ನಾಡಹಬ್ಬ ದಸರಾದಲ್ಲಿ ಈ ಬಾರಿ ಇಡೀ ಸ್ಯಾಂಡಲ್‌ವುಡ್ ಭಾಗಿ; 2 ದಿನ ಶೂಟಿಂಗ್ ಬಂದ್, ಅರಮನೆಯಲ್ಲಿ ಕಲಾವಿದರಿಗೆ ವಿಶೇಷ ವ್ಯವಸ್ಥೆ!
Mysuru Dasara Festival: ನಾಡಹಬ್ಬ ದಸರಾ ಸಂಭ್ರಮದಲ್ಲಿ ಈ ಬಾರಿ ಇಡೀ ಕನ್ನಡ ಚಿತ್ರರಂಗವೇ ಒಟ್ಟಾಗಿ ಭಾಗಿಯಾಗಲಿದೆ. ಸರ್ಕಾರದ ವಿಶೇಷ ಆಹ್ವಾನದ ಮೇರೆಗೆ 2 ದಿನಗಳ ಕಾಲ ರಾಜ್ಯಾದ್ಯಂತ ಸಿನಿಮಾ ಚಿತ್ರೀಕರಣ ಸ್ಥಗಿತಗೊಳಿಸಿ, ಕಲಾವಿದರು ಮೈಸೂರಿಗೆ ತೆರಳಲಿದ್ದಾರೆ.
-
ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಈ ಬಾರಿಯ ದಸರಾ ಸಂಭ್ರಮಕ್ಕೆ ಮತ್ತಷ್ಟು ಕಳೆಕಟ್ಟಲು ಇಡೀ ಕನ್ನಡ ಚಿತ್ರರಂಗವೇ ಒಟ್ಟಾಗಿ ಸಾಂಸ್ಕೃತಿಕ ನಗರಿಗೆ ಧಾವಿಸಲು ಸಜ್ಜಾಗಿದೆ. ಸರ್ಕಾರದ ವಿಶೇಷ ಆಹ್ವಾನದ ಮೇರೆಗೆ ಸ್ಯಾಂಡಲ್‌ವುಡ್ ಮೈಸೂರು ದಸರಾದಲ್ಲಿ ಅದ್ಧೂರಿಯಾಗಿ ಪಾಲ್ಗೊಳ್ಳಲಿದ್ದು, ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪೂರ್ವಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆಗಳ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ. ರಾಮಮೂರ್ತಿ, ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು, ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ.ಮ. ಹರೀಶ್, ಉಪಾಧ್ಯಕ್ಷ ಸುಂದರರಾಜ್, ನಿರ್ಮಾಪಕ ಕೆ. ಮಂಜು, ಕಾರ್ಯದರ್ಶಿ ಎ. ಗಣೇಶ್ ಹಾಗೂ ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಎರಡು ದಿನ ಚಿತ್ರೀಕರಣ ಸ್ಥಗಿತ
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ, "ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗದ ಸಮಗ್ರ ಕುಟುಂಬವೇ ದಸರಾ ಮಹೋತ್ಸವದಲ್ಲಿ ಒಂದಾಗಿ ಭಾಗಿಯಾಗುತ್ತಿದೆ. ಇದು ದಸರಾ ಹಬ್ಬಕ್ಕೆ ಹೊಸ ಆಕರ್ಷಣೆ ತರಲಿದೆ. ಚಿತ್ರರಂಗ ನಡೆದು ಬಂದ ಹಾದಿಯನ್ನು ಸಾರ್ವಜನಿಕರಿಗೆ ಪರಿಚಯಿಸಲು ಬೃಹತ್ ಎಲ್‌ಇಡಿ ಪರದೆಗಳಲ್ಲಿ ವಿಶೇಷ ಪ್ರದರ್ಶನ ಆಯೋಜಿಸಲಾಗುವುದು. ಕಲಾವಿದರ ಪ್ರಯಾಣಕ್ಕಾಗಿ ಪ್ರತ್ಯೇಕ ಎರಡು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಈ ಸಂಭ್ರಮದಲ್ಲಿ ಎಲ್ಲರೂ ಭಾಗವಹಿಸಲು ಅನುಕೂಲವಾಗುವಂತೆ ಎರಡು ದಿನಗಳ ಕಾಲ ರಾಜ್ಯಾದ್ಯಂತ ಯಾವುದೇ ಸಿನಿಮಾಗಳ ಚಿತ್ರೀಕರಣ ಇರುವುದಿಲ್ಲ. ಕಾರ್ಯಕ್ರಮದ ಸಮಗ್ರ ನಿರ್ವಹಣಾ ಜವಾಬ್ದಾರಿಯನ್ನು ರಾಕ್‌ಲೈನ್ ವೆಂಕಟೇಶ್ ಅವರಿಗೆ ವಹಿಸಲಾಗಿದ್ದು, ಸಂಪೂರ್ಣ ವ್ಯವಸ್ಥೆಯನ್ನು ವಾಣಿಜ್ಯ ಮಂಡಳಿಯೇ ನೋಡಿಕೊಳ್ಳಲಿದೆ" ಎಂದು ವಿವರಿಸಿದರು.
ಅಂಬಾರಿ ಬಸ್‌ನಲ್ಲಿ ಅರಮನೆ ವೀಕ್ಷಣೆ
ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, "ಇದು ಐತಿಹಾಸಿಕ 416ನೇ ವರ್ಷದ ದಸರಾ ಸಂಭ್ರಮ. ಭಾಗವಹಿಸುವ ಕಲಾವಿದರಿಗೆ ಓಪನ್ ಅಂಬಾರಿ ಬಸ್ ಮೂಲಕ ಅರಮನೆ ಹಾಗೂ ನಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಜಂಬೂಸವಾರಿ ಹಾಗೂ ಕಾರ್ಯಕ್ರಮ ವೀಕ್ಷಿಸಲು ಮೈಸೂರು ಅರಮನೆ ಆವರಣದಲ್ಲಿ 150 ಕಲಾವಿದರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಅರಮನೆಯ ಮುಂಭಾಗದಲ್ಲೂ ಪ್ರತ್ಯೇಕ ಆಸನಗಳಿರುತ್ತವೆ. ಸುಮಾರು 15 ಲಕ್ಷ ಜನರು ಸೇರುವ ನಿರೀಕ್ಷೆಯಿರುವುದರಿಂದ ಕಲಾವಿದರ ಭದ್ರತೆಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ. ಕಳೆದ 45 ವರ್ಷಗಳಿಂದ ನಡೆಯುತ್ತಿದ್ದ ಚಲನಚಿತ್ರೋತ್ಸವ ಈ ಬಾರಿ ಇರುವುದಿಲ್ಲ, ಅದರ ಬದಲಿಗೆ ಅರ್ಹ ಕಲಾವಿದರಿಗೆ ಆರ್ಥಿಕ ನೆರವು ಅಥವಾ ಸಹಾಯಧನ ನೀಡುವಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿದೆ. ಜೊತೆಗೆ ಹಿರಿಯ ನಟ ಅನಂತ್ ನಾಗ್ ಅವರಿಂದ ದಸರಾ ಉದ್ಘಾಟನೆ ಮಾಡಿಸುವ ಬಯಕೆಯಿದ್ದು, ಈ ಕುರಿತು ಸರ್ಕಾರದೊಂದಿಗೆ ಮುಂದಿನ ದಿನಗಳಲ್ಲಿ ಮಾತುಕತೆ ನಡೆಸಲಾಗುವುದು" ಎಂದರು.
Dasara Holidays 2026: ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ; ಈ ಬಾರಿ 19 ದಿನ ದಸರಾ ರಜೆ!
ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಎಂಬ ಮಾತು ಸುಳ್ಳು
ಸಮಾರಂಭದ ಸಿದ್ಧತೆಗಳ ಕುರಿತು ಮಾತನಾಡಿದ ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, "ಮುಖ್ಯಮಂತ್ರಿಗಳು ಖುದ್ದು ಇಡೀ ಚಿತ್ರರಂಗಕ್ಕೆ ಅಧಿಕೃತ ಆಹ್ವಾನ ನೀಡಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಚಿತ್ರರಂಗಕ್ಕೆ ಸರ್ಕಾರ ಇಷ್ಟೊಂದು ದೊಡ್ಡ ಪ್ರಾಮುಖ್ಯತೆ ನೀಡಿದೆ. ಅಧ್ಯಕ್ಷೆ ಜಯಮಾಲಾ ಅವರೇ ಎಲ್ಲಾ ನಟ-ನಟಿಯರು, ನಿರ್ದೇಶಕರು ಮತ್ತು ನಿರ್ಮಾಪಕರಿಗೆ ವೈಯಕ್ತಿಕವಾಗಿ ಕರೆ ಮಾಡಿ ಆಹ್ವಾನಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಒಗ್ಗಟ್ಟಿಲ್ಲ ಎಂಬುದು ಕೇವಲ ವದಂತಿ. ನಾವೆಲ್ಲರೂ ಒಂದೇ ಕುಟುಂಬ. ಹಿರಿಯ-ಕಿರಿಯ ಕಲಾವಿದರ ಸಮಾಗಮ ಈ ಬಾರಿಯ ದಸರಾದಲ್ಲಿ ಸಾಕ್ಷಿಯಾಗಲಿದೆ" ಎಂದು ತಿಳಿಸಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.