ಬ್ರಾಹ್ಮಣರ ಬಗ್ಗೆ ನೇಹಾ ಬೋರಾ ಹೇಳಿಕೆ ಅತ್ಯಂತ ಖಂಡನೀಯ: ಕಿಚಿಡಿ ಕೊಟ್ರೇಶ್
Bellary News: ಬ್ರಾಹ್ಮಣ ಸಮುದಾಯ ಹಾಗೂ ದೇವಸ್ಥಾನಗಳ ಅರ್ಚಕರ ಕುರಿತು ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ಅವರು ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ ಎಂದು ಬಿಜೆಪಿ ಜಿಲ್ಲಾ ಯುವಮೊರ್ಚಾ ಅಧ್ಯಕ್ಷ ಕಿಚಿಡಿ ಕೊಟ್ರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
ಹೊಸಪೇಟೆ: ಜಾತಿ ನಿಂದನೆಯೇ ಪ್ರಗತಿಪರತೆಯ ಮಾನದಂಡವಲ್ಲ. ಬ್ರಾಹ್ಮಣ ಸಮುದಾಯ ಹಾಗೂ ಅರ್ಚಕರ ಹೆಸರಿನಲ್ಲಿ ಹಿಂದೂಗಳ ಅವಹೇಳನ ಸಹಿಸುವುದಿಲ್ಲ ಎಂದು ಬಿಜೆಪಿ ಜಿಲ್ಲಾ ಯುವಮೊರ್ಚಾ ಅಧ್ಯಕ್ಷ ಕಿಚಿಡಿ ಕೊಟ್ರೇಶ್ ಆಕ್ರೋಶ ವ್ಯಕ್ತಪಡಿಸಿದರು. ನೇಹಾ ಬೋರಾ ಹೇಳಿಕೆ ಖಂಡಿಸಿ ನಗರದಲ್ಲಿ ಮಾಧ್ಯಮದವರ ಜತೆ ಅವರು ಮಾತನಾಡಿದ್ದಾರೆ.
ಬ್ರಾಹ್ಮಣ ಸಮುದಾಯ ಹಾಗೂ ದೇವಸ್ಥಾನಗಳ ಅರ್ಚಕರ ಕುರಿತು ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ಅವರು ನೀಡಿರುವ ಅವಹೇಳನಕಾರಿ ಹೇಳಿಕೆ ಅತ್ಯಂತ ಖಂಡನೀಯ. ಪ್ರಗತಿಪರತೆ, ಮಹಿಳಾ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಅವಮಾನಿಸುವುದು ಯಾವ ರೀತಿಯ ವೈಚಾರಿಕತೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದಿದ್ದಾರೆ.
ದೇಶದಲ್ಲಿ ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆಯುತ್ತಿರುವುದು ಅತ್ಯಂತ ಗಂಭೀರ ವಿಚಾರ. ಇಂತಹ ಅಪರಾಧ ಎಸಗುವವರು ಯಾವುದೇ ಜಾತಿ, ಧರ್ಮ ಅಥವಾ ವರ್ಗಕ್ಕೆ ಸೇರಿದವರಾಗಿರಲಿ, ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕೆಲವು ವ್ಯಕ್ತಿಗಳ ತಪ್ಪುಗಳನ್ನು ಇಡೀ ಬ್ರಾಹ್ಮಣ ಸಮುದಾಯದ ತಲೆಗೆ ಕಟ್ಟುವ ಮನಸ್ಥಿತಿ ಅತ್ಯಂತ ಅಪಾಯಕಾರಿ. ಅಪರಾಧಿಗೆ ಶಿಕ್ಷೆ ಕೊಡಿಸುವ ಬದಲು ಒಂದು ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.
ಬ್ರಾಹ್ಮಣ ಸಮುದಾಯದ ಇತಿಹಾಸ, ಜ್ಞಾನ ಪರಂಪರೆ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನೀಡಿರುವ ಕೊಡುಗೆಯನ್ನು ಅರಿಯದೆ ಮಾತನಾಡುವುದು ಅಜ್ಞಾನವೋ ಅಥವಾ ಉದ್ದೇಶಪೂರ್ವಕ ದ್ವೇಷದ ರಾಜಕಾರಣವೋ ಎಂಬ ಅನುಮಾನ ಮೂಡಿಸುತ್ತದೆ. ದೇಶದ ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ ಎಂದ ಮಾತ್ರಕ್ಕೆ ಯಾರನ್ನಾದರೂ ಜಾತಿಯ ಆಧಾರದಲ್ಲಿ ಅವಮಾನಿಸುವ ಪರವಾನಗಿ ನೀಡಿಲ್ಲ. ಇತರ ಸಮುದಾಯಗಳ ಗೌರವ ಮತ್ತು ಸ್ವಾಭಿಮಾನವನ್ನು ಕಾಪಾಡುವುದು ಕೂಡ ಸಂವಿಧಾನಾತ್ಮಕ ಹಾಗೂ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಮಹಿಳೆಯರ ಮೇಲಿನ ಅತ್ಯಾಚಾರವನ್ನು ಖಂಡಿಸುವ ನೈತಿಕ ಹಕ್ಕು ಎಲ್ಲರಿಗೂ ಇದೆ. ಆದರೆ ಆ ವಿಚಾರವನ್ನು ಬಳಸಿಕೊಂಡು ಬ್ರಾಹ್ಮಣ ಸಮುದಾಯ ಮತ್ತು ಅರ್ಚಕ ವರ್ಗದ ವಿರುದ್ಧ ದ್ವೇಷ ಹರಡುವ ಪ್ರಯತ್ನವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ನೇಹಾ ಬೋರಾ ಅವರಿಗೆ ನಿಜವಾಗಿಯೂ ಮಹಿಳೆಯರ ಸುರಕ್ಷತೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಇದ್ದರೆ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಹೋರಾಡಲಿ. ಅದನ್ನು ಬಿಟ್ಟು ಜಾತಿ ಆಧಾರಿತ ಅವಹೇಳನದ ಮೂಲಕ ಸಮಾಜದಲ್ಲಿ ವಿಷಬೀಜ ಬಿತ್ತಬಾರದು ಎಂದು ಹೇಳಿದ್ದಾರೆ.
ಸಮಾಜದಲ್ಲಿ ಶತಮಾನಗಳಿಂದ ಜಾತಿ ಸಂಘರ್ಷಗಳನ್ನು ಕಡಿಮೆ ಮಾಡಿ ಸಾಮರಸ್ಯ ಬೆಳೆಸಬೇಕಾದ ಸಂದರ್ಭದಲ್ಲಿ, ಇಂತಹ ಬೇಜವಾಬ್ದಾರಿಯುತ ಹೇಳಿಕೆಗಳು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತವೆ. ನೇಹಾ ಬೋರಾ ಅವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು, ಬ್ರಾಹ್ಮಣ ಸಮುದಾಯದ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ಹೇಳಿಕೆ ವಿರುದ್ಧ ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದಿದ್ದಾರೆ.
ನಮ್ಮ ಸ್ಪಷ್ಟ ನಿಲುವು ಒಂದೇ ಅತ್ಯಾಚಾರಿಗಳಿಗೆ ಶಿಕ್ಷೆಯಾಗಲಿ. ಆದರೆ ನಿರಪರಾಧಿ ಸಮುದಾಯಗಳ ಮೇಲೆ ಜಾತಿಯ ಕಾರಣಕ್ಕೆ ಅಪವಾದ ಹೊರಿಸುವುದನ್ನು ಸಹಿಸುವುದಿಲ್ಲ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಜಾತಿ ದ್ವೇಷಕ್ಕೆ ಅವಕಾಶವಿಲ್ಲಾ ಎಂದು ಬಿಜೆಪಿ ಜಿಲ್ಲಾ ಯುವಮೊರ್ಚಾ ಅಧ್ಯಕ್ಷ ಕಿಚಿಡಿ ಕೊಟ್ರೇಶ್ ತಿಳಿಸಿದ್ದಾರೆ.