ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ek Din Movie: ʻದೇಶದಲ್ಲೇ ಅತ್ಯುತ್ತಮ ನಟಿʼ; ಸಾಯಿ ಪಲ್ಲವಿ ಅಭಿನಯ ಕಂಡು ಭಾವುಕರಾಗಿ ಕಣ್ಣೀರಿಟ್ಟ ಆಮಿರ್ ಖಾನ್

ನಟಿ ಸಾಯಿ ಪಲ್ಲವಿ ಈಗ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಆಮಿರ್ ಖಾನ್ ಪುತ್ರ ಜುನೈದ್ ಖಾನ್ ನಾಯಕನಾಗಿ ನಟಿಸಿರುವ ʻಏಕ್ ದಿನ್ʼ ಚಿತ್ರದ ಮೂಲಕ ಸಾಯಿ ಪಲ್ಲವಿ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಕೆಲವು ದೃಶ್ಯಗಳನ್ನು ಪ್ರದರ್ಶಿಸಲಾಯಿತು. ಇದನ್ನು ಕಂಡು ಸ್ವತಃ ಆಮಿರ್ ಖಾನ್ ಕಣ್ಣೀರಿಟ್ಟಿದ್ದು, ಸಾಯಿ ಪಲ್ಲವಿ ಅವರನ್ನು ಭಾರತದ ಶ್ರೇಷ್ಠ ನಟಿ ಎಂದು ಕೊಂಡಾಡಿದ್ದಾರೆ.

Ek Din Movie: ಸಾಯಿ ಪಲ್ಲವಿ ಅಭಿನಯ ಕಂಡು ಕಣ್ಣೀರಿಟ್ಟ ಆಮಿರ್ ಖಾನ್

-

Avinash GR
Avinash GR Apr 27, 2026 4:55 PM

ಪ್ರತಿಭಾನ್ವಿತ ನಟಿ ಸಾಯಿ ಪಲ್ಲವಿ ಅವರು ಏಕ್‌ ದಿನ್‌ ಸಿನಿಮಾದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಇದು ಅವರ ಮೊದಲ ಹಿಂದಿ ಸಿನಿಮಾ. ಆಮಿರ್‌ ಖಾನ್‌ ನಿರ್ಮಾಣದ ಈ ಸಿನಿಮಾದಲ್ಲಿ ಅವರ ಪುತ್ರ ಜುನೈದ್‌ ಖಾನ್‌ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಮೇ 1ರಂದು ತೆರೆಗೆ ಬರಲಿರುವ ಈ ಸಿನಿಮಾವನ್ನು ಸುನಿಲ್‌ ಪಾಂಡೆ ನಿರ್ದೇಶನ ಮಾಡಿದ್ದಾರೆ. ಸದ್ಯ ಈ ಚಿತ್ರದ ಕೆಲ ದೃಶ್ಯಗಳನ್ನು ಮುಂಬೈನಲ್ಲಿ ಈಚೆಗೆ ಪ್ರದರ್ಶಿಸಿದ್ದು, ಅದನ್ನು ಕಂಡು ಆಮಿರ್‌ ಖಾನ್‌ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಆಮಿರ್‌ ಖಾನ್‌ ಎಮೋಷನಲ್‌

ಹೌದು, ಮುಂಬೈನ ಎಸ್‌ಎನ್‌ಡಿಟಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ಏಕ್ ದಿನ್ ಕಿ ಮೆಹಫಿಲ್’ ಎಂಬ ಸಂಗೀತ ಕಾರ್ಯಕ್ರಮದಲ್ಲಿ ಏಕ್‌ ದಿನ್‌ ಸಿನಿಮಾದ ಕೆಲವು ದೃಶ್ಯಗಳನ್ನು ಪ್ರದರ್ಶಿಸಲಾಯಿತು. ಅದನ್ನು ನೋಡಿ ಆಮಿರ್ ಖಾನ್ ಭಾವುಕರಾದರು. ಪುತ್ರ ಜುನೈದ್‌ ಖಾನ್ ಮತ್ತು ಸಾಯಿ ಪಲ್ಲವಿ ನಟನೆಯನ್ನು ಕಂಡು ಅವರು ಕಣ್ಣೀರು ಹಾಕಿದರು. ಆಮಿರ್ ಕಣ್ಣೀರು ಒರೆಸಿಕೊಳ್ಳುತ್ತಿದ್ದಾಗ ಪಕ್ಕದಲ್ಲೇ ಇದ್ದ ಸಾಯಿ ಪಲ್ಲವಿ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಮಿರ್ ಖಾನ್ ಅವರಂತಹ ದೊಡ್ಡ ನಟ ಸಿನಿಮಾ ನೋಡಿ ಅತ್ತಿದ್ದಾರೆ ಎಂದರೆ, ಚಿತ್ರದಲ್ಲಿ ಎಮೋಷನಲ್ ಕಂಟೆಂಟ್ ಯಾವ ಮಟ್ಟದಲ್ಲಿದರಬಹುದು ಎಂದು ಸಿನಿಪ್ರಿಯರು ಚರ್ಚೆ ಮಾಡುತ್ತಿದ್ದಾರೆ.

ಎಂ. ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌ನಲ್ಲಿ ರುಕ್ಮಿಣಿ ವಸಂತ್‌ ನಟಿಸ್ತಾರಾ? ಸಾಯಿ ಪಲ್ಲವಿಗೆ ಕೋಕ್‌ ನೀಡಿತೇ ಚಿತ್ರತಂಡ?

ಸಾಯಿ ಪಲ್ಲವಿ ದೇಶದಲ್ಲೇ ಅತ್ಯುತ್ತಮ ನಟಿ

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಆಮಿರ್ ಖಾನ್, ಪುತ್ರನಿಗಿಂತ ಸಾಯಿ ಪಲ್ಲವಿ ಅವರ ಬಗ್ಗೆಯೇ ಪ್ರಶಂಸೆಯ ಮಳೆ ಸುರಿಸಿದ್ದಾರೆ. "ಪ್ರಸ್ತುತ ನಮ್ಮ ದೇಶದಲ್ಲೇ ಸಾಯಿ ಪಲ್ಲವಿ ಅತ್ಯುತ್ತಮ ನಟಿ" ಎಂದು ಅವರು ಕೊಂಡಾಡಿದ್ದಾರೆ. "ಸಾಯಿ ಪಲ್ಲವಿ ಅವರ ಪ್ರತಿಭೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಈ ಚಿತ್ರಕ್ಕಾಗಿ ನಿರ್ದೇಶಕರು ಬಹಳ ಶ್ರಮಪಟ್ಟಿದ್ದಾರೆ. ಸಿನಿಮಾ ಗೆಲ್ಲುತ್ತದೋ ಇಲ್ಲವೋ ಎಂಬುದು ಯಾರಿಗೂ ಗೊತ್ತಿಲ್ಲ, ಆದರೆ ನಾವು ಕಥೆಗೆ ಜೀವ ತುಂಬಿದ್ದೇವೆಯೇ ಇಲ್ಲವೇ ಎಂಬುದು ನನಗೆ ಮುಖ್ಯ. ನನ್ನ ಪ್ರಕಾರ ಯಶಸ್ಸಿಗೆ ಅದೇ ಮೊದಲ ಮಾನದಂಡ. ಕಲೆಕ್ಷನ್ ಮುಖ್ಯವೇ ಆದರೂ, ನನಗೆ ಇಷ್ಟವಾಗದ ಸಿನಿಮಾ ಚೆನ್ನಾಗಿ ಓಡಿದರೆ ಆ ಯಶಸ್ಸಿನಿಂದ ನನಗೆ ಸಂತೋಷ ಸಿಗುವುದಿಲ್ಲ" ಎಂದು ಆಮಿರ್ ಹೇಳಿಕೊಂಡಿದ್ದಾರೆ.

ಆಮಿರ್‌ ಖಾನ್‌ ಕಣ್ಣೀರಿಟ್ಟ ವಿಡಿಯೋ ವೈರಲ್



ನನಗೂ ಅಳು ಬಂದಿತ್ತು- ಸಾಯಿ ಪಲ್ಲವಿ

ನಂತರ ಮಾತನಾಡಿರುವ ಸಾಯಿ ಪಲ್ಲವಿ, "ಹಿಂದಿ ಪ್ರೇಕ್ಷಕರು ನನ್ನನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಆತಂಕವಿದೆ. ಇದು ಬಾಲಿವುಡ್‌ನಲ್ಲಿ ನನ್ನ ಮೊದಲ ಸಿನಿಮಾ. ಹಿಂದಿ ಮಾತನಾಡಲು ಪ್ರಯತ್ನಿಸುತ್ತಿದ್ದೇನೆ, ತಪ್ಪಿದ್ದರೆ ಕ್ಷಮಿಸಿ. ಜುನೈದ್ ಖಾನ್ ಒಬ್ಬ ಉತ್ತಮ ಸಹನಟ. ನಾನು ಎಷ್ಟು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದೇನೋ ಗೊತ್ತಿಲ್ಲ, ಆದರೆ ಚಿತ್ರರಂಗದ ಶ್ರೇಷ್ಠ ಪ್ರತಿಭೆಗಳೊಂದಿಗೆ ಕೆಲಸ ಮಾಡಿದ್ದೇನೆ ಎಂಬ ಹೆಮ್ಮೆ ನನಗಿದೆ. ಸಿನಿಮಾ ನೋಡಿ ಆಮಿರ್ ಖಾನ್ ಭಾವುಕರಾದರು, ಅಷ್ಟು ಜನರ ಮುಂದೆ ಭಾವನೆಗಳನ್ನು ವ್ಯಕ್ತಪಡಿಸಲು ಧೈರ್ಯ ಬೇಕು. ನಾನು ಅಷ್ಟು ಸುಲಭವಾಗಿ ಎಲ್ಲರ ಮುಂದೆ ಅಳಲಾರೆ. ಸಿನಿಮಾ ನೋಡುವಾಗ ಲೈಟ್‌ಗಳು ಸ್ವಲ್ಪ ಹೊತ್ತು ಆಫ್ ಆಗಿರಬೇಕಿತ್ತು ಅಂತ ಅನ್ನಿಸುತ್ತಿತ್ತು. ಏಕೆಂದರೆ ನನಗೂ ಕಣ್ಣೀರು ಬಂದಿತ್ತು, ಆದರೆ ನಾನು ಕಣ್ಣೀರನ್ನು ನಿಯಂತ್ರಿಸಿಕೊಂಡೆ" ಎಂದಿದ್ದಾರೆ.