‘ಜೈಲರ್ 2’ ಸಿನಿಮಾ ಸೆಟ್‌ನಲ್ಲಿ ನಟ ರಜನಿಕಾಂತ್ ಎದುರು ಸಿಗರೇಟ್ ಸೇದಲು ಹೆದರಿದ್ದ ನಟಿ ವಿದ್ಯಾ ಬಾಲನ್; ಆಮೇಲೆ ಏನಾಯ್ತು?
Jailer 2 Movie: ಸೂಪರ್‌ಸ್ಟಾರ್ ರಜನಿಕಾಂತ್ ಎದುರು ನಟಿಸುವಾಗ ಬಾಲಿವುಡ್‌ನ ಖ್ಯಾತ ನಟಿ ವಿದ್ಯಾ ಬಾಲನ್ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಪಾತ್ರದ ಸನ್ನಿವೇಶಕ್ಕಾಗಿ ರಜನಿ ಮುಖಕ್ಕೆ ಸಿಗರೇಟ್ ಹೊಗೆ ಊದುವ ವೇಳೆ ಅವರ ಕೈಗಳು ನಡುಗುತ್ತಿದ್ದವು ಎಂದು ನಿರ್ದೇಶಕ ನೆಲ್ಸನ್ ತಿಳಿಸಿದ್ದಾರೆ.
-
ʻಸೂಪರ್‌ಸ್ಟಾರ್ʼ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರದಲ್ಲಿ ಬಾಲಿವುಡ್‌ನ ಖ್ಯಾತ ನಟಿ ವಿದ್ಯಾ ಬಾಲನ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಚಿತ್ರೀಕರಣದ ಮೊದಲ ದಿನವೇ ಅವರು ಎದುರಿಸಿದ ಸವಾಲನ್ನು ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಬಹಿರಂಗಪಡಿಸಿದ್ದಾರೆ. ಚಿತ್ರದಲ್ಲಿ ರಜನಿಕಾಂತ್ ಅವರ ಪಾತ್ರದ ಎದುರು ಸಮಬಲದ ಪೈಪೋಟಿ ನೀಡುವ ಶಕ್ತಿಶಾಲಿ ಪಾತ್ರವನ್ನು ನಿರ್ವಹಿಸಲು ವಿದ್ಯಾ ಬಾಲನ್ ಆರಂಭದಲ್ಲಿ ಹಿಂಜರಿದಿದ್ದರು.
ವಿದ್ಯಾ ಕೈ ನಡುಗುತ್ತಿದ್ದವು
ಏಕೆಂದರೆ, ಮೊದಲ ದಿನದ ಚಿತ್ರೀಕರಣದಲ್ಲೇ ರಜನಿ ಎದುರು ನಿಂತು ಸಿಗರೇಟ್ ಸೇದಿ ಅವರ ಮುಖಕ್ಕೆ ಹೊಗೆ ಬಿಡುವ ದೃಶ್ಯವನ್ನು ಮಾಡಬೇಕಾಗಿ ಬಂದಾಗ ವಿದ್ಯಾ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಭಾರತೀಯ ಚಿತ್ರರಂಗದ ಲೆಜೆಂಡರಿ ನಟನ ಮುಖಕ್ಕೆ ಹೊಗೆ ಬಿಡಬೇಕೆಂಬ ನಿರ್ದೇಶಕರ ಸೂಚನೆ ಕೇಳಿಯೇ ಅವರ ಕೈಗಳು ನಡುಗಲಾರಂಭಿಸಿದ್ದವು.
Jailer 2: ʻಕೆಡಿʼ ಬಳಿಕ ಪುನಃ ದಕ್ಷಿಣ ಭಾರತದತ್ತ ಮುಖ ಮಾಡಿದ ನಟಿ ನೋರಾ ಫತೇಹಿ! ರಜನಿಕಾಂತ್ ಸಿನಿಮಾದಲ್ಲಿ ʻಬಿಂದಾಸ್ʼ ಡ್ಯಾನ್ಸ್
ಟ್ರೇಲರ್‌ನಲ್ಲಿರುವ ಆ ದೃಶ್ಯವನ್ನು ಶೂಟ್ ಮಡುವಾಗ, ಅದನ್ನು ಮಾನಿಟರ್‌ನಲ್ಲಿ ನೋಡುವಾಗ ವಿದ್ಯಾ ಅವರ ಕೈ ನಡುಗುತ್ತಿದ್ದುದನ್ನು ಕಂಡು ಈ ಶಾಟ್ ಕೈಗೂಡುವುದು ಕಷ್ಟವೇನೋ ಎಂಬ ಅನುಮಾನ ಆರಂಭದಲ್ಲಿ ಮೂಡಿತ್ತು ಎಂದು ನೆಲ್ಸನ್ ಹೇಳಿದ್ದಾರೆ. ಸಿಗರೇಟ್ ಹಿಡಿದು ಮುಖದ ಬಳಿ ತರುವಾಗ ಅವರು ಲಿಪ್‌ಸ್ಟಿಕ್ ಹಚ್ಚಿಕೊಳ್ಳುವ ರೀತಿ ತಡಬಡಾಯಿಸುತ್ತಿದ್ದರು ಎಂದು ತಮಾಷೆಯಾಗಿ ಹೇಳಿರುವ ನೆಲ್ಸನ್, ನಟಿಯೊಬ್ಬರಿಗೆ ಇಂತಹ ಸೂಪರ್‌ಸ್ಟಾರ್ ಎದುರು ನಟಿಸುವುದು ಎಷ್ಟು ಒತ್ತಡದ ಸಂಗತಿ ಎಂಬುದನ್ನು ವಿವರಿಸಿದ್ದಾರೆ. ಮೊದಲ ಎರಡು ಟೇಕ್‌ಗಳಲ್ಲಿ ಆತಂಕ ಎದ್ದು ಕಂಡರೂ, ಧೈರ್ಯ ತಂದುಕೊಂಡು ಮೂರನೇ ಟೇಕ್ ಹೊತ್ತಿಗೆ ಆ ದೃಶ್ಯವನ್ನು ವಿದ್ಯಾ ಬಾಲನ್ ಅಚ್ಚುಕಟ್ಟಾಗಿ ಪೂರ್ಣಗೊಳಿಸಿದರು. ಈಗಲೂ ಆ ಸನ್ನಿವೇಶವನ್ನು ಗಮನಿಸಿದರೆ ವಿದ್ಯಾ ಅವರ ಕಣ್ಣುಗಳಲ್ಲಿ ಸಣ್ಣ ಮಟ್ಟದ ನಡುಕ ಕಾಣಿಸುತ್ತದೆ ಎಂದು ನೆಲ್ಸನ್ ತಿಳಿಸಿದ್ದಾರೆ.
ಅಕ್ಟೋಬರ್ 15ರಂದು ತೆರೆಗೆ
2023ರಲ್ಲಿ ಭರ್ಜರಿ ಯಶಸ್ಸು ಕಂಡ ‘ಜೈಲರ್’ ಚಿತ್ರದ ಮುಂದುವರಿದ ಭಾಗವಾಗಿರುವ ಈ ಸಿನಿಮಾದಲ್ಲಿ ರಜನಿಕಾಂತ್ ಮತ್ತೊಮ್ಮೆ ‘ಟೈಗರ್ ಮುತ್ತುವೇಲ್ ಪಾಂಡಿಯನ್’ ಆಗಿ ಅಬ್ಬರಿಸಲಿದ್ದಾರೆ. ಟ್ರೇಲರ್‌ನಲ್ಲಿ ರಜನಿ ಹಾಗೂ ವಿದ್ಯಾ ಬಾಲನ್ ಮುಖಾಮುಖಿಯಾಗುವ ಈ ದೃಶ್ಯವು ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ. ರಮ್ಯಾ ಕೃಷ್ಣನ್, ಯೋಗಿ ಬಾಬು, ಮಿರ್ಣಾ ಮತ್ತು ರಿತ್ವಿಕ್ ಮುಂತಾದ ತಾರಾಬಳಗವನ್ನು ಹೊಂದಿರುವ ‘ಜೈಲರ್ 2’ ಚಿತ್ರವು ಅಕ್ಟೋಬರ್ 15ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ.