Yash: 'ಸಿನಿಮಾ ನೋಡದೇ ಜಡ್ಜ್ ಮಾಡಬೇಡಿ'; 'ಟಾಕ್ಸಿಕ್' ಟೀಸರ್ ವಿವಾದಕ್ಕೆ ಡಾ. ಜಯಮಾಲಾ ಗರಂ
Toxic Movie Controversy: 'ಟಾಕ್ಸಿಕ್' ಟೀಸರ್‌ನಲ್ಲಿ ಕ್ರೈಸ್ತ ದೇವದೂತ ಸಂತ ಮಿಖಯೇಲ್‌ಗೆ ಅಪಮಾನ ಮಾಡಲಾಗಿದೆ ಎಂದು ರಾಷ್ಟ್ರೀಯ ಕ್ರೈಸ್ತ ಒಕ್ಕೂಟ ದೂರು ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ, ಸಿನಿಮಾ ಇನ್ನೂ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕೃತಗೊಂಡಿಲ್ಲ. ಟೀಸರ್ ನೋಡಿ ಸಿನಿಮಾವನ್ನು ಜಡ್ಜ್ ಮಾಡುವುದು ಸರಿಯಲ್ಲ" ಎಂದು ಹೇಳಿದ್ಧಾರೆ.
-
ʻರಾಕಿ ಭಾಯ್ʼ ಯಶ್ ನಟನೆಯ ʻಟಾಕ್ಸಿಕ್ʼ ಸಿನಿಮಾದಲ್ಲಿ ಕ್ರೈಸ್ತರ ದೇವದೂತ ಸಂತ ಮಿಖಯೇಲ್‌ಗೆ ಅಪಮಾನ ಮಾಡಲಾಗಿದೆ, ದೇವದೂತರ ಮುಂದೆ ಅಶ್ಲೀಲವಾಗಿ ಶೂಟಿಂಗ್ ಮಾಡಲಾಗಿದೆ ಎಂದು ರಾಷ್ಟ್ರೀಯ ಕ್ರೈಸ್ತರ ಒಕ್ಕೂಟದ ಮನವಿ ಮಾಡಿದೆ. ಕೆಲ ದಿನಗಳ ಹಿಂದಷ್ಟೇ ಟಾಕ್ಸಿಕ್ ಟೀಮ್ ವಿರುದ್ಧ ಕೆಲ ಸಂಘಟನೆಗಳು ಗರಂ ಆಗಿದ್ದವು.
ಈಗ ಕ್ರೈಸ್ತ ಧರ್ಮಕ್ಕೆ ಅಪಮಾನ ಮಾಡಲಾಗಿದೆ ಎಂದು ಸೆನ್ಸಾರ್ ಬೋರ್ಡ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನ್ಯಾಷನಲ್ ಕ್ರಿಶ್ಚಿಯನ್ ಫೆಡರೇಷನ್ ದೂರು ನೀಡಿದೆ. ಇದೀಗ ಈ ಬಗ್ಗೆ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ ಅವರು ಪ್ರತಿಕ್ರಿಯಿಸಿದ್ದಾರೆ.
ಡಾ. ಜಯಮಾಲಾ ಹೇಳಿದ್ದೇನು?
"ಟಾಕ್ಸಿಕ್ ಸಿನಿಮಾದ ಟೀಸರ್ ಬಗ್ಗೆ ದೂರು ಬಂದಿದೆ. ಆದರೆ ಅದರಲ್ಲಿ ತಪ್ಪೇನಿದೆ ಅನ್ನೋದು ನನಗೆ ತಿಳಿಯುತ್ತಿಲ್ಲ. ಒಂದು ಸಿನಿಮಾಗೆ ಟೀಸರ್ ಮಾಡುವುದು, ಥಿಯೇಟರ್‌ಗೆ ಜನರನ್ನು ಕರೆಸುವುದಕ್ಕೆ. ಸೆನ್ಸಾರ್ ಬೋರ್ಡ್‌ಗೂ ಕಂಪ್ಲೇಂಟ್ ಕೊಟ್ಟಿದ್ದಾರೆ. ಸಿನಿಮಾ ಇನ್ನೂ ಸೆನ್ಸಾರ್ ಆಗಿಲ್ಲ. ಅದಕ್ಕೂ ಮೊದಲೇ ಮಾಧ್ಯಮಗಳಲ್ಲಿ ಮಾತಾಡುವುದು ತಪ್ಪು ಅಂತ ಅನಿಸಲ್ವಾ? ನೂರಾರು ಕೋಟಿ ಹಾಕಿ ನಿರ್ಮಾಪಕರು ಸಿನಿಮಾ ಮಾಡುತ್ತಾರೆ. ಇವತ್ತಿನವರೆಗೂ ಅನ್ಯಮತದ ಬಗ್ಗೆ ಯಾವುದಾದರೂ ವಿವಾದಗಳು ಆಗಿರುವುದನ್ನ ಕೇಳಿದ್ದೀರಾ? ನಾವು ಇನ್ನೊಂದು ಧರ್ಮವನ್ನ ಗೌರವಿಸುವವರು. ಟೀಸರ್ ನೋಡಿ ಸಿನಿಮಾದ ಹಿಂಗೇ ಇದೆ ಎಂದು ಮಾತನಾಡುವುದು ಸರಿಯಲ್ಲ. ಮೊದಲು ಸಿನಿಮಾ ನೋಡಿ" ಎಂದು ಜಯಮಾಲಾ ತಿಳಿಸಿದ್ದಾರೆ.
Toxic Movie: ಟಾಕ್ಸಿಕ್ ಸಿನಿಮಾಗೆ ಮತ್ತೊಂದು ಸಂಕಷ್ಟ, ಸಿಡಿದೆದ್ದ ಕ್ರೈಸ್ತರ ಒಕ್ಕೂಟ
ಫೋಟೋ ನೋಡಿ ಜಡ್ಜ್ ಮಾಡೋಕಾಗಲ್ಲ
"ಬರೀ ಟೀಸರ್ ನೋಡಿಯೇ ಸಿನಿಮಾದಲ್ಲಿ ಹೀಗೆ ಇರುತ್ತದೆ ಎಂದು ಹೇಗೆ ಜಡ್ಜ್ ಮಾಡುತ್ತೀರಿ? ಕಥೆಯಲ್ಲಿ ಏನಿದೆ ಅಂತ ನಿಮಗೆ ಗೊತ್ತಿದೆಯಾ? ಆ ಕಥೆ ಹಿಂದೆ ಏನು ಇದೆ, ಅದು ಏನನ್ನ ಸೂಚಿಸುತ್ತಿದೆ ಅನ್ನೋದನ್ನ ತಿಳಿದುಕೊಳ್ಳದೇ ಮಾತನಾಡಬಾರದು. ನಿರ್ಮಾಪಕರಿಗೆ ಕೇಳಿದಾಗ ಆ ರೀತಿ ಯಾವುದೇ ಅಶ್ಲೀಲ ದೃಶ್ಯ ಇಲ್ಲ ಎಂದಿದ್ದಾರೆ. ಹೀಗಿರುವಾಗ, ಬರೀ ಒಂದು ಫೋಟೋವನ್ನ ಜಡ್ಜ್ ಮಾಡೋಕೆ ಬರೋದಿಲ್ಲ" ಎಂದು ಜಯಮಾಲಾ ಪ್ರತಿಕ್ರಿಯಿಸಿದ್ದಾರೆ.
ಟಾಕ್ಸಿಕ್ ಇನ್ನೂ ಸೆನ್ಸಾರ್ ಆಗಿಲ್ಲ
"ಅಂತಹ ಯಾವುದೇ ದೃಶ್ಯಗಳಿಲ್ಲ ಎಂದು ನಿರ್ಮಾಪಕರ ಹೇಳಿದರು. ಸಿನಿಮಾ ಇನ್ನೂ ಸೆನ್ಸಾರ್ ಆಗಿಲ್ಲದೇ ಇರುವುದರಿಂದ, ಏನಾದರೂ ಸಮಸ್ಯೆ ಇದ್ದರೆ, ಅದರ ಬಗ್ಗೆ ಸೆನ್ಸಾರ್ ಮಂಡಳಿ ಕ್ರಮ ತೆಗೆದುಕೊಳ್ಳುತ್ತಾರೆ. ಇವತ್ತಿನವರೆಗೂ ಜಾತಿ ಸಂಘರ್ಷಗಳು, ಧರ್ಮ ಸಂಘರ್ಷಗಳನ್ನ ನಮ್ಮ ಸಿನಿಮಾಗಳಲ್ಲಿ ನಾವು ತಂದಿಲ್ಲ. ಆ ಥರದ್ದನ್ನು ಮಾಡಬಾರದು ಎಂದು ನಾವು ನಿರ್ಮಾಪಕರುಗಳೇ ಸೆನ್ಸಾರ್ ಹಾಕಿಕೊಳ್ಳುತ್ತೇವೆ. ಆ ರೀತಿ ಏನಾದರೂ ಇದ್ರೆ ನಾವು ನಿಮ್ಮ (ದೂರು ನೀಡಿದವರ) ಜೊತೆ ಇರುತ್ತೇವೆ" ಎಂದು ಜಯಮಾಲಾ ತಿಳಿಸಿದ್ದಾರೆ.