Raghu Dixit Wedding: ಗಾಯಕಿ ವಾರಿಜಶ್ರೀ ಜತೆ ವಿವಾಹ ಜೀವನಕ್ಕೆ ಕಾಲಿಟ್ಟ ರಘು ದೀಕ್ಷಿತ್
Raghu Dixit and Varijashree Venugopal Wedding: ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಗಾಯಕ ರಘು ದೀಕ್ಷಿತ್ ಮತ್ತು ವಾರಿಜಶ್ರೀ ಮದುವೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ವೈರಲ್ ಆಗಿದ್ದು, ನವಜೋಡಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
-
Prabhakara R
Oct 24, 2025 4:36 PM
ಬೆಂಗಳೂರು: ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ (Raghu Dixit Wedding) ಅವರು ಗಾಯಕಿ ವಾರಿಜಶ್ರೀ ವೇಣುಗೋಪಾಲ್ (Varijashree Venugopal ) ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ವೈರಲ್ ಆಗಿದ್ದು, ನವಜೋಡಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ರಘು ದೀಕ್ಷಿತ್ ಮತ್ತು ವಾರಿಜಶ್ರೀ ವೇಣುಗೋಪಾಲ್ ಅವರು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ವಾರಿಜಶ್ರೀ ಅವರು ಗಾಯಕಿಯಾಗಿ, ಕೊಳಲು ವಾದಕಿಯಾಗಿ ಖ್ಯಾತಿ ಗಳಿಸಿದ್ದಾರೆ. ಇಬ್ಬರು ಜತೆಯಾಗಿ ಕೆಲಸ ಮಾಡಿದ್ದಾರೆ. ಪರಿಚಯದಿಂದ ಪ್ರೀತಿ ಬೆಳೆದು, ಕುಟುಂಬದ ಒಪ್ಪಿಗೆ ಪಡೆದು ಅವರಿಬ್ಬರು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಕುಟುಂಬದವರು ಹಾಗೂ ಆಪ್ತ ಸ್ನೇಹಿತರು ರಘು ದೀಕ್ಷಿತ್-ವಾರಿಜಶ್ರೀ ವಿವಾಹಕ್ಕೆ ಸಾಕ್ಷಿ ಆಗಿದ್ದಾರೆ. ಯಮುನಾ ಶ್ರೀನಿಧಿ, ಅಯ್ಯೋ ಶ್ರದ್ಧಾ ಸೇರಿದಂತೆ ಹಲವರು ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ.

ಬಿಗ್ ಬಾಸ್ ಮಾಜಿ ಸ್ಪರ್ಧಿ ಯಮುನಾ ಶ್ರೀನಿಧಿ ಅವರು ರಘು ದೀಕ್ಷಿತ್ ಅವರ ಮದುವೆಯ ಫೋಟೋಗಳನ್ನು ಹಂಚಿಕೊಂಡು ನವಜೋಡಿಗೆ ಶುಭ ಹಾರೈಸಿದ್ದಾರೆ. ‘ಕನ್ನಡ ನಾಡಿನ ಹೆಮ್ಮೆಯ ಸಂಗೀತಗಾರ ರಘು ದೀಕ್ಷಿತ್ ಹಾಗೂ ಪ್ರತಿಭಾವಂತ ಸಂಗೀತಗಾರ್ತಿ ವಾರಿಜಶ್ರೀ ವೇಣುಗೋಪಾಲ್ ಅವರ ವಿವಾಹದ ಈ ಶುಭ ಸಂದರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆಗಳು! ನಿಮ್ಮ ಜೀವನ ಸಂಗಮವು ಪ್ರೀತಿ, ಸಂತೋಷ ಮತ್ತು ಸಂಗೀತದ ಸುಂದರ ರಾಗಗಳಿಂದ ತುಂಬಿರಲಿ’ ಎಂದು ಅವರು ಹಾರೈಸಿದ್ದಾರೆ.

50 ವರ್ಷ ವಯಸ್ಸಿನ ರಘು ದೀಕ್ಷಿತ್ ಈ ಹಿಂದೆ ಖ್ಯಾತ ಡ್ಯಾನ್ಸರ್ ಮಯೂರಿ ಉಪಾಧ್ಯ (Mayuri Upadhya) ಅವರನ್ನು 2005ರಲ್ಲಿ ವಿವಾಹವಾಗಿದ್ದರು. ಬಳಿಕ ಇಬ್ಬರ ನಡುವೆ ವೈಮನಸ್ಸು ಮೂಡಿ 2019ರಲ್ಲಿ ಡಿವೋರ್ಸ್ ಪಡೆದು ಬೇರ್ಪಟ್ಟರು. ಇದೀಗ ಸಂಗೀತ ಕುಟುಂಬ ಹಿನ್ನೆಲೆಯಿಂದ ಬಂದ ಗಾಯಕಿ ವಾರಿಜಶ್ರೀ ಅವರನ್ನು ವಿವಾಹವಾಗಿದ್ದಾರೆ.

2008ರಲ್ಲಿ ತೆರೆಕಂಡ ಸೈಕೋ (Psycho) ಕನ್ನಡ ಚಿತ್ರದ ʼನಿನ್ನ ಪೂಜೆಗೆ ಬಂದೆ ಮಹಾದೇಶ್ವರʼ ಎಂಬ ಹಾಡಿನ ಮೂಲಕ ರಘು ದೀಕ್ಷಿತ್ ಗಮನ ಸೆಳೆದಿದ್ದರು. ಕನ್ನಡ ಜತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ಹಾಡಿದ್ದಾರೆ. ಗಾಯನದ ಜತೆಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ.
ʼಸೈಕೋʼ ಚಿತ್ರದ ಮೂಲಕ ಸಂಗೀತ ನಿರ್ದೇಶಕ, ಗಾಯಕನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಅದಾದ ಬಳಿಕ 2009ರಲ್ಲಿ ʼಕ್ವಿಕ್ ಗನ್ ಮುರುಗನ್ʼ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. 2010ರಲ್ಲಿ ರಿಲೀಸ್ ಆದ ಸುದೀಪ್-ರಮ್ಯಾ ನಟನೆಯ ʼಜಸ್ಟ್ ಮಾತ್ ಮಾತಲ್ಲಿʼ ಚಿತ್ರ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ಅವರು ಸಂಗೀತ ನೀಡಿ, ಧ್ವನಿ ನೀಡಿರುವ ʼಮುಂಜಾನೆ ಮಂಜಲ್ಲಿʼ ಹಾಡು ಇಂದಿಗೂ ಹಲವರ ಫೆವರೇಟ್ ಎನಿಸಿಕೊಂಡಿದೆ. 2016ರಲ್ಲಿ ರಿಲೀಸ್ ಆದ ʼಅವಿಯಾಲ್ʼ ರಘು ದೀಕ್ಷಿತ್ ಅವರ ಮೊದಲ ತಮಿಳು ಚಿತ್ರ. ʼಕೂಡೆʼ ಮೂಲಕ 2018ರಲ್ಲಿ ಮಾಲಿವುಡ್‌ಗೆ ಪ್ರವೇಶಿಸಿದ ಅವರು ಅದೇ ವರ್ಷ ʼಬಿ.ಟೆಕ್ʼ ತೆಲುಗು ವೆಬ್ ಸೀರೀಸ್‌ನಲ್ಲೂ ಕೆಲಸ ಮಾಡಿದರು. ʼಲವ್ ಮಾಕ್ಟೇಲ್ʼ ಚಿತ್ರದ ಹಾಡಿಗಾಗಿ 2019ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಈ ಸುದ್ದಿಯನ್ನೂ ಓದಿ | Vrusshabha Movie: ಕೊನೆಗೂ ವೃಷಭ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ ನಟ ಮೋಹನ್ ಲಾಲ್!
ವಾರಿಜಶ್ರೀ ವೇಣುಗೋಪಾಲ್ ಯಾರು?
ಕಿರುತೆರೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ಟಿ.ಎನ್. ಸೀತಾರಾಮ ನಿರ್ದೇಶನದ ‘ಮಗಳು ಜಾನಕಿ’ ಧಾರಾವಾಹಿಯ ಟೈಟಲ್ ಸಾಂಗ್ ಮೂಲಕ ಗಮನ ಸೆಳೆದ ಗಾಯಕಿ ವಾರಿಜಶ್ರೀ ವೇಣುಗೋಪಾಲ್. ಬೆಂಗಳೂರಿನ ಮೂಲದವರಾದ ಇವರು 2025ನೇ ಸಾಲಿನ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ವಾರಿಜಶ್ರೀ ಸಂಗೀತ ಹಿನ್ನೆಲೆಯ ಕುಟುಂಬದಿಂದ ಬಂದವರು. ಅವರ ತಂದೆ ಎಚ್.ಎಸ್. ವೇಣುಗೋಪಾಲ್ ಹಾಗೂ ತಾಯಿ ಟಿ.ವಿ. ರಮಾ ಸಂಗೀತ ಲೋಕದಲ್ಲಿ ಚಿರಪರಿಚಿತ ಹೆಸರು. ವಾರಿಜಶ್ರೀ ಕನ್ನಡದ ʼಪ್ರಿಯೆʼ, ʼಕಡಲ ತೀರದ ಭಾರ್ಗವʼ, ʼಟಗರುʼ ಸಿನಿಮಾಗಳಲ್ಲಿ ಹಾಡಿದ್ದಾರೆ. ಕನ್ನಡ ಜತೆಗೆ ತಮಿಳು, ತೆಲುಗು ಸಿನಿಮಾರಂಗದಲ್ಲಿ ಅವರು ಕೆಲಸ ಮಾಡಿದ್ದಾರೆ.