ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಜಪಾನಿನಲ್ಲಿ ಮಾಂಗ ಮುದ್ರಣಕ್ಕೆ ಟಾಯ್ಲೆಟ್‌ ಪೇಪರ್‌ʼಗಿಂತ ಹೆಚ್ಚು ಕಾಗದ ಬಳಸುತ್ತಾರೆ !

ಜಪಾನಿನ ಮಾಂಗಗಳು ಜಗತ್ತಿನಲ್ಲಿಯೇ ಪ್ರಸಿದ್ಧ. ಚಿಕ್ಕಮಕ್ಕಳಿಗೆ ಜಪಾನ್ ಯಾವುದಕ್ಕೆ ಪ್ರಸಿದ್ಧ ಎಂದು ಕೇಳಿದರೆ, ಹತ್ತರಲ್ಲಿ ಒಂಬತ್ತು ಮಂದಿ ‘ಮಾಂಗ’ ಎಂದು ಹೇಳುವುದರಲ್ಲಿ ಸಂದೇಹವಿಲ್ಲ. ಮಾಂಗ ಸಾಮಾನ್ಯವಾಗಿ ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಮುದ್ರಿತವಾಗಿದ್ದು, ಕಥೆಯು ಚಿತ್ರರೇಖೆ ಗಳ ಮೂಲಕ ಮುಂದುವರಿಯುತ್ತದೆ.

ಮಾಂಗ ಮುದ್ರಣಕ್ಕೆ ಟಾಯ್ಲೆಟ್‌ ಪೇಪರ್‌ʼಗಿಂತ ಹೆಚ್ಚು ಕಾಗದ ಬಳಸುತ್ತಾರೆ !

ಇದೇ ಅಂತರಂಗ ಸುದ್ದಿ

vbhat@me.com

ಜಪಾನಿನ ಬಗ್ಗೆ ಬರೆದು ‘ಮಾಂಗ’ (Manga) ಬಗ್ಗೆ ಬರೆಯದಿದ್ದರೆ ಹೇಗೆ? ‘ಮಾಂಗ’ ಅಂದ್ರೆ ಕೋತಿ ಅಥವಾ ಮಾಂಗ ಎಂದು ಭಾವಿಸಬೇಕಿಲ್ಲ. ಅದಾಗಿದ್ದರೆ ನಾನು ಇಲ್ಲಿ ಬರೆಯುತ್ತಿರಲಿಲ್ಲ. ಕಾಮಿಕ್ ಅಥವಾ ಕಾರ್ಟೂನ್ ಪುಸ್ತಕಗಳಿಗೆ ಜಪಾನಿಯರು ಮಾಂಗ ಅಂತಾರೆ. ಮಾಂಗ ಕಾಮಿಕ್ಸ್ ಚಿತ್ರರೇಖೆ ಮತ್ತು ಕಥೆ ಎರಡೂ ಮುಖ್ಯಪಾತ್ರ ವಹಿಸುತ್ತವೆ. ‌

‘ಮಾಂಗ’ ಪದವು ಎರಡು ಚೈನೀಸ್ ಅಕ್ಷರಗಳಿಂದ ಬಂದಿದೆ- ‘ಮನ್’ (ಮಜಾ ಅಥವಾ ತಮಾಷೆ) ಮತ್ತು ‘ಗಾ’ (ಚಿತ್ರ). ಈ ಆಧಾರದ ಮೇಲೆ ಮಾಂಗ ಎಂದರೆ ‘ತಮಾಷೆಯ ಚಿತ್ರಗಳು’ ಎಂದು ಅರ್ಥೈಸ ಬಹುದು. ಜಪಾನಿನ ಹೊರಗಿನ ದೇಶಗಳಲ್ಲಿರುವವರು ಮಾಂಗ ಅಂದ್ರೆ ಜಪಾನಿನಲ್ಲಿ ಪ್ರಕಾಶಿಸುವ ಕಾಮಿಕ್ ಪುಸ್ತಕ ಎಂದು ಅರ್ಥೈಸಿಕೊಳ್ಳುತ್ತಾರೆ.

ಜಪಾನಿನ ಮಾಂಗಗಳು ಜಗತ್ತಿನಲ್ಲಿಯೇ ಪ್ರಸಿದ್ಧ. ಚಿಕ್ಕಮಕ್ಕಳಿಗೆ ಜಪಾನ್ ಯಾವುದಕ್ಕೆ ಪ್ರಸಿದ್ಧ ಎಂದು ಕೇಳಿದರೆ, ಹತ್ತರಲ್ಲಿ ಒಂಬತ್ತು ಮಂದಿ ‘ಮಾಂಗ’ ಎಂದು ಹೇಳುವುದರಲ್ಲಿ ಸಂದೇಹವಿಲ್ಲ. ಮಾಂಗ ಸಾಮಾನ್ಯವಾಗಿ ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಮುದ್ರಿತವಾಗಿದ್ದು, ಕಥೆಯು ಚಿತ್ರರೇಖೆ ಗಳ ಮೂಲಕ ಮುಂದುವರಿಯುತ್ತದೆ.

ಕಥೆಗಳ ವಿಭಿನ್ನ ಶೈಲಿಗಳು, ಗಂಭೀರ ವಿಚಾರಗಳು, ವೈಜ್ಞಾನಿಕ ಕಲ್ಪನೆ, ಸಾಹಸಗಾಥೆಗಳು, ಕೌಟುಂಬಿಕ ನಾಟಕಗಳು ಮತ್ತು ಹಾಸ್ಯ- ಎಲ್ಲವೂ ಮಾಂಗ ಪ್ರಕಾರದಲ್ಲಿ ಲಭ್ಯವಿವೆ. ಜಪಾನಿನ ಸಂಸ್ಕೃತಿ ಮತ್ತು ಜನಜೀವನದಲ್ಲಿ ಮಾಂಗ ಎಂಬ ಪದವು ಅತ್ಯಂತ ಪ್ರಮುಖವಾದ ಸ್ಥಳವನ್ನು ಪಡೆದಿದೆ. ಇಂದು ಜಪಾನ್ ಮಾತ್ರವಲ್ಲದೆ, ವಿಶ್ವದಾದ್ಯಂತ ಓದುಗರನ್ನು ಮಾಂಗ ಹೊಂದಿದ್ದು, ಇದು ಜಪಾನಿನ ಸಾಫ್ಟ್‌ ಪವರ್ ( Soft Power) ಎಂಬಂತೆ ಜಾಗತಿಕ ಸಾಂಸ್ಕೃತಿಕ ವಿಸ್ತಾರಕ್ಕೆ ಕಾರಣವಾಗಿದೆ.

ಮಾಂಗದ ಮೂಲವನ್ನು 12ನೇ ಶತಮಾನದಲ್ಲಿ ನಿರ್ಮಿತವಾದ ‘ಚೋಜು ಗಿಗಾ’ ಎಂಬ ಚಿತ್ತಾರ ಮಾಲಿಕೆಯೊಂದಿಗೆ ಸಂಪರ್ಕಿಸಲಾಗಿದೆ. ಆದರೆ, ಹೊಸ ರೂಪದ ಮಾಂಗ 20ನೇ ಶತಮಾನದಲ್ಲಿ ಕಾಣಿಸಿಕೊಂಡಿತು. ಟೇಜುಕಾ ಒಸಮು ಎಂಬ ಕಲಾವಿದನು ‘ಅಸ್ಟ್ರೋ ಬಾಯ್’ ( Astro Boy) ಮೂಲಕ ನವೀನ ಮಾಂಗ ಜಗತ್ತಿಗೆ ಪ್ರೇರಣೆಯಾದ ವ್ಯಕ್ತಿ. ಅವನು ಡಿಸ್ನಿ ಶೈಲಿಯ ಚಲನಚಿತ್ರ ಗಳಿಂದ ಪ್ರಭಾವಿತನಾಗಿ, ಮಾಂಗ ಚಲನಶೀಲತೆಯನ್ನು ಹೊಸ ಮಟ್ಟಕ್ಕೆ ಏರಿಸಿದನು.

ಮಾಂಗವನ್ನು ವಿವಿಧ ವಯಸ್ಸಿನ ಮತ್ತು ಆಸಕ್ತಿಯ ಓದುಗರಿಗೆ ತಕ್ಕಂತೆ ವಿಭಜಿಸಲಾಗಿದೆ. ಪ್ರಮುಖ ಪ್ರಕಾರಗಳೆಂದರೆ, ಶೋನೇನ್ (ಹುಡುಗರಿಗಾಗಿ)- ಸಾಹಸ, ಕ್ರಿಯೆ, ಶೋಜೋ (ಹುಡುಗಿಯರಿಗಾಗಿ)- ಭಾವನೆಗಳ ಕಥೆಗಳು, ಸೈನನ್ (ವಯಸ್ಕ ಪುರುಷರಿಗಾಗಿ)- ಗಂಭೀರ ಅಥವಾ ಹಿಂಸಾತ್ಮಕ ವಿಷಯ ಗಳು, ಜೋಸೈ (ವಯಸ್ಕ ಮಹಿಳೆಯರಿಗಾಗಿ)- ಪರಿಪಕ್ವ ಸಂಬಂಧಗಳು, ವಾಸ್ತವಿಕ ಕಥೆಗಳು ಹಾಗೂ ಕೋಮಾ ಮಾಂಗ: ಹಾಸ್ಯ ಪ್ರಕಾರದ ಚಿಕ್ಕ ಚಿಕ್ಕ ಕೋಷ್ಟಕಗಳಲ್ಲಿ ಸಾಗುವ ಕಥೆಗಳು. ಜಪಾನಿನಲ್ಲಿ ಮಾಂಗ ಓದುಗರು ಎಲ್ಲೂ ಇದ್ದಾರೆ.

ರೈಲ್ವೆ ನಿಲ್ದಾಣಗಳಲ್ಲಿ, ಪಾರ್ಕುಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ, ಕಾಫಿ ಶಾಪ್‌ಗಳಲ್ಲಿ, ಮನೆಗಳಲ್ಲಿ .. ಹೀಗೆ ಎಲ್ಲೂ ಮಾಂಗ ಓದುಗರನ್ನು ಕಾಣಬಹುದು. ಹಲವಾರು ಮಾಂಗ ಮ್ಯಾಗಜಿನ್‌ಗಳು (ಉದಾ: Weekly Shonen Jump, Weekly Shonen Magazine) ವಾರವಾರಕ್ಕೆ ಲಕ್ಷಾಂತರ ಪ್ರತಿಗಳ ಮುದ್ರಣವಾಗುತ್ತವೆ. ಮಾಂಗ ಓದುವ ವಯಸ್ಸು ಅಥವಾ ವರ್ಗಕ್ಕೆ ಸೀಮಿತ ವಲ್ಲ- ಮಕ್ಕಳು, ಯುವಕರು, ವೃದ್ಧರು- ಎಲ್ಲರೂ ಮಾಂಗ ಓದುಗರೇ. ಇದೊಂದು ಜನಸಾಮಾನ್ಯ ರಿಗಾಗಿ ಇರುವ ಮಾಧ್ಯಮ. ಮಾಂಗ ಓದದವರು ಸಿಗುವುದು ಅಪರೂಪ.

ಜಪಾನಿನ ಮಾಂಗಗಳ ಬಗ್ಗೆ ಒಂದು ವಕ್ರತುಂಡೋಕ್ತಿ ಮಾದರಿಯ ಮಾತಿದೆ. ಆ ದೇಶದಲ್ಲಿ ಮಾಂಗ ಮುದ್ರಣಕ್ಕಾಗಿ ಬಳಸುವ ಕಾಗದದ ಪ್ರಮಾಣವು ಟಾಯ್ಲೆಟ್ ಪೇಪರ್ ಬಳಕೆಗಿಂತ ಹೆಚ್ಚು ಅಂತ. ಜಪಾನಿನ ಮಾಂಗ ಉದ್ಯಮ ಅದೆಷ್ಟು ದೊಡ್ಡದು ಎಂಬ ಕಲ್ಪನೆಯೇ ಇರಲಿಕ್ಕಿಲ್ಲ. 2020ರಲ್ಲಿ ಈ ಉದ್ಯಮದ ಮೌಲ್ಯವು 612 ಶತಕೋಟಿ ಯೆನ್ (ಒಂದು ಯೆನ್ ಅಂದ್ರೆ ಅರವತ್ತು ಪೈಸೆ)ಗಿಂತ ಹೆಚ್ಚು ಆಗಿತ್ತು.

ಪ್ರತಿ ತಿಂಗಳು ಆರು ನೂರಕ್ಕೂ ಹೆಚ್ಚು ಮಾಂಗ ಶ್ರೇಣಿಗಳು ಬಿಡುಗಡೆಯಾಗುತ್ತವೆ ಅಂದ್ರೆ ಯಾವ ಪ್ರಮಾಣದಲ್ಲಿ ಈ ಉದ್ಯಮದಲ್ಲಿ ಹಣ ಹರಿಯುತ್ತಿರಬಹುದು ಎಂಬುದನ್ನು ಊಹಿಸಬಹುದು. ಹೀಗಾಗಿ ಮಾಂಗ ಮುದ್ರಣಕ್ಕಾಗಿ ಬಳಸುವ ಕಾಗದದ ಪ್ರಮಾಣ ಅಲ್ಲಿನ ಟಾಯ್ಲೆಟ್ ಪೇಪರಿಗಿಂತ ಅಧಿಕ ಎನ್ನುವುದು ಬರೀ ತಮಾಷೆಯ ಮಾತಲ್ಲ.

ಮಾಂಗ ಪುಸ್ತಕಗಳು ಸಾಮಾನ್ಯವಾಗಿ ಟ್ಯಾಂಕೋಬೋನ್ ರೂಪದಲ್ಲಿ ( 17x11 ಸೆಮಿ ಪೇಪರ್‌ ಬ್ಯಾಕ್ ಬುಕ್) ಪ್ರಕಟವಾಗುತ್ತವೆ ಮತ್ತು ಪ್ರತಿ ಪುಸ್ತಕವು ಹಲವಾರು ಪುಟಗಳನ್ನು ಹೊಂದಿರುತ್ತದೆ. ಈ ಮುದ್ರಣ ಪ್ರಕ್ರಿಯೆಗಾಗಿ ಭಾರಿ ಪ್ರಮಾಣದ ಕಾಗದ ಬೇಕಾಗುತ್ತದೆ. ಮಂಗಾ ಆಧರಿತ ಫಿಲ್ಮ್‌ಗಳು, ಆಟಿಕೆಗಳು, ವಿಡಿಯೋ ಗೇಮ್‌ಗಳು ಕೂಡ ಉದ್ಯಮಕ್ಕೆ ಪೂರಕವಾಗಿವೆ.

ಜಪಾನಿಗೆ ಬರುವ ಅನೇಕ ಪ್ರವಾಸಿಗರು ಮಂಗಾ ಮತ್ತು ಅನಿಮೆಯ ಪ್ರಭಾವದಿಂದ ಪ್ರೇರಿತ ರಾಗಿರುತ್ತಾರೆ. ಜಪಾನಿನಲ್ಲಿ ಪ್ರತಿ ವ್ಯಕ್ತಿ ವರ್ಷಕ್ಕೆ ಸರಾಸರಿ 17 ಕೆಜಿ ಟಾಯ್ಲೆಟ್ ಪೇಪರ್ ಬಳಸು ತ್ತಾನೆ. ಇದು ಏಷ್ಯಾದಲ್ಲಿ ಅಗ್ರಸ್ಥಾನದಲ್ಲಿದೆ. ಹಾಗೆ ನೋಡಿದರೆ, ಜಪಾನಿನಲ್ಲಿ ಟಾಯ್ಲೆಟ್ ಪೇಪ್ ಬಳಕೆ ಕಡಿಮೆಯೇ. ಯಾಕೆಂದರೆ ಜಪಾನಿನ ಬಹುತೇಕ ಮನೆಗಳು ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ ಬಿಡೆ ( bidet) ಸೌಲಭ್ಯವಿದೆ.

ಇವು ನೀರಿನ ಸಿಂಪಡಣೆ (ಸ್ಪ್ರೇ) ಮೂಲಕ ಶುದ್ಧಗೊಳಿಸುವುದರಿಂದ ಟಾಯ್ಲೆಟ್ ಪೇಪರ್ ಬಳಕೆ ಯನ್ನು ಕುಗ್ಗಿಸುತ್ತದೆ. ಮಾಂಗ ಕೇವಲ ಮನರಂಜನೆಗಾಗಿ ಮಾತ್ರವಲ್ಲ, ಅದು ಜಪಾನಿನ ಸಾಮಾಜಿಕ ಯಥಾರ್ಥವನ್ನು ಪ್ರತಿಬಿಂಬಿಸುವ ಮಾಧ್ಯಮವಾಗಿ ರೂಪುಗೊಂಡಿದೆ. ಕೆಲಸದ ಒತ್ತಡ, ಸಂಬಂಧ ಗಳು, ಶಾಲಾ ಬದುಕು, ಏಕಾಂತತೆ, ಮಾನಸಿಕ ಆರೋಗ್ಯ- ಈ ಎಲ್ಲವುಗಳನ್ನು ಮಾಂಗ ಹಲವು ರೀತಿಯಲ್ಲಿ ನಿರೂಪಿಸುತ್ತದೆ.

ಅದು ಯುವ ಜನತೆಯ ಭಾವನೆಗಳನ್ನು ವ್ಯಕ್ತಪಡಿಸಲು ಸೂಕ್ತ ವೇದಿಕೆಯಾಗಿದ್ದು, ಕೆಲವು ಮಾಂಗ ಸಂಪುಟಗಳು ಸಮಾಜದಲ್ಲಿ ಚರ್ಚೆಗೆ ದಾರಿ ಮಾಡಿವೆ. ಉದಾಹರಣೆಗೆ, ‘ A Silent Voice’ ಎಂಬ ಮಾಂಗ, ಮೌನತ್ವ, ಶೋಷಣೆ ಮತ್ತು ಕ್ಷಮೆ ಕುರಿತಾಗಿ ಗಂಭೀರ ವಿಷಯಗಳ ಚರ್ಚೆಗೆ ಗ್ರಾಸ ವನ್ನೊದಗಿಸಿದೆ. ಮಾಂಗ ಆಧರಿತ ಫಿಲ್ಮ್‌ಗಳು, ಆಟಿಕೆಗಳು, ವಿಡಿಯೋ ಗೇಮ್ ಗಳು ಕೂಡ ಉದ್ಯಮಕ್ಕೆ ಪೂರಕವಾಗಿವೆ.

ಜಪಾನಿಗೆ ಬರುವ ಅನೇಕ ಪ್ರವಾಸಿಗರು ಮಾಂಗ ಮತ್ತು ಅನಿಮೆಯ ಪ್ರಭಾವದಿಂದ ಪ್ರೇರಿತ ರಾಗಿರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಮಾಂಗ (Web Manga, Webtoons ) ಜನಪ್ರಿಯ ವಾಗುತ್ತಿದೆ. ಓದುಗರಿಗೆ ಮೊಬೈಲ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಮಾಂಗ ಓದಲು ಅನುಕೂಲವಾಗಿದೆ. ಜಪಾನಿನಲ್ಲಿ Line Manga, Shonen Jump+ ಮುಂತಾದ ಡಿಜಿಟಲ್ ಪ್ಲಾಟ್ ಫಾರ್ಮ್ ಗಳು ಭಾರಿ ಓದುಗರನ್ನು ಸೆಳೆಯುತ್ತಿವೆ. ಈ ಮೂಲಕ ಹೊಸ ಕಲಾವಿದರಿಗೆ ತಮ್ಮ ಕೃತಿಗಳನ್ನು ಡಿಜಿಟಲ್ ಸ್ವರೂಪದಲ್ಲಿ ಪ್ರಕಟಿಸುವ ಅವಕಾಶಗಳು ಹೆಚ್ಚಾಗಿವೆ.

ಜಪಾನಿನ ಮಾಂಗ ಇಂದು ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದವಾಗುತ್ತಿದ್ದು, ಇದರಿಂದ ಅಮೆರಿಕ, ಯುರೋಪ್, ಭಾರತ... ಹೀಗೆ ಎಲ್ಲೂ ಮಾಂಗ ಓದುಗರು ಹುಟ್ಟಿಕೊಳ್ಳುತ್ತಿದ್ದಾರೆ. ಮಾಂಗ ಆಧರಿತ ಅನಿಮೇಷನ್ ಸರಣಿಗಳು (Anime ) ಜಾಗತಿಕ ಮಟ್ಟದಲ್ಲಿ ಪ್ರಸಾರವಾಗುತ್ತಿವೆ. ಮಾಂಗ ಕಲೆಯನ್ನು ಕಲಿಯಲು ಈಗ ಜಗತ್ತಿನ ಅನೇಕ ಕಾಲೇಜುಗಳಲ್ಲಿ ಕೋರ್ಸ್‌ಗಳನ್ನು ಸಹ ಆರಂಭಿಸ ಲಾಗಿದೆ. ಅನೇಕ ಭಾರತೀಯ ಕಲಾವಿದರೂ ಮಂಗಾ ಶೈಲಿಯನ್ನು ಅನುಸರಿಸುತ್ತಿದ್ದಾರೆ.

ಭಿನ್ನ ಮಾಧ್ಯಮಗಳಲ್ಲಿ (ಆಗ್ಮೆಂಟೆಡ್ ರಿಯಾಲಿಟಿ, ಇಂಟರ‍್ಯಾಕ್ಟಿವ್ ಮಾಂಗ, ಡಿಜಿಟಲ್ ಓದು) ಮಾಂಗ ಹೊಸ ಆಯಾಮಗಳನ್ನು ಸೃಷ್ಟಿಸುತ್ತಿದೆ. ಕಥೆ ಹೇಳುವ ಶಕ್ತಿ ಮತ್ತು ಕಲಾತ್ಮಕ ದೃಷ್ಟಿಕೋನ ವನ್ನು ಹೊಂದಿರುವ ಮಾಂಗ, ಮುಂದೆ ಇನ್ನಷ್ಟು ವೈವಿಧ್ಯಮಯ ಮಾಧ್ಯಮಗಳಲ್ಲಿ ಬೆಳೆಯಲಿದೆ. ಇದು ಯುವ ಜನಾಂಗಕ್ಕೆ ಹತ್ತಿರವಾದ ಮಾಧ್ಯಮವಾಗಿ ಅವರ ಕಲ್ಪನಾಲೋಕದಲ್ಲಿ ಹೊಸ ಅಲೆಯನ್ನು ಎಬ್ಬಿಸುವುದರಲ್ಲಿ ಎರಡು ಮಾತಿಲ್ಲ.

ಮಾಂಗ ಕೇವಲ ಕಾರ್ಟೂನ್ ಪುಸ್ತಕವಲ್ಲ. ಇದು ಜಪಾನಿನ ಸಂಕೀರ್ಣ ಸಂಸ್ಕೃತಿಯ ಪ್ರತಿಬಿಂಬ, ಯುವಜನತೆಗೆ ಒದಗಿಸುವ ಆತ್ಮಸಂವಾದದ ಮಾಧ್ಯಮ ಹಾಗೂ ಜಗತ್ತಿನ ನಾನಾ ಸ್ತರಗಳ ಓದುಗ ರನ್ನು ಕಾವ್ಯಾತ್ಮಕವಾಗಿ ಸಂಪರ್ಕಿಸುವ ಸೇತುವೆ. ಜಪಾನಿನ ಜನಜೀವನವನ್ನು ಮಾಂಗ ಮೆರೆಸುವ ರೀತಿಯಲ್ಲಿ ಹೇಳುವ ಇನ್ನೊಂದು ಮಾಧ್ಯಮವಿಲ್ಲವೆನ್ನಬಹುದು. ಒಂದು ದೇಶದ ಕಲಾಶಕ್ತಿ ವಿಶ್ವದ ಗಮನ ಸೆಳೆಯಲು ಹೇಗೆ ಸಾಕ್ಷಿಯಾಗಿದೆ ಎಂಬುದಕ್ಕೆ ಮಾಂಗ ಅತ್ಯುತ್ತಮ ಉದಾಹರಣೆ!

ಖಾಲಿ ಪುಕ್ಕಟ್ ಮನುಷ್ಯ

ಇಂಥ ಒಬ್ಬ ವ್ಯಕ್ತಿ ಇದ್ದಿರಬಹುದಾ ಎಂದು ನೀವು ಊಹಿಸಲೂ ಸಾಧ್ಯವಿಲ್ಲ. ಜಪಾನಿನ ಟೋಕಿ ಯೋದಲ್ಲಿ ಒಬ್ಬನಿದ್ದಾನೆ. ಅವನಿಗೆ ಈಗ 41 ವರ್ಷ. ಆತನ ಹೆಸರು ಶೋಜಿ ಮೊರಿಮೊಟೊ. ಆತ ‘ಏನೂ ಮಾಡದೇ’ ( Doing nothing) ಜೀವನೋಪಾಯ ಮಾಡುತ್ತಿರುವ ವ್ಯಕ್ತಿ ಎಂದೇ ಜಪಾನಿ ನಲ್ಲಿ ಪ್ರಸಿದ್ಧ. ಆತ ತನ್ನನ್ನು ‘ಬಾಡಿಗೆ ವ್ಯಕ್ತಿ’ ಎಂದು ಪರಿಚಯಿಸಿಕೊಳ್ಳುತ್ತಾನೆ. ಆತ ತನ್ನನ್ನು ಯಾವುದೇ ರೀತಿಯ ಕೆಲಸಗಳಿಗೆ ಸಾಲವಾಗಿ ಕೊಡುತ್ತಾನೆ. ಅಂದರೆ ಆತ ಯಾರಿಗೆ ಬೇಕಾದರೂ ಸಾಥ್ ನೀಡುವ ಸೇವೆಯನ್ನು ಒದಗಿಸುತ್ತಾನೆ. ಮೊರಿಮೊಟೊ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ ನಂತರ, ಒಂದು ಪ್ರಕಟಣಾ ಸಂಸ್ಥೆಯಲ್ಲಿ ಕೆಲಸ ಆರಂಭಿಸಿದ.

ಆದರೆ, ತನ್ನ ಶೈಲಿಗೆ ಹೊಂದಿಕೆಯಾಗದ ಈ ಉದ್ಯೋಗದಲ್ಲಿ ಆತನಿಗೆ ಮುಂದುವರಿಯಲು ಸಾಧ್ಯವಾಗಲಿಲ್ಲ. ‘ನೀವು ಇಲ್ಲದಿದ್ದರೂ ಪರವಾಗಿಲ್ಲ’ ಎಂದು ಆತನ ಮೇಲಧಿಕಾರಿ ಹೇಳಿದ್ದಕ್ಕೆ ಮೊರಿಮೊಟೊಗೆ ತೀವ್ರ ಬೇಸರವಾಯಿತು. ಆತ ತಕ್ಷಣ ತನ್ನ ಉದ್ಯೋಗವನ್ನು ತ್ಯಜಿಸಿದ. ‘ನಾನು ಏನೂ ಮಾಡದೇ ನನ್ನ ಬದುಕನ್ನು ಕಟ್ಟಿಕೊಳ್ಳುತ್ತೇನೆ, ನೋಡುತ್ತಿರು’ ಎಂದು ದಬಾಯಿಸಿ ಅಲ್ಲಿಂದ ಹೊರಬಿದ್ದ.

2018ರಲ್ಲಿ, ಮೊರಿಮೊಟೊ ‘ಏನೂ ಮಾಡದ’ ( Doing nothing) ಸೇವೆಯನ್ನು ಆರಂಭಿಸಿದ. ಈ ಸೇವೆಯಲ್ಲಿ ಆತ ಗ್ರಾಹಕರಿಗೆ ಸಂಗಾತಿಯಾಗುತ್ತಾನೆ, ಆದರೆ ಯಾವುದೇ ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸುವುದಿಲ್ಲ. ಆರಂಭದಲ್ಲಿ ಈ ಸೇವೆಯನ್ನು ಉಚಿತವಾಗಿ ನೀಡಿದ ಆತ, ನಂತರ ಪ್ರತಿ ಸೆಷನ್‌ಗೆ 10 ಸಾವಿರ ಯೆನ್ (ಸುಮಾರು 6000 ರುಪಾಯಿ) ಶುಲ್ಕ ವಿಧಿಸಲು ಆರಂಭಿಸಿದ. ಮೊರಿಮೊಟೊ ತನ್ನ ಗ್ರಾಹಕರಿಗೆ ವಿಚ್ಛೇದನ ದಾಖಲೆ ಸಲ್ಲಿಸುವಾಗ, ಮ್ಯಾರಥಾನ್ ಮುಕ್ತಾಯದ ಸ್ಥಳದಲ್ಲಿ ಕಾಯುವಾಗ, ಪಾರ್ಕ್‌ನಲ್ಲಿ ಆಟವಾಡಲು, ಅನಾಮಧೇಯ ವ್ಯಕ್ತಿಗೆ ರೈಲಿನಲ್ಲಿ ಬೀಳ್ಕೊಡುವಾಗ, ಅಂತ್ಯಕ್ರಿಯೆಯಲ್ಲಿ ಸಾಂತ್ವನ ಹೇಳಲು, ಬಾರ್ -ಪಬ್‌ನಲ್ಲಿ ಜತೆಗಾರನಾಗಿ, ಪ್ರವಾಸದಲ್ಲಿ ಸಂಗಾತಿಯಾಗಿ ಹೀಗೆ ಹತ್ತಾರು ರೀತಿಯ ಕೆಲಸಗಳಲ್ಲಿ ನೆರವಾಗುತ್ತಾನೆ. ಆದರೆ ಆತ ಯಾವುದೇ ಭೌತಿಕ ಶ್ರಮ ಅಥವಾ ಲೈಂಗಿಕ ಆಸಕ್ತಿಯ ವಿನಂತಿಗಳನ್ನು ನಿರಾಕರಿಸುತ್ತಾನೆ.

ಮೊರಿಮೊಟೊ ತನ ಸೇವೆಯನ್ನು ಪ್ರಚಾರ ಮಾಡಲು ಟ್ವಿಟರ್ (ಈಗ X ) ಅನ್ನು ಬಳಸುತ್ತಾನೆ. ಆತ ಸುಮಾರು ಮೂರು ಲಕ್ಷ ಅನುಯಾಯಿಗಳನ್ನು ಹೊಂದಿದ್ದಾನೆ. ಹಾಗೆ ನೋಡಿದರೆ ಮೊರಿಮೊಟೊ ನದು ಖಾಲಿ ಪುಕ್ಕಟ್ ಕೆಲಸ. ಅವನ ಉದ್ಯೋಗವನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಅವನಿಗೆ ‘ನೀನು ಏನು ಮಾಡುತ್ತೀಯ?’ ಎಂದು ಕೇಳಿದರೆ, ‘ನಾನು ಏನೂ ಮಾಡುವುದಿಲ್ಲ’ ಅಂತಲೇ ಹೇಳುತ್ತಾನೆ. ಅದು ನಿಜವೂ ಹೌದು.

ಆದರೆ ಆತ ‘ಏನೂ ಮಾಡದ ಉದ್ಯೋಗ’ ಮಾಡುತ್ತಾನೆ ಎಂಬುದು ಸಹ ಖರೆ. ಒಮ್ಮೆ ಮಹಿಳೆ ಯೊಬ್ಬಳು ತನ್ನ ಜತೆಗೆ ಸೀರೆ ಧರಿಸಿ ರೆಸ್ಟೋರೆಂಟ್‌ಗೆ ಚಹಾ ಕುಡಿಯಲು ಬರಬೇಕು ಎಂದು ಹೇಳಿ ದಳು. ಅದಕ್ಕೆ ಆತ ಸಮ್ಮತಿಸಿದ. ಒಂದು ತಾಸು ತನ್ನೊಂದಿಗೆ ಮಾತಾಡಲೆಂದು ಆ ಮಹಿಳೆ ಆತನ ಸೇವೆಯನ್ನು ಬಯಸಿದ್ದಳು.

ಕರೆದವರಿಗೆಲ್ಲ ಮೊರಿಮೊಟೊ ತನ್ನ ಸೇವೆಯನ್ನು ನೀಡುವುದಿಲ್ಲ. ದಿನಕ್ಕೆ ಒಂದು ಅಥವಾ ಎರಡು ಸೆಷನ್‌ಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾನೆ. ಈ ಸೇವೆಯಿಂದ ತನ್ನ ಪತ್ನಿ ಮತ್ತು ಮಗನನ್ನು ಪೋಷಿಸುತ್ತಿzನೆ. ಆತ ತನ್ನ ಆದಾಯವನ್ನು ಬಹಿರಂಗಪಡಿಸದಿದ್ದರೂ, ಈ ಸೇವೆಯಿಂದ ಅವನು ತೃಪ್ತನಾಗಿದ್ದಾನೆ. ಒಂದು ಅಂದಾಜಿನ ಪ್ರಕಾರ ಆತ ವಾರ್ಷಿಕ 80 ಸಾವಿರ ಡಾಲರ್ ಸಂಪಾದನೆ ಮಾಡುತ್ತಾನೆ.

ಉತ್ಕೃಷ್ಟತೆ ಮತ್ತು ಉತ್ಪಾದಕತೆಯನ್ನು ಮಹತ್ವಪೂರ್ಣವಾಗಿ ಪರಿಗಣಿಸುವ ಜಪಾನಿನಂಥ ಸಮಾಜದಲ್ಲಿ ಮೊರಿಮೊಟೊ ಸೇವೆಯು ವಿಭಿನ್ನ ರೀತಿಯ ಸೇವೆ ಎಂದು ಪರಿಗಣಿತವಾಗಿರುವುದು ಸತ್ಯ. ‘ಏನೂ ಮಾಡದೇ’ ಇದ್ದರೂ, ಏನನ್ನೋ ಮಾಡುತ್ತಿದ್ದಾನೆ. ಏನೂ ಮಾಡದೆಯೂ ಸಾಧನೆ ಮಾಡಬಹುದು ಎಂಬ ಸಂದೇಶವನ್ನು ತನ್ನ ಸೇವೆಯ ಮೂಲಕ ಹರಡುತ್ತಿದ್ದಾನೆ. ಆತನ ಸೇವೆ ಅಲ್ಲಿನ ಜನರಿಗೆ ಸಾಂತ್ವನ ಮತ್ತು ಸಹಾಯವನ್ನು ಒದಗಿಸುತ್ತಿದೆ.

ಪ್ರತಿಷ್ಠೆ-ಗೌರವದ ಸಂಕೇತ

ಜಗತ್ತಿನಲ್ಲಿಯೇ ಜಪಾನಿನ ಪಾಸ್‌ಪೋರ್ಟ್ ಅತ್ಯಂತ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ಏಕೆ? ಜಗತ್ತಿ ನಲ್ಲಿ ವಿವಿಧ ದೇಶಗಳ ಪಾಸ್‌ಪೋರ್ಟುಗಳಿಗೆ ವಿಭಿನ್ನ ಮಟ್ಟದ ಪ್ರಭಾವ ಮತ್ತು ಶಕ್ತಿಯಿದೆ. ದೇಶ ವೊಂದರ ಪಾಸ್ ಪೋರ್ಟುದಾರರು ಅತಿ ಹೆಚ್ಚು ದೇಶಗಳಿಗೆ ವೀಸಾ ಇಲ್ಲದೆ ಪ್ರವೇಶಿಸುವ ಅವಕಾಶ ಹೊಂದಿದರೆ, ಆ ದೇಶದ ಪಾಸ್ ಪೋರ್ಟ್ ಪವರ್ ಫುಲ್ ಎಂದು ಕರೆಯಿಸಿಕೊಳ್ಳುತ್ತದೆ.

ಇಂಥ ಶಕ್ತಿಶಾಲಿ ಪಾಸ್‌ಪೋರ್ಟುಗಳ ಪಟ್ಟಿಯಲ್ಲಿ ಜಪಾನ್ ಇತ್ತೀಚಿನ ವರ್ಷಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇದರ ಹಿಂದಿರುವ ಕಾರಣಗಳು ಅನೇಕ. ಯಾವ ದೇಶಗಳ ಪಾಸ್‌ಪೋರ್ಟು ಶಕ್ತಿಶಾಲಿ ಎಂಬುದನ್ನು ಹೆನ್ಲೆಯ್ ಪಾಸ್‌ಪೋರ್ಟ್ ಇಂಡೆಕ್ಸ್ ಮತ್ತು ಅರಟಾನ್ ಕ್ಯಾಪಿಟಲ್ಸ್ ಪಾಸ್‌ಪೋರ್ಟ್ ಇಂಡೆಕ್ಸ್ ಎಂಬ ಸಂಸ್ಥೆಗಳು ವರ್ಷಕ್ಕೊಮ್ಮೆ ನಿರ್ಧರಿಸುತ್ತವೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪಾಸ್ ಪೋರ್ಟ್‌ಗಳನ್ನು ‘ಅತ್ಯಂತ ಪ್ರಭಾವಶಾಲಿ’ ಎಂದು ಕರೆಯಲಾಗುತ್ತದೆ.

ಜಪಾನ್ ಪಾಸ್‌ಪೋರ್ಟ್ ಹೊಂದಿದವರು 190ಕ್ಕಿಂತ ಹೆಚ್ಚು ದೇಶಗಳಿಗೆ ವೀಸಾ ಇಲ್ಲದೆ ಅಥವಾ ಆಗಮನ ವೀಸಾ ( visa on arrival ) ಮೂಲಕ ಪ್ರವೇಶಿಸಬಹುದು. ಇದು ಜಗತ್ತಿನಲ್ಲಿ ಬಹುಪಾಲು ರಾಷ್ಟ್ರಗಳು ನೀಡುವ ವಿಶ್ವಾಸದ ಸೂಚನೆಯಾಗಿದ್ದು, ಜಪಾನ್ ದೇಶದ ಬಲಿಷ್ಠತೆ, ರಾಜತಾಂತ್ರಿಕ ಸ್ನೇಹ, ಆರ್ಥಿಕ ಸ್ಥಿರತೆ ಮತ್ತು ಶಿಸ್ತುಬದ್ಧತೆಗೆ ಮಾನ್ಯತೆ ನೀಡಿದಂತಾಗಿದೆ. ಜಪಾನ್ ಬಹುತೇಕ ಎಲ್ಲ ದೇಶಗಳೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿರುವ ಶಾಂತಿಪ್ರಿಯ ರಾಷ್ಟ್ರವಾಗಿದೆ. ‌

ಈ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಂಬಂಧಗಳು ವೀಸಾ ಸಡಿಲತೆ ಒದಗಿಸಲು ಸಹಾಯಕ ವಾಗಿವೆ. ಜಪಾನ್ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶ. ಟೋಕಿಯೋ ಸ್ಟಾಕ್ ಎಕ್ಸ್‌ಚೇಂಜ್, ತಂತ್ರಜ್ಞಾನ, ಇಲೆಕ್ಟ್ರಾನಿಕ್ಸ್ ಮತ್ತು ತಯಾರಿಕಾ ಕ್ಷೇತ್ರದಲ್ಲಿ ಜಪಾನ್ ವಿಶ್ವದ ನಾಯಕ‌ ನಾಗಿದೆ. ಈ ಆರ್ಥಿಕ ಶಕ್ತಿಯು ಜಪಾನಿನ ಪ್ರಜೆಗಳಿಗೆ ವಿಶ್ವದಲ್ಲಿ ಹೆಚ್ಚಿನ ಗೌರವ ಮತ್ತು ಪ್ರವೇಶ ಸೌಲಭ್ಯಗಳನ್ನು ಒದಗಿಸುತ್ತದೆ.

ಜಪಾನಿನ ಪ್ರಜೆಗಳು ಶಿಸ್ತುಬದ್ಧರು, ಪ್ರಾಮಾಣಿಕರು, ವಿನಯಶೀಲರು ಮತ್ತು ಪ್ರವಾಸದ ಸಂದರ್ಭಗಳಲ್ಲಿ ಕಾನೂನು ಪಾಲನೆ ಮಾಡುವವರು ಎಂಬ ಅಭಿಪ್ರಾಯ ಮತ್ತು ನಂಬಿಕೆಯನ್ನು ಇತರ ರಾಷ್ಟ್ರಗಳು ಹೊಂದಿವೆ. ಇದು ವೀಸಾ ಮಾಫಿ ಅಥವಾ ಸುಲಭ ವೀಸಾ ನಿಯಮಗಳನ್ನು ರೂಪಿಸಲು ಕಾರಣವಾಗಿದೆ. ಜಪಾನ್ ಎರಡನೇ ಮಹಾಯುದ್ಧದ ನಂತರ ಶಾಂತಿಯುತ ದೇಶವಾಗಿ ರೂಪುಗೊಂಡಿದ್ದು, ತನ್ನ ಸಂವಿಧಾನದಲ್ಲಿ ಯುದ್ಧ ವಿರೋಧಿ ನಿಲುವು ಹೊಂದಿದೆ. ಈ ಕಾರಣ ದಿಂದ ಜಪಾನ್ ವಿಶ್ವದ ಹೆಚ್ಚಿನ ರಾಷ್ಟ್ರಗಳಿಂದ ಅಭಿಮಾನಕ್ಕೆ ಪಾತ್ರವಾಗಿದೆ.

ಜಪಾನ್ ಪಾಸ್‌ಪೋರ್ಟ್ ಹೊಂದಿರುವ ವ್ಯಕ್ತಿಗೆ ಅದರದ್ದೇ ಆದ ಲಾಭಗಳಿವೆ. 1. ವೀಸಾ ಸಂಪಾದನೆಗಾಗಿ ಸಮಯ ಮತ್ತು ಹಣದ ಉಳಿವು 2. ವಿವಿಧ ರಾಷ್ಟ್ರಗಳಲ್ಲಿ ಸುಲಭವಾಗಿ ಶಿಕ್ಷಣ ಅಥವಾ ಉದ್ಯೋಗಕ್ಕೆ ಪ್ರವೇಶ ಪಡೆಯಬಹುದು. 3. ವ್ಯಾಪಾರಕ್ಕೆ ಸಂಬಂಧಿಸಿದಂತೆ ಇತರ ರಾಷ್ಟ್ರಗಳಿಗೆ ಸುಲಭವಾಗಿ ತೆರಳಬಹುದು. 4. ಪ್ರವಾಸೋದ್ಯಮ ಪ್ರೋತ್ಸಾಹ.

ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಸುಮಾರು 60-65 ದೇಶಗಳಿಗೆ ಮಾತ್ರ ವೀಸಾ ಮುಕ್ತ ಪ್ರವೇಶ ಸೌಲಭ್ಯವಿದೆ. 190 ದೇಶಗಳಲ್ಲಿ ವೀಸಾ ಬೇಕಿಲ್ಲದ ಜಪಾನ್‌ಗೂ, ಭಾರತಕ್ಕೂ ತುಂಬಾ ವ್ಯತ್ಯಾಸ. ಜಪಾನ್ ಮುಂದುವರಿದು ತನ್ನ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸುತ್ತಾ, ತಂತ್ರಜ್ಞಾನ, ಆರ್ಥಿಕತೆ ಮತ್ತು ಶಾಂತಿಯುತ ನಿಲುವು ಕಾಯ್ದುಕೊಂಡರೆ, ಅದರ ಪಾಸ್‌ಪೋರ್ಟ್ ಮುಂಬರುವ ವರ್ಷಗಳಲ್ಲಿಯೂ ತನ್ನ ಸ್ಥಾನವನ್ನು ಕಾಯ್ದುಕೊಳ್ಳಬಹುದು.

ಜಪಾನಿನ ಪಾಸ್‌ಪೋರ್ಟ್ ಹೊಂದಿರುವುದು ವಿಶ್ವದಲ್ಲಿಯೇ ಅತ್ಯಂತ ಪ್ರತಿಷ್ಠೆಯ ಮತ್ತು ಗೌರವದ ಸಂಕೇತ.