Pragathi Rishab Shetty: ದೀಪಾವಳಿ ವೇಳೆ ಬಾಕ್ಸ್ ಆಫೀಸ್ನಲ್ಲಿ ಇತಿಹಾಸ ಬರೆದ 'ಕಾಂತಾರ ಚಾಪ್ಟರ್ 1', ರಿಷಬ್ ಶೆಟ್ಟಿ ಮನೆಯಲ್ಲಿ ಡಬಲ್ ಸಂಭ್ರಮ
ನವರಾತ್ರಿಗೆ ತೆರೆಗೆ ಬಂದ ರಿಷಬ್ ಶೆಟ್ಟಿ-ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್ನ ಬಹುನಿರೀಕ್ಷಿತ ʼಕಾಂತಾರ ಚಾಪ್ಟರ್ 1' ಚಿತ್ರ ದೀಪಾವಳಿ ವೇಳೆ ಇತಿಹಾಸ ಬರೆದಿದೆ. ಬಾಕ್ಸ್ ಆಫೀಸ್ನಲ್ಲಿ 818 ಕೋಟಿ ರೂ. ಗಳಿಸಿದ ಇದು ಈ ವರ್ಷ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಈಗಲೂ ಜಾಗತಿಕವಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಶೀಘ್ರದಲ್ಲೇ 1 ಸಾವಿರ ಕೋಟಿ ರೂ. ಕ್ಲಬ್ ಸೇರಲಿದೆ. ಈ ಮಧ್ಯೆ ರಿಷಬ್ ಶೆಟ್ಟಿ ತಮ್ಮ ಮನೆಯಲ್ಲಿ ಸಂಭ್ರಮದಿಂದ ದೀಪಾವಳಿ ಆಚರಿಸಿದ್ದಾರೆ. ಸದ್ಯ ಅವರ ಪತ್ನಿ, ವಸ್ತ್ರ ವಿನ್ಯಾಸಕಿ ಪ್ರಗತಿ ಶೆಟ್ಟಿ ದೀಪಾವಳಿ ಆಚರಣೆಯ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.
ದೀಪಾವಳಿ ಸಂಭ್ರಮದಲ್ಲಿ ರಿಷಬ್ ಶೆಟ್ಟಿ ಕುಟುಂಬ -
Ramesh B
Oct 25, 2025 8:02 PM
ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿ ಸದ್ಯ ʼಕಾಂತಾರ ಚಾಪ್ಟರ್ 1' ಚಿತ್ರದ ಅಭೂತಪೂರ್ವ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸುವ ಜತೆಗೆ ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿದರೆ, ಪ್ರಗತಿ ಶೆಟ್ಟಿ ವಸ್ತ್ರ ವಿನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ರಿಷಬ್ ನಟನೆ, ನಿರ್ದೇಶನದ ಜತೆ ಪ್ರಗತಿ ಅವರ ವಸ್ತ್ರ ವಿನ್ಯಾಸವೂ ಗಮನ ಸೆಳೆದಿದೆ. 4ನೇ ಶತಮಾನದ ಕಥೆ ಇದರಲ್ಲಿದ್ದು, ಸಾಕಷ್ಟು ಅಧ್ಯಯನ ನಡೆಸಿ ಅಂದಿನ ಕಾಲದಲ್ಲಿದ್ದಂತಹ ಉಡುಗೆಯನ್ನು ಪ್ರಗತಿ ವಿನ್ಯಾಸಗೊಳಿಸಿದ್ದಾರೆ. ವಸ್ತ್ರ ವಿನ್ಯಾಸ ಕೂಡ ಚಿತ್ರದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದೀಗ ಅವರು ಮನೆಯಲ್ಲಿ ದೀಪಾವಳಿ ಆಚರಿಸಿ ಮತ್ತೊಮ್ಮೆ ಅಭಿಮಾನಗಳ ಮನ ಗೆದ್ದಿದ್ದಾರೆ.
ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿ ತಮ್ಮ ಮಕ್ಕಳಾದ ರಣ್ವೀತ್ ಶೆಟ್ಟಿ, ರಾಧ್ಯಾ ಜತೆ ಬೆಳಕಿನ ಹಬ್ಬವನ್ನು ಕೊಂಡಾಡಿದ್ದಾರೆ. ವಾಹನ ಪೂಜೆ ನಡೆಸಿ, ಪಟಾಕಿ ಸಿಡಿಸಿ, ದೀಪ ಬೆಳಗಿ ಸಂಪ್ರದಾಯಬದ್ಧವಾಗಿ ದೀಪಾವಳಿ ಆಚರಿಸಿದ್ದಾರೆ.
ದೀಪಾವಳಿ ಆಚರಣೆ ವೇಳೆ ರಿಷಬ್ ಶೆಟ್ಟಿ ಕುಟುಂಬ ಸಂಪ್ರದಾಯಿಕ ಉಡುಗೆ ತೊಟ್ಟು ಗಮನ ಸೆಳೆದಿದೆ. ರಿಷಬ್ ಮತ್ತು ರಣ್ವೀತ್ ಪಂಚೆ, ಷರ್ಟ್ ಧರಿಸಿದ್ದರೆ, ಪ್ರಗತಿ ಸೀರೆಯಲ್ಲಿ ಕಂಗೊಳಿಸಿದರು. ರಾಧ್ಯಾ ಆಕರ್ಷಕ ಫ್ರಾಕ್ನಲ್ಲಿ ಗಮನ ಸೆಳೆದಿದ್ದಾಳೆ.
ರಿಷಬ್ ಶೆಟ್ಟಿ ಪಕ್ಕಾ ಫ್ಯಾಮಿಲಿ ಮ್ಯಾನ್. ಎಷ್ಟೇ ಬ್ಯುಸಿ ಇದ್ದರೂ ಅವರು ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ. ಪತ್ನಿ, ಮಕ್ಕಳು, ತಂದೆ-ತಾಯಿಯೊಂದಿಗೆ ಹಬ್ಬ-ಹರಿದಿನ ಆಚರಿಸುತ್ತಾರೆ. ನಟನೆ, ಸಿನಿಮಾ ಜತೆಗೆ ಕುಟುಂಬಕ್ಕೂ ಪ್ರಾಮುಖ್ಯತೆ ನೀಡುತ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಈ ಹಿಂದೆ ರಿಷಬ್ ಶೆಟ್ಟಿ ಮನೆಯಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಫೋಟೊಗಳೂ ಗಮನ ಸೆಳೆದಿದ್ದವು. ರಣ್ವೀತ್, ರಾಧ್ಯಾಗೆ ಕೃಷ್ಣ, ರಾಧೆ ವೇಷ ಹಾಕಿ ಪ್ರಗತಿ ಫೋಟೊ ಶೂಟ್ ಮಾಡಿಸಿಕೊಂಡಿದ್ದರು. ಇದಕ್ಕೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಶಾಸ್ತ್ರೋಕ್ತವಾಗಿ ದೀಪಾವಳಿ ಆಚರಿಸಿಕೊಂಡ ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.