ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬ್ಯಾಂಕ್‌ ವ್ಯವಹಾರ ಬೇಗ ಮುಗಿಸಿ; ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಡೆಯಲಿದೆ ಮುಷ್ಕರ

Bank Unions to Stage Strike: ಸೆಪ್ಟೆಂಬರ್ 11ರಂದು ಬ್ಯಾಂಕ್ ಒಕ್ಕೂಟಗಳು ಮುಷ್ಕರ ನಡೆಸಲಿವೆ. ಯುಎಫ್‌ಬಿಯು ಸೆಪ್ಟೆಂಬರ್ 11ರಂದು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದೆ. ನಂತರ ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಮುಷ್ಕರ ನಡೆಸಲಿದೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಒಕ್ಕೂಟಗಳು ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿವೆ.

ಸೆಪ್ಟೆಂಬರ್ 11ರಂದು ಬ್ಯಾಂಕ್ ಒಕ್ಕೂಟಗಳಿಂದ ಮುಷ್ಕರ

ಸಾಂದರ್ಭಿಕ ಚಿತ್ರ -

Priyanka P
Priyanka P Sep 1, 2026 8:40 PM

ನವದೆಹಲಿ, ಸೆ. 1: ಸೆಪ್ಟೆಂಬರ್ 11ರಂದು ಬ್ಯಾಂಕ್ ಒಕ್ಕೂಟಗಳು ಮುಷ್ಕರ (Bank strike) ನಡೆಸಲಿವೆ. ಬ್ಯಾಂಕಿಂಗ್ ವಲಯದ ಶೇಕಡಾ 90ಕ್ಕೂ ಹೆಚ್ಚು ಉದ್ಯೋಗಿಗಳನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) 5 ದಿನಗಳ ಬ್ಯಾಂಕಿಂಗ್ ವಾರ ಅಂದರೆ ವಾರಕ್ಕೆ ಐದು ದಿನಗಳ ಕೆಲಸ ಮತ್ತು ಸರ್ಕಾರದ ಪರಿಷ್ಕೃತ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ (PLI) ಯೋಜನೆಗೆ ಸಂಬಂಧಿಸಿದ ಬಗೆಹರಿಯದ ಸಮಸ್ಯೆಗಳ ಹಿನ್ನೆಲೆಯಲ್ಲಿ ಸರಣಿ ಮುಷ್ಕರಗಳನ್ನು ಘೋಷಿಸಿದೆ.

ಯುಎಫ್‌ಬಿಯು ಸೆಪ್ಟೆಂಬರ್ 11ರಂದು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದೆ. ನಂತರ ಸೆಪ್ಟೆಂಬರ್ 28ರಿಂದ 30 ರವರೆಗೆ ಮೂರು ದಿನಗಳ ಮುಷ್ಕರ ನಡೆಸಲಿದೆ. ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ಒಕ್ಕೂಟಗಳು ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿವೆ.

ಯೂನಿಯನ್ ಪ್ರಕಟಣೆಯ ಪ್ರಕಾರ, ಇದು ಎಐಬಿಇಎ (AIBEA), ಎಐಬಿಒಸಿ (AIBOC), ಎನ್‌ಸಿಬಿಇ (NCBE), ಎಐಬಿಒಎ (AIBOA), ಬಿಇಎಫ್‌ಐ (BEFI), ಐಎನ್‌ಬಿಒಸಿ (INBOC) ಮತ್ತು ಐಎನ್‌ಬಿಇಎಫ್ (INBEF) ಸೇರಿದಂತೆ ಏಳು ಯೂನಿಯನ್‌ಗಳನ್ನು ಒಳಗೊಂಡಿದೆ. ಇದು ಸಾರ್ವಜನಿಕ ವಲಯ, ಖಾಸಗಿ, ವಿದೇಶಿ, ಪ್ರಾದೇಶಿಕ ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕ್‌ಗಳ ಉದ್ಯೋಗಿಗಳನ್ನು ಪ್ರತಿನಿಧಿಸುತ್ತದೆ.

ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದ 50 ಲಕ್ಷ ರುಪಾಯಿ ಮೌಲ್ಯದ ಚಿನ್ನ ಮಾಯ

ಅಧಿಕೃತ ಹೇಳಿಕೆಯ ಪ್ರಕಾರ, ಬ್ಯಾಂಕ್ ಒಕ್ಕೂಟಗಳು ನಾಲ್ಕು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿವೆ. ಅವುಗಳೆಂದರೆ- ಐದು ದಿನಗಳ ಬ್ಯಾಂಕಿಂಗ್ ವಾರ ಜಾರಿ, ಸರ್ಕಾರದ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ (PLI) ಯೋಜನೆಯನ್ನು ಹಿಂಪಡೆಯುವುದು, ದ್ವಿಪಕ್ಷೀಯ ಚರ್ಚೆಗಳ ಮೂಲಕ ಪ್ರೋತ್ಸಾಹಕ ಯೋಜನೆಯನ್ನು ಮಾರ್ಪಡಿಸುವುದು ಮತ್ತು ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸುವುದು.

ಐದು ದಿನಗಳ ಬ್ಯಾಂಕಿಂಗ್ ವಾರದ ಬೇಡಿಕೆ ಹಲವು ವರ್ಷಗಳಿಂದ ಬಾಕಿ ಇದೆ. ಯೂನಿಯನ್‌ಗಳ ಪ್ರಕಾರ, 2015ರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ರಜಾ ದಿನಗಳಾಗಿ ಘೋಷಿಸಿದಾಗ, ಐದು ದಿನಗಳ ವಾರವನ್ನು ಜಾರಿಗೆ ತರಲು ಬ್ಯಾಂಕ್‌ಗಳು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದವು. ಈ ಸಮಸ್ಯೆಯನ್ನು 2020ರಲ್ಲಿ ಮರುಪರಿಶೀಲಿಸಲಾಯಿತು. ನಂತರ 2024ರ ಮಾರ್ಚ್ 8ರಂದು ಸಹಿ ಹಾಕಿದ ವೇತನ ಒಪ್ಪಂದದ ಮೂಲಕ ಔಪಚಾರಿಕಗೊಳಿಸಲಾಯಿತು. ಈ ಒಪ್ಪಂದದಡಿ, ಎಲ್ಲ ಶನಿವಾರಗಳನ್ನು ರಜಾದಿನಗಳಾಗಿ ಘೋಷಿಸಿದ್ದಕ್ಕೆ ಪ್ರತಿಯಾಗಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಹೆಚ್ಚುವರಿಯಾಗಿ 40 ನಿಮಿಷ ಕೆಲಸ ಮಾಡಲು ಬ್ಯಾಂಕ್ ಉದ್ಯೋಗಿಗಳು ಒಪ್ಪಿಕೊಂಡರು.

ಆಧಾರ್‌, ಪ್ಯಾನ್ ಕೆವೈಸಿ ಅಪ್‌ಡೇಟ್ ನೋಟಿಸ್‌; ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ಹರಿದಾಡುತ್ತಿದೆ ನಕಲಿ ಸಂದೇಶ

ಈ ಒಪ್ಪಂದವನ್ನು ಎರಡು ವರ್ಷಗಳ ಹಿಂದೆಯೇ ಹಣಕಾಸು ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿತ್ತು ಆದರೆ ಇನ್ನೂ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ ಎಂದು ಒಕ್ಕೂಟಗಳು ತಿಳಿಸಿವೆ. ಭಾರತೀಯ ರಿಸರ್ವ್ ಬ್ಯಾಂಕ್, ಎಲ್‌ಐಸಿ, ಜಿಐಸಿ ಮತ್ತು ನಬಾರ್ಡ್ ಸೇರಿ ಇತರ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಈಗಾಗಲೇ ಐದು ದಿನಗಳ ಕೆಲಸದ ವಾರ ನಿಯಮವನ್ನು ಅನುಸರಿಸುತ್ತಿವೆ ಎಂದು ಒಕ್ಕೂಟ ತಿಳಿಸಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಹೆಚ್ಚಿನ ಕೆಲಸದ ಸಮಯಕ್ಕೆ ನೌಕರರು ಒಪ್ಪಿಕೊಂಡಿರುವುದರಿಂದ ಗ್ರಾಹಕ ಸೇವಾ ಸಮಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಒಕ್ಕೂಟಗಳು ತಿಳಿಸಿವೆ.