Su From So OTT Release Update: 100 ಕೋಟಿ ರೂ. ಕ್ಲಬ್ ಸೇರಿದ ʼಸು ಫ್ರಮ್ ಸೋʼ ಒಟಿಟಿಗೆ ಲಗ್ಗೆ ಇಡಲು ಸಜ್ಜು
Su From So Movie: 5.5 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ ಇದೀಗ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿರುವ, ಬಹುತೇಕ ಹೊಸಬರೇ ಸೇರಿ ತೆರೆಗೆ ತಂದ ʼಸು ಫ್ರಮ್ ಸೋʼ ಚಿತ್ರ ಇದೀಗ ಒಟಿಟಿಗೆ ಲಗ್ಗ ಇಡಲು ಸಜ್ಜಾಗಿದೆ. ಯಾವ ಒಟಿಟಿ ಫ್ಲ್ಯಾಟ್‌ಫಾರ್ಮ್‌ಗೆ ಈ ಚಿತ್ರ ಸೇಲಾಯ್ತು ಎನ್ನುವ ವಿವರ ಇಲ್ಲಿದೆ.


ಬೆಂಗಳೂರು: ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ʼಸು ಫ್ರಮ್ ಸೋʼ ಚಿತ್ರ (Su From So Movie) ಇದೀಗ 100 ಕೋಟಿ ರೂ. ಕ್ಲಬ್ ಸೇರಿದೆ. ಯಾವುದೇ ಸ್ಟಾರ್‌ಗಳಿಲ್ಲದೆ, ಅಬ್ಬರದ ಪ್ರಚಾರವಿಲ್ಲದೆ ತೆರೆಗೆ ಬಂದು ಎಲ್ಲರನ್ನೂ ಅಚ್ಚರಿಗೆ ದೂಡಿ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಮೋಡಿ ಮಾಡುತ್ತಿದೆ. ಸೂಪರ್ ಸ್ಟಾರ್ ಚಿತ್ರಗಳಿಗೆ ಸೆಡ್ಡು ಹೊಡೆದು ಹಲವು ಕಡೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದ್ದು ಈ ಹಾರರ್ ಕಾಮಿಡಿ ಚಿತ್ರದ ವಿಶೇಷತೆ. ಕರಾವಳಿ ಪ್ರತಿಭೆ, ರಂಗಭೂಮಿ ಹಿನ್ನೆಲೆಯ ಜೆ.ಪಿ. ತುಮಿನಾಡ್ (J.P. Tuminad) ನಿರ್ದೇಶನದ ಮೊದಲ ಕನ್ನಡ ಸಿನಿಮಾ ಇದಾಗಿದ್ದು, ವಿಮರ್ಶಕರ ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ಜುಲೈ 25ರಂದು ರಿಲೀಸ್ ಆದ ಈ ಚಿತ್ರ ಇದೀಗ 26 ದಿನ ಪೂರೈಸಿದ್ದು, ಒಟಿಟಿಗೆ ಯಾವಾಗ ಲಗ್ಗೆ ಇಡಲಿದೆ (Su From So OTT Release Update) ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ.
ಈ ಹಿಂದೆ ʼಸು ಫ್ರಮ್ ಸೋʼ ಸಿನಿಮಾದ ಒಟಿಟಿ ಹಕ್ಕನ್ನು ಅಮೇಜಾನ್ ಪ್ರೈಮ್ ವಿಡಿಯೊ ಪಡೆದುಕೊಂಡಿದೆ ಎನ್ನಲಾಗಿತ್ತು. ಆದರೆ ಇದೀಗ ಬಂದಿರುವ ವರದಿಯ ಪ್ರಕಾರ ಚಿತ್ರದ ರೈಟ್ಸ್ ಮತ್ತೊಂದು ಪ್ರಮುಖ ಒಟಿಟಿ ಫ್ಲ್ಯಾಟ್‌ಫಾರ್ಮ್ ಪಾಲಾಗಿದೆ.
ಈ ಸುದ್ದಿಯನ್ನೂ ಓದಿ: Su From So Movie: ಸ್ಯಾಂಡಲ್‌ವುಡ್‌ನಲ್ಲಿ ʼಸು ಫ್ರಮ್ ಸೋʼ ಸುನಾಮಿ; ಮತ್ತೊಂದು ʼಕಾಂತಾರʼ ಎಂದ ಫ್ಯಾನ್ಸ್
ಎಲ್ಲಿ ಪ್ರಸಾರವಾಗಲಿದೆ?
123ತೆಲುಗು ವೆಬ್‌ಸೈಟ್ ಪ್ರಕಾರ ಸಿನಿಮಾ ಒಟಿಟಿ ಹಕ್ಕು ಜಿಯೋಹಾಟ್‌ಸ್ಟಾರ್ (JioHotstar) ಪಾಲಾಗಿದೆಯಂತೆ. ಸದ್ಯ ಯಾವಾಗ ಸ್ಟ್ರೀಮಿಂಗ್ ಆಗಲಿದೆ ಎನ್ನುವ ಮಾಹಿತಿಯನ್ನು ಜಿಯೋಹಾಟ್‌ಸ್ಟಾರ್ ಪ್ರಕಟಿಸಿಲ್ಲ. ಥಿಯೇಟರ್‌ಗಳಲ್ಲಿ ಪ್ರದರ್ಶನ ನಿಲ್ಲಿಸಿದ ಬಳಿಕ ಬಹುಶಃ ಮುಂದಿನ ತಿಂಗಳು ಒಟಿಟಿಯಲ್ಲಿ ಪ್ರಸಾರವಾಗುವ ಸಾಧ್ಯತೆ ಇದೆ. ಸ್ಯಾಟ್‌ಲೈಟ್ ಹಕ್ಕನ್ನು ಕಲರ್ಸ್ ಕನ್ನಡ ಪಡೆದುಕೊಂಡಿದೆ. ದಾಖಲೆಯ ಮೊತ್ತಕ್ಕೆ ಹಕ್ಕು ಮಾರಾಟವಾಗಿದೆ ಎನ್ನಲಾಗಿದೆ. ಸದ್ಯದಲ್ಲೇ ಈ ಕುರಿತಾದ ಅಧಿಕೃತ ಮಾಹಿತಿ ಹೊರ ಬೀಳಲಿದೆ.
ಅಪರೂಪದ ದಾಖಲೆ ಬರೆದ ʼಸು ಫ್ರಮ್ ಸೋʼ
ಸುಮಾರು 5.5 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ʼಸು ಫ್ರಮ್ ಸೋʼ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ 105 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿದೆ. ಕನ್ನಡ ಜತೆಗೆ ಮಲಯಾಳಂ ಮತ್ತು ತೆಲುಗಿನಲ್ಲೂ ರಿಲೀಸ್ ಆಗಿದ್ದು, ಅಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿಶೇಷ ಎಂದರೆ ರಜನಿಕಾಂತ್ ನಟನೆಯ ತಮಿಳಿನ ʼಕೂಲಿʼ ಮತ್ತು ಹೃತಿಕ್ ರೋಷನ್-ಜೂ. ಎನ್‌ಟಿಆರ್ ಕಾಂಬಿನೇಷನ್ ಹಿಂದಿಯ ʼವಾರ್ 2ʼ ಚಿತ್ರಗಳ ಸವಾಲನ್ನೂ ಎದುರಿಸಿ ಸ್ಥಿರವಾಗಿ ನಿಂತಿರುವುದು ಈ ಚಿತ್ರದ ಹೆಚ್ಚುಗಾರಿಕೆ. ಆ ಮೂಲಕ 2015ರ ʼರಂಗಿ ತರಂಗʼ ಸಿನಿಮಾವನ್ನು ನೆನಪಿಸಿದೆ. ಅನೂಪ್ ಭಂಡಾರಿ ಮೊದಲ ಬಾರಿ ನಿರ್ದೇಶಿಸಿದ, ನಿರೂಪ್ ಭಂಡಾರಿ-ರಾಧಿಕಾ ನಾರಾಯಣ್-ಆವಂತಿಕಾ ಶೆಟ್ಟಿ ನಟನೆಯ ʼರಂಗಿ ತರಂಗʼ ಕನ್ನಡ ಚಿತ್ರ 2015ರ ಜುಲೈ 3ರಂದು ರಿಲೀಸ್ ಆಗಿತ್ತು. ಅದಾಗಿ 1 ವಾರದ ನಂತರ ಅಂದರೆ ಜುಲೈ 10ರಂದು ಪ್ಯಾನ್ ಇಂಡಿಯಾ ಸಿನಿಮಾ ʼಬಾಹುಬಲಿʼ ತೆರೆಕಂಡಿತ್ತು. ಈ ಬಿಗ್ ಬಜೆಟ್ ಚಿತ್ರದ ಭರಾಟೆಯ ನಡುವೆಯೂ ʼರಂಗಿ ತರಂಗʼ ಉತ್ತಮ ಪ್ರದರ್ಶನ ಕಂಡಿತ್ತು.
ಕರಾವಳಿ ಕರ್ನಾಟಕದ ಊರೊಂದರಲ್ಲಿ ನಡೆಯುವ ಕಥೆಯನ್ನು ಹೇಳುವ ʼಸು ಫ್ರಮ್ ಸೋʼ ಸಿನಿಮಾದಲ್ಲಿ ಜೆ.ಪಿ. ತುಮಿನಾಡ್, ರಾಜ್ ಬಿ. ಶೆಟ್ಟಿ, ಪ್ರಕಾಶ್ ತುಮಿನಾಡ್, ಶನೀಲ್ ಗೌತಮ್, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಸಂಧ್ಯಾ ಅರೆಕರೆ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.