Bihar Assembly election: ನಾಮಪತ್ರ ಸಲ್ಲಿಸುವ ಕೆಲ ನಿಮಿಷಗಳ ಮೊದಲು ಬಂದ ಫೋನ್ ಕರೆ- ಚುನಾವಣಾ ಕಣದಿಂದ ಹಿಂದೆ ಸರಿದ ಅಭ್ಯರ್ಥಿ
Nomination Filing: ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ ತಿಂಗಳ ಆರಂಭದಲ್ಲಿ ನಡೆಯಲಿದ್ದು, ನಾಮ ಪತ್ರ ಸಲ್ಲಿಸಲೆಂದು ಬಂದಿದ್ದ ಅಭ್ಯರ್ಥಿಗೆ ಕೆಲವು ನಿಮಿಷಗಳ ಮೊದಲು ಫೋನ್ ಕರೆಯೊಂದು ಬಂದಿದೆ. ಇದಾದ ಬಳಿಕ ಅಭ್ಯರ್ಥಿಯು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾನೆ. ಇದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

-

ಪಟನಾ: ನಾಮಪತ್ರ (Nomination) ಸಲ್ಲಿಸುವ ಕೆಲವೇ ನಿಮಿಷಗಳ ಮೊದಲು ಬಂದ ಒಂದು ಫೋನ್ ಕರೆಯಿಂದಾಗಿ ಅಭ್ಯರ್ಥಿಯೊಬ್ಬ ಚುನಾವಣಾ ಕಣದಿಂದ ಹಿಂದೆ ಸರಿದಿರುವ ಘಟನೆ ನಡೆದಿದೆ. ಹಿರಿಯ ಬಿಜೆಪಿ ನಾಯಕ (BJP leader) ಮತ್ತು ಮಾಜಿ ಕೇಂದ್ರ ಸಚಿವ ಅಶ್ವಿನಿ ಚೌಬೆ (former Union Minister Ashwini Choubey) ಅವರ ಪುತ್ರ ಅರ್ಜಿತ್ ಶಾಶ್ವತ್ ಚೌಬೆ (Arjit Shashwat Choubey) ಅವರು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Assembly election) ಭಾಗಲ್ಪುರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದರು. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶನಿವಾರ ನಾಮಪತ್ರ ಸಲ್ಲಿಕೆಗೆ ಕೆಲವು ನಿಮಿಷಗಳ ಮೊದಲು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ನಾಮಪತ್ರ ಸಲ್ಲಿಸಲು ಶನಿವಾರ ಜಿಲ್ಲಾ ಕಲೆಕ್ಟರ್ ಕಚೇರಿಗೆ ಆಗಮಿಸಿದ್ದ ಅರ್ಜಿತ್ ಅವರಿಗೆ ಫೋನ್ ಕರೆಯೊಂದು ಬಂದಿದೆ. ಈ ವೇಳೆಯಲ್ಲಿ ಅವರ ಸುತ್ತಮುತ್ತ ಬೆಂಬಲಿಗರು ಮತ್ತು ಮಾಧ್ಯಮ ಪ್ರತಿನಿಧಿಗಳು ಇದ್ದರು. ಫೋನ್ ಕರೆಗೆ ಸಂಕ್ಷಿಪ್ತವಾಗಿ ಸ್ಪಂದಿಸಿದ ಅರ್ಜಿತ್, ಬಳಿಕ ನಾಮಪತ್ರ ಸಲ್ಲಿಕೆ ಮಾಡದೇ ಅಲ್ಲಿಂದ ಹಿಂದಕ್ಕೆ ಹೋದರು. ಇದು ಅವರ ಬೆಂಬಲಿಗರು ಮತ್ತು ಸೇರಿದ್ದ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು.ಅರ್ಜಿತ್ ಶಾಶ್ವತ್ ಚೌಬೆ ಅವರು ಹಠಾತ್ ಆಗಿ ಚುನಾವಣಾ ಕಣದಿಂದ ಹಿಂದೆ ಸರಿಯಲು ಕಾರಣವಾಗಿದ್ದಾದರೂ ಏನು ಎನ್ನುವ ಕುತೂಹಲ ಎಲ್ಲರಲ್ಲೂ ಇದ್ದುದರಿಂದ ಇದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು ತಂದೆಯವರು ಫೋನ್ ಮಾಡಿದ್ದರು. ಇದು ನನ್ನ ಮನಸ್ಸನ್ನು ಬದಲಾಯಿಸಿತು ಎಂದು ತಿಳಿಸಿದ್ದಾರೆ.
ತಂದೆ ಕರೆ ಮಾಡಿ ನನಗೆ ನೀವು ಬಿಜೆಪಿಯಲ್ಲಿದ್ದೀರಿ ಮತ್ತು ಬಿಜೆಪಿಯಲ್ಲಿಯೇ ಉಳಿಯುತ್ತೀರಿ ಎಂದು ಹೇಳಿದರು. ಅವರ ನಿರ್ದೇಶನವನ್ನು ಗೌರವಿಸಿ ಪಕ್ಷದ ವಿರುದ್ಧ ದಂಗೆ ಏಳದಿರಲು ನಿರ್ಧರಿಸಿದ್ದೇನೆ. ಹೀಗಾಗಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದೇನೆ ಎಂದು ತಿಳಿಸಿದರು. ಭಾಗಲ್ಪುರಕ್ಕೆ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಬಳಿಕ ಚೌಬೆ ಅವರು ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಣಯವನ್ನು ಕೈಗೊಂಡಿದ್ದರು. ಇವರಿಗೆ ಬಿಜೆಪಿಯ ಉನ್ನತ ನಾಯಕರು ತೀವ್ರ ಒತ್ತಡವನ್ನು ಹೇರಿದ್ದರು. ಪಕ್ಷವು ಇಲ್ಲಿ ಮತ್ತೊಮ್ಮೆ ರೋಹಿತ್ ಪಾಂಡೆಯನ್ನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಿತ್ತು. ಇದು ಚೌಬೆಯವರಿಗೆ ಬೇಸರ ಉಂಟು ಮಾಡಿತ್ತು ಎನ್ನಲಾಗಿದೆ.
ಈ ಬಗ್ಗೆ ಪೋಷಕರು ಕೂಡ ನನ್ನೊಂದಿಗೆ ಮಾತನಾಡಿದ್ದರು. ಬಿಜೆಪಿಯ ಉನ್ನತ ನಾಯಕತ್ವದಿಂದ ಬಂದ ಸೂಚನೆಯಾಗಿದೆ ಎಂದು ಅವರು ಹೇಳಿದರು. ಅವರಿಗೆ ನಾನು ಅವಿಧೇಯನಾಗಲು ಹೇಗೆ ಸಾಧ್ಯ? ನನ್ನ ಪಕ್ಷ, ದೇಶದ ವಿರುದ್ಧ ನಾನು ದಂಗೆ ಏಳಲು ಸಾಧ್ಯವಿಲ್ಲ ಎಂದರು.
ಭಾಗಲ್ಪುರ ವಿಧಾನಸಭಾ ಕ್ಷೇತ್ರ ಮತ್ತು ಚೌಬೆ ಕುಟುಂಬ
ಭಾಗಲ್ಪುರವು ಚೌಬೆ ಕುಟುಂಬಕ್ಕೆ ರಾಜಕೀಯವಾಗಿ ಅತ್ಯಂತ ಮಹತ್ವದ ಕ್ಷೇತ್ರವಾಗಿದೆ. ಅಶ್ವಿನಿ ಚೌಬೆ 1995 ರಿಂದ 2010 ರವರೆಗೆ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಇತ್ತೀಚಿನ ಚುನಾವಣೆಗಳಲ್ಲಿ ಈ ಸ್ಥಾನವನ್ನು ಕಾಂಗ್ರೆಸ್‌ನ ಅಜೀತ್ ಶರ್ಮಾ ಹೊಂದಿದ್ದಾರೆ. ಅವರು 2020 ರಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸುಮಾರು 1,000 ಮತಗಳ ಅಂತರದಿಂದ ಸೋಲಿಸಿದ್ದರು.
ಇದನ್ನೂ ಓದಿ: Nirmala Sitharaman: ಜಿಎಸ್‌ಟಿ ದರ ಕಡಿತದ ಪ್ರಯೋಜನ ಜನಸಾಮಾನ್ಯರಿಗೆ ತಲುಪುತ್ತಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಸೋಲಿನ ಭೀತಿಯ ನಡುವೆಯೂ ಬಿಜೆಪಿ 2025ಕ್ಕೆ ವಿಧಾನ ಸಭಾ ಚುನಾವಣಾ ಅಭ್ಯರ್ಥಿಯಾಗಿ ರೋಹಿತ್ ಪಾಂಡೆಯನ್ನು ಘೋಷಿಸಿದೆ. ಇದು ಚೌಬೆ ಕುಟುಂಬಕ್ಕೆ ನಿಷ್ಠರಾಗಿರುವ ಸ್ಥಳೀಯ ಕಾರ್ಯಕರ್ತರಲ್ಲಿ ಅಸಮಾಧಾನವನ್ನು ಉಂಟುಮಾಡಿದೆ ಎನ್ನಲಾಗಿದೆ.