ರಾಯರ ಸನ್ಯಾಸ ದೀಕ್ಷೆಯ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿ
ಜೀ ಕನ್ನಡ ವಾಹಿನಿಯ ಯಶಸ್ವಿ ಭಕ್ತಿ ಪ್ರಧಾನ ಧಾರಾವಾಹಿ ‘ಶ್ರೀ ರಾಘವೇಂದ್ರ ಮಹಾತ್ಮೆ’ ಅತ್ಯಂತ ನಿರ್ಣಾಯಕ ಘಟ್ಟ ತಲುಪಿದೆ. ವೆಂಕಟನಾಥರು ಸಂಸಾರ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸುವಾಗ ಪತ್ನಿ ಸರಸ್ವತಿಯ ಮಾನಸಿಕ ತೊಳಲಾಟ ಪ್ರೇಕ್ಷಕರನ್ನು ಭಾವುಕರನ್ನಾಗಿಸಿದೆ.
-
ಜೀ ಕನ್ನಡ ವಾಹಿನಿಯಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರಸಾರವಾಗುತ್ತಿರುವ ಭಕ್ತಿಪ್ರಧಾನ ಧಾರಾವಾಹಿ ‘ಶ್ರೀ ರಾಘವೇಂದ್ರ ಮಹಾತ್ಮೆ’ ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದೆ. ಕಲಿಯುಗದ ಕಲ್ಪವೃಕ್ಷ, ಕಾಮಧೇನು ಎಂದೇ ಖ್ಯಾತರಾದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಪವಿತ್ರ ಜೀವನ ಪಯಣ ಹಾಗೂ ಮಹಿಮೆಗಳನ್ನು ತೆರೆಮೇಲೆ ಅದ್ಭುತವಾಗಿ ಮೂಡಿಸುತ್ತಿರುವ ಈ ಕಥಾಹಂದರಕ್ಕೆ ಕರ್ನಾಟಕದ ಮನೆಮನೆಯಿಂದಲೂ ಅಭೂತಪೂರ್ವ ಪ್ರಶಂಸೆ ಹಾಗೂ ಮೆಚ್ಚುಗೆ ಹರಿದುಬರುತ್ತಿದೆ.
ಪವಾಡದ ದೃಶ್ಯಗಳು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದ್ದವು
ಈ ಪೌರಾಣಿಕ ಸರಣಿಯು ರಾಯರ ಪೂರ್ವಜನ್ಮಗಳಾದ ಶಂಕುಕರ್ಣನ ಜನ್ಮ ರಹಸ್ಯದಿಂದ ಹಿಡಿದು ಭಕ್ತ ಪ್ರಹ್ಲಾದ, ಬಾಹ್ಲೀಕ ರಾಜ ಮತ್ತು ಶ್ರೀ ವ್ಯಾಸರಾಜರ ಅವತಾರಗಳ ರೋಚಕ ಇತಿಹಾಸವನ್ನು ಅನಾವರಣಗೊಳಿಸಿದೆ. ಈ ಪುಣ್ಯಪುರುಷರು ಕೊನೆಗೆ ನಾಲ್ಕನೇ ಜನ್ಮದಲ್ಲಿ ಭುವನಗಿರಿ ಎಂಬ ಪವಿತ್ರ ಗ್ರಾಮದಲ್ಲಿ ತಿಮ್ಮಣ್ಣ ಭಟ್ಟ ಮತ್ತು ಗೋಪಿಕಾಂಬ ದಂಪತಿಯ ಮಗನಾಗಿ ‘ವೆಂಕಟನಾಥ’ ಎಂಬ ಹೆಸರಿನಿಂದ ಜನಿಸಿದ ದೃಶ್ಯಗಳು ಭಕ್ತರ ಕಣ್ಮನ ಸೆಳೆದಿವೆ.
ʻಸರಿಗಮಪ ಲಿಟಲ್ ಚಾಂಪ್ಸ್ʼ ಶೋ ಆರಂಭಕ್ಕೆ ಮುಹೂರ್ತ ಫಿಕ್ಸ್: ಜೀ ಕನ್ನಡದಲ್ಲಿ ಪುಟಾಣಿಗಳ ಸ್ವರ ಸಂಭ್ರಮ
ಇತ್ತೀಚಿನ ಸಂಚಿಕೆಗಳಲ್ಲಿ ರೈತರಿಗೆ ವಿತರಿಸಿದ್ದ ಹುಳು ಬಿದ್ದ ಭತ್ತದ ಮೂಟೆಯನ್ನು ವೆಂಕಟನಾಥರು ತಮ್ಮ ತಪೋಶಕ್ತಿ ಹಾಗೂ ಮಂತ್ರಾಕ್ಷತೆಯಿಂದ ಪರಿಶುದ್ಧಗೊಳಿಸಿದ ಪವಾಡದ ದೃಶ್ಯಗಳು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದ್ದವು.
ಭಾವುಕರಾಗಿದ್ದ ಪ್ರೇಕ್ಷಕರು
ಇದರ ಜೊತೆಗೆ, ಬಡತನದ ಬೇಗೆಯಲ್ಲಿದ್ದ ವೆಂಕಟನಾಥರು ಸಂಸಾರ ಜೀವನವನ್ನು ತ್ಯಜಿಸಿ ಸನ್ಯಾಸತ್ವದ ಕಡೆಗೆ ಹೆಜ್ಜೆ ಇಡುವಾಗ ಅವರ ಧರ್ಮಪತ್ನಿ ಸರಸ್ವತಿಯವರು ಅನುಭವಿಸುವ ಮಾನಸಿಕ ತೊಳಲಾಟ ಹಾಗೂ ಆರ್ತನಾದದ ಸನ್ನಿವೇಶಗಳು ಇಡೀ ಕಥೆಯನ್ನು ಭಾವುಕತೆಯ ಉತ್ತುಂಗಕ್ಕೆ ಕೊಂಡೊಯ್ದಿವೆ. ಪ್ರೇಕ್ಷಕರು ಈ ದೃಶ್ಯಗಳನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ.
ಈ ವಾರಾಂತ್ಯದ ಮಹಾ ಸಂಚಿಕೆಯ ವಿಶೇಷತೆ
ಪ್ರಸ್ತುತ ಕಥೆ ಅತ್ಯಂತ ಕುತೂಹಲಕಾರಿ ಘಟ್ಟವನ್ನು ತಲುಪಿದ್ದು, ಈ ವಾರಾಂತ್ಯದ ಸಂಚಿಕೆಗಳಲ್ಲಿ ಇತಿಹಾಸದ ಸುವರ್ಣ ಕ್ಷಣಗಳು ಅನಾವರಣಗೊಳ್ಳಲಿವೆ. ತಂಜಾವೂರಿನ ವೈಭವದ ಅರಮನೆಯಲ್ಲಿ, ರಾಜ ರಘುನಾಥ ಭೂಪಾಲನ ದಿವ್ಯ ಸಮ್ಮುಖದಲ್ಲಿ ವೆಂಕಟನಾಥರ ಪರಮಗುರುಗಳಾದ ಶ್ರೀ ಸುಧೀಂದ್ರ ತೀರ್ಥರು ಅವರಿಗೆ ಸನ್ಯಾಸ ದೀಕ್ಷೆಯನ್ನು ಕರುಣಿಸಲಿದ್ದಾರೆ. ಕಾವಿ ವಸ್ತ್ರ ಧರಿಸಿ, ದಂಡ ಹಾಗೂ ಕಮಂಡಲ ಹಿಡಿದು ಭವಬಂಧನಗಳಿಂದ ಮುಕ್ತರಾಗುವ ವೆಂಕಟನಾಥರಿಗೆ ‘ಶ್ರೀ ರಾಘವೇಂದ್ರ ತೀರ್ಥರು’ ಎಂದು ಮರುನಾಮಕರಣ ಮಾಡುವ ಮಹತ್ವದ ಐತಿಹಾಸಿಕ ಘಟನೆಗಳು ಭಕ್ತಿ ಹಾಗೂ ವೈರಾಗ್ಯದ ಸಂಕೇತವಾಗಿ ಮೂಡಿಬರಲಿವೆ.
ಅದ್ಭುತ ನಟನೆಯ ಮೂಲಕ ರಾಯರ ಪಾತ್ರಕ್ಕೆ ಜೀವ ತುಂಬುತ್ತಿರುವ ಯುವ ನಟ ಪರೀಕ್ಷಿತ್ ಅವರ ಅಭಿನಯ ಸದ್ಯ ಪ್ರೇಕ್ಷಕರ ಮನ ಗೆದ್ದಿದೆ. ಭವ್ಯವಾದ ಸೆಟ್‌ಗಳು, ಅತ್ಯುನ್ನತ ಗ್ರಾಫಿಕ್ಸ್ ತಂತ್ರಜ್ಞಾನ ಹಾಗೂ ಕಿವಿಗೆ ಇಂಪಾದ ಭಕ್ತಿಗೀತೆಗಳು ಈ ಧಾರಾವಾಹಿಯ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಗುರುಗಳ ಪರಂಪರೆ ಹಾಗೂ ರಾಯರ ಆದರ್ಶಗಳನ್ನು ಕಣ್ತುಂಬಿಕೊಳ್ಳಲು ಮರೆಯದೇ ವೀಕ್ಷಿಸಿ, ‘ಶ್ರೀ ರಾಘವೇಂದ್ರ ಮಹಾತ್ಮೆ’ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.