಈ ಪ್ರವಚನ ಮಾಲಿಕೆಯು ಈ ಕುರಿತು ಬೆಳಕು ಚೆಲ್ಲುವ ಪ್ರಯತ್ನವಾಗಿದ್ದು, ನಮ್ಮನ್ನು ಅರಿತುಕೊಳ್ಳುವ ಭಾಗವಾಗಿದೆ. ಭೇಲ ಸಂಹಿತೆಯಲ್ಲಿ ಆತ್ರೇಯ ಮಹರ್ಷಿಗಳು ಅಹಾರವೇ ದೇಹಕ್ಕೆ ಕಾರಣ ಹಾಗೂ ಸಿಹಿ, ಕಹಿ, ಖಾರ ಸೇರಿದಂತೆ ಷಡ್ರಸಗಳ ಅಸಮರ್ಪಕ ಮಿಶ್ರಣಗಳಿಂದ ವ್ಯಾಧಿ ಉಂಟಾಗುತ್ತದೆ. ಹಾಗಾಗಿ ಆಹಾರವನ್ನು ಸೇವಿಸುವಾಗ ಷಡ್ರಸಗಳ ಕುರಿತಾಗಿ ವಿಶೇಷವಾದ ಗಮನವನ್ನು ನೀಡಬೇಕು. ಯಾವುದೋ ಒಂದು ರಸವನ್ನು ಹೆಚ್ಚಾಗಿ ಸೇವಿಸುವುದು ಅನಾರೋಗ್ಯಕ್ಕೆ ಮೂಲ ಎನ್ನಲಾಗಿದೆ ಎಂದರು.
ಅಗ್ನಿಯ ಐದು ವಿಧಗಳು
ವಿಷ್ಣುವಿಗೆ ದಶಾವತಾರಗಳಂತೆ ಅಗ್ನಿಗೆ ಪಂಚಾವತಾರಗಳಿದ್ದು, ನಮ್ಮ ದೇಹದಲ್ಲಿ ಅಗ್ನಿಯು ಐದು ರೂಪದಲ್ಲಿ ಅಭಿವ್ಯಕ್ತವಾಗಿವೆ. ಪಾಚಕಾಗ್ನಿಯು ನಾಭಿಯ ಸ್ಥಾನದಲ್ಲಿ ಇದ್ದರೆ, ರಂಜಕಾಗ್ನಿ ನಾಭಿಗಿಂತ ಸ್ಚಲ್ಪ ಮೇಲಿದೆ. ಸಾಧಕಾಗ್ನಿ ಹೃದಯದ ಭಾಗದಲ್ಲಿದ್ದು, ಆಲೋಚಕಾಗ್ನಿ ಕಣ್ಣಿನ ಸಮೀಪ ಇದೆ. ಭ್ರಾಜಕಾಗ್ನಿ ದೇಹವನ್ನೆಲ್ಲಾ ವ್ಯಾಪಿಸಿದೆ. ಪಾಚಕಾಗ್ನಿ ಆಹಾರವನ್ನು ಪಚನಗೊಳಿಸಿ ದೇಹಕ್ಕೆ ಶಕ್ತಿತುಂಬಿದರೆ, ರಂಜಕಾಗ್ನಿ ರಕ್ತಕ್ಕೆ ಕೆಂಪುಬಣ್ಣ ಕಾರಣ. ಸಾಧಕಾಗ್ನಿಯು ಮುಕ್ತಿಗೆ ಕಾರಣವಾದರೆ, ಆಲೋಚಕಾಗ್ನಿಯು ಜ್ನಾನನೇತ್ರವಾಗಿ ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿನ ಕಾಂತಿಗೆ ಭ್ರಾಜಕಾಗ್ನಿ ಕಾರಣವಾಗಿದೆ ಎಂದು ವಿವರಿಸಿದರು.
ಭ್ರಾಜಕಾಗ್ನಿಯ ವಿವರವನ್ನು ನೀಡುವಾಗ ಆಯುರ್ವೇದ ಗ್ರಂಥಗಳು ಚರ್ಮದ ಏಳು ಪದರಗಳನ್ನು ಉಲ್ಲೇಖಿಸುತ್ತದೆ. ಚರ್ಮದ ಪದರಗಳು ಅತಿ ಸೂಕ್ಷ್ಮವಾಗಿದ್ದು, ಸೂಕ್ಷ್ಮದರ್ಶಕದ ಮೂಲಕ ಮಾತ್ರ ನೋಡಬಹುದಾಗಿದೆ. ಆದರೆ ಪ್ರಾಚೀನ ಮಹರ್ಷಿಗಳು ಅವುಗಳನ್ನು ಜ್ಞಾನ ದೃಷ್ಟಿಯಿಂದ ಕಂಡುಕೊಂಡಿದ್ದರು ಎಂದು ಅಭಿಪ್ರಾಯಪಟ್ಟರು.
ಯೋಗ ದೃಷ್ಟಿಗೆ ಕಾಣುವುದು ವೈದ್ಯಕೀಯ ಉಪಕರಣಗಳಿಗೆ ಕಾಣಸಿಗುವುದಿಲ್ಲ: ರಾಘವೇಶ್ವರ ಭಾರತೀ ಶ್ರೀ
ಹೊಸದಿಗಂತ ಸಮೂಹದ ಸಿ.ಇ.ಒ. ಪ್ರಕಾಶ್ ಪಿ.ಎಸ್., ಉದ್ಯಮಿಗಳಾದ ಡಾ. ನಾರಾಯಣ ದೇಶಪಾಂಡೆ, ಡಾ. ಗುರುರಾಜ ದೇಶಪಾಂಡೆ ಉಪಸ್ಥಿತರಿದ್ದು, ಶ್ರೀಗಳ ಆಶೀರ್ವಾದ ಪಡೆದರು. ಹರ್ಷ ಮಾಂಕನಮೂಲೆ ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ಸಮರ್ಪಿಸಿದರು. ಮೋಹನ್ ಹರಿಹರ ದಿನಪ್ರಧಾನರಾಗಿ ಉಪಸ್ಥಿತರಿದ್ದರು.