ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕನ್ನಡ ಕಿರುತೆರೆಯಲ್ಲಿ ಹೊಸ ಮೈಲಿಗಲ್ಲು; ‘ಜಗದ್ಧಾತ್ರಿ’ ಧಾರಾವಾಹಿಯ ‘ಏಜೆಂಟ್ ಜೆಡಿ’ ಗೇಮ್ ಬಿಡುಗಡೆ ಮಾಡಿದ ಜೀ ಕನ್ನಡ

Agent JD Game: ಕನ್ನಡ ಕಿರುತೆರೆ ಲೋಕದಲ್ಲಿ ಪ್ರಪ್ರಥಮ ಬಾರಿಗೆ ಡಿಜಿಟಲ್ ಕ್ರಾಂತಿ ಸೃಷ್ಟಿಸಿದ್ದು, ಜೀ ಕನ್ನಡದ ಜನಪ್ರಿಯ ಜಗದ್ಧಾತ್ರಿ ಧಾರಾವಾಹಿಯ ಸಾಹಸಮಯ ಜಗತ್ತನ್ನು ಮೊಬೈಲ್ ಪರದೆಗೆ ತಂದಿದೆ. ವೀಕ್ಷಕರೇ ಖುದ್ದು ಗೂಢಚಾರರಾಗಿ ಬೆಂಗಳೂರು, ಮಂಗಳೂರು ಮತ್ತು ಹುಬ್ಬಳ್ಳಿಯ ಅಪಾಯಕಾರಿ ಸವಾಲುಗಳನ್ನು ಭೇದಿಸುವ ಅವಕಾಶ ಇಲ್ಲಿದೆ.

Jagadhatri Serial: ‘ಏಜೆಂಟ್ ಜೆಡಿ’ ಗೇಮ್ ಪರಿಚಯಿಸಿದ ಜೀ ಕನ್ನಡ

-

Avinash GR
Avinash GR Oct 13, 2026 3:02 PM

ಕಿರುತೆರೆ ವೀಕ್ಷಕರಿಗೆ ಕೇವಲ ಟಿವಿ ಪರದೆಯಷ್ಟೇ ಸೀಮಿತವಾಗಿರದೆ ಹೊಸ ಮಾದರಿಯ ಡಿಜಿಟಲ್ ಮನರಂಜನೆ ನೀಡಲು ಮುಂದಾಗಿರುವ ಜೀ ಕನ್ನಡ ವಾಹಿನಿ, ತನ್ನ ಜನಪ್ರಿಯ ‘ಜಗದ್ಧಾತ್ರಿ’ ಧಾರಾವಾಹಿಯ ಹಿನ್ನೆಲೆಯಲ್ಲಿ ‘ಏಜೆಂಟ್ ಜೆಡಿ’ ಎಂಬ ವಿನೂತನ ಗೇಮ್ ಅನ್ನು ಪರಿಚಯಿಸಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲೇ ಇಂತಹದೊಂದು ಗೇಮಿಂಗ್ ಅನುಭವವನ್ನು ಪ್ರೇಕ್ಷಕರಿಗೆ ತಲುಪಿಸುತ್ತಿರುವುದು ಇದೇ ಮೊದಲು ಎಂಬುದು ವಿಶೇಷ. ವಿಜಯ್ ಲಲಿತಾ ಸೂರ್ಯ, ಮೋಕ್ಷಿತಾ ಪೈ ಹಾಗೂ ಕವಿತಾ ಗೌಡ ಮುಖ್ಯಭೂಮಿಕೆಯಲ್ಲಿರುವ ಈ ಧಾರಾವಾಹಿಯ ತನಿಖೆ ಮತ್ತು ಸಾಹಸಮಯ ಕಥಾಹಂದರವನ್ನು ಆಧರಿಸಿ ಈ ಗೇಮ್ ರೂಪಿಸಲಾಗಿದ್ದು, ವೀಕ್ಷಕರು ತಾವೇ ಖುದ್ದು ಏಜೆಂಟ್ ಆಗಿ ರೋಚಕ ಸವಾಲುಗಳನ್ನು ಎದುರಿಸುವ ಅಪರೂಪದ ಅವಕಾಶವನ್ನು ಇದು ಕಲ್ಪಿಸಿದೆ.

ಈ ಜೆಡಿ ಗೇಮ್‌ ಹೇಗಿದೆ?

ಕರ್ನಾಟಕದ ಪ್ರಮುಖ ನಗರಗಳ ನೈಜ ಪರಿಸರವನ್ನು ಆಧರಿಸಿ ಈ ಗೇಮ್‌ನಲ್ಲಿ ಮೂರು ಪ್ರಮುಖ ಮಿಷನ್‌ಗಳನ್ನು ರೂಪಿಸಲಾಗಿದೆ. ಮೊದಲನೆಯದಾಗಿ ‘ಬೆಂಗಳೂರು ಮಿಷನ್’ ನಗರದ ಗಗನಚುಂಬಿ ಕಟ್ಟಡಗಳು ಹಾಗೂ ಬಡಾವಣೆಗಳ ಹಿನ್ನೆಲೆಯಲ್ಲಿದ್ದು, ಇದರಲ್ಲಿ ಆಟಗಾರರು ಮಗುವನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಬೇಕಿದೆ. ಎರಡನೆಯದಾಗಿ ‘ಮಂಗಳೂರು ಮಿಷನ್’ ಕರಾವಳಿಯ ಕಡಲತೀರಗಳು ಮತ್ತು ಬೃಹತ್ ಸರಕು ಸಾಗಣೆ ಕಂಟೇನರ್‌ಗಳ ವಾತಾವರಣದಲ್ಲಿದ್ದು, ಇಲ್ಲಿ ಬಾಂಬ್ ನಿಷ್ಕ್ರಿಯಗೊಳಿಸುವ ತೀವ್ರ ಒತ್ತಡದ ಸವಾಲನ್ನು ಎದುರಿಸಬೇಕಾಗುತ್ತದೆ. ಅಂತಿಮವಾಗಿ ‘ಹುಬ್ಬಳ್ಳಿ ಮಿಷನ್’ ನಗರದ ರೈಲ್ವೆ ನಿಲ್ದಾಣದ ಪರಿಸರದಲ್ಲಿ ಸಾಗಲಿದ್ದು, ಸಂಚುಕೋರನನ್ನು ಸೋಲಿಸಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವ ಜವಾಬ್ದಾರಿ ಆಟಗಾರರ ಮೇಲಿರುತ್ತದೆ.

ಜೀ ಕನ್ನಡದಲ್ಲಿ ಸೆ.28 ರಿಂದ ‘ಜಗದ್ಧಾತ್ರಿ’ ಧಾರಾವಾಹಿ ಶುರು; ಈ ಸೀರಿಯಲ್‌ಗಾಗಿ ಒಂದಾದ ಕಿರುತೆರೆ ಸ್ಟಾರ್ಸ್!‌

ಟಾಪ್ 10 ವಿಜೇತರಿಗೆ ಆಕರ್ಷಕ ಬಹುಮಾನ

ವೀಕ್ಷಕರನ್ನು ಕೇವಲ ಪ್ರೇಕ್ಷಕರನ್ನಾಗಿ ಇರಿಸದೆ ಕಥೆಯ ಭಾಗವಾಗಿಸುವ ಈ ವಿನೂತನ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸವಾಲುಗಳಲ್ಲಿ ಭಾಗವಹಿಸಲು ಇಚ್ಛಿಸುವವರು agentjd.zee5.com ವೆಬ್‌ಸೈಟ್‌ಗೆ ಭೇಟಿ ನೀಡಿ ಗೇಮ್ ಆಡಬಹುದಾಗಿದೆ. ಮೂರೂ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮುಂಚೂಣಿಯಲ್ಲಿರುವ ಟಾಪ್ 10 ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲು ವಾಹಿನಿ ನಿರ್ಧರಿಸಿದೆ. ಪ್ರತಿದಿನ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುವ ‘ಜಗದ್ಧಾತ್ರಿ’ ಧಾರಾವಾಹಿಯನ್ನು ವೀಕ್ಷಿಸುತ್ತಲೇ, ಈ ಡಿಜಿಟಲ್ ಗೇಮ್ ಮೂಲಕ ವೀಕ್ಷಕರು ತಮ್ಮ ಚಾಣಾಕ್ಷತನ ಹಾಗೂ ಸಾಹಸ ಪ್ರವೃತ್ತಿಯನ್ನು ಒರೆಗೆ ಹಚ್ಚಬಹುದಾಗಿದೆ.