ಜಂತರ್ ಮಂತರ್ ಪ್ರತಿಭಟನೆಗೂ ಮುನ್ನವೇ ಶಾಕ್; CJP ನಾಯಕರಾದ ಅಭಿಜೀತ್ ದೀಪ್ಕೆ, ಅಶುತೋಷ್ ರಂಕಾ, ಸೌರವ್ ದಾಸ್ ವಶಕ್ಕೆ
ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಸಹ-ಸಂಯೋಜಕ ಅಶುತೋಷ್ ರಂಕಾ ಮತ್ತು ವಕ್ತಾರ ಸೌರವ್ ದಾಸ್ ಅವರನ್ನು ಮುಂಬೈನಿಂದ ದೆಹಲಿಗೆ ಬಂದಿಳಿದ ಕೆಲವೇ ನಿಮಿಷಗಳಲ್ಲಿ ದೆಹಲಿ ಪೊಲೀಸರು ವಿಮಾನದ ಒಳಗಡೆಯೇ ವಶಕ್ಕೆ ಪಡೆದಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಸಹ-ಸಂಯೋಜಕ ಅಶುತೋಷ್ ರಂಕಾ ಮತ್ತು ವಕ್ತಾರ ಸೌರವ್ ದಾಸ್ ಅವರನ್ನು ಮುಂಬೈನಿಂದ ದೆಹಲಿಗೆ ಬಂದಿಳಿದ ಕೆಲವೇ ನಿಮಿಷಗಳಲ್ಲಿ ದೆಹಲಿ ಪೊಲೀಸರು ವಿಮಾನದ ಒಳಗಡೆಯೇ ವಶಕ್ಕೆ ಪಡೆದಿದ್ದಾರೆ. ಮುಂಬೈನಿಂದ ಬಂದ ವಿಮಾನವು ದೆಹಲಿ ವಿಮಾನ ನಿಲ್ದಾಣದ ರನ್‌ವೇನಲ್ಲಿ ಇಳಿಯುತ್ತಿದ್ದಂತೆ, ದೆಹಲಿ ಪೊಲೀಸರ ವಿಶೇಷ ತಂಡವೊಂದು ವಿಮಾನದ ಒಳಗೆ ಪ್ರವೇಶಿಸಿತು. ಪ್ರಯಾಣಿಕರು ವಿಮಾನದಿಂದ ಕೆಳಗೆ ಇಳಿಯುವ ಮುನ್ನವೇ ಈ ಮೂವರನ್ನು ಬಂಧಿಸಲಾಗಿದೆ.
ಪೊಲೀಸರು ವಿಮಾನದೊಳಗೆ ಬಂದ ತಕ್ಷಣ ಅಭಿಜೀತ್ ದೀಪ್ಕೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಲೈವ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ನಾವು ವಿಮಾನದಿಂದ ಕೆಳಗೆ ಇಳಿಯುವವರೆಗೂ ಪೊಲೀಸರು ಕಾಯಬಹುದಿತ್ತು. ನಾವು ಜೈಲಿಗೆ ಹೋಗಲು ಹೆದರುವುದಿಲ್ಲ" ಎಂದು ನಾಯಕರು ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದಕ್ಕೂ ಮುನ್ನ ಹರಿಯಾಣ ಪೊಲೀಸರ ಜಂಟಿ ತಂಡವು ಶನಿವಾರ ಮುಂಜಾನೆ ಗುರುಗ್ರಾಮದಲ್ಲಿರುವ ಧ್ರುವ್ ರಾಠೀ ನಿವಾಸದಿಂದ ಅವರನ್ನು ಬಂಧಿಸಿದೆ. ಕೆಲ ದಿನಗಳ ಹಿಂದಷ್ಟೇ ಜರ್ಮನಿಯಿಂದ ಭಾರತಕ್ಕೆ ಮರಳಿದ್ದ ಧ್ರುವ್ ರಾಠಿ ಅವರು ಗುರುಗ್ರಾಮದ ಸೆಕ್ಟರ್ 56 ರಲ್ಲಿರುವ ಕೇಂದ್ರೀಯ ವಿಹಾರ್ ಸೊಸೈಟಿಯ ನಿವಾಸದಲ್ಲಿದ್ದರು. ಶನಿವಾರ ಮುಂಜಾನೆ ಸುಮಾರು 7:48 ಕ್ಕೆ ಧ್ರುವ್ ರಾಠಿ ಅವರ ನಿವಾಸಕ್ಕೆ ಆಗಮಿಸಿದ ಪೊಲೀಸರು ಅವರನ್ನು ವಶಕ್ಕೆ ಪಡೆದರು. ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾಕ್ರೋಚ್ ಜನತಾ ಪಾರ್ಟಿ (CJP) ತನ್ನ ಪ್ರಮುಖ ನಾಯಕರ ಬಂಧನ ಮತ್ತು ದೆಹಲಿ ಪೊಲೀಸರ ಬಿಗಿ ಭದ್ರತೆಯ ನಡುವೆಯೂ ತನ್ನ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದೆ. ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪಕ್ಷ ಘೋಷಿಸಿದೆ.