ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಎಸ್. ಜಾನಕಿ ಇನ್ನಿಲ್ಲ; ಮೈಸೂರಿನಲ್ಲಿ ನಿಧನ
ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಡಿದ್ದ ಖ್ಯಾತ ಗಾಯಕಿ ಎಸ್. ಜಾನಕಿ ನಿಧನ ಹೊಂದಿದ್ದಾರೆ. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಅವರು ಶನಿವಾರ ವಯೋಸಹಜ ಕಾಯಿಲೆಯಿಂದ ಮೃತಪಟ್ಟರು.
ಗಾಯಕಿ ಎಸ್. ಜಾನಕಿ (ಸಂಗ್ರಹ ಚಿತ್ರ) -
ಮೈಸೂರು, ಜು. 11: ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಡಿದ್ದ ಖ್ಯಾತ ಗಾಯಕಿ ಎಸ್. ಜಾನಕಿ (S Janaki) ನಿಧನ ಹೊಂದಿದ್ದಾರೆ. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಅವರು ಶನಿವಾರ (ಜುಲೈ 11) ವಯೋಸಹಜ ಕಾಯಿಲೆಯಿಂದ ಮೃತಪಟ್ಟರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅವರು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರ ಪೂರ್ಣ ಹೆಸರು ಸಿಸ್ತ್ಲಾ ಶ್ರೀರಾಮಮೂರ್ತಿ ಜಾನಕಿ. 1938ರ ಏಪ್ರಿಲ್ 23ರಂದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಲ ಗ್ರಾಮದಲ್ಲಿ ಜನಸಿದ ಅವರು ಬಾಲ್ಯದಲ್ಲೇ ಸಂಗೀತದತ್ತ ಆಕರ್ಷಿತರಾಗಿದ್ದರು.
ಕೇವಲ 3ನೇ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದ ಜಾನಕಿ ಪೈಡಿಸ್ವಾಮಿ ಎಂಬ ನಾದಸ್ವರ ವಿದ್ವಾನರಿಂದ ಸಂಗೀತದ ಮೂಲ ಪಾಠಗಳನ್ನು ಕಲಿತರು. ವಿಶೇಷ ಎಂದರೆ ಯಾವುದೇ ಶಾಸ್ತ್ರೀಯ ಸಂಗೀತದ ಔಪಚಾರಿಕ ತರಬೇತಿಯನ್ನು ಪೂರ್ತಿಯಾಗಿ ಪಡೆಯದಿದ್ದರೂ ಹಲವು ದಶಕಗಳ ಕಾಲ ಸಂಗೀತ ಲೋಕವನ್ನು ಅಕ್ಷರಶಃ ಆಳಿದ್ದರು.
ಎಸ್. ಜಾನಕಿ ನಿಧನ:
ತನ್ನ ವೃತ್ತಿ ಬದುಕಿನಲ್ಲಿ ಸರಿ ಸುಮಾರು 48000 ಕ್ಕೂ ಹೆಚ್ಚು ಗೀತೆಗಳನ್ನು ಹಾಡಿ, " ದಕ್ಷಿಣ ಭಾರತದ ಕೋಗಿಲೆ" ಎಂದು ಹೆಸರು ಗಳಿಸಿದ ಖ್ಯಾತ ಗಾಯಕಿ ಎಸ್.ಜಾನಕಿ ಅವರು ನಮ್ಮನ್ನು ಅಗಲಿದ್ದು ಅವರಿಗೆ ನನ್ನ ಭಾವಪೂರ್ಣ ನಮನಗಳು.#Rip pic.twitter.com/cHpvNipARW
— Dr H C Mahadevappa(Buddha Basava Ambedkar Parivar) (@CMahadevappa) July 11, 2026
ಗಾನ ಕೋಗಿಲೆ ಎಸ್.ಜಾನಕಿಯ ಸಂಗೀತ ಲೋಕದ ಪಯಣವಿದು
ರಾಷ್ಟ್ರ ಪ್ರಶಸ್ತಿ
ಸುಮಧುರ ಕಂಠದಿಂದಲೇ ಮೋಡಿ ಮಾಡುವ ಎಸ್. ಜಾನಕಿ ತಮ್ಮ ಹಲವು ವರ್ಷಗಳ ವೃತ್ತಿ ಜೀವನದಲ್ಲಿ 4 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. 1977ರಲ್ಲಿ ತಮಿಳಿನ ʼ16 ವಯತಿನಿಲೆʼ, 1981ರಲ್ಲಿ ಮಲಯಾಳಂನ ʼಒಪ್ಪೋಳ್ʼ, 1984ರಲ್ಲಿ ತೆಲುಗಿನ ʼಸಿತಾರʼ ಮತ್ತು 1992ರಲ್ಲಿ ತಮಿಳಿನ ʼದೇವರ್ ಮಗನ್ʼ ಚಿತ್ರದ ಹಾಡಿಗಾಗಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಸಂದಿದೆ. ಜತೆಗೆ 31 ರಾಜ್ಯ ಪ್ರಶಸ್ತಿಗಳನ್ನೂ ಮುಡಿಗೇರಿಸಿದ್ದರು. ಇದರಲ್ಲಿ ಕೇರಳ ಸರ್ಕಾರದ 11, ಆಂಧ್ರ ಪ್ರದೇಶದ 10 ಮತ್ತು ತಮಿಳುನಾಡು 6 ಪ್ರಶಸ್ತಿ ಸೇರಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಅವರಿಗೆ ಸಂದಿತ್ತು. ಎಸ್. ಜಾನಕಿ 20ಕ್ಕಿಂತ ಅಧಿಕ ಭಾರತೀಯ ಭಾಷೆಗಳ 48,000 ಹಾಡುಗಳಿಗೆ ಧ್ವನಿಯಾಗಿದ್ದರು. ಅತೀ ಹೆಚ್ಚು ಧ್ವನಿ ನೀಡಿದ್ದು ಕನ್ನಡ ಗೀತೆಗಳಿಗೆ ಎನ್ನುವುದು ವಿಶೇಷ.
ಎಸ್. ಜಾನಕಿ ಚಿತ್ರಗೀತೆ ಮಾತ್ರವಲ್ಲ ಭಕ್ತಿ ಗೀತೆಗಳನ್ನೂ ತಮ್ಮ ಸುಮಧುರ ಕಂಠದಿಂದ ಹಾಡಿದ್ದರು. ಗಾಯನ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಕೊಡುಗೆಯನ್ನು ಗಮನಿಸಿ ಅವರನ್ನು ದಕ್ಷಿಣ ಭಾರತದ ಗಾನ ಕೋಗಿಲೆ ಎಂದು ಕರೆಯಲಾಗುತ್ತಿತ್ತು. ಕೇಂದ್ರ ಸರ್ಕಾರ 2013ರಲ್ಲಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಕರ್ನಾಟಕದ ಬಗ್ಗೆ ಅಪಾರ ಗೌರವ ಹೊಂದಿದ್ದ ಅವರು ತಮ್ಮ ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆದಿದ್ದರು. ಅಚ್ಚರಿ ಎಂದರೆ ಅವರು ತಮ್ಮ ನಿವೃತ್ತಿಯನ್ನು ಮೈಸೂರಿನಲ್ಲೇ ಘೋಷಿಸಿದ್ದರು.
ಡಾ. ರಾಜ್‌ಕುಮಾರ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಪಿ.ಬಿ. ಶ್ರೀನಿವಾಸ್ ಮುಂತಾದವರ ಜತೆ ಎಸ್. ಜಾನಕಿ ಹಾಡಿರುವ ಬಹುತೇಕ ಕನ್ನಡ ಹಾಡುಗಳು ಸೂಪರ್ ಹಿಟ್ ಆಗಿವೆ. ಜೆನ್ ಝೀ ತಲೆಮಾರಿನವರೂ ಅವರ ಹಾಡನ್ನು ಗುನುಗುತ್ತಿರುತ್ತಾರೆ ಎಂದರೆ ಅವರ ಜನಪ್ರಿಯತೆಯ ಆಳ ಅರಿವಾಗುತ್ತದೆ.
ವಿದೇಶಿ ಭಾಷೆಗಳ ಹಾಡು
ಭಾರತೀಯ ಭಾಷೆಗಳ ಹಾಡುಗಳಲ್ಲದೆ ಜಮಾನೀಸ್, ಜರ್ಮನ್, ಇಂಗ್ಲಿಷ್, ಫ್ರೆಂಚ್, ಸಿಂಹಳ ಭಾಷೆಯ ಹಾಡುಗಳೂ ಜಾನಕಿ ಅವರ ಕಂಠದಿಂದ ಮೂಡಿ ಬಂದಿವೆ.