Raila Odinga: ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಕೇರಳದಲ್ಲಿ ನಿಧನ
ಕೇರಳದಲ್ಲಿ ಅ. 15ರಂದು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕಳೆದ ಐದು ದಿನಗಳಿಂದ ಅವರು ಕೂತಟ್ಟುಕುಳಂನಲ್ಲಿರುವ ಶ್ರೀಧರೀಯಂ ಆಯುರ್ವೇದ ಕಣ್ಣಿನ ಆಸ್ಪತ್ರೆ, ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

-

ತಿರುವನಂತಪುರಂ: ಕೀನ್ಯಾದ ಮಾಜಿ ಪ್ರಧಾನಿ (Former Kenyan Prime Minister) ರೈಲಾ ಒಡಿಂಗಾ (Raila Odinga) ಅವರಿಗೆ ಬುಧವಾರ ಬೆಳಗ್ಗೆ ಹೃದಯಾಘಾತವಾಗಿದ್ದು, ಕೇರಳದ (Kerala) ಎರ್ನಾಕುಲಂ (Ernakulam) ಜಿಲ್ಲೆಯ ಕೂತಟ್ಟುಕುಳಂನಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕಳೆದ ಐದು ದಿನಗಳಿಂದ ಅವರು ಕೂತಟ್ಟುಕುಳಂನಲ್ಲಿರುವ (Koothattukulam) ಶ್ರೀಧರೀಯಂ ಆಯುರ್ವೇದ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಬೆಳಗ್ಗೆ ನಡಿಗೆಯ ವೇಳೆ ಸರಿಸುಮಾರು 8 ಗಂಟೆ ಸುಮಾರಿಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಕೂತಟ್ಟುಕುಳಂನಲ್ಲಿರುವ ದೇವಮಾತಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು 9.52ರ ಸುಮಾರಿಗೆ ಮೃತಪಟ್ಟಿರುವುದಾಗಿ ದೃಢಪಡಿಸಲಾಗಿದೆ.
ಒಡಿಂಗಾ 2008ರಿಂದ 2013ರವರೆಗೆ ಕೀನ್ಯಾದ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. 1992ರಿಂದ 2013ರವರೆಗೆ ಲಂಗಾಟಾ ಕ್ಷೇತ್ರದ ಸಂಸತ್ ಸದಸ್ಯರಾಗಿದ್ದರು. ದೀರ್ಘಕಾಲ ಕೀನ್ಯಾದಲ್ಲಿ ವಿರೋಧ ಪಕ್ಷದ ನಾಯಕರೂ ಆಗಿದ್ದರು.
ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ:
Deeply saddened by the passing of my dear friend and former Prime Minister of Kenya, Mr. Raila Odinga. He was a towering statesman and a cherished friend of India. I had the privilege of knowing him closely since my days as Chief Minister of Gujarat and our association continued… pic.twitter.com/Nmya9C3LZi
— Narendra Modi (@narendramodi) October 15, 2025
ಕೂತಟ್ಟುಕುಳಂನಲ್ಲಿರುವ ಶ್ರೀಧರೀಯಂ ಆಯುರ್ವೇದ ಕಣ್ಣಿನ ಆಸ್ಪತ್ರೆ, ಸಂಶೋಧನಾ ಕೇಂದ್ರದಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ರೈಲಾ ಒಡಿಂಗಾ ಸ್ಟ್ರೋಕ್‌ಗೆ ಒಳಗಾದ ಬಳಿಕ ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಬಳಿಕ ಕೇರಳಕ್ಕೆ ಬಂದಿದ್ದರು ಎಂದು ಶ್ರೀಧರೀಯಂ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ರೈಲಾ ಒಡಿಂಗಾ ಅವರೊಂದಿಗೆ ಅವರ ಕಿರಿಯ ಮಗಳು ಮತ್ತು ಅವರ ಖಾಸಗಿ ವೈದ್ಯರು ಕೂಡ ಇದ್ದರು. ಇಲ್ಲಿಗೆ ಬಂದ ಬಳಿಕ ಅವರಲ್ಲಿ ಚೇತರಿಕೆ ಲಕ್ಷಣಗಳು ಕಂಡು ಬಂದಿತ್ತು ಎಂದು ಅವರು ಹೇಳಿದರು.
ರೈಲಾ ಒಡಿಂಗಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎರ್ನಾಕುಲಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಡಿಂಗಾ ಅವರ ನಿಧನದ ಕುರಿತು ಪ್ರತಿಕ್ರಿಯೆ ನೀಡಿರುವ ಅವರ ಹಿರಿಯ ಮಗಳು ರೋಸ್ಮರಿ ಒಡಿಂಗಾ, ʼʼತಂದೆಯವರಿಗೆ 2017ರಲ್ಲಿ ಆಪ್ಟಿಕ್ ನರಕ್ಕೆ ಹಾನಿಯಾಗಿತ್ತು. ಬಳಿಕ ಅವರು ಸಂಪೂರ್ಣ ದೃಷ್ಟಿ ಕಳೆದುಕೊಂಡರು. ಚಿಕಿತ್ಸೆ ಪಡೆಯುವ ಸಲುವಾಗಿ ಕೂತಟ್ಟುಕುಳಂನಲ್ಲಿರುವ ಶ್ರೀಧರೀಯಂ ಆಯುರ್ವೇದ ಕಣ್ಣಿನ ಆಸ್ಪತ್ರೆ, ಸಂಶೋಧನಾ ಕೇಂದ್ರದಲ್ಲಿ ದಾಖಲಾಗಿದ್ದರು. ಇಲ್ಲಿ ಅವರು ಚಿಕಿತ್ಸೆ ಪಡೆದು ಮರಳಿದ್ದರು. ಈ ಬಳಿಕ ಅವರು ಆಸ್ಪತ್ರೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. 2019ರಲ್ಲಿ ಚಿಕಿತ್ಸೆ ಪ್ರಾರಂಭವಾದ ಅನಂತರ ತಮ್ಮ ದೃಷ್ಟಿಯನ್ನು ಮರಳಿ ಪಡೆಯಲು ಸಹಾಯ ಮಾಡಿದ್ದಕ್ಕಾಗಿ ಕೇಂದ್ರದ ವೈದ್ಯರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದರುʼʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Chikkanayakanahalli News: ದೇಗುಲ ಜೀರ್ಣೋದ್ಧಾರಕ್ಕೆ ಅಕ್ರಮ ಮದ್ಯ ಮಾರಾಟದ ಹಕ್ಕು ಹರಾಜು; ಸಮಿತಿ ವಿರುದ್ಧ ಭಕ್ತರ ಆಕ್ರೋಶ
ವಿದೇಶಾಂಗ ಸಚಿವಾಲಯ ಮತ್ತು ನವದೆಹಲಿಯಲ್ಲಿರುವ ಕೀನ್ಯಾ ರಾಯಭಾರ ಕಚೇರಿಯ ಸೂಚನೆಗಳ ಪ್ರಕಾರ ಅವರ ಮೃತದೇಹವನ್ನು ತಾಯ್ನಾಡಿಗೆ ವಿಮಾನದ ಮೂಲಕ ಸಾಗಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.