ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ಪ್ರವಾಸಿಗರಿಗೆ ಗುಂಡಿಕ್ಕುವ ಮನಸ್ಥಿತಿ ಎಂಥದ್ದು ?

ತಮ್ಮ ಊರುಗಳಿಗೆ ಬಂದವರನ್ನು ಸ್ಥಳೀಯರು ‘ಅತಿಥಿಗಳು’ ಎಂದೇ ತಿಳಿದು, ಕೈಲಾದ ವ್ಯವಸ್ಥೆ ಮಾಡಿ ಕೊಡುತ್ತಾರೆ. ಇಂದು ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ, ಇಂಥ ವ್ಯವಸ್ಥೆ, ಸತ್ಕಾರವು ವಾಣಿಜ್ಯಕ ದೃಷ್ಟಿಕೋನವನ್ನು ಹೊಂದಿರುವುದು ನಿಜ; ಹೆಚ್ಚು ಜನ ಪ್ರವಾಸಿಗರು ಬಂದರೆ, ಹೆಚ್ಚು ಆದಾಯ ಎಂಬ ವಿಚಾರವೂ ಮುನ್ನೆಲೆಗೆ ಬಂದಿದೆ.

ಪ್ರವಾಸಿಗರಿಗೆ ಗುಂಡಿಕ್ಕುವ ಮನಸ್ಥಿತಿ ಎಂಥದ್ದು ?

ಶಶಿಧರ ಹಾಲಾಡಿ ಶಶಿಧರ ಹಾಲಾಡಿ Apr 25, 2025 7:28 AM

ಶಶಾಂಕಣ

ಭಯಾನಕ, ಭೀಭತ್ಸ, ಕ್ರೂರ, ಅಸಹ್ಯ, ಹೇಡಿತನದ ಕೃತ್ಯ... ಈ ರೀತಿ ಹಲವು ವಿಶೇಷಣಗಳು, ಪದ ಗಳು ಮನಸ್ಸಿನಲ್ಲಿ ಬರುತ್ತಿವೆ. ಆದರೆ, ಯಾವ ರೀತಿ ಪ್ರತಿಕ್ರಿಯಿಸಬೇಕೋ, ಅಭಿಪ್ರಾಯ ವ್ಯಕ್ತಪಡಿಸ ಬೇಕೋ ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ. ಮೊನ್ನೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ಜನರನ್ನು ಗುಂಡಿಟ್ಟು ಕೊಂದ ಕೃತ್ಯದ ವಿವರಗಳನ್ನು ಪತ್ರಿಕೆಗಳ, ದೃಶ್ಯ ಮಾಧ್ಯಮಗಳ ಮೂಲಕ ತಿಳಿಯುತ್ತಾ ಹೋದಂತೆ ಮನ ಮುದುಡಿತು; ನಾಗರಿಕ ಸಮಾಜವು ಉಚ್ಛ್ರಾಯ ಸ್ಥಿತಿಯಲ್ಲಿದೆ ಎಂದು ತಿಳಿದಿರುವ ಈ 21ನೆಯ ಶತಮಾನದಲ್ಲಿ ಇಂಥದೊಂದು ಹೇಯ, ಕ್ರೂರ, ಅನಾಗರಿಕ ಮತ್ತು ಭಯಾನಕ ಕೃತ್ಯ ನಡೆಯುತ್ತದೆ ಎಂದರೆ, ಇದನ್ನು ಹೇಗೆ ವಿಶ್ಲೇಷಿಸಬೇಕು? ಇಡೀ ನಾಗರಿಕ ಸಮಾಜವೇ ನಾಚಿಕೆಯಿಂದ ತಲೆ ತಗ್ಗಿಸಬೇಕೆ? ಕಟು ಶಬ್ದಗಳಲ್ಲಿ ಖಂಡಿಸಬೇಕೆ? ಪ್ರವಾಸಿಗರಂಥ ಅಮಾಯಕರನ್ನು ಗುಂಡಿಟ್ಟು ಸಾಯಿಸಿದ ಘಟನೆಗೆ ಪ್ರತೀಕಾರ ತೆಗೆದುಕೊಳ್ಳಬೇಕೆ? ತಕ್ಷಣ ಅದೊಂದು ಘಟನೆಗೆ ಪ್ರತೀಕಾರ ತೆಗೆದುಕೊಂಡರೆ ಸಾಕೆ, ಅಥವಾ ಮುಂದೆ ಇಂಥ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕೆ? ಇಂಥ ಹತ್ಯಾಕಾಂಡಗಳನ್ನು ನಡೆಸುವ ಪ್ರೇರಕ ಶಕ್ತಿ ಗಳನ್ನು ಶಿಕ್ಷಿಸಬೇಕೆ? ಏನೊಂದನ್ನೂ ಸ್ಪಷ್ಟವಾಗಿ ಅಭಿವ್ಯಕ್ತಿಸಲಾಗದಂಥ ಅಯೋಮಯ ಸ್ಥಿತಿ ಇಂದಿನದು.

ಎಪ್ರಿಲ್ 22ರಂದು, ಪಹಲ್ಗಾಮ್‌ನ ಒಂದು ಸುಂದರ ಕಣಿವೆ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯು ಹೇಯದಲ್ಲಿ ಹೇಯ ಎನ್ನಲು ಕಾರಣಗಳೇ ಬೇಕಿಲ್ಲ; ಆ ಘಟನೆಯನ್ನು ವಿವರವಾಗಿ ವಿಶ್ಲೇಷಿಸುವುದು ಸಹ ನೋವಿನ ವಿಚಾರ. ಆದರೂ, ಕೆಲವು ಪ್ರಮುಖ ಸಂಗತಿಗಳನ್ನು ಚರ್ಚಿಸಲೇ ಬೇಕು ಮತ್ತು ಇದೇಕೆ ನಮ್ಮ ದೇಶದಲ್ಲಿ ಇಂಥದೊಂದು ಹತ್ಯಾಕಾಂಡ, ಈಗ, 2025ರಲ್ಲಿ ನಡೆಯು ವಂತಾಯಿತು ಎಂದು ಚಿಂತಿಸಲೇಬೇಕು.

ಇದನ್ನೂ ಓದಿ: Shashidhara Halady Column: ಇವರು ಅತ್ಯುನ್ನತ ಹುದ್ದೆಯನ್ನು ಬೇಡವೆಂದರು !

ಅಲ್ಲಿ ಸತ್ತವರೆಲ್ಲರೂ ಪ್ರವಾಸಿಗರು! ಹಾಂ, ಯಃ ಕಶ್ಚಿತ್ ಪ್ರವಾಸಿಗರು; ಅವರು ಯಾವುದೇ ಶಸ್ತ್ರ ಹೊಂದಿರಲಿಲ್ಲ. ಅಂದರೆ, ಅದು ಯುದ್ಧದ, ಪ್ರತೀಕಾರದ ಸನ್ನಿವೇಶವಲ್ಲ, ಪೊಲೀಸರ ಅಥವಾ ಸೈನಿಕರ ಮೇಲಿನ ದಾಳಿಯಲ್ಲ, ಪ್ರವಾಸಕ್ಕೆಂದು ಬಂದ, ಶಸ್ತ್ರರಹಿತ ಜನಸಾಮಾನ್ಯರ ಮೇಲೆ ನಡೆದ ಗುಂಡಿದ ದಾಳಿ ಅದು. ಕಾಶ್ಮೀರವನ್ನು, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ನೋಡಲೆಂದು, ಅಲ್ಲಿನ ಹುಲ್ಲಿನ ಇಳಿಜಾರು ಮೈದಾನದಲ್ಲಿ ಓಡಾಡಲೆಂದು ಬಂದ ಅಮಾಯಕ ಪ್ರವಾಸಿಗರ ಮೇಲೆ, ನಾಲ್ಕಾರು ಬಂದೂಕುಧಾರಿಗಳು ಗುಂಡಿನ ಮಳೆಗೆರೆದಿದ್ದಾರೆ; ಕೆಲವರನ್ನು ಆಯ್ಕೆ ಮಾಡಿ ಗುಂಡಿಟ್ಟು ಸಾಯಿಸಲಾಗಿದೆ. ನಮ್ಮ ದೇಶದ ಯಾವುದೇ ರಾಜ್ಯಕ್ಕೆ ಹೋದರೂ, ಒಂದು ಸಾಮಾನ್ಯ ಅಭಿಪ್ರಾಯ ಗಮನಕ್ಕೆ ಬರುತ್ತದೆ: ಅದೇನೆಂದರೆ, ಹೊರ ಊರಿನಿಂದ ಬಂದ ಎಲ್ಲರೂ ಅಲ್ಲಿ ಅತಿಥಿಗಳು!

ತಮ್ಮ ಊರುಗಳಿಗೆ ಬಂದವರನ್ನು ಸ್ಥಳೀಯರು ‘ಅತಿಥಿಗಳು’ ಎಂದೇ ತಿಳಿದು, ಕೈಲಾದ ವ್ಯವಸ್ಥೆ ಮಾಡಿಕೊಡುತ್ತಾರೆ. ಇಂದು ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ, ಇಂಥ ವ್ಯವಸ್ಥೆ, ಸತ್ಕಾರವು ವಾಣಿಜ್ಯಕ ದೃಷ್ಟಿಕೋನವನ್ನು ಹೊಂದಿರುವುದು ನಿಜ; ಹೆಚ್ಚು ಜನ ಪ್ರವಾಸಿಗರು ಬಂದರೆ, ಹೆಚ್ಚು ಆದಾಯ ಎಂಬ ವಿಚಾರವೂ ಮುನ್ನೆಲೆಗೆ ಬಂದಿದೆ.

ಆ ಮೂಲಕ ಜನರಿಗೆ ಒಂದು ಆದಾಯ ಮೂಲವೂ ಹೌದು ಎಂದು ತಿಳಿಯಲಾಗಿದೆ. ಆದರೂ, ಹೊರ ರಾಜ್ಯಗಳಿಂದ ಬಂದವರನ್ನು ಅತಿಥಿಗಳು ಎಂದು ತಿಳಿಯುವ ವಿಚಾರ ನಮ್ಮ ದೇಶದಲ್ಲಿ ಸಾರ್ವತ್ರಿಕ. ಅಂಥ ಅತಿಥಿಗಳನ್ನು, ಪ್ರವಾಸಿಗರನ್ನು, ಶಸ್ತ್ರರಹಿತರನ್ನು ಗುಂಡಿಟ್ಟು ಸಾಯಿಸುವ ಮನಸ್ಥಿತಿಯಾದರೂ ಎಂಥದ್ದು!

ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದವರ ಕುರಿತು ನಾನಾ ವ್ಯಾಖ್ಯಾನಗಳು ಈಗಾಗಲೇ ಬಂದಿವೆ; ಮುದ್ರಣ, ದೃಶ್ಯ ಮಾಧ್ಯಮಗಳಲ್ಲಿ ಚರ್ಚೆಯಾಗಿದೆ. ಸಾಮಾಜಿಕ ಜಾಲತಾಣಗಳಂತೂ ಭಾವೋದ್ವೇಗದ ಹೇಳಿಕೆಗಳಿಂದ, ಅವರನ್ನು ಹೇಗೆ ಶಿಕ್ಷಿಸ ಬೇಕೆಂಬ ಭರಪೂರ ವ್ಯಾಖ್ಯಾನಗಳಿಂದ ತುಂಬಿಹೋಗಿವೆ.

ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ವಿಚಿತ್ರ ಮನಸ್ಥಿತಿಯವರನ್ನು ಬಿಟ್ಟರೆ, ಎಲ್ಲರೂ ಈ ಹತ್ಯಾಕಾಂಡ ವನ್ನು ತೀವ್ರವಾಗಿ ಖಂಡಿಸಿದ್ದಾರೆ. ರಾಜಕೀಯ ಪಕ್ಷದವರೂ ತಮ್ಮ ನಡುವಿನ ಅಭಿಪ್ರಾಯಭೇದ ಮರೆತು, ಬಹುಮಟ್ಟಿಗೆ ಈ ರಕ್ತಪಾತವನ್ನು ಖಂಡಿಸಿದ್ದಾರೆ. ಅಷ್ಟರ ಮಟ್ಟಿಗೆ ಈ ಒಂದು ಸಂದರ್ಭ ದಲ್ಲಿ ನಮ್ಮ ದೇಶದವರು ಒಗ್ಗಟ್ಟನ್ನು ತೋರಿದ್ದಾರೆ ಎಂಬುದೂ ಒಂದು ವಿಶೇಷ.

ಕಳೆದ 4 ವರ್ಷಗಳಿಂದ ಕಾಶ್ಮೀರವು ಚೇತರಿಸಿಕೊಳ್ಳುತ್ತಿದೆ ಮತ್ತು ಅಲ್ಲಿ ಭಯೋತ್ಪಾದನೆ ಕಡಿಮೆ ಯಾಗುತ್ತಿದೆ ಎಂಬ ಅಭಿಪ್ರಾಯವು ಸಾರ್ವತ್ರಿಕವಾಗಿದೆ; ಈ ವಿಚಾರಕ್ಕೆ ಸಾಕಷ್ಟು ಪ್ರಚಾರವೂ ದೊರಕಿದೆ. ಅಲ್ಲಿ ಹೊಸ ರಸ್ತೆ, ಹೊಸ ಉದ್ಯಮಗಳು ಆರಂಭಗೊಳ್ಳುತ್ತಿವೆ. ಕಾಶ್ಮೀರದಂಥ ಸುಂದರ ಭೂಪ್ರದೇಶ ಹೊಂದಿದ ರಾಜ್ಯಗಳು, ಅದನ್ನೇ ಬಂಡವಾಳ ಮಾಡಿಕೊಂಡು ಹೆಚ್ಚು ಪ್ರವಾಸಿಗರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುವುದು ಸಹಜ.

ಹಿಮಾಲಯದ ಸೆರಗಿನಲ್ಲಿದ್ದು, ಅತಿ ಸುಂದರ ದೃಶ್ಯಾವಳಿಗಳನ್ನು ಹೊಂದಿರುವ, ನಮ್ಮ ದೇಶದ ರಾಜ್ಯಗಳಲ್ಲಿ ಕಾಶ್ಮೀರ ಪ್ರಮುಖ; ಅಲ್ಲಿಗೆ ಪ್ರವಾಸಿಗರು ಬರಬೇಕೆಂದರೆ, ನಿರ್ಭಯ ವಾತಾವರಣ ಇರಬೇಕು, ಪ್ರವಾಸಿಗರು ತಮ್ಮಷ್ಟಕ್ಕೆ ತಾವು ಓಡಾಡುವ ಸನ್ನಿವೇಶ ಇರಬೇಕು. ಅಭಿವೃದ್ಧಿ ಹೊಂದಿದ ಪಾಶ್ಚಾತ್ಯ ದೇಶಗಳು ಸಹ ಪ್ರವಾಸಿಗರನ್ನು ತಮ್ಮಲ್ಲಿಗೆ ಸೆಳೆಯಲು ಪ್ರಯತ್ನವನ್ನು ಮುಂದುವರಿಸಿಯೇ ಇವೆ ಮತ್ತು ಅದಕ್ಕೆ ಪೂರಕವಾಗಿ, ಪ್ರವಾಸಿಗರಿಗೆ ಅತಿ ಹೆಚ್ಚಿನ ಸುರಕ್ಷಿತ ವಾತಾವರಣವನ್ನು ಕಲ್ಪಿಸಿವೆ.

ಕಳೆದ 4 ವರ್ಷಗಳಿಂದ ಕಾಶ್ಮೀರದಲ್ಲೂ ಸಾಕಷ್ಟು ಸುರಕ್ಷಿತ ವಾತಾವರಣ ನಿರ್ಮಾಣವಾಗಿದೆ ಎಂದು ಪ್ರಚಾರವಾಗಿದೆ. ಅದನ್ನು ನಂಬಿರುವ ಜನಸಾಮಾನ್ಯರು, ಹೆಚ್ಚು ಸಂಖ್ಯೆಯಲ್ಲಿ ಕಾಶ್ಮೀರ ದಲ್ಲಿ ಪ್ರವಾಸ ಮಾಡುತ್ತಿರುವ ವಾಸ್ತವವು, ಅಂಕಿ-ಅಂಶಗಳಿಂದ ಖಚಿತವಾಗಿದೆ. ಈಗ ಏಕಾಏಕಿ, ಪ್ರವಾಸಿಗರನ್ನೇ ಗುರಿಯಾಗಿರಿಸಿಕೊಂಡು ಬಂದೂಕು ಹಿಡಿದ ಭಯೋತ್ಪಾದಕರು 26 ಜನರನ್ನು ಒಂದೇ ಏಟಿಗೆ ಸಾಯಿಸಿದ್ದಾರೆ; ಕೇವಲ ಒಂದೆರಡು ಗಂಟೆಗಳ ಅವಧಿಯಲ್ಲಿ, ತಮಗೆ ಇಷ್ಟ ಬಂದವರನ್ನು, ಕೆಲವು ನಿರ್ದಿಷ್ಟ ಮಾನದಂಡಗಳ ಮೇಲೆ ಆಯ್ದುಕೊಂಡು ಕೊಂದು ಹಾಕಿದ್ದಾರೆ.

ಇಂಥದೊಂದು ಭಯೋತ್ಪಾದಕ ದಾಳಿ ನಡೆಯಬಹುದು ಎಂದು ಯಾರೂ ಊಹಿಸದೇ ಇದ್ದಂಥ ಸನ್ನಿವೇಶದಲ್ಲಿ ಈ ಗುಂಡಿನ ದಾಳಿ ನಡೆದಿದ್ದರಿಂದ, ಅದರ ಆಘಾತವೂ ಅಧಿಕ ಎನಿಸಿದೆ. ಕಾಶ್ಮೀರ ದಲ್ಲಿ ಪ್ರವಾಸಿಗರ ಮೇಲೆ ಈ ರೀತಿ ದಾಳಿ ನಡೆಯಲಾರದು ಎಂಬ ಭಾವನೆಯೇ ಸಾರ್ವತ್ರಿಕವಾಗಿತ್ತು.

ಏಕೆಂದರೆ, ಆ ರಾಜ್ಯದ ಮುಖ್ಯ ಆದಾಯ ಮೂಲಗಳಲ್ಲಿ ಪ್ರವಾಸೋದ್ಯಮವೂ ಒಂದು. ಪ್ರವಾಸಿಗ ರನ್ನು ಸಾಯಿಸಿದರೆ, ಪ್ರವಾಸಿಗರು ಬರುವುದು ಕಡಿಮೆಯಾಗಿ, ಅಲ್ಲಿನ ಜನಸಾಮಾನ್ಯರ ಆದಾಯ ಕುಂಠಿತವಾಗುತ್ತದೆ ಎಂಬ ಭಾವನೆ ಇರುವುದರಿಂದ, ಪ್ರವಾಸಿಗರು ಅಲ್ಲಿ ಸುರಕ್ಷಿತ ಎಂಬ ಭಾವನೆ ಯೂ ಮೂಡಿತ್ತು.

ಆದರೆ ಪಹಲ್ಗಾಮ್‌ನ ಪ್ರವಾಸಿ ತಾಣದಲ್ಲಿ ನಡೆದ ಭಯಾನಕ ಹತ್ಯಾಕಾಂಡವು ಎಲ್ಲಾ ಯೋಚನೆ ಗಳನ್ನು, ಭಾವನೆಗಳನ್ನು, ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿತು. ಕಾಶ್ಮೀರದ ಕುರಿತು ದೇಶದ ಇತರ ಭಾಗದ ಜನಸಾಮಾನ್ಯರು ಇನ್ನೆಂದೂ ಸುರಕ್ಷಿತ ಭಾವನೆಯನ್ನು ಹೊಂದಲಾರರೇನೋ ಎಂಬಂಥ ವಾತಾವರಣವನ್ನು ಈ ಒಂದು ಹತ್ಯಾಕಾಂಡ ಸೃಷ್ಟಿಸಿದೆ. ಈಚಿನ ವರ್ಷಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಕುಕೃತ್ಯಗಳು ಕಡಿಮೆಯಾಗಿವೆ (ಹಿಂದಿನ ದಶಕಗಳಿಗೆ ಹೋಲಿಸಿದರೆ) ಎಂದು ಅಂಕಿ-ಅಂಶಗಳು ಹೇಳಿವೆ. ಇಂಥ ಸಂದರ್ಭದಲ್ಲಿ, ಪ್ರವಾಸಿಗರ ಮೇಲೆ ಭಯೋತ್ಪಾದಕರು ಏಕೆ ಗುಂಡು ಹಾರಿಸಿದರು ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ.

ಈ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಮಾಸ್ ಭಯೋತ್ಪಾದಕರು ಇಸ್ರೇಲ್‌ನ ಜನಸಾಮಾ ನ್ಯರ ಮೇಲೆ ನಡೆಸಿದ ದಾಳಿಯನ್ನು ಪಹಲ್ಗಾಮ್ ದಾಳಿಗೆ ಹೋಲಿಸಲಾಗುತ್ತಿದೆ- ಈ ಹೋಲಿಕೆ ಏಕೆಂದರೆ, ಬಲಿಪಶುಗಳು ಜನಸಾಮಾನ್ಯರು (ಪೊಲೀಸರೋ ಅಥವಾ ಮಿಲಿಟರಿ ಸಿಬ್ಬಂದಿಯೋ ಅಲ್ಲ). ಕಳೆದ 4 ವರ್ಷಗಳಿಂದ ಕಾಶ್ಮೀರದಲ್ಲಿ ಶಾಂತಿ ನೆಲೆಸುತ್ತಿರುವಂಥ ಸುದ್ದಿ ಯನ್ನು ಸಹಿಸದೇ ಇರುವ ವಿದೇಶಿ ಭಯೋತ್ಪಾದನಾ ಸಂಘಟನೆಗಳು, ಪ್ರವಾಸಿಗರನ್ನು ಕೊಲ್ಲುವಂಥ ಹೇಡಿತನದ ಕೃತ್ಯವನ್ನು ಎಸಗಿ, ಮತ್ತೊಮ್ಮೆ ಇಲ್ಲಿ ಕ್ಷೋಭೆಯ ವಾತಾವರಣವನ್ನು ಉಂಟುಮಾಡುವ ಪ್ರಯತ್ನ ನಡೆಸಿವೆ ಎಂಬ ವಿಚಾರವೂ ಮುನ್ನೆಲೆಗೆ ಬಂದಿದೆ.

ನಮ್ಮ ನೆರೆದೇಶದ ಸೇನಾ ಮುಖ್ಯಸ್ಥರು ಕೆಲವು ದಿನಗಳ ಹಿಂದೆ, ಕಾಶ್ಮೀರದ ಭಯೋತ್ಪಾದಕರನ್ನು ಪ್ರಚೋದಿಸುವಂಥ ಭಾಷಣ ಮಾಡಿದ್ದಾರೆ ಎಂಬ ಅಂಶವೂ ಚರ್ಚೆಗೆ ಒಳಗಾಗಿದೆ. ಈ ನಡುವೆ, ಕಾಶ್ಮೀರದ ಕೆಲವು ರಾಜಕಾರಣಿಗಳು ಆಡುತ್ತಿದ್ದ ಮಾತುಗಳು ಗಮನಾರ್ಹ. ಕಾಶ್ಮೀರದ ಪುಲ್ವಾಮಾದ ಶಾಸಕ ಸಂದರ್ಶನವೊಂದರಲ್ಲಿ, ‘ಕಾಶ್ಮೀರದಲ್ಲಿ ಹೊರಗಿನವರು ಬಂದು ಅಲ್ಲಿನ ಸಂಸ್ಕೃತಿಯನ್ನು ಹಾಳುಮಾಡುತ್ತಿದ್ದಾರೆ’ ಎಂಬಂಥ ಅರ್ಥ ಬರುವ ಮಾತುಗಳನ್ನಾಡಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.

ಕಳೆದ 2 ವರ್ಷಗಳಲ್ಲಿ ಹೊರಗಿನವರಿಗೆ 83,742 ಡೊಮೀಸಿಲ್ ಸರ್ಟಿಫಿಕೇಟ್‌ಗಳನ್ನು ಅಲ್ಲಿ ನೀಡಲಾಗಿದ್ದು, ಇದು ಸರಿಯಲ್ಲ ಎಂದು ಆ ಶಾಸಕರು ಹೇಳಿದ್ದಾರಂತೆ. ಹೊರರಾಜ್ಯದವರು ಬಂದು ನೆಲೆಸಿದರೆ, ಸ್ಥಳೀಯ ಸಂಸ್ಕೃತಿ ನಾಶವಾಗುತ್ತದೆ, ಕ್ರಮೇಣ ಸ್ಥಳೀಯರಿಗಿಂತ ಹೊರಗಿನವರೇ ಅಽಕವಾಗುತ್ತಾರೆ ಎಂಬ ಕಳವಳ ಅವರದು. ನ್ಯಾಷನಲ್ ಕಾನ್ಫರೆನ್ಸ್ ಸಂಸದ ರುಹುಲಲಾ ಮೆಹದಿ, ಹೊರಗಿನ ಪ್ರವಾಸಿಗರು ಕಾಶ್ಮೀರಕ್ಕೆ ಬರುತ್ತಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ಪತ್ರಿಕೆಗಳು ವರದಿಮಾಡಿವೆ.

‘ಈಗ ನಡೆಯುತ್ತಿರುವ ಪ್ರವಾಸೋದ್ಯಮವನ್ನು ನಾನು ಪ್ರವಾಸೋದ್ಯಮ ಎನ್ನಲಾರೆ, ನನ್ನ ದೃಷ್ಟಿ ಯಲ್ಲಿ ಇದು ಸಾಂಸ್ಕೃತಿಕ ದಾಳಿ (ಇನ್‌ವೇಷನ್), ಉದ್ದೇಶಪೂರ್ವಕವಾದ ದಾಳಿ’ ಎಂದು ಅವರು ಹೇಳಿದ್ದಾರೆ (ಈ ಎರಡೂ ವರದಿಗಳು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟ‌ವಾಗಿವೆ). ಹೊರ ರಾಜ್ಯದವರು ಪ್ರವಾಸಕ್ಕೆಂದು ಬಂದರೆ, ತಮ್ಮ ಸ್ಥಳೀಯ ಸಂಸ್ಕೃತಿಯ ಮೇಲೆ ದಾಳಿ ಯಾದಂತೆ ಎಂಬ ಒಂದು ಅಭಿಪ್ರಾಯವು ಕಾಶ್ಮೀರದಲ್ಲಿ ಇದೆ ಎಂದು ಇದರಿಂದ ಸ್ಪಷ್ಟ.

ಅಲ್ಲಿನ ಕೆಲವರು ಪದೇ ಪದೆ ‘ಕಾಶ್ಮೀರಿಯತ್’ ಎಂಬ ಪದವನ್ನು ಬಳಸುತ್ತಾರೆ; ಅಂದರೆ, ತಮ್ಮ ಸಂಸ್ಕೃತಿ, ತಮ್ಮ ಭಾಷೆ ಎಂಬರ್ಥದಲ್ಲಿ. ಅದು ಮೊದಲಿನಂತೆಯೇ ಇರಬೇಕು, ಹೊರಗಿನವರು ಬಂದು ಅದನ್ನು ಹಾಳುಮಾಡುವಂತಿಲ್ಲ ಎಂಬ ಭಾವನೆ ಅದು. ಹಾಗೆ ನೋಡಿದರೆ, ಎಲ್ಲಾ ರಾಜ್ಯ ಗಳಲ್ಲೂ ಅಂಥದೊಂದು ಸ್ಥಳೀಯ ಸಂಸ್ಕೃತಿ ಇದ್ದೇ ಇದೆ.

ಹೊರಗಿನವರು ಬಂದು ಬೇರೆ ಬೇರೆ ರಾಜ್ಯಗಳಲ್ಲಿ ನೆಲೆಗೊಂಡರೆ, ಸಹಜವಾಗಿ ಸ್ಥಳೀಯ ಸಂಸ್ಕೃತಿಯ ಮೇಲೆ ಹೊರಗಿನವರ ಪ್ರಭಾವ ಆಗಬಹುದು; ಇಂಥ ಪ್ರಭಾವವು ಬಹುಸಂಸ್ಕೃತಿಯ ದೇಶಗಳಲ್ಲಿ ಸಹಜ. ಅಂಥ ಪ್ರಭಾವದೊಂದಿಗೆ ಹೊಂದಿಕೊಂಡು ಜೀವಿಸುವುದೇ ಸೌಹಾರ್ದಯುತ ಜೀವನ ಎಂದು ನಮ್ಮ ದೇಶದ ಬಹುಪಾಲು ಜನರು ತಿಳಿದಿದ್ದಾರೆ, ಅದನ್ನು ಅನುಸರಿಸಿಯೂ ಇದ್ದಾರೆ.

ಉದಾರಣೆಗೆ, ಕರ್ನಾಟಕಕ್ಕೆ ಹೊರ ರಾಜ್ಯದವರು ಬಂದು ನೆಲೆಸಲು ಆರಂಭಿಸಿ ದಶಕಗಳೇ ಆದವು; ಕರ್ನಾಟಕ ಮಾತ್ರವಲ್ಲ ಎಲ್ಲಾ ರಾಜ್ಯಗಳಲ್ಲೂ ಇದು ಸಹಜ ಸ್ವೀಕೃತ. ಆದರೆ, ಕಾಶ್ಮೀರವು ಪ್ರತ್ಯೇಕ; ತಮ್ಮ ‘ಕಾಶ್ಮೀರಿಯತ್’ ಅನ್ನು ಕಾಪಾಡಬೇಕು ಎಂಬ ಭಾವ ಕಾಶ್ಮೀರದ ಜನರಲ್ಲಿ ಸಾಮಾನ್ಯವಾಗಿ ಇದೆ ಮತ್ತು ಅದನ್ನು ಸಂಸದರು ಸಹ ವ್ಯಕ್ತಪಡಿಸುತ್ತಾರೆಂದಾಗ, ಅಂಥ ಭಾವನೆ ಎಷ್ಟು ಪ್ರಬಲ ವಾಗಿದೆ ಎಂದು ತಿಳಿಯಬಹುದು.

ಪ್ರವಾಸಿಗರು ಬಂದು ತಮ್ಮ ಸಂಸ್ಕೃತಿಯ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಕಳವಳವೇ ಇಂಥದೊಂದು ಭಯೋತ್ಪಾದಕ ದಾಳಿಗೆ ಪ್ರೇರಣೆ ನೀಡಿರಬಹುದೆ? ಪಹಲ್ಗಾಮ್‌ನಲ್ಲಿ ಸತ್ತ 26 ಪುರುಷರ ದಾರುಣ ಅಂತ್ಯವನ್ನು ಗಮನಿಸಿದರೆ, ಇವೆಲ್ಲಾ ಕ್ಷುಲ್ಲಕ ಎನಿಸಬಹುದು. ಪ್ರಾಣ ತೆಗೆಯುವ ಭಯೋತ್ಪಾದಕನಿಗೆ ಇಂಥದ್ದೇ ಕಾರಣ, ಪ್ರೇರಣೆ ಬೇಕಿಲ್ಲ! ಜತೆಗೆ, ಆಧುನಿಕ ಬಂದೂಕು ಹಿಡಿದು, ಅಮಾಯಕ ಪ್ರವಾಸಿಗರ ಮೇಲೆ ಗುಂಡು ಹಾರಿಸುವ ಮನಸ್ಥಿತಿಯನ್ನು ‘ಸಹಜ ಮನಸ್ಥಿತಿ’ ಎನ್ನಲೂ ಆಗದು. ಸೈನಿಕರನ್ನು ಎದುರಿಸುವಾಗ ಸಿಡಿಸುವ ಬಂದೂಕಿನ ಗುಂಡುಗಳ ವಿಚಾರ ಬೇರೆ, ಪ್ರವಾಸಿಗರನ್ನು ಗುಂಡಿಟ್ಟು ಕೊಲ್ಲುವ ವಿಚಾರವೇ ಬೇರೆ.

ಭಾರತದ ಮೇಲೆ ನಡೆಸುತ್ತಿರುವ ಯುದ್ಧದ ಭಾಗವಾಗಿ, ತಾನು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಕೊಂದೆ ಎಂದು ಭಯೋತ್ಪಾದಕರು ಹೇಳಿಕೊಳ್ಳಲೂಬಹುದು- ಹಮಾಸ್ ಭಯೋತ್ಪಾದಕರು ಇಸ್ರೇಲ್‌ನಲ್ಲಿ ಜನಸಾಮಾನ್ಯರನ್ನು ಕೊಂದಂತೆ. ಇಲ್ಲಿ ಇನ್ನೊಂದು ಆಯಾಮವಿದೆ- ಈಚಿನ ಒಂದೆರಡು ದಶಕಗಳಲ್ಲಿ ಇದು ಸ್ಪಷ್ಟವಾಗಿದೆ, ಋಜುವಾತುಗೊಂಡಿದೆ.

ಅದೇನೆಂದರೆ, ಭಯೋತ್ಪಾದನೆ ನಡೆಸಲು, ಜನಸಾಮಾನ್ಯರ ಮೇಲೋ, ಪೊಲೀಸರ ಮೇಲೋ ಗುಂಡು ಹಾರಿಸಲು ಅಗತ್ಯವಿರುವ ಆಧುನಿಕ ಶಸ್ತ್ರಗಳನ್ನು ಪಡೆಯಲು ಸಾಕಷ್ಟು ಹಣ ಬೇಕು ಮತ್ತು ಕಾಶ್ಮೀರದ ಭಯೋತ್ಪಾದಕರಿಗೆ ಅಂಥ ಸಂಪನ್ಮೂಲಗಳನ್ನು ಒದಗಿಸುತ್ತಿರುವುದು ನಮ್ಮ ನೆರೆದೇಶ ಎಂದು ಈಗ ಋಜುವಾತಾಗಿ ಹೋಗಿದೆ.

2008ರಲ್ಲಿ ಮುಂಬಯಿ ನಗರವನ್ನು ಪ್ರವೇಶಿಸಿ, ಸುಮಾರು 166 ಜನಸಾಮಾನ್ಯರನ್ನು ಗುಂಡಿಟ್ಟು ಸಾಯಿಸಿದ ಪ್ರಕರಣದಲ್ಲಿ ಈ ವಿಚಾರ ಜಗಜ್ಜಾಹೀರಾಗಿದೆ. ಕಸಬ್ ಎಂಬ ಭಯೋತ್ಪಾದಕನು ತನ್ನ ವಿಳಾಸವನ್ನು ನೀಡಿದ್ದರಿಂದ, ಅದು ಇನ್ನಷ್ಟು ಸ್ಪಷ್ಟವಾಗಿ ಹೋಯಿತು. ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಸಾಯಿಸಿದ ಘಟನೆಯೂ, ನೆರೆ ದೇಶದ ಭಯೋತ್ಪಾದಕ ನೀತಿಯಿಂದಲೇ ಪ್ರೇರೇಪಿತ ಎಂದು ಸರಕಾರ ಹೇಳಿದೆ.

ಕಾಶ್ಮೀರದ ಸ್ಥಳೀಯ ಯುವಕರೇ ಬಂದೂಕು ಚಲಾಯಿಸಿದ್ದರೂ, ಇದು ನೆರೆದೇಶದ ಬೆಂಬಲ ಮತ್ತು ಕಾರ್ಯಸೂಚಿಯಿಂದ ನಡೆಯುತ್ತಿದೆ ಎಂಬುದು ಬಹುಮಟ್ಟಿಗೆ ಸ್ಪಷ್ಟ. ಹಾಗಿದ್ದಾಗ, ಇಂಥ ಭಯಾನಕ ಹತ್ಯಾಕಾಂಡಗಳು ಮುಂದೆ ನಡೆಯಬಾರದು ಎಂದು ಖಚಿತಪಡಿಸಿಕೊಳ್ಳಲು, ಬಹು ಆಯಾಮದ ಕ್ರಮವೇ ಅಗತ್ಯ. ಭಯೋತ್ಪಾದನೆಯನ್ನು ಬುಡದಲ್ಲೇ ಚಿವುಟಿ ಹಾಕುವಂಥ ಕೆಲಸ ಆದರೆ ಮಾತ್ರ, ಭವಿಷ್ಯದ ಕಾಶ್ಮೀರ ಸುರಕ್ಷಿತವಾಗಿರಬಲ್ಲದು.