ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kuladalli keelyavudo Movie: ಸೋನು ನಿಗಮ್ ಹಾಡಿರುವ ಹಾಡನ್ನು ನಮ್ಮ ಚಿತ್ರದಿಂದ ತೆಗೆದಿದ್ದೇವೆ: ʼಕುಲದಲ್ಲಿ ಕೀಳ್ಯಾವುದೋʼ ಚಿತ್ರತಂಡ

Kuladalli keelyavudo Movie: ನಮ್ಮ ʼಕುಲದಲ್ಲಿ ಕೀಳ್ಯಾವುದೋʼ ಚಿತ್ರದ ಹಾಡೊಂದನ್ನು ಸೋನು ನಿಗಮ್ ಮೂರು ತಿಂಗಳ ಹಿಂದೆ ಹಾಡಿದ್ದರು. ಮನೋಮೂರ್ತಿ ಅವರು ಸಂಗೀತ ನೀಡಿರುವ ಹಾಗೂ ಯೋಗರಾಜ್ ಭಟ್ ಬರೆದಿರುವ ಈ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯವೂ ಆಗಿದೆ. ಆದರೆ ಸೋನು ನಿಗಮ್ ಅವರು ಕನ್ನಡಕ್ಕೆ ಮಾಡಿರುವ ಅವಮಾನವನ್ನು ಸಹಿಸದ ನಾವು ಅವರ ಧ್ವನಿಯಲ್ಲಿ ಮೂಡಿಬಂದಿರುವ ಹಾಡನ್ನು ತೆಗೆದು ಹಾಕಿದ್ದೇವೆ ಎಂದು ನಿರ್ದೇಶಕ ರಾಮ್ ನಾರಾಯಣ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಸೋನು ನಿಗಮ್ ಹಾಡು ಚಿತ್ರದಿಂದ ತೆಗೆದಿದ್ದೇವೆ- ʼಕುಲದಲ್ಲಿ ಕೀಳ್ಯಾವುದೋʼ ತಂಡ

Profile Siddalinga Swamy May 7, 2025 4:24 PM

ಬೆಂಗಳೂರು: ಯೋಗರಾಜ್ ಸಿನಿಮಾಸ್ ಅರ್ಪಿಸುವ, ಪರ್ಲ್ ಸಿನಿಮಾಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಮತ್ತು ವಿದ್ಯಾ ಅವರು ನಿರ್ಮಿಸಿರುವ ಹಾಗೂ ರಾಮ್ ನಾರಾಯಣ್ ನಿರ್ದೇಶನದಲ್ಲಿ ಮಡೆನೂರ್ ಮನು ಹಾಗೂ ಮೌನ ಗುಡ್ಡೆಮನೆ ನಾಯಕ‌ - ನಾಯಕಿಯಾಗಿ ನಟಿಸಿರುವ ʼಕುಲದಲ್ಲಿ ಕೀಳ್ಯಾವುದೋʼ (Kuladalli keelyavudo Movie) ಚಿತ್ರತಂಡ ಪ್ರಸ್ತುತ ಗಾಯಕ ಸೋನು ನಿಗಮ್ ಅವರ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕುರಿತು ನಿರ್ಮಾಪಕರು ಹಾಗೂ‌ ನಿರ್ದೇಶಕರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ನಿರ್ದೇಶಕ ರಾಮ್ ನಾರಾಯಣ್ ಮಾತನಾಡಿ, ಗಾಯಕ ಸೋನು ನಿಗಮ್ ಅವರು ಉತ್ತಮ ಗಾಯಕರು ಎಂಬುದರಲ್ಲಿ‌ ಯಾವುದೇ ಸಂಶಯವಿಲ್ಲ. ಆದರೆ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕನ್ನಡದ ಬಗ್ಗೆ ಆಡಿರುವ ಮಾತು ನಮಗೆ ತುಂಬಾ ಬೇಸರವಾಗಿದೆ. ನಮ್ಮ ʼಕುಲದಲ್ಲಿ ಕೀಳ್ಯಾವುದೋʼ ಚಿತ್ರದ ಹಾಡೊಂದನ್ನು ಸೋನು ನಿಗಮ್ ಮೂರು ತಿಂಗಳ ಹಿಂದೆ ಹಾಡಿದ್ದರು. ಮನೋಮೂರ್ತಿ ಅವರು ಸಂಗೀತ ನೀಡಿರುವ ಹಾಗೂ ಯೋಗರಾಜ್ ಭಟ್ ಬರೆದಿರುವ ಈ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯವೂ ಆಗಿದೆ. ಆದರೆ ಸೋನು ನಿಗಮ್ ಅವರು ಕನ್ನಡಕ್ಕೆ ಮಾಡಿರುವ ಅವಮಾನವನ್ನು ಸಹಿಸದ ನಾವು ಅವರ ಧ್ವನಿಯಲ್ಲಿ ಮೂಡಿಬಂದಿರುವ ಹಾಡನ್ನು ತೆಗೆದು ಹಾಕಿದ್ದೇವೆ. ಇದೇ ಹಾಡನ್ನು ಕನ್ನಡದ ಗಾಯಕ ಚೇತನ್ ಅವರ ಬಳಿ‌ ಹಾಡಿಸಿದ್ದೇವೆ. ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ. ಇದಕ್ಕೆ ಸಂಗೀತ ನಿರ್ದೇಶಕ ಮನೋಮೂರ್ತಿ ಹಾಗೂ ಗೀತರಚನೆಕಾರ ಯೋಗರಾಜ್ ಭಟ್ ಅವರ ಒಪ್ಪಿಗೆ ಇದೆ ಎಂದು ಅವರು ತಿಳಿಸಿದರು.

ಕನ್ನಡದ ಬಗ್ಗೆ ಮಾತು ಬಂದಾಗ ನಮಗೆ ಮೊದಲು ಕನ್ನಡ ಮುಖ್ಯ. ಆಮೇಲೆ ಮಿಕ್ಕಿದ್ದು.‌ ಸೋನು ನಿಗಮ್ ಅವರು ಉತ್ತಮ ಗಾಯಕರಾಗಿದ್ದು, ಅವರಿಂದ ಈ ರೀತಿಯ ವರ್ತನೆ ನಿರೀಕ್ಷಿಸಿರಲಿಲ್ಲ. ಘಟನೆ ನಡೆದು ಕೆಲವು ದಿನಗಳ ನಂತರ ಇತ್ತೀಚೆಗೆ ಅವರು ಕ್ಷಮೆ ಕೇಳಿದ ವಿಡಿಯೋ ನೋಡಿದೆ. ಅವರು ಒಲ್ಲದ ಮನಸ್ಸಿನಿಂದ ‌ಯಾರದೊ ಬಲವಂತಕ್ಕೆ ಕ್ಷಮೆ ಕೇಳಿದ ಹಾಗಿದೆ. ಈ ವಿಷಯದಿಂದ ನಮ್ಮ ಚಿತ್ರತಂಡಕ್ಕೆ ಬಹಳ ಬೇಸರವಾಗಿದೆ.‌ ಹಾಗಾಗಿ ಅವರ ಧ್ವನಿಯಲ್ಲಿ ಮೂಡಿಬಂದಿರುವ ಹಾಡನ್ನು ತೆಗೆದು ಹಾಕಿ, ಚೇತನ್ ಅವರಿಂದ ಅದೇ ಹಾಡನ್ನು ಹಾಡಿಸಿದ್ದೇವೆ. ಮುಂದೆ ನಾನಂತೂ ನನ್ನ ನಿರ್ಮಾಣದ ಚಿತ್ರಗಳಲ್ಲಿ ಅವರಿಂದ ಹಾಡಿಸುವುದಿಲ್ಲ ಎಂಬ ನಿರ್ಧಾರ ಮಾಡಿದ್ದೇನೆ ಎಂದು ನಿರ್ಮಾಪಕ ಸಂತೋಷ್ ಕುಮಾರ್ ತಿಳಿಸಿದರು. ‌

ಈ ಸುದ್ದಿಯನ್ನೂ ಓದಿ | Isha Ambani Metgala Fashion: ಮೆಟ್‌ಗಾಲದಲ್ಲಿ ಇಶಾ ಅಂಬಾನಿ ಧರಿಸಿದ್ದ ನೆಕ್ಲೇಸ್‌ ಬೆಲೆ ಕೇಳಿದರೇ ಶಾಕ್‌ ಆಗ್ತೀರ

ಈಗಾಗಲೇ ಟೀಸರ್, ಹಾಡುಗಳ ಮೂಲಕ ಜನರನ್ನು ತಲುಪಿರುವ ಈ ಚಿತ್ರ ಮೇ 23 ರಂದು ಬಿಡುಗಡೆಯಾಗಲಿದೆ.