Naavu Nammavaru Show: ಹೊಸ ರಿಯಾಲಿಟಿ ಶೋಗೆ ಅಮೂಲ್ಯ ಎಂಟ್ರಿ: 8 ವರ್ಷಗಳ ಬಳಿಕ ತೆರೆಮೇಲೆ ಚೆಲುವಿನ ಚಿತ್ತಾರ ಚೆಲುವೆ
ಅಮೂಲ್ಯ ಅವರು ಯಾವುದೇ ಸಿನಿಮಾ ಮಾಡುತ್ತಿಲ್ಲ. ಬದಲಾಗಿ ನಾವು ನಮ್ಮವರು ರಿಯಾಲಿಟಿ ಶೋನಲ್ಲಿ ಇವರು ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ಅಮೂಲ್ಯ ಜೊತೆಗೆ ಸ್ಯಾಂಡಲ್ವುಡ್ ಅಧ್ಯಕ್ಷ ಶರಣ್ ಹಾಗೂ ಹಿರಿಯ ನಟಿ ತಾರಾ ಕೂಡ ಇದ್ದಾರೆ. ಸದ್ಯ ಇದರ ಹೊಸ ಪ್ರೊಮೋ ಬಿಡುಗಡೆ ಆಗಿದ್ದು ಕುತೂಹಲ ಮೂಡಿಸಿದೆ.

Amulya in Naavu Nammavaru

ಸ್ಯಾಂಡಲ್ವುಡ್ನ ಚೆಲುವಿನ ಚಿತ್ತಾರದ ಚೆಲುವೆ ನಟಿ ಅಮೂಲ್ಯ (Amulya) ಮದುವೆಯ ಬಳಿಕ ಬಣ್ಣ ಹಚ್ಚಲಿಲ್ಲ. ಹಾಗಂತ ಬಣ್ಣಕ್ಕೆ ಅವರು ವಿದಾಯವನ್ನೂ ಹೇಳಿರಲಿಲ್ಲ. ಅನೇಕ ವರ್ಷಗಳಿಂದ ಅವರು ನಟನೆಗೆ ಕಮ್ಬ್ಯಾಕ್ ಮಾಡುತ್ತಾರೆ ಎಂಬ ಮಾತು ಕೇಳಿಬರುತ್ತಲೇ ಇದೆ. ಕೊನೆಯದಾಗಿ ಇವರು 2017ರ ಮುಗುಳು ನಗೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಕ್ಕಳಾದ ಬಳಿಕ ಅಮೂಲ್ಯ ಫ್ಯಾಮಿಲಿಯಲ್ಲೇ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಇದೀಗ ಬರೋಬ್ಬರಿ ಸುಮಾರು ಎಂಟು ವರ್ಷಗಳ ಬಳಿ ಅಮೂಲ್ಯ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು, ಅಮೂಲ್ಯ ಅವರು ಯಾವುದೇ ಸಿನಿಮಾ ಮಾಡುತ್ತಿಲ್ಲ. ಬದಲಾಗಿ ರಿಯಾಲಿಟಿ ಶೋ ಒಂದರಲ್ಲಿ ಇವರು ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡಿಗರ ನೆಚ್ಚಿನ ವಾಹಿನಿ ಝೀ ಕನ್ನಡ ಜನರನ್ನು ತನ್ನ ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂಲಕ ಮನರಂಜಿಸುತ್ತ ಬಂದಿದೆ. ಈಗ ಇದರಲ್ಲಿ ‘ನಾವು ನಮ್ಮವರು’ ರಿಯಾಲಿಟಿ ಶೋ ಶುರುವಾಗಲಿದೆ. ಸಂಬಂಧಗಳ ಮಹತ್ವ ತಿಳಿಸುವ ಈ ಶೋನಲ್ಲಿ ಅಮೂಲ್ಯ ಜಡ್ಜ್ ಆಗಿದ್ದಾರೆ.
ಈ ರಿಯಾಲಿಟಿ ಶೋನಲ್ಲಿ ಅಮೂಲ್ಯ ಜೊತೆಗೆ ಸ್ಯಾಂಡಲ್ವುಡ್ ಅಧ್ಯಕ್ಷ ಶರಣ್ ಹಾಗೂ ಹಿರಿಯ ನಟಿ ತಾರಾ ಕೂಡ ಇದ್ದಾರೆ. ಸದ್ಯ ಇದರ ಹೊಸ ಪ್ರೊಮೋ ಬಿಡುಗಡೆ ಆಗಿದ್ದು ಕುತೂಹಲ ಮೂಡಿಸಿದೆ. ಸಂಬಂಧಗಳು ನಿಜವಾಗಿರೋ ಕಥೆಗಳನ್ನು ಮರೆಯಲಾಗದು! ಪ್ರೀತಿ, ನಗು, ಒಗ್ಗಟ್ಟು ಹಾಗೂ ಬಾಂಧವ್ಯದ ಕ್ಷಣಗಳನ್ನು ಹೊತ್ತು ಬರ್ತಿದೆ...ನಾವು ನಮ್ಮವರು ಎನ್ನುತ್ತಾ ಪ್ರೊಮೋ ರಿಲೀಸ್ ಮಾಡಲಾಗಿದೆ.
ಪ್ರೊಮೋದಲ್ಲಿ ಹುಬ್ಬಳ್ಳಿ ಸುರಂಗದ ಮೂಲಕ ಸಾಗುವ ರೈಲಿನಲ್ಲಿ ಶರಣ್ ಹಾಗೂ ತಾರಾ ತಿಂಡಿಯನ್ನು ಹಂಚಿಕೊಳ್ಳುತ್ತಾ, ಹಳೆಯ ಕಥೆಗಳನ್ನು ಹೇಳುತ್ತಾ ಸಾಗುತ್ತಾರೆ. ಮನೆಗೆ ಬಂದವರಿಗೆ ಒಂದು ತುತ್ತಾದರೂ ತಿನಿಸಬೇಕು ಎಂದು ನಮ್ಮ ಅತ್ತೆ ಯಾವಾಗಲೂ ಹೇಳುವವರು ಎನ್ನುವ ತಾರಾ, ಊರಲ್ಲಿ ದಾರಿಯಲ್ಲಿ ಸಿಕ್ಕಿದವರನ್ನೆಲ್ಲಾ ಟ್ರಾಕ್ಟರ್ ಗೆ ಹತ್ತಿಸಿ, ಹಳೆಯ ಚಿತ್ರ ಗೀತೆ ಕೇಳುತ್ತಾ, ಅಮ್ಮ ಕೊಟ್ಟ ಬುತ್ತಿ ತಿನ್ನುವ ನೆನೆಪೇ ಚೆಂದ ಎನ್ನುತ್ತಾರೆ ಶರಣ್.
ಇವರ ಮಾತುಕತೆ ಬಳಿಕ ಎಂಟ್ರಿ ಕೊಡುವ ಅಮೂಲ್ಯ ಬಾಲ್ಯದಲ್ಲಿ ಮಾವನ ಮಕ್ಕಳ ಜೊತೆ ಸೇರಿ ಹೂವು ಕಟ್ಟಿದ ನೆನಪನ್ನು ಹೇಳುತ್ತಾರೆ. ಈವಾಗ ಶರಣ್ ನಾವು ನಮ್ಮವರ ಜೊತೆ ಊರಲ್ಲಿ ಇದ್ದು ಬಿಟ್ರೆ ಎಷ್ಟು ಚೆಂದ ಅಲ್ವಾ? ಎನ್ನುತ್ತಾರೆ. ಕೊನೆಗೆ ಎಲ್ಲರೂ ಊರು ತಲುಪುತ್ತಾರೆ. ಸ್ಟೆಷನ್ ನಲ್ಲಿ ಅವರನ್ನು ಸ್ವಾಗತಿಸಲು ಅಜ್ಜ ಅಜ್ಜಿಯಿಂದ ಹಿಡಿದು ಪುಟ್ಟ ಮಕ್ಕಳವರೆಗೂ ನೆರೆದಿರುತ್ತಾರೆ. ಆ ಮೂಲಕ ಇದು ಸಂಬಂಧಗಳ ಸಂಭ್ರಮ ಸಾರುವ ಹಬ್ಬ ಎಂದು ತೋರಿಸಿಕೊಟ್ಟಿದ್ದಾರೆ.
ನಾವು ನಮ್ಮವರು ರಿಯಾಲಿಟಿ ಶೋ ಇದೇ ಆಗಸ್ಟ್ 2ರಿಂದ ಆರಂಭವಾಗಲಿದೆ. ಆದರೆ, ಇದು ಹೇಗಿರುವ ರಿಯಾಲಿಟಿ ಶೋ, ಯಾವ ರೀತಿ ನಡೆಯಲಿದೆ, ಇದರ ನಿರೂಪಕರು ಯಾರು ಎಂಬ ಹುಟ್ಟನ್ನು ಝೀ ವಾಹಿನಿ ಇನ್ನೂ ರಟ್ಟು ಮಾಡಿಲ್ಲ. ಸದ್ಯ ಪ್ರಮೋ ಭರ್ಜರಿ ವೈರಲ್ ಆಗುತ್ತಿದೆ.