Aamir Khan: ಮೇಘಾಲಯ ಹನಿಮೂನ್ ಹತ್ಯೆ ಆಧಾರಿತ ಚಿತ್ರಕ್ಕೆ ಬಂಡವಾಳ ಹೂಡ್ತಾರಾ ಆಮೀರ್ ಖಾನ್? ಈ ಬಗ್ಗೆ ಅವರು ನೀಡಿದ ಸ್ಪಷ್ಟನೆ ಏನು?
ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ನಟನೆಯ ಜತೆಗೆ ಚಿತ್ರ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ದೇಶವನ್ನೇ ಬೆಚ್ಚಿ ಬೀಳಿಸಿದ ಮೇಘಾಲಯ ಹನಿಮೂನ್ ಹತ್ಯೆ ಪ್ರಕರಣವನ್ನು ಆಧರಿಸಿ ತಯಾರಾಗುತ್ತಿರುವ ಸಿನಿಮಾವನ್ನು ಅವರು ನಿರ್ಮಿಸಲಿದ್ದಾರೆ ಎನ್ನುವ ವದಂತಿ ದಟ್ಟವಾಗಿ ಹಬ್ಬಿದೆ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದು, ಸುದ್ದಿಯನ್ನು ನಿರಾಕರಿಸಿದ್ದಾರೆ.

ಆಮೀರ್ ಖಾನ್.

ಮುಂಬೈ: ಸತತ ಸೋಲುಗಳ ಬಳಿಕ ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ (Aamir Khan) ಕೊನೆಗೂ ಗೆಲುವಿನ ನಗೆ ಬೀರಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಅವರ ʼಸಿತಾರೆ ಝಮೀನ್ ಪರ್ʼ (Sitaare Zameen Par) ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಿದ್ದು, 250 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿದೆ. ಇದರ ಯಶಸ್ಸಿನ ಬೆನ್ನಲ್ಲೇ ಆಮೀರ್ ಖಾನ್ ಮೇಘಾಲಯ ಹನಿಮೂನ್ ಹತ್ಯೆ (Meghalaya honeymoon murder case) ಆಧರಿಸಿದ ಸಿನಿಮಾವನ್ನು ನಿರ್ಮಿಸಲಿದ್ದಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದ್ದು, ಈ ಬಗ್ಗೆ ಇದೀಗ ಅವರೇ ಸ್ಪಷ್ಟನೆ ನೀಡಿದ್ದಾರೆ.
ನಟನೆಯ ಜತೆಗೆ ನಿರ್ಮಾಪಕರಾಗಿಯೂ ಆಮೀರ್ ಖಾನ್ ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಅವರು ಮೇಘಾಲಯ ಹನಿಮೂನ್ ಹತ್ಯೆ ಆಧಾರಿತ ಕಥೆಗೆ ಹಣ ಹೂಡಲು ಮುಂದಾಗಿದ್ದು, ವಿವರ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Aamir Khan: ತೆರೆ ಮೇಲೆ ಬರಲಿದೆ ಮೇಘಾಲಯ ಮರ್ಡರ್ ಕೇಸ್; ಸೋನಂ- ರಾಜಾ ಸ್ಟೋರಿ ಮಾಡ್ತಾರಾ ಆಮಿರ್ ಖಾನ್?
ವದಂತಿ ನಿರಾಕರಿಸಿದ ಆಮೀರ್ ಖಾನ್
ಬಾಲಿವುಡ್ ಹಂಗಾಮ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಈ ವರದಿಯಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ. ʼʼಮೇಘಾಲಯ ಹನಿಮೂನ್ ಹತ್ಯೆ ಬಗ್ಗೆ ತಯಾರಾಗಲಿರುವ ಚಿತ್ರಕ್ಕೆ ಹಣ ಹೂಡಿಕೆ ಮಾಡುತ್ತಿದ್ದೇನೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾದದ್ದು. ಇದೊಂದು ಸುಳ್ಳು ಸುದ್ದಿ. ಈ ಬಗ್ಗೆ ವದಂತಿ ಹೇಗೆ ಹಬ್ಬಿತು ಎನ್ನುವುದು ನನಗೆ ತಿಳಿದಿಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ.
ʼʼಮೇಘಾಲಯ ಹತ್ಯೆಯ ಬಗ್ಗೆ ಆಮೀರ್ ಖಾನ್ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ತಮ್ಮ ಅತ್ಮೀಯರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಈ ಘಟನೆಯನ್ನು ಆಧರಿಸಿ ಅವರು ಚಿತ್ರ ನಿರ್ಮಾಣ ಮಾಡುವ ಸಾಧ್ಯತೆ ಇದೆʼʼ ಎಂದು ಇತ್ತೀಚೆಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿತ್ತು. ಮೇಘಾಲಯಕ್ಕೆ ಹನಿಮೂನ್‌ಗೆ ತೆರಳಿದ ವೇಳೆ ಮಧ್ಯ ಪ್ರದೇಶದ ಸೋನಮ್ ತನ್ನ ಪತಿ ರಾಜಾ ರಘುವಂಶಿಯನ್ನು ಕೊಲೆ ಮಾಡಿದ್ದಳು. ಈ ಸುದ್ದಿ ಬೆಳಕಿಗೆ ಬಂದ ಬೆನ್ನಲ್ಲೇ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಸೋನಮ್ ಮದುವೆಗೆ ಮುನ್ನವೇ ರಾಜ್ ಕುಶ್ವಾಹ ಎಂಬಾತನ ಜತೆ ಪ್ರೀತಿಯಲ್ಲಿ ಬಿದ್ದಿದ್ದಳು. ಇದೇ ಕಾರಣಕ್ಕೆ ಹನಿಮೂನ್ ವೇಳೆ ಸುಪಾರಿ ನೀಡಿ ಪತಿಯನ್ನು ಕೊಲೆ ಮಾಡಿದ್ದಳು. ಈ ಘಟನೆಯನ್ನು ಆಧರಿಸಿ ಮರ್ಡರ್ ಮಿಸ್ಟ್ರಿ ತಯಾರಾಗಲಿದೆ ಎನ್ನಲಾಗಿದೆ.
ಆಮೀರ್ ಖಾನ್ ಸದ್ಯದ ಪ್ರಾಜೆಕ್ಟ್
ಸದ್ಯ ಆಮೀರ್ ಖಾನ್ ಕಾಲಿವುಡ್‌ನ ʼಕೂಲಿʼ ಚಿತ್ರದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದೆ. ರಜನಿಕಾಂತ್ ಅಭಿನಯದ ಈ ಸಿನಿಮಾ ಮೂಲಕ ಅವರು ಮೊದಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಬಹುತಾರಾಗಣ ಹೊಂದಿರುವ ಈ ಚಿತ್ರವನ್ನು ಲೋಕೇಶ್ ಕನಗರಾಜ್ ನಿರ್ದೇಶಿಸಿದ್ದು, ಆಗಸ್ಟ್ 14ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಕನ್ನಡ ರಿಯಲ್ ಸ್ಟಾರ್ ಉಪೇಂದ್ರ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.