ಎಸ್.ಎಲ್. ಭೈರಪ್ಪನವರನ್ನು ಗುರಿ ಮಾಡಿ ಕೆಲವರು ಸಾಕಷ್ಟು ತೊಂದರೆ ಕೊಟ್ಟರು: ಸಂದೀಪ್ ಬಾಲಕೃಷ್ಣ
Mangaluru Lit Fest: ಭೈರಪ್ಪನವರು ಎಲ್ಲವನ್ನೂ ಓದುಗರ ಗ್ರಹಿಕೆಗೆ ಬಿಡುತ್ತಿದ್ದರು. ಭೈರಪ್ಪನವರು ಯಾವುದನ್ನೂ ನೇರವಾಗಿ ಹೇಳುತ್ತಿರಲಿಲ್ಲ. ಪಾತ್ರಗಳ ಮೂಲಕ ಒಂದಿಷ್ಟು ವಿಷಯಗಳನ್ನು ಹೇಳುತ್ತಿದ್ದರು. ಏನು ಅರ್ಥ ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದು ಓದುಗರಿಗೆ ಬಿಡುತ್ತಿದ್ದರು ಎಂದು ಸಂದೀಪ್ ಬಾಲಕೃಷ್ಣ ತಿಳಿಸಿದ್ದಾರೆ.
ಮಂಗಳೂರು ಲಿಟ್ ಫೆಸ್ಟ್ ಸಂವಾದದಲ್ಲಿ ಸಂದೀಪ್ ಬಾಲಕೃಷ್ಣ ಮಾತನಾಡಿದರು. -
ಮಂಗಳೂರು, ಜ.10: ಕೆಲವರು ಎಸ್.ಎಲ್. ಭೈರಪ್ಪನವರನ್ನು ಗುರಿ ಮಾಡಿ ಸಾಕಷ್ಟು ತೊಂದರೆ ಕೊಟ್ಟರು. ಆದರೆ, ಭೈರಪ್ಪನವರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾ ಹೋದರು ಎಂದು ಲೇಖಕ ಸಂದೀಪ್ ಬಾಲಕೃಷ್ಣ ಹೇಳಿದರು. ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯುತ್ತಿರುವ ಮಂಗಳೂರು ಲಿಟ್ ಫೆಸ್ಟ್ (Mangaluru Lit Fest) 8ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಭೈರಪ್ಪನವರ ಸಾಹಿತ್ಯದಲ್ಲಿ ಇತಿಹಾಸ ಪ್ರಜ್ಞೆ ಎಂಬ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಕಳೆದ 70-80 ವರ್ಷಗಳಲ್ಲಿ ದೇಶದಲ್ಲಿ ಶಾಂತಿ, ಸೌಹಾರ್ದತೆ ಹಾಳಾಗುತ್ತಿದೆ ಎಂದು ಬೊಬ್ಬೆ ಹಾಕುತ್ತಿದ್ದವರೇ ಹೆಚ್ಚು ನಾಶ ಮಾಡಿದ್ದಾರೆ. ಭೈರಪ್ಪ ತಮ್ಮ ಕಾದಂಬರಿಗಳಲ್ಲಿ ಯಾವತ್ತೂ, ಯಾರನ್ನೂ ಬೆಟ್ಟು ಮಾಡಿ ತೋರಿಸಲಿಲ್ಲ. ಆದರೆ, ಕಮ್ಯುನಿಸ್ಟರು ಮತ್ತು ಮಾರ್ಕ್ಸಿಸ್ಟರು ತಮ್ಮ ಹೆಗಲು ಮುಟ್ಟಿ ನೋಡಿಕೊಂಡು, ಭೈರಪ್ಪನವರ ವಿರುದ್ಧ ಹರಿಹಾಯುತ್ತಲೇ ಬಂದರು. ಅವರನ್ನೆಲ್ಲಾ ಬಯಲು ಮಾಡಿದ್ದಕ್ಕೆ ಭೈರಪ್ಪನವರ ವಿರುದ್ಧ ಸಿಟ್ಟು ತೀರಿಸಿಕೊಂಡರು. ಆದರೆ, ಭೈರಪ್ಪ ಇದ್ಯಾವುದನ್ನೂ ಲೆಕ್ಕಿಸದೆ ತಮ್ಮ ಕೆಲಸ ಮಾಡುತ್ತಾ ಹೋದರು’ ಎಂದರು.
‘ಮಹಾಭಾರತವಿಲ್ಲದೆ ಪರ್ವ ಇಲ್ಲ. ಮಹಾಭಾರತದಲ್ಲಿದ್ದ ಪವಾಡಗಳನ್ನು, ತಮ್ಮ ಕಾದಂಬರಿಯ ಮೂಲಕ ನೈಜವಾಗಿ ಚಿತ್ರಿಸಿದವರು ಎಸ್.ಎಲ್. ಭೈರಪ್ಪ. ವ್ಯಾಸರು ಬರೆದ ಮಹಾಭಾರತದ ಅಂತರಾಳವನ್ನು ಹಿಡಿದು, ಬೇರೆ ತರಹ ಬರೆದರು. ಅದು ಅವರ ಉತ್ಕೃಷ್ಟ ಕೃತಿ. ಬಹಳ ನೈಜವಾಗಿ ಮತ್ತು ಸವಿಸ್ತಾರವಾಗಿ ಆ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ. ಅದಕ್ಕಾಗಿ ಅವರು ದೇಶ ಪರ್ಯಟನೆ ಮಾಡಿದ್ದಾರೆ. ಸಾಕಷ್ಟು ಅಧ್ಯಯನ ಮಾಡಿ ಬರೆದಿದ್ದಾರೆ. ಹಾಗಾಗಿ, ಆ ಕಾದಂಬರಿ ಅಷ್ಟು ಅದ್ಭುತವಾಗಿ ಮೂಡಿಬಂದಿದೆ’ ಎಂದರು.
‘ಆವರಣ ಬಿಡುಗಡೆ ಆದಾಗ ಭುಗಿಲೆದ್ದ ವಿವಾದಗಳು, ಸಾರ್ಥ ಬಿಡುಗಡೆ ಆದಾಗ ಆಗಲಿಲ್ಲ ಎಂದ ಸಂದೀಪ್ ಬಾಲಕೃಷ್ಣ, ಸಾರ್ಥದಲ್ಲಿ ಆಕ್ರಮಣದ ಆರಂಭದ ಕುರಿತಾಗಿ ಬರೆದಿದ್ದರು. ಆದರೆ, ಆವರಣದಲ್ಲಿ ಆಳ್ವಿಕೆಯ ಕರಾಳತೆಯನ್ನು ಹಿಡಿದಿಟ್ಟರು. ಔರಂಗಜೇಬನಿಗಿಂತ ಕೆಲವು ರಾಜರು ಕ್ರೂರಿಗಳಾಗಿದ್ದರು. ಆದರೆ, ಔರಂಗಜೇಬ ಮೊಘಲರ ಕೊನೆಯ ರಾಜನಾಗುವುದರ ಜತೆಗೆ ದುರಂತ ಮತ್ತು ಅತ್ಯಂತ ಕ್ರೂರಿ ರಾಜನಾಗಿದ್ದ. ಆ ಕ್ರೂರತೆಯನ್ನು ತೋರಿಸುವ ಪ್ರಯತ್ನ ಮಾಡಿದರು’ ಎಂದರು.
Mangaluru Lit Fest: ಭಾಷೆ ಕಡೆಗಣನೆಗೆ ವಿಶ್ವವಿದ್ಯಾನಿಲಯಗಳು, ಅಧ್ಯಾಪಕರು ಕಾರಣ: ಶತಾವಧಾನಿ ಆರ್. ಗಣೇಶ್
‘ಭೈರಪ್ಪನವರು ಎಲ್ಲವನ್ನೂ ಓದುಗರ ಗ್ರಹಿಕೆಗೆ ಬಿಡುತ್ತಿದ್ದರು ಎಂದ ಅವರು, ಭೈರಪ್ಪನವರು ಯಾವುದನ್ನೂ ನೇರವಾಗಿ ಹೇಳುತ್ತಿರಲಿಲ್ಲ. ಪಾತ್ರಗಳ ಮೂಲಕ ಒಂದಿಷ್ಟು ವಿಷಯಗಳನ್ನು ಹೇಳುತ್ತಿದ್ದರು. ಏನು ಅರ್ಥ ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದು ಓದುಗರಿಗೆ ಬಿಡುತ್ತಿದ್ದರು’ ಎಂದರು. ರೋಹಿತ್ ಚಕ್ರತೀರ್ಥ ಸಂವಾದ ನಡೆಸಿಕೊಟ್ಟರು.