ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಶ್ಚಿಮ ಏಷ್ಯಾ ಸಂಘರ್ಷ; ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ

PM Narendra Modi Chairs Meeting: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನಡೆದ ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದರು. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಭಾರತ ಮತ್ತು ವಿಶ್ವ ಆರ್ಥಿಕತೆಯ ಮೇಲೆ ಉಂಟು ಮಾಡಬಹುದಾದ ಪರಿಣಾಮಗಳ ಬಗ್ಗೆ ಚರ್ಚಿಸಿದರು.

ಪ್ರಧಾನಿ ಅಧ್ಯಕ್ಷತೆಯಲ್ಲಿ ಆರ್ಥಿಕ ಸಲಹಾ ಮಂಡಳಿ ಸದಸ್ಯರ ಸಭೆ

ಪರಧಾನಿ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಆರ್ಥಿಕ ಸಲಹಾ ಮಂಡಳಿಯ ಸದಸ್ಯರ ಸಭೆ ನಡೆಯಿತು -

Priyanka P
Priyanka P Jun 6, 2026 5:37 PM

ನವದೆಹಲಿ, ಜೂ. 6: ಪ್ರಧಾನಿ ನರೇಂದ್ರ ಮೋದಿ (PM Narendra Modi) ಶನಿವಾರ (ಜೂನ್‌ 6) ಪ್ರಧಾನ ಮಂತ್ರಿ ಅವರ ಆರ್ಥಿಕ ಸಲಹಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದರು. ಈ ವೇಳೆ ಜಾಗತಿಕ ಅನಿಶ್ಚಿತತೆ ಮತ್ತು ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳ ನಡುವೆಯೂ ಭಾರತದ ಆರ್ಥಿಕ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳುವ ತಂತ್ರಗಳ ಕುರಿತು ಚರ್ಚೆ ನಡೆಸಲಾಯಿತು. ಮೂಲಗಳ ಪ್ರಕಾರ, ಆರ್ಥಿಕ ಬೆಳವಣಿಗೆಯನ್ನು ಬಲಪಡಿಸುವುದು, ಬಾಹ್ಯ ಆಘಾತಗಳ ವಿರುದ್ಧ ದೇಶದ ಸ್ಥೈರ್ಯವನ್ನು ಹೆಚ್ಚಿಸುವುದು ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಸೇರಿ ಹಲವು ವಿಚಾರಗಳು ಮತ್ತು ನೀತಿ ಕ್ರಮಗಳ ಬಗ್ಗೆ ಮಾತುಕತೆ ನಡೆಯಿತು.

ಮಂಡಳಿಯ ಸದಸ್ಯರು ಬದಲಾಗುತ್ತಿರುವ ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿದರು. ಜತೆಗೆ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಭಾರತ ಮತ್ತು ವಿಶ್ವ ಆರ್ಥಿಕತೆಯ ಮೇಲೆ ಉಂಟು ಮಾಡಬಹುದಾದ ಪರಿಣಾಮಗಳ ಬಗ್ಗೆ ಚರ್ಚಿಸಿದರು.

ದೀರ್ಘಾವಧಿಯ ಇಂಧನ ಸಹಭಾಗಿತ್ವಕ್ಕೆ ವೆನೆಜುವೆಲಾ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ

ಇಂಧನ ಮಾರುಕಟ್ಟೆಗಳು, ಸರಬರಾಜು ಸರಪಳಿಗಳು, ಹಣದುಬ್ಬರದ ಒತ್ತಡಗಳು ಮತ್ತು ಜಾಗತಿಕ ವ್ಯಾಪಾರ ಹರಿವಿನ ಮೇಲೆ ಬೀರುವ ಸಾಧ್ಯತೆಯ ಪರಿಣಾಮಗಳ ಕುರಿತು ಕೂಡ ಚರ್ಚೆ ನಡೆಯಿತು ಎನ್ನಲಾಗಿದೆ. ಇಂಧನ ಪೂರೈಕೆಯ ಮೇಲಿನ ಅನಿಶ್ಚಿತತೆ ಮತ್ತು ಭಾರತ ಸೇರಿ ಪ್ರಮುಖ ಆಮದು ರಾಷ್ಟ್ರಗಳ ಮೇಲೆ ಪಶ್ಚಿಮ ಏಷ್ಯಾ ಸಂಘರ್ಷ ಬೀರುವ ಪರಿಣಾಮಗಳನ್ನು ಸೂಕ್ಷ್ಮವಾಗಿ ಗಮನಿಸಲಾಯಿತು.

ಶುಕ್ರವಾರ ವಿಶ್ವ ಪರಿಸರ ದಿನದ ಅಂಗವಾಗಿ ಸೂರತ್‌ನಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಸ್ತುತ ಜಗತ್ತು ವಿಪತ್ತುಗಳ ದಶಕವಾಗಿ ರೂಪುಗೊಳ್ಳುತ್ತಿದೆ ಎಂದು ಹೇಳಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗ, ಸಶಸ್ತ್ರ ಸಂಘರ್ಷ, ಇಂಧನ ಮಾರುಕಟ್ಟೆಯಲ್ಲಿನ ಅಸ್ಥಿರತೆ ಹಾಗೂ ಸರಬರಾಜು ಸರಪಳಿಗಳಲ್ಲಿನ ವ್ಯತ್ಯಯಗಳಂತಹ ಸತತ ಜಾಗತಿಕ ಬಿಕ್ಕಟ್ಟುಗಳು ಈ ದಶಕದ ಪ್ರಮುಖ ಲಕ್ಷಣಗಳಾಗಿವೆ ಎಂದು ಅವರು ವಿವರಿಸಿದರು.

ಪ್ರಧಾನಿ ಮೋದಿ ಇಂಧನ ಮತ್ತು ಇತರ ಪ್ರಮುಖ ಕ್ಷೇತ್ರಗಳಲ್ಲಿ ಸ್ವಾವಲಂಬನೆಯ ಮಹತ್ವವನ್ನು ಪದೇ ಪದೆ ಒತ್ತಿ ಹೇಳಿದರು. ಜಾಗತಿಕ ಮಟ್ಟದ ಅಡಚಣೆಗಳು ಮತ್ತು ಬಿಕ್ಕಟ್ಟುಗಳು, ವಿದೇಶಿ ಅವಲಂಬನೆಗಳಿಂದ ಉಂಟಾಗುವ ದುರ್ಬಲತೆಗಳನ್ನು ಕಡಿಮೆ ಮಾಡುವ ಅಗತ್ಯವನ್ನು ಎತ್ತಿ ತೋರಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಇತ್ತೀಚಿನ ವಾರಗಳಲ್ಲಿ, ಜಾಗತಿಕ ಇಂಧನ ಬೆಲೆಗಳು ಏರಿಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಸಂಪನ್ಮೂಲಗಳನ್ನು ವಿವೇಚನಾಪೂರ್ವಕವಾಗಿ ಮತ್ತು ಮಿತವ್ಯಯದಿಂದ ಬಳಸುವಂತೆ ಸರ್ಕಾರವು ಕರೆ ನೀಡಿದೆ.