ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Asha Raghu No more: ಅಗಲಿದ ಪತಿಯ ನೋವಿನಲ್ಲಿದ್ದ ಕಾದಂಬರಿಕಾರ್ತಿ ಆಶಾ ರಘು ಆತ್ಮಹತ್ಯೆ

ಎರಡು ವರ್ಷಗಳ ಹಿಂದೆ ಅವರ ಪತಿ, ಆಹಾರ ತಜ್ಞ ಕೆ.ಸಿ ರಘು ಅವರು ಕ್ಯಾನ್ಸರ್‌ಗೆ ತುತ್ತಾಗಿ ಸಾವನ್ನಪ್ಪಿದ್ದರು. ಅವರ ಅಗಲಿಕೆಯಿಂದ ಆಶಾ ಅವರು ಮಾನಸಿಕವಾಗಿ ನೊಂದಿದ್ದರು. ಈ ನೋವನ್ನು ಮೀರಲು ಸಾಹಿತ್ಯ ಕೃತಿಗಳ ರಚನೆ, ಉಪಾಸನಾ ಬುಕ್ಸ್‌ ಎಂಬ ಪ್ರಕಾಶನ ಸಂಸ್ಥೆ ಕಟ್ಟಿ ಅದರ ಮೂಲಕ ಯುವ ಸಾಹಿತಿಗಳ ಪುಸ್ತಕ ಪ್ರಕಟಣೆ ಮೊದಲಾದ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಆಂತರಿಕವಾಗಿ ಬಹಳ ಕುಸಿದಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ.

ಅಗಲಿದ ಪತಿಯ ನೋವಿನಲ್ಲಿದ್ದ ಕಾದಂಬರಿಕಾರ್ತಿ ಆಶಾ ರಘು

ಆಶಾ ರಘು -

ಹರೀಶ್‌ ಕೇರ
ಹರೀಶ್‌ ಕೇರ Jan 10, 2026 3:26 PM

ಬೆಂಗಳೂರು, ಜ.10: ಕನ್ನಡದ ಕಾದಂಬರಿಕಾರ್ತಿ, ಸಾಹಿತಿ, ಪ್ರಕಾಶಕಿ ಆಶಾ ರಘು ಅವರು ಆತ್ಮಹತ್ಯೆ (Asha Raghu No more) ಮಾಡಿಕೊಂಡಿದ್ದಾರೆ. ತಮ್ಮ ಸಾಹಿತ್ಯ ಮತ್ತು ಸಹೃದಯ ನಡವಳಿಕೆಯಿಂದ ಸಾಕಷ್ಟು ಸಾಹಿತ್ಯಪ್ರಿಯ ಅಭಿಮಾನಿಗಳನ್ನು ಸಂಪಾದಿಸಿದ್ದ ಅವರು, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಎರಡು ವರ್ಷಗಳ ಹಿಂದೆ ಅವರ ಪತಿ, ಆಹಾರ ತಜ್ಞ ಕೆ.ಸಿ ರಘು ಅವರು ಕ್ಯಾನ್ಸರ್‌ಗೆ ತುತ್ತಾಗಿ ಸಾವನ್ನಪ್ಪಿದ್ದರು. ಅವರ ಅಗಲಿಕೆಯಿಂದ ಆಶಾ ಅವರು ಮಾನಸಿಕವಾಗಿ ನೊಂದಿದ್ದರು. ಈ ನೋವನ್ನು ಮೀರಲು ಸಾಹಿತ್ಯ ಕೃತಿಗಳ ರಚನೆ, ಉಪಾಸನಾ ಬುಕ್ಸ್‌ ಎಂಬ ಪ್ರಕಾಶನ ಸಂಸ್ಥೆ ಕಟ್ಟಿ ಅದರ ಮೂಲಕ ಯುವ ಸಾಹಿತಿಗಳ ಪುಸ್ತಕ ಪ್ರಕಟಣೆ ಮೊದಲಾದ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಆಂತರಿಕವಾಗಿ ಬಹಳ ಕುಸಿದಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ.

ಕೆಲವೇ ದಿನಗಳ ಹಿಂದೆ ಆಶಾ ಅವರು ತಮ್ಮ ಪತಿಯ ನೆನಪಿನ ಪೋಸ್ಟ್‌ ಅನ್ನು ಫೇಸ್‌ಬುಕ್‌ನಲ್ಲಿ ಮಾಡಿಕೊಂಡಿದ್ದರು. "ಹೀಗೊಂದು ಕನಸಾಯಿತು… ಇಂದು ಬೆಳಗಿನ ಜಾವ ನನ್ನವರು ಕನಸಿನಲ್ಲಿ ಕಾಣಿಸಿಕೊಂಡರು. ಬಹಳ ಸಹಜವಾಗಿದ್ದರು. ನನಗೆ ಅವರು ತೀರಿಕೊಂಡ ಮೇಲೆ ನೋಡಲು ಬಂದಿದ್ದಾರೆಂಬ ಸಂಪೂರ್ಣ ಅರಿವಿತ್ತು. ಸಡಗರದಲ್ಲಿ ಮಾತನಾಡಿಸಿದೆ. ಉಳಿದವರನ್ನು ಕನಸಿನಲ್ಲೇ 'ಕಾಣ್ತಿದ್ದಾರಾ ನಿಮಗೆ?' ಅಂತೆಲ್ಲಾ ಕೇಳಿದೆ. ಅವರು ತಿಣುಕಾಡಿದರು. ಆದರೆ ಮಗಳು ನೇರವಾಗಿ ಬಂದು ತನ್ನಪ್ಪನನ್ನು ತಟ್ಟಿ, 'How are you?' ಅಂತ ಮಾತನಾಡಿಸಿದಳು. ಅವರೂ ಅವಳೊಂದಿಗೆ ಮಾತನಾಡಿಸಿದರು. ಕನಸಿನಲ್ಲಿ ನನ್ನ ತಲೆಗೂದಲು ತುಂಡಾಗಿತ್ತು. ನನ್ನ ಕೂದಲಲ್ಲಿ ಬೆರಳಾಡಿಸಿ ಯಾವುದೋ ಶ್ಯಾಂಪೂ ಹೆಸರು ಹೇಳಿದರು. ನಾನು ನಕ್ಕೆ. ನಂತರ 'ನಾನು ಈಗ ಫ್ರಾನ್ಸ್‌ಗೆ ಹೋಗ್ತಿದ್ದೀನಿ' ಅಂದರು. 'ಮಾರಿಷಸ್' ಅಂತಾ ಕೂಡಾ ಜೊತೆಗೆ ಸೇರಿಸಿದರೋ ಅಂತ ಅರೆಬರೆ ನೆನಪು. ಇಷ್ಟಾಗುವುದರಲ್ಲಿ ಸಂತೋಷಕ್ಕೆ ಫಳ್ಳನೆ ಕಣ್ಣು ಬಿಟ್ಟುಬಿಟ್ಟೆ! ಸಂತೋಷಕ್ಕೆ ಮೊದಲು, ಆ ನಂತರ ಅವರ ಫೋಟೋ ನೋಡಿಕೊಂಡು ಭಾವವುಕ್ಕಿ ಅತ್ತೂ ಅತ್ತೂ ಕೆಡವಿದೆ. ಫ್ರಾಂಸಿಗೆ ಹೋದರೆ ನಿಜಕ್ಕೂ ಸಿಕ್ಕರೂ ಸಿಗಬಹುದು ಅನ್ನುವ ಲಹರಿಯಲ್ಲಿಯೇ ಇನ್ನೂ ಇದ್ದೇನೆ!" ಎಂದು ಆಶಾ ಬರೆದುಕೊಂಡಿದ್ದರು.

Asha Raghu no more: ಕನ್ನಡ ಸಾಹಿತಿ, ಪ್ರಕಾಶಕಿ ಆಶಾ ರಘು ಇನ್ನಿಲ್ಲ

ಸಂಸ್ಕೃತಿ ಸಚಿವರ ಸಂತಾಪ

ಆಶಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಶನಿವಾರ ಸಂಜೆ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೆ.ಸಿ ರಘು ಮತ್ತು ಆಶಾ ದಂಪತಿಗೆ ಓರ್ವ ಮಗಳು ಇದ್ದಾರೆ. ಆಶಾ ಅವರ ಅಗಲಿಕೆಗೆ ನೂರಾರು ಸಾಹಿತ್ಯಪ್ರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿ ಮೃತರ ಕುಟುಂಬದವರಿಗೆ ಸಾಂತ್ವನ ತಿಳಿಸಿದ್ದಾರೆ.

ಆಶಾ ರಘು ಅವರು ಆವರ್ತ, ಗತ, ಮಾಯೆ, ಚಿತ್ತರಂಗ, ಕೆಂಪು ದಾಸವಾಳ, ವಕ್ಷ ಸ್ಥಲ ಕಾದಂಬರಿಗಳನ್ನು ಬರೆದಿದ್ದಾರೆ. ಆರನೇ ಬೆರಳು, ಬೊಗಸೆಯಲ್ಲಿ ಕಥೆಗಳು, ಅಪರೂಪದ ಪುರಾಣ ಕಥೆಗಳು ಸೇರಿದಂತೆ ಹಲವು ಕಥಾಸಂಕಲನಗಳನ್ನು ರಚಿಸಿದ್ದಾರೆ. ಅಲ್ಲದೆ, ಚೂಡಾಮಣಿ, ಕ್ಷಮಾದಾನ, ಬಂಗಾರದ ಪಂಜರ ಮತ್ತು ಪೂತನಿ ನಾಟಕಗಳನ್ನು ಬರೆದಿದ್ದಾರೆ.

ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2014), ಸೂರ್ಯನಾರಾಯಣ ಚಡಗ ಪ್ರಶಸ್ತಿ (2014), ಕನ್ನಡ ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮಭಟ್ಟ ಪ್ರಶಸ್ತಿ (2019), ರಾಯಚೂರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿ (2020), ಸೇಡಂನ ಅಮ್ಮ (2021), ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿನಿಧಿ ಪ್ರಶಸ್ತಿಗಳು ಸಂದಿವೆ. ಅಲ್ಲದೆ, ಸಾಹಿತ್ಯಾಮೃತ ಸರಸ್ವತಿ ಎಂಬ ಬಿರುದನ್ನೂ ಪಡೆದಿದ್ದಾರೆ.