ಕುರುಬ ಸಮುದಾಯಕ್ಕೆ ಎಸ್‌ಟಿ ಸಿಂಧುತ್ವ ಪ್ರಮಾಣಪತ್ರ ನೀಡಲು ಆಗ್ರಹ; ಯಾದಗಿರಿಯಲ್ಲಿ ಕುರಿ ಹಿಂಡುಗಳೊಂದಿಗೆ ಪ್ರತಿಭಟನೆ
2016ರ ರಾಜ್ಯ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅರ್ಹ ಕುರುಬ ಸಮುದಾಯದವರಿಗೆ ತಕ್ಷಣ ಎಸ್.ಟಿ ಸಿಂಧುತ್ವ ಪ್ರಮಾಣಪತ್ರ ನೀಡಬೇಕು. ಓಆರ್ಜಿಐ ಮತ್ತು ಎಸ್.ಟಿ ಆಯೋಗದ ನಡುವೆ ಸಮನ್ವಯ ಸಭೆ ನಡೆಸಿ ತಾರತಮ್ಯ ನಿವಾರಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಎಸ್.ಟಿ ಹೋರಾಟ ಸಮಿತಿ ಹಾಗೂ ಕುರುಬ ಹೋರಾಟ ಸಮಿತಿ ಆಗ್ರಹಿಸಿವೆ.
ಯಾದಗಿರಿಯಲ್ಲಿ ಎಸ್.ಟಿ ಹೋರಾಟ ಸಮಿತಿ, ಕುರುಬ ಹೋರಾಟ ಸಮಿತಿ ಪ್ರತಿಭಟನೆ. -
ಯಾದಗಿರಿ, ಫೆಬ್ರವರಿ 23: ಕರ್ನಾಟಕ ರಾಜ್ಯದ ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಮಾನ್ಯತೆ ಹಾಗೂ ಸಿಂಧುತ್ವ ಪ್ರಮಾಣಪತ್ರ (ST Sindhutva Pramana Patra) ನೀಡುವ ವಿಷಯದಲ್ಲಿ ನಡೆಯುತ್ತಿರುವ ತಾರತಮ್ಯ ಮತ್ತು ವಿಳಂಬವನ್ನು ಖಂಡಿಸಿ, ಕರ್ನಾಟಕ ರಾಜ್ಯ ಎಸ್.ಟಿ ಹೋರಾಟ ಸಮಿತಿ ಹಾಗೂ ಕುರುಬ ಹೋರಾಟ ಸಮಿತಿಯವರು ಕುರಿ ಹಿಂಡುಗಳೊಂದಿಗೆ ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.
ಕುರುಬ ಸಮುದಾಯಕ್ಕೆ ಕೊಡಗು, ಬೀದರ್, ಕಲಬುರಗಿ, ಯಾದಗಿರಿ ಹಾಗೂ ಕೊಳ್ಳೇಗಾಲ ಪ್ರದೇಶಗಳಲ್ಲಿ ಐತಿಹಾಸಿಕವಾಗಿ ಎಸ್.ಟಿ ಸಿಂಧುತ್ವ ನೀಡಲಾಗುತ್ತಿತ್ತು. 2016ರಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ, ಪ್ರಾಯೋಗಿಕವಾಗಿ ಅರ್ಹರಿಗೆ ಸಿಂಧುತ್ವ ಪ್ರಮಾಣಪತ್ರ ನೀಡಲಾಗುತ್ತಿಲ್ಲ ಎಂದು ಸಮಿತಿ ಆರೋಪಿಸಿದೆ.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಮೀಕ್ಷೆಯ ಪ್ರಕಾರ 25 ಜಿಲ್ಲೆಗಳ 50 ತಾಲೂಕುಗಳಲ್ಲಿ 60,595 ಜನರ ಅಧ್ಯಯನ ನಡೆಸಲಾಗಿದೆ. 73% ಸಾಕ್ಷರತೆ ಮಾತ್ರ ಇರುವುದರಿಂದ ಶಿಕ್ಷಣ ಹಿಂದುಳಿದಿರುವುದು ಸ್ಪಷ್ಟವಾಗಿದೆ. 78% ಕುಟುಂಬಗಳು ಅಲ್ಪ ಪ್ರಮಾಣದ ಕೃಷಿ ಭೂಮಿಯನ್ನು ಹೊಂದಿದ್ದು, ಆರ್ಥಿಕವಾಗಿ ಹಿಂದುಳಿದ ಸ್ಥಿತಿಯಲ್ಲಿವೆ. ಸಾಂಪ್ರದಾಯಿಕವಾಗಿ ಕುರಿ-ಮೇಕೆ ಸಾಕಣೆ, ಪ್ರಕೃತಿ ಆರಾಧನೆ ಹಾಗೂ ಪಿತೃಪ್ರಧಾನ ಪದ್ಧತಿಗಳನ್ನು ಅನುಸರಿಸುತ್ತಿರುವುದು ಬುಡಕಟ್ಟು ಲಕ್ಷಣಗಳನ್ನು ತೋರಿಸುತ್ತದೆ.

2017, 2018 ಮತ್ತು 2023 ರಲ್ಲಿ ಓಆರ್ಜಿಐ ಕೆಲವು ಪ್ರಸ್ತಾವನೆಗಳನ್ನು ತಿರಸ್ಕರಿಸಿದ್ದರೂ, 2018ರಲ್ಲಿ ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗವು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕುರುಬ ಸಮುದಾಯವು ಪರಿಶಿಷ್ಟ ಪಂಗಡಕ್ಕೆ ಸೇರಿದ ಲಕ್ಷಣಗಳನ್ನು ಹೊಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಸಮಿತಿ ತಿಳಿಸಿದೆ ಎಂದರು.
ಹೋರಾಟ ಸಮಿತಿಯ ಬೇಡಿಕೆಗಳು:
2016ರ ರಾಜ್ಯ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅರ್ಹ ಕುರುಬ ಸಮುದಾಯದವರಿಗೆ ತಕ್ಷಣ ಎಸ್.ಟಿ ಸಿಂಧುತ್ವ ಪ್ರಮಾಣಪತ್ರ ನೀಡಬೇಕು. ಓಆರ್ಜಿಐ ಮತ್ತು ಎಸ್.ಟಿ ಆಯೋಗದ ನಡುವೆ ಸಮನ್ವಯ ಸಭೆ ನಡೆಸಿ ತಾರತಮ್ಯ ನಿವಾರಣೆ ಮಾಡಬೇಕು.
ಕೇಂದ್ರ ಸರ್ಕಾರ ತುರ್ತು ಮಧ್ಯಸ್ಥಿಕೆ ವಹಿಸಬೇಕು
ಸಮಿತಿ ಪ್ರತಿನಿಧಿಗಳು ಮಾತನಾಡಿ, “ನಾವು ಶಾಂತಿಯುತ ಹಾಗೂ ಕಾನೂನುಬದ್ಧ ಹೋರಾಟದ ಮೂಲಕ ನಮ್ಮ ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯಲು ಒತ್ತಾಯಿಸುತ್ತಿದ್ದೇವೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು” ಎಂದು ತಿಳಿಸಿದ್ದಾರೆ.
ಈ ಕುರಿತು ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಹೋರಾಟ, ಜಾಗೃತಿ ಮೆರವಣಿಗೆ ಹಾಗೂ ಸಮಾವೇಶಗಳನ್ನು ನಡೆಸಲಾಗುವುದು ಎಂದು ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟಕ್ಕೆ ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಕರೆ
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಎಸ್. ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಸಿದ್ದಣ್ಣ ತೇಜಿ, ಕುರುಬ ಹೋರಾಟ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಕರಿಯಪ್ಪ ಭ ಕರಿಗಾರ, ಸಂಘಟನಾ ಕಾರ್ಯದರ್ಶಿ ವಿಠಲ ಬಿರಾದಾರ, ಯಾದಗಿರಿ ಕುರುಬ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಶಿವಕುಮಾರ ಮುನಗಲ್, ತಾಲೂಕು ಅಧ್ಯಕ್ಷ ಸಿದ್ದು ಪೂಜಾರಿ (ಚಂಡ್ರಿಕಿ), ಬಸವನಬಾಗೇವಾಡಿ ತಾಲೂಕ ಅಧ್ಯಕ್ಷ ಸುರೇಶ ಜಾಲವಾಡಿ ಅರಿಕೇರಿ, ಯಾದಗಿರಿ ಕುರುಬ ಹೋರಾಟ ಸಮಿತಿಯ ಯುವ ಘಟಕ ಜಿಲ್ಲಾಧ್ಯಕ್ಷ ಎಸ್ ನಿಜಲಿಂಗಪ್ಪ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ರಾಘವಾಂಕ ಪಾಟೀಲ, ತಾಲೂಕು ಅಧ್ಯಕ್ಷ ತಾಯಪ್ಪ ಕರಣಿಗಿ, ಯಾದಗಿರಿ ಹೋರಾಟ ಸಮಿತಿಯ ಶಹಾಪುರ ತಾಲೂಕು ಅಧ್ಯಕ್ಷ ರೇವಣ್ಣ ಸಿದ್ದಪ್ಪ ಸೇರಿದಂತೆ ಇನ್ನಿತರ ಸಮಾಜದ ಮುಖಂಡರು ಉಪಸ್ಥಿತರಿದ್ದರು.