Govardhan Asrani: ಬಾಲಿವುಡ್ ಹಿರಿಯ ಹಾಸ್ಯ ನಟ ಅಸ್ರಾನಿ ಇನ್ನಿಲ್ಲ
ಬಾಲಿವುಡ್ ಹಿರಿಯ ನಟ ಗೋವರ್ಧನ್ ಆಸ್ರಾನಿ ಇಂದು ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಐದು ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆಸ್ರಾನಿ ಜನವರಿ 1, 1940 ರಂದು ಜೈಪುರದಲ್ಲಿ ಮಧ್ಯಮ ವರ್ಗದ ಸಿಂಧಿ ಕುಟುಂಬದಲ್ಲಿ ಜನಿಸಿದರು.

-

ಮುಂಬೈ: ಬಾಲಿವುಡ್ ಹಿರಿಯ ನಟ ಗೋವರ್ಧನ್ ಆಸ್ರಾನಿ (84) (Govardhan Asrani) ಇಂದು ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಐದು ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆಸ್ರಾನಿ ಜನವರಿ 1, 1940 ರಂದು ಜೈಪುರದಲ್ಲಿ ಮಧ್ಯಮ ವರ್ಗದ ಸಿಂಧಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕಾರ್ಪೆಟ್ ಅಂಗಡಿ ನಡೆಸುತ್ತಿದ್ದರು, ಆದರೆ ಆಸ್ರಾನಿ ಕುಟುಂಬ ವ್ಯವಹಾರದಲ್ಲಿ ಆಸಕ್ತಿ ತೋರಿಸಲಿಲ್ಲ. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ ಪೂರ್ಣಗೊಳಿಸಿದರು ಮತ್ತು ನಂತರ ಜೈಪುರದ ರಾಜಸ್ಥಾನ ಕಾಲೇಜಿನಿಂದ ಪದವಿ ಪಡೆದರು.
ಅವರು ಜೈಪುರದ ಆಲ್ ಇಂಡಿಯಾ ರೇಡಿಯೊದಲ್ಲಿ ಧ್ವನಿ ಕಲಾವಿದರಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು. ಅವರು 1967 ರಲ್ಲಿ 'ಹರೇ ಕಾಂಚ್ ಕಿ ಚೂಡಿಯಾನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು, ನಟ ಬಿಸ್ವಜೀತ್ ಅವರ ಸ್ನೇಹಿತನ ಪಾತ್ರದಲ್ಲಿ ನಟಿಸಿದರು. ಈ ಸಮಯದಲ್ಲಿ, ಅವರು ಹಲವಾರು ಗುಜರಾತಿ ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದರು. ಆಸ್ರಾನಿ ನಿರ್ವಹಿಸಿದ ಅತ್ಯಂತ ಸ್ಮರಣೀಯ ಪಾತ್ರಗಳಲ್ಲಿ ಶೋಲೆ ಚಿತ್ರದಲ್ಲಿ ಜೈಲರ್ ಪಾತ್ರವೂ ಒಂದು.
ಈ ಸುದ್ದಿಯನ್ನೂ ಓದಿ: Raila Odinga: ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಕೇರಳದಲ್ಲಿ ನಿಧನ
ಹೃಷಿಕೇಶ್ ಮುಖರ್ಜಿ, ಗುಲ್ಜಾರ್ ಮತ್ತು ಬಿ.ಆರ್. ಚೋಪ್ರಾ ಅವರಂತಹ ಖ್ಯಾತ ನಿರ್ದೇಶಕರ ಚಲನಚಿತ್ರಗಳಲ್ಲಿಯೂ ಅವರು ಬಹುಮುಖ ಅಭಿನಯವನ್ನು ನೀಡಿದ್ದಾರೆ. ಅಸ್ರಾನಿ ರಾಜೇಶ್ ಖನ್ನಾ ಅವರ ಆಪ್ತ ಸ್ನೇಹಿತರೂ ಆಗಿದ್ದರು ಮತ್ತು 1972 ರಲ್ಲಿ ಬಾವರ್ಚಿ ಸೇರಿದಂತೆ ಸುಮಾರು 25 ಚಿತ್ರಗಳಲ್ಲಿ ಅವರೊಂದಿಗೆ ನಟಿಸಿದ್ದರು. 2000 ರ ನಂತರ, ಅಸ್ರಾನಿ ಅವರು ಪ್ರಿಯದರ್ಶನ್ ಅವರ ಹಾಸ್ಯ ಚಿತ್ರಗಳಲ್ಲಿ ನಟಿಸಿದ್ದಾರೆ. ಹೇರಾ ಫೇರಿ, ಅಮ್ದಾನಿ ಅಥಾನಿ ಖರ್ಚಾ ರೂಪಾಯಿಯಾ, ಬಾಗ್ಬಾನ್, ಚುಪ್ ಚುಪ್ ಕೆ, ಗರಂ ಮಸಾಲಾ, ಬೋಲ್ ಬಚ್ಚನ್ ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಐದು ದಶಕಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ, ನಟ ಮತ್ತು ನಿರ್ದೇಶಕರಾಗಿ ಆಸ್ರಾನಿ ಅವರ ಕೊಡುಗೆಗಳು ಹಿಂದಿ ಚಿತ್ರರಂಗದಲ್ಲಿ ಪ್ರಮುಖ ಕೊಡುಗೆಯನ್ನು ನೀಡಿದ್ದಾರೆ.