ಒಟಿಟಿಯಲ್ಲಿ ಈ ವಾರ ಮನರಂಜನೆಯ ಮಹಾಪೂರ; ‘DC’ ಸೇರಿ ಬಿಡುಗಡೆಯಾಗಲಿವೆ 5 ಭರ್ಜರಿ ಹಿಟ್ ಸಿನಿಮಾಗಳು!
OTT Movie Releases: ಸೆಪ್ಟೆಂಬರ್ ಮೊದಲ ವಾರದಲ್ಲಿ ಭಿನ್ನ ಜಾನರ್‌ನ ಐದು ಜನಪ್ರಿಯ ಸಿನಿಮಾಗಳು ಮನೆಮನೆಗೆ ತಲುಪಲು ಸಜ್ಜಾಗಿವೆ. ಗಲ್ಲಾಪೆಟ್ಟಿಗೆ ದಾಖಲೆ ಬರೆದ ಲೋಕೇಶ್ ಕನಕರಾಜ್ ಅವರ ‘ಡಿಸಿ’ ಸನ್‌ನೆಕ್ಸ್ಟ್‌ನಲ್ಲಿ ಹಾಗೂ ವರುಣ್ ತೇಜ್ ಅಭಿನಯದ ‘ಕೊರಿಯನ್ ಕನಕರಾಜು’ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿವೆ.
-
ಸೆಪ್ಟೆಂಬರ್ ಮೊದಲ ವಾರದಲ್ಲಿ ವಿವಿಧ ಜಾನರ್ ಮತ್ತು ವಿವಿಧ ಭಾಷೆಗಳ ಆಕರ್ಷಕ ಕಥೆಗಳನ್ನೊಳಗೊಂಡ ಹಿಟ್ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಲೋಕೇಶ್ ಕನಕರಾಜ್ ಮತ್ತು ವಾಮಿಕಾ ಗಬ್ಬಿ ಅಭಿನಯದ 'ಡಿಸಿ'ಯಿಂದ ಹಿಡಿದು ತಮಿಳಿನ 'ದಿ ಕೋರ್ಟ್'ವರೆಗೆ ಭಿನ್ನ ರೀತಿಯ ಮನರಂಜನಾ ಕಂಟೆಂಟ್ ಒಟಿಟಿಗಳಲ್ಲಿ ಲಭ್ಯವಿದೆ. ಅದರಲ್ಲೂ ʻಡಿಸಿʼ ಸಿನಿಮಾವು ಈ ವರ್ಷ ದೊಡ್ಡ ಗಳಿಕೆ ಮಾಡಿ, ದಾಖಲೆ ಬರೆದಿದೆ. ಹಾಗಾದರೆ, ಈ ವಾರ ಯಾವೆಲ್ಲಾ ಸಿನಿಮಾಗಳು, ಯವ್ಯಾವ ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗಲಿವೆ? ಇಲ್ಲಿದೆ ಮಾಹಿತಿ.
1.ಡಿಸಿ - SunNXT (ಸೆಪ್ಟೆಂಬರ್ 4)
ಈ ತಮಿಳು ರೊಮ್ಯಾಂಟಿಕ್ ಆಕ್ಷನ್ ಡ್ರಾಮಾದಲ್ಲಿ ಲೋಕೇಶ್ ಕನಕರಾಜ್, ವಾಮಿಕಾ ಗಬ್ಬಿ ಸೇರಿದಂತೆ ಹಲವರು ನಟಿಸಿದ್ದಾರೆ. ಇದು ಕ್ಲಾಸಿಕ್ 'ದೇವದಾಸ್' ಕಥೆಯ ಹೊಸ ಆವೃತ್ತಿಯಾಗಿದ್ದು, ದರೋಡೆಕೋರರು ಮತ್ತು ಶೋಷಣೆಗೆ ಒಳಗಾದ ಲೈಂಗಿಕ ಕಾರ್ಯಕರ್ತೆಯೊಬ್ಬಳು ಭ್ರಷ್ಟ ಪೊಲೀಸರ ವಿರುದ್ಧ ಹೋರಾಡುವ ಕಥೆಯನ್ನು ಒಳಗೊಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ದೊಡ್ಡ ಗೆಲುವು ಕಂಡಿದೆ.
2. ದಿ ಕೋರ್ಟ್ - JioHotstar (ಸೆಪ್ಟೆಂಬರ್ 4)
ಯೋಗಲಕ್ಷ್ಮಿ, ವಿ. ಜಯಪ್ರಕಾಶ್ ಮತ್ತು ಅರ್ಜುನ್ ಶ್ಯಾಮ್ ಗೋಪನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತಮಿಳು ರೊಮ್ಯಾಂಟಿಕ್ ಡ್ರಾಮಾ ಸರಣಿ ಇದು. ಮಾತು ಬಾರದ ಆದರ್ಶವಾದಿ ಯುವತಿ ಯಾಳಿನಿ, ಖ್ಯಾತ ವಕೀಲರಾದ ತನ್ನ ತಂದೆ ರಾಜ್ ಶೇಖರ್ ವಿರುದ್ಧವೇ ಕಾನೂನು ಹೋರಾಟಕ್ಕೆ ಇಳಿಯುವ ಕಥೆ ಇಲ್ಲಿದೆ. ವಾದ-ವಿವಾದಗಳು ಮುಂದುವರಿದಂತೆ, ವೃತ್ತಿಪರ ಪೈಪೋಟಿಯ ನಡುವೆ ಕುಟುಂಬದ ರಹಸ್ಯ ವಿಚಾರಗಳು ಮತ್ತು ಭಾವನಾತ್ಮಕ ಸಂಘರ್ಷಗಳು ತೆರೆದುಕೊಳ್ಳುತ್ತವೆ.
3. ಉನ್ಮಾದಂ - SonyLIV (ಸೆಪ್ಟೆಂಬರ್ 4)
ಕುಂಚಾಕೊ ಬೋಬನ್, ಲಿಜೋಮೋಲ್ ಜೋಸ್, ಸಿದ್ದಿಕ್ ಮತ್ತು ಕೃಷ್ಣಪ್ರಭಾ ನಟಿಸಿರುವ ಮಲಯಾಳಂ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ. ಸೂಪರ್‌ನ್ಯಾಚುರಲ್ ಅಂಶಗಳನ್ನು ಹೊಂದಿರುವ ಹಳೆಯ ಕೇಸ್‌ವೊಂದನ್ನು ಮರುತನಿಖೆ ಮಾಡುವ ಅಧಿಕಾರಿಯ ಸುತ್ತ ಕಥೆ ಸಾಗುತ್ತದೆ. ತನಿಖೆ ತೀವ್ರಗೊಂಡಂತೆ, ಆತನಿಗೆ ವಾಸ್ತವ ಮತ್ತು ಭ್ರಮೆಯ ನಡುವಿನ ಅಂತರ ಮಾಸಿಹೋಗಿ, ತನ್ನದೇ ವಿಚಿತ್ರ ಮನಸ್ಥಿತಿ ಮತ್ತು ಭಯಾನಕ ಸತ್ಯವನ್ನು ಎದುರಿಸಬೇಕಾದ ಸನ್ನಿವೇಶ ಎದುರಾಗುತ್ತದೆ.
4. ಅನಂತನ್ ಕಾಡು - ManoramaMax (ಸೆಪ್ಟೆಂಬರ್ 2)
ಆರ್ಯ, ಮುರಳಿ ಗೋಪಿ, ದೇವ್ ಮೋಹನ್ ಮತ್ತು ಇಂದ್ರನ್ಸ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಮಲಯಾಳಂ ಆಕ್ಷನ್ ಥ್ರಿಲ್ಲರ್, 1980ರ ದಶಕದ ಕೊನೆಯಲ್ಲಿ ಮತ್ತು 1990ರ ದಶಕದ ಆರಂಭದಲ್ಲಿ ರಾಜ್ಯದ ರಾಜಧಾನಿಯ ಹಿಂದುಳಿದ ಬಡಾವಣೆಯ ನಾಲ್ವರು ಆತ್ಮೀಯ ಸ್ನೇಹಿತರ ಕಥೆಯನ್ನು ಹೇಳುತ್ತದೆ. ಉತ್ತಮ ಜೀವನದ ಕನಸು ಹೊತ್ತಿರುವ ಈ ಸ್ನೇಹಿತರು, ಬದಲಾಗುವ ಪರಿಸ್ಥಿತಿಗಳು ಮತ್ತು ಸಂಕೀರ್ಣ ಸಂಬಂಧಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಚಿತ್ರ ತೋರಿಸುತ್ತದೆ.
5. ಕೊರಿಯನ್ ಕನಕರಾಜು - Netflix (ಸೆಪ್ಟೆಂಬರ್ 4)
ವರುಣ್ ತೇಜ್ ಕೊನಿಡೇಲ ಮತ್ತು ರಿತಿಕಾ ನಾಯಕ್ ಅಭಿನಯದ ತೆಲುಗು ಹಾರರ್ ಕಾಮಿಡಿ ಚಿತ್ರ. ಸಾಂಪ್ರದಾಯಿಕ ಭಜನಾ ಮಂಡಳಿಯನ್ನು ನಡೆಸುತ್ತಾ ಕುಟುಂಬವನ್ನು ಸಲಹುವ ಮುಂಗೋಪಿಯಾದರೂ ಲವಲವಿಕೆಯಿಂದ ಇರುವ ಯುವಕ ಕನಕರಾಜುವಿನ ಸುತ್ತ ಈ ಕಥೆ ಸುತ್ತುತ್ತದೆ. ಕೊರಿಯನ್ ವ್ಯಕ್ತಿಯೊಬ್ಬನ ಚಿತಾಭಸ್ಮವಿರುವ ನಿಗೂಢ ಪಾತ್ರೆಯಿಂದ ಆಕಸ್ಮಿಕವಾಗಿ ನೀರು ಕುಡಿದ ನಂತರ ಆತನ ಜೀವನವೇ ಬದಲಾಗುತ್ತದೆ. ಆತನ ಮೈಮೇಲೆ ಆ ವ್ಯಕ್ತಿಯ ಆತ್ಮ ಬರುತ್ತದೆ ಹಾಗೂ 'ಕೊರಿಯಾ' ಎಂದು ಹೇಳಿದಾಗಲೆಲ್ಲಾ ಆತನಿಗೆ ಅಸಾಧಾರಣ ಶಕ್ತಿಗಳು ಬರುತ್ತವೆ.