ʻಪ್ರೇಮದ ಊರಲಿʼ ಚಿತ್ರದ ಗೆಲುವನ್ನು ಸಂಭ್ರಮಿಸಿದ ನಟ ಯಶ್ - ರಾಧಿಕಾ ಪಂಡಿತ್ ದಂಪತಿ; ಚಿತ್ರತಂಡವನ್ನು ಮೀಟ್ ಮಾಡಿದ ʻರಾಕಿ ಭಾಯ್ʼ
Premada Oorali Movie: ರಂಗಾಯಣ ರಘು, ಶ್ರೀರಾಮ್ ನಟನೆಯ ʻಪ್ರೇಮದ ಊರಲಿʼ ಸಿನಿಮಾದ ಯಶಸ್ವಿ ಪಯಣಕ್ಕೆ ಈಗ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಬೆಂಬಲದ ಬಲ ಸಿಕ್ಕಿದೆ. ಬೃಹತ್ ಬಜೆಟ್ ಚಿತ್ರಗಳ ನಡುವೆಯೂ ಕೇವಲ ಕಂಟೆಂಟ್ ನಂಬಿ ಗೆದ್ದು, ಶತಕೋಟಿ ಕ್ಲಬ್ ಕಡೆ ದಾಪುಗಾಲು ಹಾಕುತ್ತಿರುವ ಈ ಚಿತ್ರತಂಡವನ್ನು ಖುದ್ದಾಗಿ ಭೇಟಿಯಾದ ಯಶ್, ಶುಭ ಕೋರಿದ್ದಾರೆ.
-
ರಂಗಾಯಣ ರಘು, ರಮಿಕಾ ಶಿವು, ಶ್ರೀರಾಮ್ ನಟನೆಯ ‘ಪ್ರೇಮದ ಊರಲಿ’ ಚಿತ್ರದ ಬ್ಲಾಕ್ ಬಸ್ಟರ್ ಗೆಲುವಿಗೆ ನಟ ಯಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆಗೂ ಮೀರಿದ ದಾಖಲೆ ಬರೆಯುತ್ತಿರುವ ಚಿತ್ರತಂಡವನ್ನು ಆಹ್ವಾನಿಸಿ, ಖುದ್ದಾಗಿ ಭೇಟಿ ಮಾಡಿದ್ದಾರೆ ಯಶ್ - ರಾಧಿಕಾ ಪಂಡಿತ್ ದಂಪತಿ. ಚಿತ್ರದ ಗೆಲುವಿಗೆ ಬೆನ್ನುತಟ್ಟಿ, ಮುಂದಿನ ಪಯಣಕ್ಕೆ ಶುಭ ಹಾರೈಸಿದ್ದಾರೆ.
ಚಿತ್ರತಂಡಕ್ಕೆ ಸಿಕ್ತು ಹೊಸ ಹುರುಪು
ನಟ ಯಶ್ ಅವರಿಂದ ಸಿಕ್ಕ ಈ ಅಭಿನಂದನೆ ಚಿತ್ರತಂಡಕ್ಕೆ ಹೊಸ ಹುರುಪು ಹಾಗೂ ಸ್ಫೂರ್ತಿ ತುಂಬಿದೆ. ಮನೋಜ್ ಕುಮಾರ್ ನಿರ್ದೇಶನದ ಹಾಗೂ ‘ವೆನಿಲ್ಲಾ ಎಂಟರ್ಟೈನ್ಮೆಂಟ್’ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಭಾವನಾತ್ಮಕ ಕಥಾಹಂದರ ಹಾಗೂ ಕಲಾವಿದರ ಅದ್ಭುತ ಅಭಿನಯವಿದ್ದು, ಕನ್ನಡಿಗರ ಹೃದಯ ಗೆದ್ದಿದೆ. ಈ ಚಿತ್ರವು ಕೇವಲ ಬಾಯಿಮಾತಿನ ಪ್ರಚಾರದ ಬಲದಿಂದಲೇ ಚಿತ್ರಮಂದಿರಗಳತ್ತ ಜನಸಾಗರ ಹರಿದುಬರುವಂತೆ ಮಾಡಿದೆ.
ಯಶ್ಗೆ ಮೆಚ್ಚುಗೆ
ಶ್ರಮವನ್ನು ಗುರುತಿಸಿ ಬೆಂಬಲಿಸುವ ಯಶ್ ಅವರ ಈ ಪ್ರೋತ್ಸಾಹದ ನಡೆಗೆ ಚಿತ್ರತಂಡ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದೆ. ವಿಶೇಷವೆಂದರೆ, ‘ಜೈಲರ್ 2’ ಮತ್ತು ‘ರಣಬಾಲಿ’ಯಂತಹ ಭಾರೀ ಬಜೆಟ್ನ ಬಿಗ್ ರಿಲೀಸ್ಗಳು ಎದುರಾಗಿದ್ದರೂ ‘ಪ್ರೇಮದ ಊರಲಿ’ ಸಿನಿಮಾದ ಅಬ್ಬರ ಕಿಂಚಿತ್ತೂ ತಗ್ಗಿಲ್ಲ. ಘಟಾನುಘಟಿ ಪರಭಾಷಾ ಮತ್ತು ಸ್ವಭಾಷಾ ಚಿತ್ರಗಳ ಪೈಪೋಟಿಯ ನಡುವೆಯೂ ರಾಜ್ಯಾದ್ಯಂತ ಹೌಸ್ಫುಲ್ ಪ್ರದರ್ಶನಗಳನ್ನು ಕಾಣುತ್ತಾ ತನ್ನ ಗಟ್ಟಿ ನೆಲೆಯನ್ನು ಉಳಿಸಿಕೊಂಡಿದೆ.
100 ಕೋಟಿ ರೂ. ಕ್ಲಬ್ನತ್ತ ಪ್ರೇಮದ ಊರಲಿ
ಪ್ರೇಕ್ಷಕರ ಪ್ರೀತಿ ಹಾಗೂ ಗಟ್ಟಿ ಕಂಟೆಂಟ್ ಬಲದಿಂದ ಮುನ್ನುಗ್ಗುತ್ತಿರುವ ಈ ಚಿತ್ರ, ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದ್ದು, ಅತಿ ಶೀಘ್ರದಲ್ಲೇ ₹100 ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಹಾಕಿದೆ.