ಅಭಿಷೇಕ್ ಬ್ಯಾನರ್ಜಿಗೆ ಮತ್ತೊಂದು ಸಂಕಷ್ಟ: ಬಿಜೆಪಿ ಮುಖಂಡನ ಕೊಲೆಗೆ ಯತ್ನಿಸಿದ ಟಿಎಂಸಿ ನಾಯಕ?
Another Trouble for Abhishek Banerjee: 2018ರಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್‌ನಲ್ಲಿ ತಮ್ಮ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಅಭಿಜಿತ್ ದಾಸ್ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಅಭಿಜಿತ್ ದಾಸ್, ಅಭಿಷೇಕ್ ಬ್ಯಾನರ್ಜಿ (ಸಂಗ್ರಹ ಚಿತ್ರ) -
ಕೋಲ್ಕತ್ತಾ, ಜೂ. 10: ಪಶ್ಚಿಮ ಬಂಗಾಳದಲ್ಲಿ (West Bengal) ದಿನಕ್ಕೊಂದು ನಾಟಕೀಯ ಬೆಳವಣಿಗೆಗಳು ಸಂಭವಿಸುತ್ತಿವೆ. ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. 2018ರಲ್ಲಿ ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್‌ನಲ್ಲಿ ತಮ್ಮ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಅಭಿಜಿತ್ ದಾಸ್ ಇದೀಗ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಪಕ್ಷದ ಶಾಸಕರ ಸಹಿಗಳನ್ನು ನಕಲಿ ಮಾಡಿದ ಆರೋಪದ ಮೇಲೆ ಈಗಾಗಲೇ ತನಿಖೆಯನ್ನು ಎದುರಿಸುತ್ತಿರುವ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ತಲೆಗೆ ಮತ್ತೊಂದು ಪ್ರಕರಣ ಸುತ್ತಿಕೊಂಡಿದೆ. ಎಂಟು ವರ್ಷಗಳ ಹಿಂದೆ ದಾಸ್ ಮೇಲೆ ಹತ್ಯೆಗೆ ಯತ್ನಿಸಿದ ಕ್ರಿಮಿನಲ್ ಪಿತೂರಿ ನಡೆಸಿದ ಆರೋಪ ಅವರ ಮೇಲಿದೆ.
ದಾಸ್ ಈ ದಾಳಿಯನ್ನು ರಾಜಕೀಯ ಬೆಂಬಲಿತ ಹಲ್ಲೆ ಎಂದು ಆರೋಪಿಸಿ, ಪ್ರಕರಣದ ಬಗ್ಗೆ ಶೀಘ್ರ ಹಾಗೂ ನಿಗದಿತ ಅವಧಿಯೊಳಗಿನ ತನಿಖೆ ನಡೆಸುವಂತೆ ಕೋರಿ ಡೈಮಂಡ್ ಹಾರ್ಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ಹಲ್ಲೆ ಪ್ರಕರಣ: ಐವರ ಬಂಧನದ ಬಳಿಕ ಸ್ಪೋಟಕ ಸತ್ಯ ಬಹಿರಂಗ
ರಾಜಕೀಯ ವಿರೋಧಿಗಳನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವ ಪೂರ್ವ ಯೋಜಿತ ದಾಳಿ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದಿಂದ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿದ್ದ ದಾಸ್, ಈ ಘಟನೆ ಆ ಪ್ರದೇಶದಲ್ಲಿ ಬಿಜೆಪಿಯ ರಾಜಕೀಯ ಬೆಳವಣಿಗೆಯನ್ನು ತಡೆಯುವ ಉದ್ದೇಶದಿಂದ ರೂಪಿಸಲಾದ ದೊಡ್ಡ ಸಂಚಿನ ಭಾಗವಾಗಿತ್ತು ಎಂದು ಆರೋಪಿಸಿದ್ದಾರೆ.
ದೂರಿನ ಪ್ರಕಾರ, ಈ ಘಟನೆ 2018ರ ಡಿಸೆಂಬರ್ 21ರ ಮಧ್ಯಾಹ್ನ 2:40 ರ ಸುಮಾರಿಗೆ ಡೈಮಂಡ್ ಹಾರ್ಬರ್‌ನ ಕಪತ್ ಹ್ಯಾಟ್‌ನಲ್ಲಿರುವ ಸ್ವಸ್ತಿಕ್ ಭವನದ ಬಳಿ ನಡೆದಿತ್ತು. ತಾನು ಮತ್ತು ಹಲವು ಬಿಜೆಪಿ ಕಾರ್ಯಕರ್ತರು ಅಧಿಕೃತ ಪಕ್ಷದ ಸಭೆಗೆ ಪ್ರಯಾಣಿಸುತ್ತಿದ್ದಾಗ, ದೊಡ್ಡ ಶಸ್ತ್ರಸಜ್ಜಿತ ಗುಂಪೊಂದು ಅವರ ವಾಹನವನ್ನು ತಡೆದಿದೆ ಎಂದು ದಾಸ್ ಆರೋಪಿಸಿದ್ದಾರೆ.
ಚೂಪಾದ ಆಯುಧಗಳನ್ನು ಹಿಡಿದಿದ್ದ ದಾಳಿಕೋರರು ರಸ್ತೆ ತಡೆದು, ವಾಹನದಲ್ಲಿದ್ದವರನ್ನು ಬಲವಂತವಾಗಿ ಹೊರಗೆಳೆದು ಹಲ್ಲೆ ನಡೆಸಿದರು ಎಂದು ದೂರಲಾಗಿದೆ. ಹಲ್ಲೆಗೊಳಾಗಿದ್ದರಿಂದ ತಲೆಗೆ ಭಾರಿ ಪೆಟ್ಟು ಬಿದ್ದಿತ್ತು. ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಗಿ ಅವರು ಹೇಳಿದ್ದಾರೆ. ಈ ವೇಳೆ ಜತೆಗಿದ್ದ ಬಿಜೆಪಿ ಕಾರ್ಯಕರ್ತರು ಕೂಡ ಗಾಯಗೊಂಡಿದ್ದರು. ದಾಳಿಕೋರರು ಸ್ಥಳದಿಂದ ಪರಾರಿಯಾಗುವ ಮೊದಲು ವಾಹನವನ್ನು ಧ್ವಂಸಗೊಳಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.
2018ರಲ್ಲಿ ನಡೆದಿದ್ದ ಈ ಘಟನೆಯ ವೈದ್ಯಕೀಯ ದಾಖಲೆಗಳು ಮತ್ತು ಫೋಟೊಗಳ ಸಹಿತ ವಿವರವಾದ ದೂರು ದಾಖಲಿಸಲಾಗಿತ್ತು. ಆದರೂ, ದಾಳಿಯ ಹಿಂದಿನ ಮಾಸ್ಟರ್ ಮೈಂಡ್‌ಗಳನ್ನು ಗುರುತಿಸಿ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಬಿಜೆಪಿ ನಾಯಕ ದಾಸ್ ಆರೋಪಿಸಿದ್ದಾರೆ.
ವಿರೋಧ ಪಕ್ಷದ ನಾಯಕನ ನೇಮಕಕ್ಕಾಗಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಸಲ್ಲಿಸಿದ ದಾಖಲೆಗಳಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕರ ಸಹಿಗಳನ್ನು ನಕಲಿ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಬ್ಯಾನರ್ಜಿ ಪ್ರತ್ಯೇಕ ವಿವಾದದಲ್ಲಿ ಸಿಲುಕಿರುವಾಗಲೇ ಈ ಬೆಳವಣಿಗೆ ಸಂಭವಿಸಿದೆ.