Next Level Movie: ಉಪೇಂದ್ರ ಅಭಿನಯದ ʼನೆಕ್ಸ್ಟ್ ಲೆವೆಲ್ʼ ಚಿತ್ರ ಘೋಷಣೆ; ಅರವಿಂದ್ ಕೌಶಿಕ್ ಆ್ಯಕ್ಷನ್ ಕಟ್
Upendra: ಸ್ಯಾಂಡಲ್‌ವುಡ್‌ನ ಬುದ್ಧಿವಂತ ನಿರ್ದೇಶಕ ಉಪೇಂದ್ರ ಸದ್ಯ ಕಾಲಿವುಡ್‌ನ ʼಕೂಲಿʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್ ನಟನೆಯ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಇದೀಗ ಉಪೇಂದ್ರ ಅವರ ಮತ್ತೊಂದು ಚಿತ್ರ ಘೋಷಣೆಯಾಗಿದೆ. ಅರವಿಂದ್ ಕೌಶಿಕ್ ನಿರ್ದೇಶನದ ಈ ಕನ್ನಡದ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.


ಬೆಂಗಳೂರು: ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ (Upendra) ಸ್ಯಾಂಡಲ್‌ವುಡ್ ಜತೆಗೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಇದೀಗ ʼನೆಕ್ಸ್ಟ್ ಲೆವೆಲ್ʼ (Next Level) ಚಿತ್ರ ಒಪ್ಪಿಕೊಂಡಿದ್ದಾರೆ. ಹೌದು, ಉಪೇಂದ್ರ ಅವರ ಹೊಸ ಕನ್ನಡ ಸಿನಿಮಾ ಘೋಷಣೆಯಾಗಿದೆ. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಅರವಿಂದ್ ಕೌಶಿಕ್ (Aravind Kaushik) ನಿರ್ದೇಶನದಲ್ಲಿ ತರುಣ್ ಶಿವಪ್ಪ ನಿರ್ಮಾಣ ಮಾಡುತ್ತಿದ್ದಾರೆ.
ಉಪೇಂದ್ರ ಅವರ ಸಿನಿಮಾಗಳು ಅಂದರೆ ನೆಕ್ಸ್ಟ್ ಲೆವೆಲ್‌ನಲ್ಲೇ ಇರುತ್ತದೆ. ಈಗ ʼನೆಕ್ಸ್ಟ್ ಲೆವೆಲ್ʼ ಸಿನಿಮಾವನ್ನು ಮತ್ತೊಂದು ಲೆವೆಲ್‌ನಲ್ಲಿ ತಯಾರಿಸಲು ಚಿತ್ರತಂಡ ಸಜ್ಜಾಗಿದೆ. ನಿರ್ಮಾಪಕ ತರುಣ್ ಶಿವಪ್ಪ ಅವರ ತರುಣ್ ಸ್ಟುಡಿಯೋಸ್ ಬ್ಯಾನರ್‌ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಈ ಸಂಸ್ಥೆಯಡಿ ತಯಾರಾಗುತ್ತಿರುವ ಚೊಚ್ಚಲ ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ.
ತರುಣ್ ಸ್ಟುಡಿಯೋಸ್ ಬ್ಯಾನರ್‌ನ 6ನೇ ಚಿತ್ರ
ʼನೆಕ್ಸ್ಟ್ ಲೆವೆಲ್ʼ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ಮಾಪಕ ತರುಣ್ ಶಿವಪ್ಪ, "ತರುಣ್ ಸ್ಟುಡಿಯೋಸ್ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ 6ನೇ ಚಿತ್ರವಿದು. ಬಾಲಿವುಡ್, ತೆಲುಗು, ತಮಿಳು ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಉಪೇಂದ್ರ ಅವರ 'ಎ', 'ಉಪೇಂದ್ರ' ಸ್ಟೈಲ್‌ನಲ್ಲಿ 'ನೆಕ್ಸ್ಟ್ ಲೆವೆಲ್' ಸಿನಿಮಾ ಇರಲಿದೆ. ಸದ್ಯ ಪ್ರೀ ಪ್ರೊಡಕ್ಷನ್ ವರ್ಕ್‌ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ" ಎಂದು ತಿಳಿಸಿದ್ದಾರೆ.
'ರೋಸ್', 'ಮಾಸ್ ಲೀಡರ್', 'ವಿಕ್ಟರಿ-2', 'ಖಾಕಿ', 'ಛೂ ಮಂತರ್' ಸಿನಿಮಾಗಳನ್ನು ತರುಣ್ ಶಿವಪ್ಪ ನಿರ್ಮಾಣ ಮಾಡಿದ್ದಾರೆ. ಅರವಿಂದ್ ಕೌಶಿಕ್ ಈ ಹಿಂದೆ 'ನಮ್ ಏರಿಯಾಲ್ ಒಂದಿನ', 'ತುಗ್ಲಕ್', 'ಹುಲಿರಾಯ' ಹಾಗೂ 'ಶಾರ್ದೂಲʼ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಸಿನಿಮಾಗಳನ್ನು ಕೊಟ್ಟಿರುವ ಬುದ್ಧಿವಂತ ನಿರ್ದೇಶಕ ಉಪೇಂದ್ರ ಜತೆ ಅರವಿಂದ್ ಕೌಶಿಕ್ ಹಾಗೂ ತರುಣ್ ಶಿವಪ್ಪ ಕೈ ಜೋಡಿಸಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.
ಈ ಸುದ್ದಿಯನ್ನೂ ಓದಿ: Aamir Khan: ಉಪೇಂದ್ರ ಸಿನಿಮಾದ ಟ್ರೇಲರ್ ನೋಡಿ ʼನಾನು ಉಪೇಂದ್ರ ಅಭಿಮಾನಿʼ ಎಂದ ಆಮೀರ್ ಖಾನ್!
ರಜನಿಕಾಂತ್ ಚಿತ್ರದಲ್ಲಿ ಉಪೇಂದ್ರ
ಸದ್ಯ ಉಪೇಂದ್ರ ಕಾಲಿವುಡ್ ಚಿತ್ರ ʼಕೂಲಿʼಯಲ್ಲಿ ಅಭಿನಯಿಸುತ್ತಿದ್ದಾರೆ. ರಜನಿಕಾಂತ್ ನಟನೆಯ ಈ ಬಹುನಿರೀಕ್ಷಿತ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾ ಬಹುತಾರಾಗಣ ಮೂಲಕವೇ ಗಮನ ಸೆಳೆದಿದೆ. 350–400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಆಗಸ್ಟ್ 14ರಂದು ತೆರೆ ಕಾಣಲಿದೆ. ಉಪೇಂದ್ರ ಜತೆಗೆ ನಾಗಾರ್ಜುನ, ಸೌಬಿನ್ ಶಬಿರ್, ಸತ್ಯರಾಜ್, ಶ್ರುತಿ ಹಾಸನ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷ ಎಂದರೆ ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದರ ಜತೆಗೆ ಕನ್ನಡದ ʼಬುದ್ಧಿವಂತ 2ʼ, ʼತ್ರಿಶೂಲಂʼ, ʼ45ʼ, ನವನೀತ್ ನಿರ್ದೇಶನದ ಮುಂದಿನ ಚಿತ್ರಗಳಲ್ಲಿಯೂ ಉಪೇಂದ್ರ ಅಭಿನಯಿಸುತ್ತಿದ್ದಾರೆ. ಕಳೆದ ವರ್ಷ ತೆರೆಕಂಡಿದ್ದ ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ ʼಯುಐʼ ಸಿನಿಮಾ ಗಮನ ಸೆಳೆದಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ. ಹೀಗಾಗಿ ಅವರು ಈ ಬಾರಿಯಾದರೂ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.