ಸೋನಿಯಾ ಪುಸ್ತಕ ಬಿಡುಗಡೆಯಲ್ಲಿ ಬಿಜೆಪಿ ನಾಯಕ ಅಮರಿಂದರ್ ಸಿಂಗ್ ಭಾಗಿ; ರಾಜಕೀಯ ವಯಲದಲ್ಲಿ ಸಂಚಲನ
ಕಾಂಗ್ರೆಸ್ ಪಕ್ಷವನ್ನು ತೊರೆದು ಸರಿಯಾಗಿ ಐದು ವರ್ಷಗಳ ನಂತರ, ಬಿಜೆಪಿ ನಾಯಕ ಹಾಗೂ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಸೋಮವಾರ ದೆಹಲಿಯಲ್ಲಿ ನಡೆದ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಕಾಂಗ್ರೆಸ್ ಪಕ್ಷವನ್ನು ತೊರೆದು ಸರಿಯಾಗಿ ಐದು ವರ್ಷಗಳ ನಂತರ, ಬಿಜೆಪಿ ನಾಯಕ ಹಾಗೂ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ (Amarinder Singh) ಅವರು ಸೋಮವಾರ ದೆಹಲಿಯಲ್ಲಿ ನಡೆದ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.
ಸಮಾರಂಭದ ಮೊದಲ ಸಾಲಿನಲ್ಲಿ ಕುಳಿತಿದ್ದ ಏಕೈಕ ಬಿಜೆಪಿ ನಾಯಕರಾಗಿದ್ದ 84 ವರ್ಷದ ಅಮರಿಂದರ್ ಸಿಂಗ್ ಅವರನ್ನು ವೇದಿಕೆಯ ಮೇಲಿಂದಲೇ ಗುರುತಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಗಾಂಧಿ ಕುಟುಂಬದ ಹಳೆಯ ಪ್ರಸಂಗವೊಂದನ್ನು ಹಂಚಿಕೊಂಡರು. ತಮ್ಮ ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಅವರ ದಾಂಪತ್ಯದ ಬಗ್ಗೆ ಮಾತನಾಡುತ್ತಾ, "ನಮ್ಮ ಪೋಷಕರು ವಾದ ಮಾಡುವುದನ್ನು ನಾವು ನೋಡಿದ್ದೇವೆ, ಆದರೆ ಜಗಳವಾಡಿದ್ದನ್ನು ಒಮ್ಮೆ ಮಾತ್ರ ನೋಡಿದ್ದೇವೆ. ಕಾಕತಾಳೀಯವೆಂದರೆ, ಆ ಜಗಳ ನಡೆದಾಗ ನಮ್ಮ ತಂದೆ ಫೋನ್ನಲ್ಲಿ ಅಮರಿಂದರ್ ಸಿಂಗ್ ಅವರೊಂದಿಗೆ ಮಾತನಾಡುತ್ತಿದ್ದರು" ಎಂದು ರಾಹುಲ್ ಸ್ಮರಿಸಿದರು. ಈ ಮಾತಿಗೆ ಅಮರಿಂದರ್ ಸಿಂಗ್ ಮುಗುಳ್ನಕ್ಕರು.
2027ರ ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಅಮರಿಂದರ್ ಸಿಂಗ್ ಮತ್ತೆ ಕಾಂಗ್ರೆಸ್ ಸೇರಲಿದ್ದಾರೆಯೇ ಎಂಬ ಊಹಾಪೋಹಗಳು ಈ ಭೇಟಿಯಿಂದ ಮತ್ತೆ ಗರಿಗೆದರಿವೆ. ಆದರೆ ಇದನ್ನು ತಳ್ಳಿಹಾಕಿರುವ ಅಮರಿಂದರ್ ಸಿಂಗ್, "ನಾವು ಇಲ್ಲಿಗೆ ಬಂದಿರುವುದು ಕೇವಲ ಒಂದು ಸಾಮಾಜಿಕ ಕಾರ್ಯಕ್ರಮಕ್ಕಾಗಿ. ಇದರಲ್ಲಿ ರಾಜಕೀಯ ಎಲ್ಲಿಂದ ಬಂತು? ನನ್ನ ಪುಸ್ತಕಗಳು ಬಿಡುಗಡೆಯಾದಾಗಲೂ ಸೋನಿಯಾ ಜಿ ಮೂರು ಬಾರಿ ಆಗಮಿಸಿದ್ದರು. ಗಾಂಧಿ ಕುಟುಂಬದೊಂದಿಗೆ ನನಗೆ ದಶಕಗಳ ಆತ್ಮೀಯ ಒಡನಾಟವಿದೆ. ಪಕ್ಷಕ್ಕೆ ಮರಳುವ ಬಗ್ಗೆ ಯಾರೂ ನನ್ನೊಂದಿಗೆ ಮಾತನಾಡಿಲ್ಲ" ಎಂದು ಸ್ಪಷ್ಟಪಡಿಸಿದರು.
ಮತ್ತೊಂದೆಡೆ, ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್, "ಅವರು ನಮ್ಮೊಂದಿಗಿದ್ದರೆ ಅದು ಅದ್ಭುತವಾಗಿರುತ್ತದೆ, ಆದರೆ ಅದಕ್ಕಿಂತ ಹೆಚ್ಚೇನೂ ಹೇಳಲಾರೆ" ಎಂದರು. ಅಂಬಿಕಾ ಸೋನಿ ಅವರು ಇದನ್ನು ಕೇವಲ ವೈಯಕ್ತಿಕ ಮತ್ತು ಸೌಹಾರ್ದಯುತ ಭೇಟಿ ಎಂದು ಬಣ್ಣಿಸಿದರು. 2021ರ ನವೆಂಬರ್ನಲ್ಲಿ ತೀವ್ರ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್ ತೊರೆದಿದ್ದ ಅಮರಿಂದರ್ ಸಿಂಗ್, ಬಳಿಕ ತಮ್ಮದೇ ಪಕ್ಷ ಸ್ಥಾಪಿಸಿ 2022ರಲ್ಲಿ ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು.