ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

10 ವರ್ಷಗಳಲ್ಲಿ ಕೇಂದ್ರದಿಂದ 17 ಕೋಟಿ ಉದ್ಯೋಗ ಸೃಷ್ಟಿ; ಯುಪಿಎ ಅವಧಿಗಿಂತ 6 ಪಟ್ಟು ಹೆಚ್ಚು: ಸಚಿವ ಮನ್ಸುಖ್ ಮಾಂಡವಿಯಾ ಮಾಹಿತಿ

17 Crore Jobs Created in 10 Years: 2014 ಮತ್ತು 2024ರ ನಡುವೆ ದೇಶದಲ್ಲಿ 17 ಕೋಟಿಗೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು. ಇದು ಯುಪಿಎ ಅವಧಿಯಲ್ಲಿನ ಬೆಳವಣಿಗೆಗಿಂತ ಸುಮಾರು ಆರು ಪಟ್ಟು ಹೆಚ್ಚು ಎಂದು ಅವರು ವಿವರಿಸಿದರು.

10 ವರ್ಷಗಳಲ್ಲಿ 17 ಕೋಟಿ ಉದ್ಯೋಗ ಸೃಷ್ಟಿ: ಕೇಂದ್ರ ಸರ್ಕಾರದಿಂದ ಮಾಹಿತಿ

ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ (ಸಂಗ್ರಹ ಚಿತ್ರ) -

Priyanka P
Priyanka P Aug 4, 2026 9:10 PM

ನವದೆಹಲಿ, ಆ. 4: ಉದ್ಯೋಗಾವಕಾಶಗಳ ಕೊರತೆ ಮತ್ತು ನಿರುದ್ಯೋಗದ ಬಗ್ಗೆ ಜೆನ್‌ ಝೀ (ಯುವ ಜನತೆ) ಸಮುದಾಯದಲ್ಲಿ ಆತಂಕ ಹೆಚ್ಚುತ್ತಿರುವ ನಡುವೆಯೇ ಕೇಂದ್ರ ಸರ್ಕಾರ (Central Government) ಮಂಗಳವಾರ (ಆಗಸ್ಟ್‌ 4) ಉದ್ಯೋಗ ಸೃಷ್ಟಿಯ ಅಂಕಿ-ಅಂಶ ಪ್ರಸ್ತುತ ಪಡಿಸಿದೆ. 2014 ಮತ್ತು 2024ರ ಅವಧಿಯಲ್ಲಿ ಭಾರತದಲ್ಲಿ 17 ಕೋಟಿಗೂ ಹೆಚ್ಚು ಹೊಸ ಉದ್ಯೋಗ ಸೃಷ್ಟಿಯಾಗಿದೆ ಎಂದು ಸರ್ಕಾರ ಹೇಳಿದೆ.

ಉದ್ಯೋಗ, ಕೌಶಲ್ಯ ಅಭಿವೃದ್ಧಿ ಮತ್ತು ಸಾಮಾಜಿಕ ಭದ್ರತೆಯಲ್ಲಿ ಸರ್ಕಾರ ಸಾಧಿಸಿದ ಪ್ರಗತಿಯ ಅಂಕಿ-ಅಂಶಗಳನ್ನು ಎನ್‌ಡಿಎ ಸಂಸದರ ಸಭೆಯಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಹಂಚಿಕೊಂಡರು. ಹಿಂದಿನ ಯುಪಿಎ ಸರ್ಕಾರದ 2004 ಮತ್ತು 2014ರ ಅವಧಿಗೆ ಹೋಲಿಸಿದರೆ ಎನ್‌ಡಿಎ ಸರ್ಕಾರವು ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧನೆಗೆ ಉದ್ಯೋಗ ಸೃಷ್ಟಿ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿದೆ. ಯುಪಿಎ ಆಡಳಿತದ ವೇಳೆ ಭಾರತವು ವಿಶ್ವದ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು ಮತ್ತು ಉದ್ಯೋಗ ಬೆಳವಣಿಗೆ ನಿಧಾನವಾಗಿತ್ತು ಎಂದರು.

10 ವರ್ಷಗಳಲ್ಲಿ 17 ಕೋಟಿ ಉದ್ಯೋಗಗಳು

ಭಾರತೀಯ ರಿಸರ್ವ್ ಬ್ಯಾಂಕ್ ಡೇಟಾವನ್ನು ಉಲ್ಲೇಖಿಸಿದ ಮಾಂಡವಿಯಾ, 2014 ಮತ್ತು 2024ರ ನಡುವೆ ದೇಶದಲ್ಲಿ 17 ಕೋಟಿಗೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ಹೇಳಿದರು. ಅವರ ಪ್ರಕಾರ, ಇದು ಯುಪಿಎ ಅವಧಿಯಲ್ಲಿನ ಬೆಳವಣಿಗೆಗಿಂತ ಸುಮಾರು 6 ಪಟ್ಟು ಹೆಚ್ಚಿನ ಬೆಳವಣಿಗೆ ದಾಖಲಿಸಿದೆ ಎಂದು ಅವರು ಹೇಳಿದರು.

ದೇಶದ ಯುವ ಜನತೆಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆ ವಿವರಿಸಿದ ಪ್ರಧಾನಿ ಮೋದಿ

ಈ ದಶಕದಲ್ಲಿ ದೇಶವು ವಾರ್ಷಿಕವಾಗಿ ಸರಾಸರಿ 1.7 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಸರ್ಕಾರ ಹೇಳಿದೆ. ಇದು ಔಪಚಾರಿಕ ವಲಯದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಎತ್ತಿ ತೋರಿಸಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಅಡಿಯಲ್ಲಿ ನೋಂದಾಯಿಸಲಾದ ಸಂಸ್ಥೆಗಳು ಮತ್ತು ಉದ್ಯೋಗಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ.

ಜಾಗತಿಕ ಉದ್ಯೋಗ ಸೂಚಕಗಳಲ್ಲಿ ಭಾರತದ ಸ್ಥಾನದಲ್ಲಿನ ಸುಧಾರಣೆಗಳ ಬಗ್ಗೆಯೂ ಅಂಕಿ-ಅಂಶ ಗಮನ ಸೆಳೆದಿದೆ. ಸರ್ಕಾರ ಉಲ್ಲೇಖಿಸಿದ ವಿಶ್ವಬ್ಯಾಂಕ್ ಮತ್ತು ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆ (PLFS) ದತ್ತಾಂಶದ ಪ್ರಕಾರ, ಭಾರತದ ನಿರುದ್ಯೋಗ ದರವು 2025ರಲ್ಲಿ ಶೇ. 3.1ಕ್ಕೆ ಇಳಿದಿದೆ. ಇದು ಜಾಗತಿಕ ಸರಾಸರಿ ಶೇ. 4.8ಕ್ಕಿಂತ ಕಡಿಮೆ.

ಜಿ20 ದೇಶಗಳೊಳಗಿನ ಹಲವು ಪ್ರಮುಖ ಅಭಿವೃದ್ಧಿ ಹೊಂದಿದ ಮತ್ತು ಉದಯೋನ್ಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತದ ಉದ್ಯೋಗ ಸೂಚಕಗಳ ಕಾರ್ಯಕ್ಷಮತೆ ಉತ್ತಮವಾಗಿದೆ ಎಂದು ಸರ್ಕಾರ ಹೇಳಿದೆ.

ಯುವಕರ ಉದ್ಯೋಗ ಮತ್ತು ಸಾಮರ್ಥ್ಯ ವೃದ್ಧಿಗೆ ಸರ್ಕಾರ ನೀಡಿದ ಆದ್ಯತೆಯಿಂದ ಕಾರ್ಮಿಕರ ಉದ್ಯೋಗ ಪಾಲ್ಗೊಳ್ಳುವಿಕೆ ಮತ್ತು ಉದ್ಯೋಗಾರ್ಹತೆಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಸರ್ಕಾರ ವಿವರಿಸಿದೆ. ವರದಿ ಪ್ರಕಾರ, ಯುವಕರ ಉದ್ಯೋಗ ದರವು ಶೇ. 41.4ಕ್ಕಿಂತ ಹೆಚ್ಚಾಗಿದೆ. ಇದೇ ವೇಳೆ, ಪದವೀಧರರ ಉದ್ಯೋಗಾರ್ಹತೆ ಶೇ. 66ರಷ್ಟು ಸುಧಾರಿಸಿದೆ ಎಂದು ತಿಳಿಸಲಾಗಿದೆ.

ಕೇವಲ ಊಟ ತರುವುದಲ್ಲ, ದೇಶದ ಆರ್ಥಿಕತೆಯನ್ನೇ ಬದಲಿಸುತ್ತಿವೆ ಫುಡ್ ಡೆಲಿವರಿ ಆಪ್‌ಗಳು!

ಈ ಗಮನಾರ್ಹ ಪ್ರಗತಿಗೆ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ, ಸ್ಟಾರ್ಟ್-ಅಪ್ ಇಂಡಿಯಾ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ವಿಶ್ವಕರ್ಮ ಯೋಜನೆ ಮತ್ತು ಲಖ್ಪತಿ ದೀದಿ ಉಪಕ್ರಮ ಸೇರಿ ಹಲವು ಯೋಜನೆಗಳು ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇವು ಸ್ವ-ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುತ್ತವೆ. ಪ್ರಧಾನ ಮಂತ್ರಿ ವಿಕಸಿತ್‌ ಭಾರತ್ ರೋಜ್‌ಗಾರ್ ಯೋಜನೆಯಡಿ, ಸರ್ಕಾರವು 3.5 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.

ಮೂಲಸೌಕರ್ಯಕ್ಕಾಗಿ ದೊಡ್ಡ ಪ್ರಮಾಣದ ಬಂಡವಾಳ ವೆಚ್ಚವು ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸಿದೆ ಎಂದು ಸರ್ಕಾರ ಹೇಳಿದೆ. ರೈಲ್ವೆ, ಹೆದ್ದಾರಿಗಳು, ಮೆಟ್ರೋ, ವಿಮಾನ ನಿಲ್ದಾಣಗಳು, ಇಂಧನ ಮತ್ತು ನಗರಾಭಿವೃದ್ಧಿ ಯೋಜನೆಗಳಲ್ಲಿನ ಹೂಡಿಕೆಗಳು ಸುಮಾರು 5.88 ಕೋಟಿ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಮನ್ಸುಖ್ ಮಾಂಡವಿಯಾ ಹೇಳಿದರು.