Suhas Shetty Murder Case: ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಇನ್ನಿಬ್ಬರು ಹಿಂದೂ ಮುಖಂಡರಿಗೆ ಕೊಲೆ ಬೆದರಿಕೆ
Suhas Shetty Murder Case: ಹಿಂದೂ ಮುಖಂಡ ಭರತ್ ಕುಮ್ಡೇಲ್ ಹಾಗೂ ಶರಣ್ ಪಂಪ್‌ವೆಲ್ ಹತ್ಯೆಗೆ ಸ್ಕೆಚ್ ಹಾಕಲಾಗಿದೆ; ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಶರಣ್ ಪಂಪ್‌ವೆಲ್ ಹಾಗೂ ಭರತ್ ಕುಮ್ಡೇಲು ಇಬ್ಬರ ಮೇಲೂ ಅನೇಕ ಪೊಲೀಸ್ ಪ್ರಕರಣಗಳೂ ಇವೆ.

ಶರಣ್ ಪಂಪ್‌ವೆಲ್, ಭರತ್ ಕುಮ್ಡೇಲು

ಮಂಗಳೂರು: ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ (Hindu activist Suhas Shetty murder case) ಹತ್ಯೆಯ ಬೆನ್ನಲ್ಲೇ ಇನ್ನಿಬ್ಬರು ಹಿಂದೂ ಸಂಘಟನೆ (hindu leaders) ಮುಖಂಡರಿಗೆ ಜೀವ ಬೆದರಿಕೆಗಳು ಬಂದಿವೆ ಎಂಬ ಮಾಹಿತಿ ಲಭ್ಯವಾಗಿದೆ. ಸುಹಾಸ್ ಶೆಟ್ಟಿ ಹತ್ಯೆಯಿಂದ ದಕ್ಷಿಣ ಕನ್ನಡ ಜಿಲ್ಲೆ (Dakshina Kannada) ಉದ್ವಿಗ್ನಗೊಂಡಿದ್ದು, ಇದರ ಹಿಂದೆ ಪಿಎಫ್‌ಐ ಇದೆ ಎಂದು ಬಿಜೆಪಿಯವರು ಆರೋಪಿಸಿದ್ದರು. ಆದರೆ 8 ಆರೋಪಿಗಳ ಬಂಧನದಿಂದ, ಇದರಲ್ಲಿ ಇಬ್ಬರು ಹಿಂದೂ ಯುವಕರೂ ಇರುವುದು ಗೊತ್ತಾಗಿದೆ. ಇದರ ನಡುವೆ, ಇನ್ನಿಬ್ಬರು ಹಿಂದೂ ಮುಖಂಡರಿಗೆ ಇದೀಗ ಜೀವ ಬೆದರಿಕೆ ಬಂದಿದೆ ಎನ್ನಲಾಗಿದೆ.
ಹಿಂದೂ ಮುಖಂಡ ಭರತ್ ಕುಮ್ಡೇಲ್ ಹಾಗೂ ಶರಣ್ ಪಂಪ್‌ವೆಲ್ ಹತ್ಯೆಗೆ ಸ್ಕೆಚ್ ಹಾಕಲಾಗಿದೆ; ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಭಜರಂಗದಳ ಮುಖಂಡ ಭರತ್ ಕುಮ್ಡೇಲ್ ಅನ್ನು 5/5/2025ರ ರಾತ್ರಿ 9:30ಕ್ಕೆ ಅವರ ಸ್ಥಳದಲ್ಲೇ ಕೊಲೆ ಮಾಡುವುದಾಗಿ ಬರೆದಿದ್ದಾರೆ.
ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್‌ಗೆ ಕೂಡ ಬೆದರಿಕೆ ಹಾಕಲಾಗಿದ್ದು, ಮುಂದಿನ ಟಾರ್ಗೆಟ್ ಶರಣ್ ಪಂಪ್‌ವೆಲ್, ಹತ್ಯೆಯಾಗಲು ತಯಾರಾಗು ಎಂದು ಬರೆಯಲಾಗಿದೆ. ಸುಹಾಸ್ ಶೆಟ್ಟಿಯ ಫೋಟೋದಲ್ಲಿ ರೈಟ್ ಚಿಹ್ನೆ ಹಾಕಿ ವಿಕೃತಿ ಮೆರೆದಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದೆ.
ಭಜರಂಗದಳ ಮುಖಂಡ ಭರತ್ ಕುಮ್ಡೇಲು, SDPI ಮುಖಂಡ ಅಶ್ರಫ್ ಕಲಾಯಿ ಹತ್ಯೆಯ ಪ್ರಮುಖ ಆರೋಪಿಯಾಗಿದ್ದಾನೆ. ಅಶ್ರಫ್ ಕಲಾಯಿ ಎಂಬಾತ 2017ರ ಜೂನ್ 21ರಂದು ಹತ್ಯೆಯಾಗಿದ್ದ. ಈತ ಬಂಟ್ವಾಳದ ಬೆಂಜನಪದವು ಎಂಬಲ್ಲಿ ಬರ್ಬರವಾಗಿ ಹತ್ಯೆಗೀಡಾಗಿದ್ದ. SDPIನಲ್ಲಿ ಮುಂಚೂಣಿಯಲ್ಲಿದ್ದ ನಾಯಕ ಅಶ್ರಫ್ ಕಲಾಯಿ ಹತ್ಯೆ ಬಳಿಕ ಪ್ರತೀಕಾರವಾಗಿ ಬಂಟ್ವಾಳದ ಶರತ್ ಮಡಿವಾಳ ಹತ್ಯೆಯಾಗಿತ್ತು.
ಭರತ್ ಕುಮ್ಡೇಲ್ ತನಗೆ ಬಂದಿರುವ ಜೀವ ಬೆದರಿಕೆ ಬಗ್ಗೆ ಮಾತಾಡಿದ್ದು, ಇದಕ್ಕೆಲ್ಲಾ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಪ್ರತೀಕಾರ ಮಾಡಲು ಬಂದರೆ, ನಾವು ಹೆದರಿಕೊಂಡು ಕೂರುವುದಿಲ್ಲ. ಬೇರೆ ಎಲ್ಲರಿಗೂ ಬೆದರಿಕೆ ಹಾಕಿದ್ದು, ನಮಗೆ ಬೇಡ. ನಾವು ಎಲ್ಲರಂತೆ ಭಾಷಣ ಮಾಡಿ ಲೀಡರ್ ಆಗಿಲ್ಲ, ಪ್ರೆಸ್ ಮೀಟ್‌ನಲ್ಲಿ ಕೂತು ಪಬ್ಲಿಸಿಟಿ ತೆಗೊಂಡವರಲ್ಲ. ನಮಗೂ ಕೆಲಸ ಮಾಡಲು ಗೊತ್ತಿದೆ. ಪ್ರತೀಕಾರ ಮಾಡುವವರು ಎದುರು ಬಂದ್ರೆ, ನಾವು ಎದುರಿಸುತ್ತೇವೆ ಎಂದಿದ್ದಾರೆ.
ಶರಣ್ ಪಂಪ್‌ವೆಲ್ ಹಾಗೂ ಭರತ್ ಕುಮ್ಡೇಲು ಇಬ್ಬರ ಮೇಲೂ ಅನೇಕ ಪೊಲೀಸ್ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: Suhas Shetty Murder: ಸುಹಾಸ್ ಶೆಟ್ಟಿ ಕೊಲೆ 8 ಆರೋಪಿಗಳ ಬಂಧನ, ಕೋಮು ವಿರೋಧಿ ಕಾರ್ಯಪಡೆ ರಚನೆ: ಜಿ ಪರಮೇಶ್ವರ