ಕೊನೆಗೂ ಕನ್ನಡದಲ್ಲಿ ಹೊಸ ಸಿನಿಮಾ ಶುರು ಮಾಡಿದ ‘ಸು ಫ್ರಮ್ ಸೋ’ ಖ್ಯಾತಿಯ ಜೆ.ಪಿ. ತುಮ್ಮಿನಾಡು; ಮೂರು ಚಿತ್ರಗಳಿಗೆ ಗ್ರೀನ್ ಸಿಗ್ನಲ್!
2025ರ ಬ್ಲಾಕ್ಬಸ್ಟರ್ ಚಿತ್ರ 'ಸು ಫ್ರಮ್ ಸೋ' ಮೂಲಕ ಖ್ಯಾತಿ ಪಡೆದಿರುವ ಜೆ.ಪಿ. ತುಮ್ಮಿನಾಡು, ಮೂರು ಹೊಸ ಕನ್ನಡ ಸಿನಿಮಾಗಳಿಗೆ ಸಹಿ ಹಾಕುವ ಮೂಲಕ ಅಭಿಮಾನಿಗಳ ದೀರ್ಘಕಾಲದ ಕಾಯುವಿಕೆಗೆ ಬ್ರೇಕ್ ಹಾಕಿದ್ದಾರೆ. ಈ ಮಧ್ಯೆ ಮಲಯಾಳಂನ ಒಂದು ಸಿನಿಮಾದಲ್ಲಿ ನಟಿಸಿಬಂದಿದ್ದಾರೆ.
-
2025ರಲ್ಲಿ ಬ್ಲಾಕ್ಬಸ್ಟರ್ ಹಿಟ್ ಎನಿಸಿಕೊಂಡಿದ್ದ ‘ಸು ಫ್ರಮ್ ಸೋ’ ಚಿತ್ರದ ನಟ, ನಿರ್ದೇಶಕ ಜೆ.ಪಿ. ತುಮ್ಮಿನಾಡು ಈಗೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಕಳೆದ ಒಂದೂವರೆ ವರ್ಷಗಳಿಂದ ಸಿನಿಪ್ರಿಯರ ವಲಯದಲ್ಲಿ ಕೇಳಿಬರುತ್ತಿತ್ತು. ಈ ನಡುವೆ ಅವರು ಸದ್ದಿಲ್ಲದೇ ಮಲಯಾಳಂನ ‘ಹ್ಯಾಪಿ ಲೂಪ್’ ಸಿನಿಮಾದಲ್ಲಿ ನಟಿಸಿ ಬಂದಿದ್ದರೂ, ಕನ್ನಡದಲ್ಲಿ ಮಾತ್ರ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ.
ಇದೀಗ ಅಭಿಮಾನಿಗಳ ಆ ಕುತೂಹಲಕ್ಕೆ ತೆರೆಬಿದ್ದಿದ್ದು, ಒಂದಲ್ಲಾ, ಎರಡಲ್ಲಾ, ಬರೋಬ್ಬರಿ ಮೂರು ಕನ್ನಡ ಸಿನಿಮಾಗಳಲ್ಲಿ ಕೇವಲ ನಟನಾಗಿ ಕಾಣಿಸಿಕೊಳ್ಳಲು ಜೆ.ಪಿ. ತುಮ್ಮಿನಾಡು ಸಜ್ಜಾಗಿದ್ದಾರೆ.
ಮತ್ತೊಂದು ಫ್ಯಾಮಿಲಿ ಸಬ್ಜೆಕ್ಟ್ ಜೊತೆ ಬಂದ ಜೆಪಿ
ಈ ಮೂರು ಚಿತ್ರಗಳ ಸಾಲಿನಲ್ಲಿ ಮೊದಲನೆಯದಾಗಿ, ಮಂಗಳೂರಿನ ಬರಹಗಾರ-ನಿರ್ದೇಶಕ ಅಶ್ವಥ್ ಆಕ್ಷನ್-ಕಟ್ ಹೇಳುತ್ತಿರುವ ಹೆಸರಿಡದ ಫ್ಯಾಮಿಲಿ ಎಂಟರ್ಟೈನರ್ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ನಟನೆಯ ಜೊತೆಗೆ ಈ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲೂ ನಿಕಟವಾಗಿ ತೊಡಗಿಸಿಕೊಂಡಿರುವ ಜೆ.ಪಿ. ತುಮ್ಮಿನಾಡು, ಪ್ರೇಕ್ಷಕರ ನಿರೀಕ್ಷೆಗಳಿಗೆ ತಕ್ಕಂತೆ ಸಿನಿಮಾ ಮೂಡಿಬರಲು ಇಡೀ ತಂಡ ಒಂದು ವರ್ಷಕ್ಕೂ ಹೆಚ್ಚು ಕಾಲ ಕಥೆ ಮತ್ತು ಚಿತ್ರಕಥೆಯನ್ನು ತಿದ್ದಿ ತೀಡಿದೆ ಎಂದು ತಿಳಿಸಿದ್ದಾರೆ.
"ಸು ಫ್ರಮ್ ಸೋ ಸಿನಿಮಾದ ಯಶಸ್ಸಿನ ನಂತರ ಜನರಿಗೆ ನಮ್ಮ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಅವರಿಗೆ ಮತ್ತೊಂದು ಉತ್ತಮ ಕೌಟುಂಬಿಕ ಮನರಂಜನಾ ಚಿತ್ರವನ್ನು ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕಾಗಿಯೇ ನಾವು ಸ್ಕ್ರಿಪ್ಟ್ ಅನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಲು ಇಷ್ಟು ಸಮಯ ತೆಗೆದುಕೊಂಡೆವು" ಎಂದು ಅವರು ಹೇಳಿದ್ದಾರೆ.
ನನಗಾಗಿಯೇ ಅಶ್ವಥ್ ಕಥೆಗಳನ್ನು ಬರೆದಿದ್ದರು
ವಿಶೇಷವೆಂದರೆ, ತಮ್ಮ ಕಲಾ ಪಯಣಕ್ಕೆ ನಿರ್ದೇಶಕ ಅಶ್ವಥ್ ಹೊಸಬರಲ್ಲ ಎನ್ನುವ ಜೆ.ಪಿ., ಕರಾವಳಿ ಚಿತ್ರರಂಗದ ತಮ್ಮ ಆರಂಭಿಕ ದಿನಗಳನ್ನು ಇದೇ ವೇಳೆ ಸ್ಮರಿಸಿಕೊಂಡಿದ್ದಾರೆ. "ಅಶ್ವಥ್ ಅವರು ಈ ಹಿಂದೆ ‘ಮೀರಾ’ ಎಂಬ ತುಳು ಸಿನಿಮಾವನ್ನು ನಿರ್ದೇಶಿಸಿದ್ದರು, ಅದರಲ್ಲಿ ನಾನೊಂದು ಪಾತ್ರ ಮಾಡಿದ್ದೆ. ನಿಜ ಹೇಳಬೇಕೆಂದರೆ, ‘ಸು ಫ್ರಮ್ ಸೋ’ ಸಿನಿಮಾ ಆಗುವುದಕ್ಕೂ ಮುಂಚೆಯೇ ಅವರು ನನ್ನ ಮೇಲೆ ನಂಬಿಕೆಯಿಟ್ಟು ನನಗಾಗಿ ಕಥೆಗಳನ್ನು ಬರೆದಿದ್ದರು. ಈಗ ಈ ಕೌಟುಂಬಿಕ ಕಥಾಹಂದರದೊಂದಿಗೆ ಬಂದಾಗ, ನನಗೆ ತಕ್ಷಣವೇ ಆ ಕಥೆ ಇಷ್ಟವಾಯಿತು" ಎಂದು ಜೆ.ಪಿ. ಸಂತಸ ಹಂಚಿಕೊಂಡಿದ್ದಾರೆ.
ಮಲಯಾಳಂ ಚಿತ್ರರಂಗಕ್ಕೆ ಜೆಪಿ ತುಮ್ಮಿನಾಡು ಎಂಟ್ರಿ; ಮಂಜು ವಾರಿಯರ್ ಜೊತೆ ʻಸು ಫ್ರಮ್ ಸೋʼ ನಟನ ಜುಗಲ್ಬಂದಿ!
ನಿರ್ದೇಶನದ ಸಿನಿಮಾ ಯಾವಾಗ?
ಅಭಿಮಾನಿಗಳು ತಮ್ಮನ್ನು ಮತ್ತೆ ನಿರ್ದೇಶಕನ ಕುರ್ಚಿಯಲ್ಲಿ ನೋಡಲು ಕಾತರರಾಗಿದ್ದರೂ, ಮುಂದಿನ ನಿರ್ದೇಶನದ ಚಿತ್ರಕ್ಕೆ ಕಥೆ ಬರೆಯಲು ಇನ್ನೂ ಕುಳಿತಿಲ್ಲ ಎಂದು ಜೆ.ಪಿ. ತುಮ್ಮಿನಾಡು ಒಪ್ಪಿಕೊಂಡಿದ್ದಾರೆ. ಸೃಜನಶೀಲ ತುಡಿತ ಮತ್ತು ಮಾನಸಿಕ ನೆಮ್ಮದಿಯ ನಡುವೆ ಸಮತೋಲನ ಕಾಯ್ದುಕೊಳ್ಳುವ ಬಗ್ಗೆ ಮಾತನಾಡಿರುವ ಅವರು, ಕ್ಯಾಮೆರಾ ಮುಂದೆ ನಿಲ್ಲುವುದು ತಮಗೆ ಅಗತ್ಯವಿರುವ ವಿರಾಮವನ್ನು ನೀಡುತ್ತದೆ ಎಂದಿದ್ದಾರೆ. "ಬರವಣಿಗೆಗೆ ಸಂಪೂರ್ಣವಾಗಿ ಒತ್ತಡರಹಿತ ಮನಸ್ಸು ಬೇಕು. ನಾನು ಮುಂದೆ ಕಥೆ ಬರೆಯಲು ಕುಳಿತಾಗ ಅಂತಹ ಯಾವುದೇ ಒತ್ತಡ ಇರಬಾರದು ಎಂಬ ಕಾರಣಕ್ಕೆ, ಮೊದಲು ಎರಡು-ಮೂರು ಸಿನಿಮಾಗಳಲ್ಲಿ ನಟನಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದೆ" ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ʻಹ್ಯಾಪಿ ಲೂಪ್ʼ ರಿಲೀಸ್ ಯಾವಾಗ
ಇನ್ನೊಂದೆಡೆ, ಮಲಯಾಳಂನ ಖ್ಯಾತ ನಟಿ ಮಂಜು ವಾರಿಯರ್ ಅವರೊಂದಿಗೆ ಜೆ.ಪಿ. ತುಮ್ಮಿನಾಡು ನಟಿಸಿರುವ ‘ಹ್ಯಾಪಿ ಲೂಪ್’ ಸಿನಿಮಾದ ಚಿತ್ರೀಕರಣ ಹಾಗೂ ಡಬ್ಬಿಂಗ್ ಕೆಲಸಗಳು ಈಗಾಗಲೇ ಸಂಪೂರ್ಣವಾಗಿ ಮುಕ್ತಾಯಗೊಂಡಿವೆ. ಈ ವರ್ಷದ ಅಂತ್ಯಕ್ಕೆ ಅಥವಾ 2027ರ ಆರಂಭದಲ್ಲಿ ಈ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದ್ದು, ಪರಭಾಷೆಯಲ್ಲೂ ಜೆ.ಪಿ. ಮೋಡಿ ಮಾಡಲು ಸಿದ್ಧರಾಗಿದ್ದಾರೆ.