ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Sajangadde Column: ಮೆಟ್ರೋ ಹಳದಿ ಮಾರ್ಗಕ್ಕೆ ಇನ್ನೇನು ದಕ್ಕಲಿದೆ ಹಸಿರು ನಿಶಾನೆ!

Namma Metro Yellow Line: ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ 'ನಮ್ಮ ಮೆಟ್ರೋ' ಕಾಮಗಾರಿ ಇನ್ನೂ ನಡೆಯುತ್ತಿದೆ. 'ನೇರಳೆ' ಮತ್ತು 'ಹಸಿರು' ಮಾರ್ಗಗಳಲ್ಲಿ ಕಾಮಗಾರಿ ಬಹುತೇಕ ಪೂರ್ಣಗೊಂಡು ಪೂರ್ಣ ಪ್ರಮಾಣದಲ್ಲಿ ಮೆಟ್ರೋ ರೈಲು ಸಂಚರಿಸುತ್ತಿರುವುದರಿಂದ ಜನರು ಅದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. 'ಹಳದಿ' ಮಾರ್ಗದಿಂದ ಬೆಂಗಳೂರು ದಕ್ಷಿಣ, ಹೊಸೂರು ರಸ್ತೆ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಉಪಯೋಗವಾಗಲಿದೆ.

ಮೆಟ್ರೋ ಹಳದಿ ಮಾರ್ಗಕ್ಕೆ ಇನ್ನೇನು ದಕ್ಕಲಿದೆ ಹಸಿರು ನಿಶಾನೆ!

Prabhakara R Prabhakara R Aug 5, 2025 8:32 PM

ಟ್ರ್ಯಾಕ್‌-ರೆಕಾರ್ಡ್‌

| ರವೀ ಸಜಂಗದ್ದೆ

ದಕ್ಷಿಣ ಭಾರತದಲ್ಲಿ ತುಲನಾತ್ಮಕವಾಗಿ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ನಗರ 'ನಮ್ಮ ಬೆಂಗಳೂರು'. ಅಂತೆಯೇ, ಕಳೆದ 14 ವರ್ಷಗಳಿಂದ ಹಂತಹಂತವಾಗಿ ಅಭಿವೃದ್ಧಿ ಹೊಂದಿ, ಬೆಂಗಳೂರಿನ ಮಹತ್ವದ, ವಿಶ್ವಸನೀಯ ಮತ್ತು ಜನಾನುರಾಗಿ ಸಂಚಾರ ವ್ಯವಸ್ಥೆಯಾಗಿ ಬೆಳೆದು ನಿಂತಿದೆ 'ನಮ್ಮ ಮೆಟ್ರೋ'. 2011ರಲ್ಲಿ ಲೋಕಾರ್ಪಣೆಗೊಂಡು, ಬೆಂಗಳೂರು ನಗರವಾಸಿಗಳ ನೆಚ್ಚಿನ ಪ್ರಯಾಣದ ಆಯ್ಕೆಯಾಗಿ 'ನಮ್ಮ ಮೆಟ್ರೋ' ಕಾರ್ಯನಿರ್ವಹಿಸುತ್ತಿದೆ. ಮಹಾನಗರಿಯ ಕೆಲ ಭಾಗಗಳಲ್ಲಿ ಜನದಟ್ಟಣೆ/ವಾಹನ ದಟ್ಟಣೆ/ಸಂಚಾರ ದಟ್ಟಣೆ ಆಗುವುದಕ್ಕೆ ಕಾರಣವಾಗಿರುವ ಬೆಂಗಳೂರಿನ ಐಟಿ ಸಂಸ್ಥೆಗಳ ನೆಲೆವೀಡಾಗಿರುವ 'ಇಲೆಕ್ಟ್ರಾನಿಕ್ ಸಿಟಿ'ಗೆ ಸಂಪರ್ಕ ಕಲ್ಪಿಸುವ ಮೆಟ್ರೋ 3ನೇ ಹಂತದ 'ಹಳದಿ ಮಾರ್ಗ'ವು (Namma Metro Yellow Line) ಇದೇ ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಲೋಕಾರ್ಪಣೆಯಾಗಲಿದೆ. ಈ ಹಿನ್ನೆಲೆಯಲ್ಲಿ 'ಮೆಟ್ರೋ' ಸಾಗಿಬಂದ ಮಾರ್ಗ, ಭವಿಷ್ಯದ ಯೋಜನಾ ಚಟುವಟಿಕೆಗಳ ಕಡೆಗೊಮ್ಮೆ ಕಣ್ಣು ಹಾಯಿಸೋಣ.

'ಮೆಟ್ರೋ ರೈಲು ಸಾರಿಗೆ ವ್ಯವಸ್ಥೆ'ಯ ಭಾಗವಾಗಿ 2003 ರಲ್ಲಿ ಮೊದಲ ಹಂತದ ಯೋಜನಾ ವರದಿಯನ್ನು ತಯಾರಿ ಸಲಾಯಿತು. ಮುಂದಿನ ದಿನಗಳಲ್ಲಿ 'ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್' (ಬಿಎಂಆ‌ರ್‌ಸಿಎಲ್) ಅಸ್ತಿತ್ವಕ್ಕೆ ಬಂತು. 2006ರ ಏಪ್ರಿಲ್ 25ರಂದು ಮೊದಲ ಹಂತದ ಕಾಮಗಾರಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿತು. 2007ರ ಏಪ್ರಿಲ್ 15ರಂದು ಕಾಮಗಾರಿ ಆರಂಭವಾಯಿತು. 2011ರ ಅಕ್ಟೋಬರ್ 20ರಂದು, ನೇರಳೆ ಮಾರ್ಗದ, ಬೈಯಪ್ಪನಹಳ್ಳಿ ಮತ್ತು ಮಹಾತ್ಮ ಗಾಂಧಿ ರಸ್ತೆಗೆ ಸಂಪರ್ಕ ಕಲ್ಪಿಸುವ ರೀಚ್-1' ಮಾರ್ಗವು ಸಾರ್ವಜನಿಕ ಸೇವೆಗೆ ಮುಕ್ತವಾಯಿತು. ಅಂದು ಹಲವರು ಬೆರಗು ಮತ್ತು ಉತ್ಸಾಹದೊಂದಿಗೆ ಎರಡೂ ನಿಲ್ದಾಣಗಳ ನಡುವೆ ಸಂಚರಿಸಿ ಸಂಭ್ರಮಿಸಿದರು. ಮನೆಯಿಂದ ಕಚೇರಿಗೆ ಹೋಗುವ ಮಾರ್ಗ ಅಲ್ಲದಿದ್ದರೂ, ನಾನೂ ಅಂದು ಬೈಕನ್ನು ಬೈಯಪ್ಪನಹಳ್ಳಿ ನಿಲ್ದಾಣದೆಡೆಗೆ ತಿರುಗಿಸಿ, ಮೆಟ್ರೋದಲ್ಲಿ ಮಹಾತ್ಮ ಗಾಂಧಿ ನಿಲ್ದಾಣಕ್ಕೆ ಹೋಗಿ, ಅಲ್ಲಿಂದ ವಾಪಸಾದೆ! ಹೀಗೆ ಮೆಟ್ರೋದಲ್ಲಿ ಮೊದಲ ದಿನವೇ ಸಂಚರಿಸಿ ಖುಷಿಪಟ್ಟ ನೆನಪು ಇನ್ನೂ ಹಸಿರಾಗಿದೆ.

ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ 'ನಮ್ಮ ಮೆಟ್ರೋ' ಕಾಮಗಾರಿ ಇನ್ನೂ ನಡೆಯುತ್ತಿದೆ. 'ನೇರಳೆ' ಮತ್ತು 'ಹಸಿರು' ಮಾರ್ಗಗಳಲ್ಲಿ ಕಾಮಗಾರಿ ಬಹುತೇಕ ಪೂರ್ಣಗೊಂಡು ಪೂರ್ಣ ಪ್ರಮಾಣದಲ್ಲಿ ಮೆಟ್ರೋ ರೈಲು ಸಂಚರಿಸುತ್ತಿರುವ ದರಿಂದ ಜನರು ಅದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸದ್ಯದಲ್ಲೇ ಕಾರ್ಯಾರಂಭ ಮಾಡಲಿರುವ 'ಹಳದಿ' ಮಾರ್ಗದಿಂದ ಬೆಂಗಳೂರು ದಕ್ಷಿಣ, ಹೊಸೂರು ರಸ್ತೆ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಉಪಯೋಗವಾಗಲಿದೆ. 'ಹಳದಿ' ಮಾರ್ಗವೂ ಸೇರಿದಂತೆ 'ನಮ್ಮ ಮೆಟ್ರೋ'ದ ಒಟ್ಟು ಉದ್ದ 95.82 ಕಿಲೋಮೀಟರ್‌ಗಳು!

'ನೇರಳೆ' ಮಾರ್ಗವು 43.49 ಕಿ.ಮೀ. ಉದ್ದವಿದ್ದು 37 ನಿಲ್ದಾಣಗಳನ್ನು ಒಳಗೊಂಡಿದೆ. ಈ ಮಾರ್ಗವು 'ಪೂರ್ವ-ಪಶ್ಚಿಮ ಕಾರಿಡಾರ್' ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪೂರ್ವದಲ್ಲಿ ವೈಟ್‌ ಫೀಲ್ಡ್ ನಿಲ್ದಾಣದಿಂದ ಶುರುವಾಗಿ ಪಶ್ಚಿಮದ ಚಲ್ಲಘಟ್ಟ ನಿಲ್ದಾಣದಲ್ಲಿ ಇದು ಕೊನೆಗೊಳ್ಳುತ್ತದೆ. 'ಹಸಿರು' ಮಾರ್ಗವು 33.5 ಕಿ.ಮೀ. ಉದ್ದವಿದ್ದು 32 ನಿಲ್ದಾಣಗಳನ್ನು ಒಳಗೊಂಡಿದೆ. 'ಉತ್ತರ-ದಕ್ಷಿಣ ಕಾರಿಡಾರ್' ಆಗಿ ಕಾರ್ಯನಿರ್ವಹಿಸುತ್ತಿರುವ ಈ ಮಾರ್ಗವು, ಉತ್ತರದಲ್ಲಿ ಮಾದಾವರ ನಿಲ್ದಾಣದಿಂದ ಶುರುವಾಗಿ ದಕ್ಷಿಣದಲ್ಲಿ ಕನಕಪುರ ರಸ್ತೆಯ ಸಿಲ್ಕ್ ಇನ್‌ಸ್ಟಿಟ್ಯೂಟ್ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ. ಇನ್ನು, ಸದ್ಯದಲ್ಲೇ ತೆರೆದುಕೊಳ್ಳಲಿರುವ 'ಹಳದಿ' ಮಾರ್ಗವು 19.15 ಕಿ.ಮೀ. ಉದ್ದವಿದ್ದು, 16 ನಿಲ್ದಾಣಗಳನ್ನು ಒಳ ಗೊಂಡಿದೆ. ಇದು ಬೊಮ್ಮಸಂದ್ರ ನಿಲ್ದಾಣದಿಂದ ಶುರುವಾಗಿ ರಾಷ್ಟ್ರೀಯ ವಿದ್ಯಾಲಯ ರಸ್ತೆ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ.

'ನಮ್ಮ ಮೆಟ್ರೋ'ದ ಸದ್ಯದ ದೈನಂದಿನ ಪ್ರಯಾಣಿಕರ ಸಂಖ್ಯೆ ಏಳೂವರೆಯಿಂದ ಎಂಟು ಲಕ್ಷ, ಹಳದಿ ಮಾರ್ಗದ ಕಾರ್ಯಾಚರಣೆ ಶುರುವಾದ ನಂತರ ಇದು ಹತ್ತತ್ತಿರ 11 ಲಕ್ಷಕ್ಕೆ ಮುಟ್ಟುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, 2030ರ ವೇಳೆಗೆ 'ನಮ್ಮ ಮೆಟ್ರೋ'ದಲ್ಲಿ ವರ್ಷಕ್ಕೆ ಅಂದಾಜು 43 ಕೋಟಿ ಜನರು ಪ್ರಯಾಣಿಸಲಿದ್ದಾರೆ. ಹಸಿರು ಮಾರ್ಗದ 'ರಾಷ್ಟ್ರೀಯ ವಿದ್ಯಾ ಲಯ ರಸ್ತೆ' ನಿಲ್ದಾಣದಿಂದ ಹಳದಿ ಮಾರ್ಗಕ್ಕೆ ಸಂಪರ್ಕ ಲಭ್ಯವಿದೆ. ಚಾಲಕರಹಿತ ರೈಲು ಕಾರ್ಯಾಚರಣೆ ನಡೆಯಲಿ ರುವುದು ಈ ಮಾರ್ಗದ ವೈಶಿಷ್ಟ್ಯ. ಭವಿಷ್ಯದಲ್ಲಿ ಚಾಲಕರಹಿತ ರೈಲುಗಳು ಹೆಚ್ಚೆಚ್ಚು ಓಡಲಿವೆ. ಇನ್ಫೋಸಿಸ್ ಫೌಂಡೇಷನ್, ಬಯೋಕಾನ್ ಮುಂತಾದ ಸಂಸ್ಥೆಗಳು ದೇಣಿಗೆ ನೀಡಿ ತಮ್ಮ ಕಚೇರಿಯ ಬಳಿಯ ನಿಲ್ದಾಣಗಳ ನಿರ್ಮಾಣದಲ್ಲಿ ಸಹಕರಿಸಿವೆ ಮತ್ತು ಇವುಗಳಿಗೆ 'ಇನ್ಫೋಸಿಸ್ ಫೌಂಡೇಷನ್ ಕೋನಪ್ಪನ ಅಗ್ರಹಾರ ನಿಲ್ದಾಣ', 'ಬಯೋಕಾನ್ ಹೆಬ್ಬಗೋಡಿ ನಿಲ್ದಾಣ' ಎಂದು ಆಯಾ ಸಂಸ್ಥೆಗಳ ಹೆಸರಿಡಲಾಗಿದೆ.

ಕಾಳೇನ ಅಗ್ರಹಾರದಿಂದ ನಾಗಾವರದವರೆಗಿನ 21.25 ಕಿ. ಮೀ. ಉದ್ದದ 'ಗುಲಾಬಿ' ಮಾರ್ಗ, ಸೆಂಟ್ರಲ್ ಸಿಲ್ಕ್‌ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 58.19 ಕಿ.ಮೀ. ಉದ್ದದ 'ನೀಲಿ' ಮಾರ್ಗದ ಕಾಮಗಾರಿಯೂ ಪ್ರಗತಿಯಲ್ಲಿದೆ. 'ನಮ್ಮ ಮೆಟ್ರೋ' 3ನೇ ಹಂತದ 'ಕಾರಿಡಾರ್-1'ರ ಯೋಜನೆಯ ಅಡಿಯಲ್ಲಿ ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳ-ಕೆಂಪಾಪುರವರೆಗಿನ 32.5 ಕಿ.ಮೀ. ಮಾರ್ಗ ಮತ್ತು 'ಕಾರಿಡಾರ್ -2' ಯೋಜನೆಯ ಭಾಗವಾಗಿ ಹೊಸಹಳ್ಳಿಯಿಂದ ಮಾಗಡಿರಸ್ತೆಯ ಕಡಬಗೆರೆವ ರೆಗಿನ 12.13 ಕಿ.ಮೀ. ಮಾರ್ಗದ ಕಾಮಗಾರಿಗಳಿಗೆ ಸಂಬಂಧಿಸಿ 15,611 ಕೋಟಿ ರುಪಾಯಿಗಳ ಯೋಜನಾ ವೆಚ್ಚಕ್ಕೆ ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ. ಈ ಕಾಮ ಗಾರಿಯ ಅಧಿಕೃತ ಶಂಕುಸ್ಥಾಪನೆಯನ್ನು ಆಗಸ್ಟ್ 10ರಂದು ಪ್ರಧಾನಿ ನೆರವೇರಿಸಲಿದ್ದಾರೆ. 2030ರ ವೇಳೆಗೆ ಈ ಕಾಮಗಾರಿ ಪೂರ್ಣವಾಗುವ ನಿರೀಕ್ಷೆಯಿದೆ. 'ನಮ್ಮ ಮೆಟ್ರೋ' 3 'ಎ' ಹಂತವು ಸರ್ಜಾಪುರದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸಲಿದೆ. 37 ಕಿ.ಮೀ. ಉದ್ದದ ಈ ಮಾರ್ಗವು 28 ನಿಲ್ದಾಣಗಳನ್ನು ಒಳಗೊಳ್ಳಲಿದೆ. 15,000 ಕೋಟಿ ರುಪಾಯಿಗಳಷ್ಟು ವೆಚ್ಚದ ಈ ಯೋಜನೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.

ಹಳದಿ ಮಾರ್ಗದ ಕಾರ್ಯಾಚರಣೆ ಶುರುವಾದ ನಂತರ, 'ನಮ್ಮ ಮೆಟ್ರೋ'ಗೆ ಟಿಕೆಟ್ ಮೂಲಕ ಬರಲಿರುವ ಸರಾಸರಿ ಮಾಸಿಕ ಆದಾಯ 90 ಕೋಟಿ ರುಪಾಯಿಗಳು, ಜಾಹೀರಾತು, ಅಂಗಡಿಗಳು ಮತ್ತಿತರ ಮೂಲದಿಂದ ಸದ್ಯಕ್ಕೆ ಮೂರೂವರೆ ಯಿಂದ ನಾಲ್ಕು ಕೋಟಿ ರುಪಾಯಿ ಮಾಸಿಕ ಆದಾಯವಿದ್ದು, ಅದು ಐದೂವರೆ ಕೋಟಿಯನ್ನು ತಲುಪುವ ನಿರೀಕ್ಷೆಯಿದೆ. 'ನಮ್ಮ ಮೆಟ್ರೋ' ಯೋಜನೆ ಆರಂಭವಾದಾಗಿನಿಂದ ಇದು ವರೆಗೆ ಬಿಎಂಆ‌ರ್ ಸಿಎಲ್‌ಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು 56,218 ಕೋಟಿ ರುಪಾಯಿಗಳಷ್ಟು ಅನುದಾನವನ್ನು ನೀಡಿದ್ದು, ಮುಂದಿನ 3 ವರ್ಷಗಳಲ್ಲಿ ನಮ್ಮ ಮೆಟ್ರೋ'ದ ಯೋಜನಾ ವೆಚ್ಚ 1 ಲಕ್ಷ ಕೋಟಿ ರುಪಾಯಿಗಳನ್ನು ದಾಟಲಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬ, ಯೋಜನಾ ವರದಿಯ ಒಪ್ಪಿಗೆಗೆ ವಿಳಂಬ, ಕಾಮಗಾರಿ ಶುರುವಾದ ನಂತರದ ಕ್ಷೀಣ ಪ್ರಗತಿ ಇತ್ಯಾದಿ ಅಂಶಗಳು 'ನಮ್ಮ ಮೆಟ್ರೋ'ದ ಒಟ್ಟಾರೆ ಕಾರ್ಯಪ್ರಗತಿಗೆ ಒಂದಷ್ಟು ಹೊಡೆತ ನೀಡಿರುವುದು ವಾಸ್ತವ.

"ನಮ್ಮ ಮೆಟ್ರೋ' ಹಲವಾರು ವೈಶಿಷ್ಟ್ಯಗಳಿಂದ ಕೂಡಿರುವುದು ಅದರ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇಲ್ಲಿನ ಪ್ರತಿಯೊಂದು ನಿಲ್ದಾಣವೂ ತಂತ್ರಜ್ಞಾನದ ಸಮರ್ಥ ಬಳಕೆಯಿಂದಾಗಿ ಆಧುನಿಕತೆಯ ಸ್ಪರ್ಶವನ್ನು ಹೊಂದಿದೆ. ವಿಕಲಚೇತನ-ಸ್ನೇಹಿ, ಮಹಿಳಾ-ಸ್ನೇಹಿ ವ್ಯವಸ್ಥೆ ಮತ್ತು ಅನುಕೂಲಗಳನ್ನು ಕಲ್ಪಿಸಲಾಗಿದೆ. ನಿಲ್ದಾಣಗಳಲ್ಲಿ ಅಲ್ಲಲ್ಲಿ ಮಾಹಿತಿ/ದಿಕ್ಕೂಚಿ ಫಲಕಗಳನ್ನು ಸಜ್ಜುಗೊಳಿಸಿರುವುದು ಮಾತ್ರವಲ್ಲದೆ, ಪ್ರಯಾಣ ಸಂಬಂಧಿತ ಪ್ರಕಟಣೆ/ಉದ್ಯೋಷ ಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರೈಲಿನೊಳಗೆ ಹಾಗೂ ನಿಲ್ದಾಣಗಳಲ್ಲಿ ಮಾಡಲಾಗುತ್ತದೆ. ನಗದು ಪಾವತಿ, ಆನ್‌ಲೈನ್ ಮತ್ತು ಸ್ಮಾರ್ಟ್ ಕಾರ್ಡ್ ಮೂಲಕ ಟಿಕೆಟ್ ಪಡೆದು ಮೆಟ್ರೋ ರೈಲುಗಳಲ್ಲಿ ಸುಲಭವಾಗಿ ಪ್ರಯಾಣಿಸಬಹುದು. ಅಂಗವಿಕಲರು, ರೋಗಿಗಳು, ಹಿರಿಯ ನಾಗರಿಕರು, ಬಾಣಂತಿ ಯರು, ಚಿಕ್ಕ ಮಕ್ಕಳೊಂದಿಗೆ ಪ್ರಯಾಣಿಸುವವರಿಗೆ ಪ್ರತಿ ಬೋಗಿಯಲ್ಲೂ ಆಸನಗಳನ್ನು ಮೀಸಲಿರಿಸಲಾಗಿದೆ. ಅಂಗಾಂಗ ರವಾನೆ ಮತ್ತಿತರ ವೈದ್ಯಕೀಯ ತುರ್ತು ಸೇವೆಗಳಿಗೂ 'ನಮ್ಮ ಮೆಟ್ರೋ' ಬಳಕೆ ಶುರುವಾಗಿದೆ.

ನಿರೀಕ್ಷೆಯಂತೆ ಕಾಮಗಾರಿ ನಡೆದರೆ, ಮುಂದಿನ ಐದಾರು ವರ್ಷಗಳಲ್ಲಿ ಬೆಂಗಳೂರಿನ ಎಲ್ಲಾ ಭಾಗಗಳನ್ನೂ ಮೆಟ್ರೋ ತಲುಪಲಿದೆ. ಹಾಗಾದಾಗ, ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ದುಪ್ಪಟ್ಟಾಗಲಿದೆ. ಬೆಂಗಳೂರಿನಲ್ಲಿ ಸಂಚಾರಿ ದಟ್ಟಣೆಯ ತಲೆಬಿಸಿಯಿಲ್ಲದೆ, ಸರಿಯಾದ ಸಮಯಕ್ಕೆ ಉದ್ದೇಶಿತ ಜಾಗವನ್ನು ತಲುಪಲು ಬಳಸಬಹುದಾದ ಹೆಚ್ಚು ಅವಲಂಬಿತ ಮತ್ತು ವಿಶ್ವಾಸಾರ್ಹ ಸಾರಿಗೆಯಾಗಿ 'ನಮ್ಮ ಮೆಟ್ರೋ' ಗರಿಮೆಯನ್ನು ಪಡೆಯಲಿದೆ. ಬೋಗಿಗಳನ್ನು ಕಾಲಕಾಲಕ್ಕೆ ಆಮದು ಮಾಡಿಕೊಂಡು ರೈಲುಗಳ ಸಂಖ್ಯೆಯು ನಿರಂತರವಾಗಿ ಹೆಚ್ಚುವಂತೆ ನೋಡಿಕೊಳ್ಳಲಾಗಿದೆ. ಸದ್ಯಕ್ಕೆ ಒಂದು ನಿಲ್ದಾಣದಲ್ಲಿ ಸರಾಸರಿ 30 ಸಿಬ್ಬಂದಿಯನ್ನು ಸೇವೆಗೆ ತೊಡಗಿಸಿರುವ 'ನಮ್ಮ ಮೆಟ್ರೋ' ಅಂದಾಜು ಮೂರು ಸಾವಿರ ಉದ್ಯೋಗಿಗಳನ್ನು ಮಡಿಲಲ್ಲಿ ಇಟ್ಟುಕೊಂಡಿದೆ.

ಬೆಂಗಳೂರಿನ ಜೀವನಾಡಿ ಎನಿಸಿರುವ 'ನಮ್ಮ ಮೆಟ್ರೋ'ದ ಉದ್ದೇಶಿತ ಕಾಮಗಾರಿಗಳು ನಿರಿಕ್ಷೆಯಂತೆ ಪೂರ್ಣಗೊಂಡು ಜನರಿಗೆ ನಗರಸಂಪರ್ಕವು ಮತ್ತಷ್ಟು ಸುಲಭವಾಗಲಿ ಎಂಬುದು ಸಹೃದಯಿಗಳ ಹಾರೈಕೆ. 'ಹಳದಿ' ಮಾರ್ಗಕ್ಕೆ ಒಂದಷ್ಟು ತಡವಾಗಿಯಾದರೂ ಹಸಿರು ನಿಶಾನೆ ದಕ್ಕಿ, ಜನರ ಉಪಯೋಗಕ್ಕೆ ಅದು ಲಭ್ಯವಾಗಲಿರುವುದು ಖುಷಿಯ ವಿಚಾರ. ದಕ್ಕಿರುವ ಬದುಕನ್ನು ಚೆಂದದಿಂದ ಬದುಕಲು ನಿರಂತರ ಓಟ ಬೇಡುವ ಬೆಂಗಳೂರೆಂಬ ಮಾಯಾನಗರಿಯ ದೈನಂದಿನ ಬದುಕಿನಲ್ಲಿ ನಗರವಾಸಿಗಳ ನೆಚ್ಚಿನ ಪ್ರಯಾಣ ಸಂಗಾತಿಯಾಗಲಿದೆ 'ನಮ್ಮ ಮೆಟ್ರೋ' ಎಂಬುದು ನಿಸ್ಸಂಶಯ.

(ಲೇಖಕರು, ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)