"ನಾವೆಲ್ಲರೂ ಒಂದಲ್ಲ ಒಂದು ದಿನ ಹೋಗಲೇಬೇಕು": 4 ದಿನಗಳ ಹಿಂದೆಯಷ್ಟೇ ಸಾವಿನ ಕುರಿತು ಮಾತನಾಡಿದ್ದ ನಾನಾ ಪಾಟೇಕರ್
ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿಧನರಾಗುವುದಕ್ಕೂ ಕೆಲವೇ ದಿನಗಳ ಮುನ್ನ ಅವರು ಗೋವಾದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆ ವೇಳೆ ಜೀವನ ಹಾಗೂ ಸಾವಿನ ಕುರಿತು ಅವರು ಆಡಿದ್ದ ಮಾರ್ಮಿಕ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಅಭಿಮಾನಿಗಳನ್ನು ಭಾವುಕರನ್ನಾಗಿಸಿವೆ.
ಇಂಟರ್ ನೆಟ್ ಚಿತ್ರ -
ಪಣಜಿ: ಭಾರತೀಯ ಚಿತ್ರರಂಗದ ಹಿರಿಯ ನಟ, ಪದ್ಮಶ್ರೀ ಪುರಸ್ಕೃತ ನಾನಾ ಪಾಟೇಕರ್ (Nana Patekar) ಅವರು ಅಕ್ಟೋಬರ್ 8 ರಂದು ಇಂದು ಗೋವಾದ (Goa) ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ, ಅವರು ನಿಧನರಾಗುವುದಕ್ಕೂ ಕೇವಲ ನಾಲ್ಕು ದಿನಗಳ ಹಿಂದೆ ಗೋವಾದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇ ವೇಳೆ ಅವರು ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಭಾರಿ ವೈರಲ್ ಅಗುತ್ತಿವೆ. ಇದೇ ಕೊನೆಯದಾಗಿ ನಾನಾ ಪಾಟೇಕರ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ.
ಅಕ್ಟೋಬರ್ 4 ರಂದು ಗೋವಾದ ದೊನಾ ಪೌಲಾದಲ್ಲಿ ನಡೆದ 'ಸಮ್ರಾಟ್ ಕ್ಲಬ್ ಇಂಟರ್ನ್ಯಾಷನಲ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾನಾ ಪಾಟೇಕರ್, ಬಿಳಿ ಕುರ್ತಾ ಹಾಗೂ ಬಿಳಿ ಶಾಲು ಧರಿಸಿ ವೇದಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ತಮ್ಮ ಆಪ್ತ ಸ್ನೇಹಿತ ಹಾಗೂ ಗೋವಾದ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರನ್ನು ನೆನೆದಿದ್ದರು. ಆ ವೇಳೆ ಮಾತನಾಡುತ್ತಾ, ತಮ್ಮ ಸಾವಿನ ಮುನ್ಸೂಚನೆ ಎಂಬಂತೆ ಜೀವನದ ನಶ್ವರತೆಯ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದರು
ʼʼನಾವೆಲ್ಲರೂ ಒಂದಲ್ಲ ಒಂದು ದಿನ ಈ ಲೋಕದಿಂದ ಹೋಗಲೇಬೇಕು. ನಾಳೆ ನಾನು ಇಲ್ಲೇ ಇರುತ್ತೇನೋ ಇಲ್ಲವೋ ನನಗೆ ಗೊತ್ತಿಲ್ಲ. ಪ್ರತಿಯೊಬ್ಬರ ಜೀವನವೂ ಒಂದಲ್ಲ ಒಂದು ದಿನ ಆ ಹಂತವನ್ನು ತಲುಪುತ್ತದೆ. ಆದರೆ, ಆ ಕ್ಷಣ ಬರುವ ಮೊದಲು ನಾನು ಸಮಾಜಕ್ಕೆ ಏನು ಮಾಡಬೇಕೋ ಅದನ್ನು ಮಾಡಲು ಸಾಧ್ಯವಾಗುತ್ತಿದೆಯೇ ಎಂದು ನನ್ನನ್ನು ನಾನೇ ಕೇಳಿಕೊಳ್ಳಬೇಕು. ನನ್ನ ಜೀವನ ಕೇವಲ ನನ್ನ ಹೆಂಡತಿ, ಮಕ್ಕಳು ಮತ್ತು ಮನೆಗೆ ಮಾತ್ರ ಸೀಮಿತವಾಗಿದ್ದರೆ, ನನ್ನ ಹುಟ್ಟಿನ ಉದ್ದೇಶವೇನು?ʼʼ ಎಂದು ಹೇಳಿದ್ದರು.
ಅಕ್ಟೋಬರ್ 8 ರಂದು ಮುಂಜಾನೆ ಗೋವಾದ ಅಪಾರ್ಟ್‌ಮೆಂಟ್‌ನಲ್ಲಿ ನಾನಾ ಪಾಟೇಕರ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಸುಮಾರು 45 ನಿಮಿಷಗಳ ಕಾಲ ವೈದ್ಯರು ನೀಡಿದ ಸಿಪಿಆರ್ ಚಿಕಿತ್ಸೆಗೆ ಅವರ ದೇಹ ಸ್ಪಂದಿಸಲಿಲ್ಲ. ಬೆಳಗ್ಗೆ 5:10 ರ ಸುಮಾರಿಗೆ ಅವರು ಕೊನೆಯುಸಿರೆಳೆದರು ಎಂದು ವೈದ್ಯರು ಅಧಿಕೃತವಾಗಿ ಘೋಷಿಸಿದರು.
VIDEO | Goa: Actor Nana Patekar attended and addressed the Samraat Club International installation ceremony in Dona Paula. (Full video available on PTI Videos - https://t.co/d8jp61yd2p) https://t.co/jl8xn9vXOk
— Press Trust of India (@PTI_News) October 4, 2026
ಚಲನಚಿತ್ರ ರಂಗಕ್ಕೆ ತುಂಬಲಾರದ ನಷ್ಟ
ಜನವರಿ 1, 1951 ರಂದು ಮಹಾರಾಷ್ಟ್ರದಲ್ಲಿ ಜನಿಸಿದ ವಿಶ್ವನಾಥ್ ಪಾಟೇಕರ್, ಚಿತ್ರರಂಗದಲ್ಲಿ 'ನಾನಾ ಪಾಟೇಕರ್' ಎಂದೇ ಪ್ರಖ್ಯಾತರಾಗಿದ್ದರು. ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ದಶಕಗಳ ಕಾಲ ತಮ್ಮ ಖಡಕ್ ದೈಲಾಗ್ ಹಾಗೂ ಅದ್ಭುತ ಅಬಿನಯದ ಮೂಲಕ ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ನಾನಾ ಪಾಟೇಕರ್ ಅವರ ಹಠಾತ್ ನಿಧನಕ್ಕೆ ಇಡೀ ಚಿತ್ರರಂಗದ, ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
1978 ರಲ್ಲಿ 'ಗಮನ್' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರಿಗೆ, ಸಲಾಂ ಬಾಂಬೆ ಮತ್ತು ಪರಿಂದಾ ಸಿನಿಮಾಗಳು ದೊಡ್ಡ ಬ್ರೇಕ್ ನೀಡಿದವು. ತದನಂತರ ತಿರಂಗಾ, ಕ್ರಾಂತಿವೀರ್, ಖಾಮೋಶಿ: ದಿ ಮ್ಯೂಸಿಕಲ್, ಯಶವಂತ್, ಅಬ್ ತಕ್ ಛಪ್ಪನ್, ಅಪಹರಣ್ ಮತ್ತು ರಾಜನೀತಿ ಯಂತಹ ಹೈ-ವೋಲ್ಟೇಜ್ ಸಿನಿಮಾಗಳ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದರು. ಕೇವಲ ಗಂಭೀರ ನಟನೆಯಷ್ಟೇ ಅಲ್ಲದೆ, 'ಪ್ರಹಾರ್: ದಿ ಫೈನಲ್ ಅಟ್ಯಾಕ್' ಚಿತ್ರದ ಮೂಲಕ ನಿರ್ದೇಶಕರಾಗಿಯೂ ಸೈ ಎನಿಸಿಕೊಂಡರು. ಸದಾ ಗಂಭೀರ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಾನಾ, 'ವೆಲ್‌ಕಮ್' ಸರಣಿಯ ಚಿತ್ರಗಳಲ್ಲಿ 'ಉದಯ ಶೆಟ್ಟಿ' ಎಂಬ ಹಾಸ್ಯಮಯ ಪಾತ್ರ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಈ ಪಾತ್ರ ಇಂದಿಗೂ ಸೋಶಿಯಲ್ ಮೀಡಿಯಾದಲ್ಲಿ ಮೀಮ್‌ಗಳಾಗಿ ವೈರಲ್ ಆಗುತ್ತಲೇ ಇರುತ್ತದೆ.
ಕನ್ನಡ ಚಿತ್ರರಂಗದಲ್ಲೂ ನಟನೆ
ನಾನಾ ಪಾಟೇಕರ್ ಅವರು ಕನ್ನಡ ಚಿತ್ರರಂಗದಲ್ಲೂ ನಟಿಸಿದ್ದಾರೆ. ನಾನಾ ಪಾಟೇಕರ್ 2010 ರಲ್ಲಿ ತೆರೆಕಂಡ ಕನ್ನಡ ಯಕ್ಷ ಸಿನಿಮಾದಲ್ಲಿ ನಟಿಸಿದ್ದರು. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಾನಾ ಪಾಟೇಕರ್ ಅವರು ಯೋಗರಾಜ್ ಪುಲಕೇಶ್ ಎಂಬ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದರು.
ಸಿನಿಮಾ ಹಾಗೂ ಕಲಾಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಅವರಿಗೆ 2013 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರೊಂದಿಗೆ ಮೂರು ರಾಷ್ಟ್ರಪ್ರಶಸ್ತಿಗಳು ಹಾಗೂ ಹಲವಾರು ಪ್ರತಿಷ್ಠಿತ ಗೌರವಗಳು ಅವರಿಗೆ ಲಭಿಸಿವೆ. ನಟನೆಯ ಜೊತೆಗೆ ಸಾಮಾಜಿಕ ಕೆಲಸಗಳಲ್ಲೂ ನಾನಾ ಸಕ್ರಿಯರಾಗಿದ್ದರು. ಮಹಾರಾಷ್ಟ್ರದ ಸರಣಿ ಆತ್ಮಹತ್ಯೆಗೆ ಶರಣಾಗುತ್ತಿದ್ದ ಬಡ ರೈತರ ನೆರವಿಗೆ ನಿಂತು ದೊಡ್ಡ ಮಟ್ಟದ ಧನಸಹಾಯ ಮಾಡಿದ್ದರು. ಜೊತೆಗೆ 'ಆಪರೇಷನ್ ಸಿಂಧೂರ್' ವೇಳೆ ಗಡಿಭಾಗದ ಶೆಲ್ಲಿಂಗ್‌ಗೆ ಒಳಗಾದ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ, ತಮ್ಮ ಸ್ವಯಂಸೇವಾ ಸಂಸ್ಥೆ ಮೂಲಕ ಆರ್ಥಿಕ ನೆರವು ನೀಡಿದ್ದರು.