ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Ratna: ವಿಷ್ಣುವರ್ಧನ್​​, ಬಿ. ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಘೋಷಣೆ

Vishnuvardhan: ನಟ ದಿ. ವಿಷ್ಣುವರ್ಧನ್​ ಮತ್ತು ನಟಿ ದಿ. ಬಿ. ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಕಲಾವಿದರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ಯಾವಾಗ, ಎಲ್ಲಿ ಪ್ರಶಸ್ತಿ ಪ್ರದಾನ ಮಾಡಬೇಕೆಂದು ಕನ್ನಡ & ಸಂಸ್ಕೃತಿ ಇಲಾಖೆ ಮುಂದಿನ ದಿನಗಳಲ್ಲಿ ನಿರ್ಧರಿಸಲಿದೆ.

ವಿಷ್ಣುವರ್ಧನ್​​, ಬಿ. ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಘೋಷಣೆ

-

Ramesh B Ramesh B Sep 11, 2025 6:07 PM

ಬೆಂಗಳೂರು: ಸಾವಿರಾರು ಅಭಿಮಾನಿಗಳ ಪಾಲಿನ ಅಭಿನವ ಭಾರ್ಗವ, ಸಾಹಸಸಿಂಹ ಡಾ. ವಿಷ್ಣುವರ್ಧನ್‌ (Vishnuvardhan) ಮತ್ತು ಅಭಿನಯ ಸರಸ್ವತಿ, ಬಹುಭಾಷಾ ತಾರೆ ಬಿ. ಸರೋಜಾ ದೇವಿ (B. Saroja Devi) ಅವರಿಗೆ ರಾಜ್ಯ ಸರ್ಕಾರ ಪ್ರತಿಷ್ಠಿತ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿಯನ್ನು ಮರಣೋತ್ತರವಾಗಿ ಘೋಷಿಸಿದೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡಬೇಕು ಎನ್ನುವುದು ಅವರ ಅಪಾರ ಅಭಿಮಾನಿಗಳ ಕೋರಿಕೆಯಾಗಿತ್ತು. ಕನ್ನಡ ಚಿತ್ರರಂಗಕ್ಕೆ ಈ ಇಬ್ಬರು ಕಲಾವಿದರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಸರೋಜಾದೇವಿ ಇತ್ತೀಚೆಗೆ ನಿಧನ ಹೊಂದಿದ್ದರು. ಅವರಿಗೆ 87 ವರ್ಷಗಳಾಗಿತ್ತು. ಕನ್ನಡ ಚಿತ್ರರಂಗಕ್ಕೆ ಗಣನೀಯ ಕೊಡುಗೆ ನೀಡಿದ ವಿಷ್ಣುವರ್ಧನ್‌ ಮತ್ತು ಸರೋಜಾದೇವಿ ಅವರಿಗೆ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಕರ್ನಾಟಕ ರತ್ನ’ ನೀಡಬೇಕು ಎಂದು ಹಲವರು ಹಿಂದಿನಿಂದಲೇ ಆಗ್ರಹಿಸುತ್ತಲೇ ಬಂದಿದ್ದರು. ಇದೀಗ ಕೊನೆಗೂ ರಾಜ್ಯ ಸರ್ಕಾರ ಗುರುವಾರ (ಸೆಪ್ಟೆಂಬರ್ 11) ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿದೆ.

ವಿಷ್ಣುವರ್ಧನ್ ಮತ್ತು ಬಿ. ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕೆಂದು ಭಾರತಿ ವಿಷ್ಣುವರ್ಧನ್, ಅನಿರುದ್ಧ್, ಹಿರಿಯ ನಟಿಯರಾದ ಜಯಮಾಲಾ, ಶ್ರುತಿ, ಮಾಳವಿಕಾ ಅವಿನಾಶ್ ಮತ್ತಿತರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಯಾವಾಗ, ಎಲ್ಲಿ ಪ್ರಶಸ್ತಿ ಪ್ರದಾನ ಮಾಡಬೇಕೆಂದು ಕನ್ನಡ & ಸಂಸ್ಕೃತಿ ಇಲಾಖೆ ಮುಂದಿನ ದಿನಗಳಲ್ಲಿ ನಿರ್ಧರಿಸಲಿದೆ.

ಈ ಸುದ್ದಿಯನ್ನೂ ಓದಿ: B. Saroja Devi: ಬಿ. ಸರೋಜಾ ದೇವಿ ಪತಿ ಯಾರು? ಅವರು ಸಾವನ್ನಪ್ಪಿದ್ದು ಹೇಗೆ?

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್‌.ಕೆ. ಪಾಟೀಲ್‌, ʼʼನಟ ವಿಷ್ಣುವರ್ಧನ್‌ ಮತ್ತು ನಟಿ ಬಿ. ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆʼʼ ಎಂದು ತಿಳಿಸಿದರು. ಕುವೆಂಪು ಅವರನ್ನು ಮರಣೋತ್ತರ ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ನಟ ದಿ. ವಿಷ್ಣುವರ್ಧನ್​ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರ ಅಳಿಯ ಅನಿರುದ್ಧ್​ ಸಂತಸ ವ್ಯಕ್ತವಡಿಸಿದರು. ʼʼಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಅಪ್ಪಾಜಿ ಈ ಕರ್ನಾಟಕ ರತ್ನ ಪ್ರಶಸ್ತಿಗೆ ಅರ್ಹರು. ಅಪ್ಪಾಜಿ ಯಾವಾಗಲೂ ನಮ್ಮೊಂದಿಗೆ ಇರುತ್ತಾರೆʼʼ ಎಂದಿದ್ದಾರೆ.

1972ರಲ್ಲಿ ರಿಲೀಸ್‌ ಆದ ʼವಂಶ ವೃಕ್ಷʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ವಿಷ್ಣುವರ್ಧನ್‌ ಗಾಯಕರಾಗಿಯೂ ಜನಪ್ರಿಯರಾಗಿದ್ದಾರೆ. ಕನ್ನಡ ಜತೆಗೆ ತಮಿಳು, ಮಲಯಾಳಂ, ತೆಲುಗು ಮತ್ತು ಹಿಂದಿಯಲ್ಲಿಯೂ ನಟಿಸಿದ್ದಾರೆ. 2009ರಲ್ಲಿ ನಿಧನ ಹೊಂದಿದ್ದಾಗ ಅವರಿಗೆ 59 ವರ್ಷ ವಯಸ್ಸಾಗಿತ್ತು.

ಸರೋಜಾ ದೇವಿ 1938ರ ಜನವರಿ 7ರಂದು ಬೆಂಗಳೂರಿನಲ್ಲಿ ಜನಿಸಿದರು. ಕನ್ನಡ ಚಿತ್ರರಂಗದ ಪ್ರಮುಖ ನಟಿಯಾಗಿದ್ದ ಅವರು ಕನ್ನಡ ಜತೆಗೆ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. 1955ರಿಂದ 1984ರವರೆಗೆ ಸತತವಾಗಿ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದು ಅವರ ಹೆಗ್ಗಳಿಕೆ.