Road Accident: ಡಿವೈಡರ್‌ಗೆ ಬಸ್ ಡಿಕ್ಕಿ, ದೇವನಹಳ್ಳಿ ಏರ್‌ಪೋರ್ಟ್ ಸಿಬ್ಬಂದಿ ಸಾವು
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುಮಾರು 35 ಮಂದಿ ಸಿಬ್ಬಂದಿಯನ್ನು ಹೊತ್ತ ಖಾಸಗಿ ಬಸ್ ಯಲಹಂಕದ ಕಡಯರಪ್ಪನಹಳ್ಳಿಯ ಪೇಯಿಂಗ್ ಗೆಸ್ಟ್‌ಹೌಸ್ ಕಡೆಗೆ ತೆರಳುತ್ತಿತ್ತು. ಬೇಗೂರು ಜಂಕ್ಷನ್‌ನಲ್ಲಿ ಎಡ ತಿರುವು ಪಡೆದಾಗ ಅಪಘಾತ (Road Accident) ಸಂಭವಿಸಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ರಸ್ತೆ ವಿಭಜಕಕ್ಕೆ (divider) ಡಿಕ್ಕಿ ಹೊಡೆದು ಉರುಳಿಬಿದ್ದ (Road Accident) ಪರಿಣಾಮ ಓರ್ವ ಸಾವನ್ನಪ್ಪಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Bengaluru airport) 33 ಮಂದಿ ಸಿಬ್ಬಂದಿಗಳು (KIA employee) ಗಾಯಗೊಂಡಿರುವ ಘಟನೆ ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಬೇಗೂರು ಸಿಐಎಸ್‌ಎಫ್ ಜಂಕ್ಷನ್ ಬಳಿ ಮಂಗಳವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಸಂತೋಷ್ ಯಾದವ್ (35) ಎಂದು ಗುರ್ತಿಸಲಾಗಿದೆ. ಊಟದ ಸಮಯ ಹಿನ್ನೆಲೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೆಐಎಯ ಸುಮಾರು 35 ಮಂದಿ ಸಿಬ್ಬಂದಿಯನ್ನು ಹೊತ್ತ ಖಾಸಗಿ ಬಸ್ ಯಲಹಂಕದ ಕಡಯರಪ್ಪನಹಳ್ಳಿಯ ಪೇಯಿಂಗ್ ಗೆಸ್ಟ್‌ಹೌಸ್ ಕಡೆಗೆ ತೆರಳುತ್ತಿತ್ತು. ಬೇಗೂರು ಜಂಕ್ಷನ್‌ನಲ್ಲಿ ಎಡ ತಿರುವು ಪಡೆದಾಗ ಅಪಘಾತ ಸಂಭವಿಸಿದೆ. ವಾಹನವನ್ನು ವೇಗವಾಗಿ ಚಲಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಉರುಳಿ ಬಿದ್ದಿದೆ, ಬಸ್ ನ್ನು ನಾಸಿರ್ ಅಹ್ಮದ್ ಎಂಬ ಚಾಲಕ ಚಲಾಯಿಸುತ್ತಿದ್ದ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಎಲ್ಲಾ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಈ ನಡುವೆ ತೀವ್ರವಾಗಿ ಗಾಯಗೊಂಡಿದ್ದ ಸಂತೋಷ್ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳಲ್ಲಿ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇತರರನ್ನು ಬಿಡುಗಡೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: Chhattisgarh Accident: ಭೀಕರ ರಸ್ತೆ ಅಪಘಾತ; 13 ಜನ ಸ್ಥಳದಲ್ಲೇ ಸಾವು