ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Hospet News: 'ನಾನು ಕರ್ನಾಟಕ ಆರಿಸಿಕೊಂಡಿಲ್ಲ, ಕನ್ನಡಾಂಬೆಯೇ ನನ್ನನ್ನು ಆರಿಸಿಕೊಂಡಿದ್ದಾರೆ': ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರತಿಪಾದನೆ

ನಾನು ಭಗವಾನ್ ಸತ್ಯ ಸಾಯಿ ಬಾಬಾರವರ ಶಿಷ್ಯ. ಅವರ ಶಿಕ್ಷಣ ಸಂಸ್ಥೆಗಳಲ್ಲಿ ಓದಿ ಸೇವಾ ಚಟುವಟಿಕೆಗಳಿಗಾಗಿ ಅವರ ಮಾರ್ಗದರ್ಶನದ ನಿರೀಕ್ಷೆಯಲ್ಲಿದ್ದೆ. ಅವರ ಮಹಾಸಮಾಧಿಯ ನಂತರ ನನಗೆ ಆಧ್ಯಾತ್ಮಿಕ ಅನುಭವವಾಯಿತು. ಅದರಂತೆ ಅವರ ಸೂಚನೆಯಂತೆ ಕರ್ನಾಟಕದಲ್ಲಿ ಸೇವಾ ಚಟುವಟಿಕೆ ಆರಂಭಿಸಿದೆವು

ನಾನು ಕರ್ನಾಟಕ ಆರಿಸಿಕೊಂಡಿಲ್ಲ, ಕನ್ನಡಾಂಬೆಯೇ ನನ್ನನ್ನು ಆರಿಸಿಕೊಂಡಿದ್ದಾರೆ

-

Profile
Ashok Nayak Aug 25, 2026 9:27 PM

ಹೊಸಪೇಟೆ: ಸೇವಾ ಚಟುವಟಿಕೆಗಳಿಗಾಗಿ ನಾನು ಕರ್ನಾಟಕವನ್ನು ಆರಿಸಿಕೊಂಡಿಲ್ಲ. ಕರ್ನಾಟಕ ರಾಜ್ಯ, ಕನ್ನಡಾಂಬೆಯೇ ನನ್ನನ್ನು ಆರಿಸಿಕೊಂಡಿದ್ದಾರೆ. ಇದು ಭಗವಂತನ ಇಚ್ಛೆ, ಅವನದೇ ಸಂಕಲ್ಪ ಎಂದು "ಒನ್‌ ವರ್ಲ್ಡ್‌ ಒನ್‌ ಫ್ಯಾಮಿಲಿ ಮಿಷನ್"(One World One Family Mission) ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ(Sadguru Shri Madhusudhan Sai) ಹೆಮ್ಮೆಯಿಂದ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ "ದಿವ್ಯ ಸಂಜೆ" ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯ ಹಾಗೂ ಸ್ಫೂರ್ತಿದಾಯಕ ಮಾತುಗಳಿಗೆ ಹೆಸರುವಾಸಿ ವಾಗ್ಮಿ ಡಾ ರಾಹುಲ್ ದೇವರಾಜ್(Dr Rahul Devraj) ಅವರ ಪ್ರಶ್ನೆಗಳಿಗೆ ಸದ್ಗುರು ಉತ್ತರಿಸಿದರು.

ನಾನು ಭಗವಾನ್ ಸತ್ಯ ಸಾಯಿ ಬಾಬಾರವರ ಶಿಷ್ಯ. ಅವರ ಶಿಕ್ಷಣ ಸಂಸ್ಥೆಗಳಲ್ಲಿ ಓದಿ ಸೇವಾ ಚಟುವಟಿಕೆಗಳಿಗಾಗಿ ಅವರ ಮಾರ್ಗದರ್ಶನದ ನಿರೀಕ್ಷೆಯಲ್ಲಿದ್ದೆ. ಅವರ ಮಹಾಸಮಾಧಿಯ ನಂತರ ನನಗೆ ಆಧ್ಯಾತ್ಮಿಕ ಅನುಭವವಾಯಿತು. ಅದರಂತೆ ಅವರ ಸೂಚನೆಯಂತೆ ಕರ್ನಾಟಕದಲ್ಲಿ ಸೇವಾ ಚಟುವಟಿಕೆ ಆರಂಭಿಸಿದೆವು ಎಂದು ವಿವರಿಸಿದರು.

ನಾನು ವಿಶ್ವದ ಹಲವು ದೇಶಗಳಲ್ಲಿ ಓಡಾಡಿದ್ದೇನೆ. ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಸಂಚರಿಸಿದ್ದೇನೆ. ಆದರೆ ಕನ್ನಡಿಗರಂತಹ ಒಳ್ಳೆಯ ಜನರನ್ನು ಎಲ್ಲಿಯೂ ನೋಡಲಿಲ್ಲ. ಕಲಬುರ್ಗಿ ಯಲ್ಲಿ ಮೊದಲ ಶಿಕ್ಷಣ ಸಂಸ್ಥೆ ಆರಂಭಿಸಿದೆವು. ಜನರು ಜೊತೆಗೆ ಬಂದರು. ಡಾ.ರಾಜ್‌ಕುಮಾರ್ ಅವರು ಹಾಡ್ತಾರಲ್ಲ, 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣನೇ ಮೆಟ್ಟಬೇಕು' ಎನ್ನುವ ಹಾಗೆ ಎಂದು ಸದ್ಗುರು ನಗುಮೊಗದಿಂದ ಕರ್ನಾಟಕದಲ್ಲಿ ಸೇವಾ ಚಟುವಟಿಕೆ ಆರಂಭವಾದ ಬಗೆಯನ್ನು ತೆರೆದಿಟ್ಟರು.

ನಮ್ಮ ಕೆಲಸ ಮಾತನಾಡಬೇಕೇ ಹೊರತು, ನಾವು ಮಾತನಾಡಬಾರದು ಎಂದು ಬಾಬಾ ಹೇಳಿಕೊಟ್ಟಿದ್ದರು. ಅದರಂತೆ ನಾವು ಕೆಲಸ ಮಾಡುತ್ತಾ ಸಾಗುತ್ತಿದ್ದೇವೆ. ನಮ್ಮ ಆಸ್ಪತ್ರೆಗಳಲ್ಲಿ ಬಿಲಿಂಗ್ ಕೌಂಟರ್‌ಗಳು ಇಲ್ಲ. ದೇಶದಲ್ಲಿ ಅನ್ನ, ಅಕ್ಷರ ಮತ್ತು ಆರೋಗ್ಯ ಎಂದಿಗೂ ವಾಣಿಜ್ಯಕ್ಕೆ ಬಳಕೆಯಾಗಿರಲಿಲ್ಲ. ಆ ಕಾಲ ಮತ್ತೆ ಬರಬೇಕಿದೆ ಎಂದು ಸದ್ಗುರು ಹೇಳಿದರು.

ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ ಬಿ.ಎನ್.ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, 'ಧರ್ಮ ರಕ್ಷಣೆಗಾಗಿ ಸಿದ್ಧಪುರುಷರು, ಸಾಧುಸಂತರು ಅವತರಿಸಿದ್ದಾರೆ. ವಿಶ್ವದಲ್ಲಿರುವ ಎಲ್ಲ ಮಾನವರೂ ಅಮೃತಪುತ್ರರು ಎಂದು ವೇದರ್ಷಿಗಳು ಹೇಳಿದ್ದಾರೆ. ಮನುಷ್ಯ ಅಧ್ಯಾತ್ಮದ ಅನ್ವೇಷಣೆಯಿಂದ ದೂರವಾದಾಗ ದುರಂತಗಳು ಕಾಣಿಸಿಕೊಳ್ಳುತ್ತವೆ. ಅಧ್ಯಾತ್ಮದ ಶಕ್ತಿಯಿಂದಾ ಗಿಯೇ ಭಾರತವನ್ನು ವಿಶ್ವಗುರು ಅಂತ ಕರೆಯಬಹುದು' ಎಂದು ಅಭಿಪ್ರಾಯಪಟ್ಟರು.

'ನಾನು ಕೇವಲ ನಿಸ್ವಾರ್ಥ ಸೇವೆಯನ್ನು ಮಾತ್ರವೇ ಬೋಧನೆ ಮಾಡುತ್ತೇವೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಹೆಮ್ಮೆಯಿಂದ ಹೇಳುತ್ತಾರೆ. ಛತ್ತೀಸ್‌ಗಡ ಅವರ ಜನ್ಮಭೂಮಿ ಯಾದರೂ ಅವರು ಕರ್ನಾಟಕವನ್ನು ಕರ್ಮಭೂಮಿ ಮಾಡಿಕೊಂಡು 25 ಕ್ಯಾಂಪಸ್, ಜಗತ್ತಿನ ಮೊಟ್ಟಮೊದಲ ಉಚಿತ ವಿಶ್ವವಿದ್ಯಾಲಯ ಮತ್ತು ಉಚಿತ ವೈದ್ಯಕೀಯ ಶಿಕ್ಷಣ ಸಂಸ್ಥೆ ಆರಂಭಿಸಿ ದ್ದಾರೆ' ಎಂದು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ತನ್ನ ಬದುಕಿನ ಕಥನ ಹಂಚಿಕೊಂಡ ಸತ್ಯ ಸಾಯಿ ವಿಶ್ವನಿಕೇತನಂ ಕ್ಯಾಂಪಸ್‌ ನ ಹಿರಿಯ ವಿದ್ಯಾರ್ಥಿ ಮಂಜುನಾಥ್ ಜಿ.ಕೆ., "ನಾನು ಹೊಸಪೇಟೆ ತಾಲ್ಲೂಕು ಇಂಗಳಗಿ ಗ್ರಾಮ ದವನು. ನನ್ನ ತಂದೆ ತಾಯಿ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. ಹಂಪಿ ಸಮೀಪದ ಶ್ರೀ ಸತ್ಯಸಾಯಿ ವಿಶ್ವನಿಕೇತನಂನಲ್ಲಿ ನನಗ 6ನೇ ತರಗತಿಗೆ ಪ್ರವೇಶ ದೊರೆಯಿತು. ಈ ಶಿಕ್ಷಣವು ನನ್ನ ಜೀವನದಲ್ಲಿ ಒಂದು ಬದ್ಧತೆ ಕೊಟ್ಟಿದೆ. ನಮ್ಮ ಮಂಡ್ಯ ಕ್ಯಾಂಪಸ್‌ನಲ್ಲಿ 10ನೇ ತರಗತಿ ಪರೀಕ್ಷೆ ಎದುರಿಸಿ, 90 ಪರ್ಸೆಂಟ್ ಅಂಕ ಪಡೆದಿದ್ದೇನೆ. ನನಗೆ ಇಲ್ಲಿ ಓದಲು ಅವಕಾಶ ಸಿಗದಿದ್ದರೆ ಕೂಲಿ ಕೆಲಸ ಮಾಡಿಕೊಂಡು ಇರುತ್ತಿದ್ದೆ" ಎಂದು ಭಾವುಕರಾದರು.

ಹಂಪಸಾಗರ- ನರೇಗಲ್ಲ ನವಲಿ ಹಿರೇಮಠದ ಅಭಿನವ ಶಿವಲಿಂಗೇಶ್ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಮಂಜಮ್ಮ ಜೋಗತಿ, ಸಮಾಜ ಸೇವಕರಾದ ಅಯ್ಯಾಡಿ ತಿಮ್ಮಪ್ಪ, ಎಚ್‌.ಜಿ.ವಿರೂಪಾಕ್ಷ, ಬಳ್ಳಾರಿ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅವ್ವಾರು ಮಂಜುನಾಥ್, ರೌಂಡ್ ಟೇಬಲ್ ಸಂಸ್ಥೆ ಮುಖ್ಯಸ್ಥರಾದ ವಿಕ್ರಂ ಪೋಲಾ, ಉದ್ಯಮಿಗಳಾದ ಅಶ್ವಿನ್ ಕೊತ್ತಂಬರಿ, ರಾಜೇಂದ್ರ ಕಾಕುಬಾಳು, ಉದ್ಯಮಿ ರಾಜು ಗುರಾಡ್, ಮಾಜಿ ಸಚಿವ ರಾಜುಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.