ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Election Results 2025 LIVE: ಬಿಹಾರದಲ್ಲಿ ಎನ್‌ಡಿಎಗೆ ಭರ್ಜರಿ ಜಯ....ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಪ್ರಧಾನಿ ಮೋದಿ ಆಗಮನ

Bihar Assembly Election Results 2025 LIVE Counting and Updates in Kannada: ಬಿಹಾರದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ಆರಂಭವಾಗಿದೆ. ಎನ್‌ಡಿಎ ಹಾಗೂ ಮಹಾಘಟಬಂಧನ್‌ ನಡುವಿನ ನೇರ ಹಣಾಹಣಿಗೆ ಸಾಕ್ಷಿಯಾದ ಈ ರಾಜ್ಯದ ಫಲಿತಾಂಶಕ್ಕಾಗಿ ಇಡೀ ದೇಶವೇ ತುದಿಗಾಲಿನಲ್ಲಿದೆ. ಮತ ಎಣಿಕೆಯ ಕ್ಷಣಕ್ಷಣದ ಬೆಳವಣಿಗೆಗಳು ಇಲ್ಲಿ ಸಿಗಲಿವೆ.

ಬಿಹಾರ ಚುನಾವಣೆ ಮತ ಎಣಿಕೆ ಫಲಿತಾಂಶ: ಕ್ಷಣಕ್ಷಣದ ಲೈವ್ ಸುದ್ದಿ

ಬಿಹಾರ ಚುನಾವಣೆ ಫಲಿತಾಂಶ ಲೈವ್ -

ಹರೀಶ್‌ ಕೇರ
ಹರೀಶ್‌ ಕೇರ Nov 14, 2025 6:29 AM

ಪಾಟ್ನಾ: ಬಿಹಾರವು ಆಡಳಿತ ಬದಲಾವಣೆಗೆ ಸಾಕ್ಷಿಯಾಗುತ್ತದೆಯೇ ಅಥವಾ NDAಗೆ ನಿಷ್ಠರಾಗಿ ಉಳಿಯುತ್ತದೆಯೇ? ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಪ್ರಸ್ತುತ ನಡೆಯುತ್ತಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ರಾಜ್ಯದ ಅತಿ ಹೆಚ್ಚು ಕಾಲ ಸಿಎಂ ಆಗಿ ಸೇವೆ ಸಲ್ಲಿಸಿದ ನಿತೀಶ್ ಕುಮಾರ್ ತಮ್ಮ ಆಳ್ವಿಕೆಯನ್ನು ವಿಸ್ತರಿಸುತ್ತಾರೋ ಅಥವಾ ಬಿಹಾರದ ರಾಜಕೀಯ ಗದ್ದುಗೆ ಆಟದಲ್ಲಿ ಮಹಾಘಟಬಂಧನ್ ಅಧಿಕಾರವನ್ನು ವಶಪಡಿಸಿಕೊಳ್ಳುತ್ತಾರೋ ಎಂಬುದನ್ನು ಫಲಿತಾಂಶಗಳು ನಿರ್ಧರಿಸಲಿವೆ. ಈಗಾಗಲೇ ಎಕ್ಸಿಟ್‌ ಪೋಲ್‌ಗಳು ಈ ಬಾರಿಯೂ ಎನ್‌ಡಿಎ ಕ್ಲೀನ್‌ ಸ್ವೀಪ್‌ ಮಾಡಲಿದೆ ಎಂದು ಭವಿಷ್ಯ ನುಡಿದಿದೆ. ಆದರೆ ಪ್ರತಿಪಕ್ಷಗಳು ಈ ಚುನಾವಣೋತ್ತರ ಸಮೀಕ್ಷೆಗಳನ್ನು ತಳ್ಳಿ ಹಾಕಿವೆ.

Live News
Nov. 14, 2025, 6:59 p.m.

ಬಿಜೆಪಿ ಕೇಂದ್ರ ಕಚೇರಿಗೆ ಪ್ರಧಾನಿ ಮೋದಿ ಭೇಟಿ

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಕ್ಕಿದ್ದು, ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಬಿಜೆಪಿ ಕಚೇರಿಗೆ ಆಗಮಿಸಿದರು. ಅವರಿಗೆ ಹೂ ಮಳೆಗೆರೆದು ಸ್ವಾಗತ ಕೋರಲಾಯಿತು.

Nov. 14, 2025, 6:42 p.m.

ಬಿಜೆಪಿ ಅಭ್ಯರ್ಥಿ, ಗಾಯಕಿ ಮೈಥಿಲಿ ಠಾಕೂರ್‌ಗೆ ಭರ್ಜರಿ ಜಯ

ಬಿಜೆಪಿ ಅಭ್ಯರ್ಥಿ, ಅಲಿನಗರ್‌ ಕ್ಷೇತ್ರದಿಂದ ಕಣಕ್ಕಿಳಿದ 25 ವರ್ಷದ ಗಾಯಕಿ ಮೈಥಿಲಿ ಠಾಕೂರ್‌ ಬರೋಬ್ಬರಿ 12 ಸಾವಿರ ಮತಗಳಿಂದ ಜಯ ಗಳಿಸಿದ್ದಾರೆ. ಆ ಮೂಲಕ ಬಿಹಾರದ ಅತೀ ಕಿರಿಯ ಶಾಸಕಿ ಎನಿಸಿಕೊಂಡಿದ್ದಾರೆ.

Nov. 14, 2025, 5:44 p.m.

ಕೊನೆಗೂ ಗೆದ್ದು ಬೀಗಿದ ತೇಜಸ್ವಿ ಯಾದವ್‌

ಭಾರೀ ಹಾವು-ಏಣಿ ಆಟದ ನಂತರ ರಾಘೋಪುರ ಕ್ಷೇತ್ರದಲ್ಲಿ ತೇಜಸ್ವಿ ಯಾದವ್ 11,000 ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ.

Nov. 14, 2025, 5:08 p.m.

ಪ್ರಧಾನಿ ಮೋದಿ ಸಂತಸ

ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ ಮೂಲಕ ಹರ್ಷ ವ್ಯಕ್ತಪಡಿಸಿದ್ದು, ಇದು ಉತ್ತಮ ಆಡಳಿತಕ್ಕೆ ಸಂದ ಜಯ. ಬಿಹಾರ ಮತದಾರರಿಗೆ ಧನ್ಯವಾದಗಳು ಎಂದಿದ್ದಾರೆ.

Nov. 14, 2025, 5:05 p.m.

ಲಾಲೂ ಪುತ್ರ ತೇಜ್‌ ಪ್ರತಾಪ್‌ಗೆ ಸೋಲು

ಮಹುವಾ ಕ್ಷೇತ್ರದಲ್ಲಿ ತೇಜ್ ಪ್ರತಾಪ್ ಯಾದವ್ 37,000 ಮತಗಳಿಂದ ಹಿನ್ನಡೆ ಅನುಭವಿಸಿದ್ದಾರೆ.

Nov. 14, 2025, 4:15 p.m.

ಕೇವಲ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವು

61ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಈ ಬಾರಿ ಕೇವಲ ಒಂದು ಕ್ಷೇತ್ರದಲ್ಲಿ ಮುನ್ನಡ ಸಾಧಿಸುವಲ್ಲಿ ಯಶಸ್ವಿಯಾಗಿದೆ.

Nov. 14, 2025, 3:09 p.m.

ಚಿರಾಗ್‌ ಪಾಸ್ವಾನ್‌ಗೆ ಡಿಸಿಎಂ ಪಟ್ಟ?

ಚುನಾವಣೋತ್ತರ ಸಮೀಕ್ಷೆಯ ಭವಿಷ್ಯದಂತೆ ಎನ್‌ಡಿಎ ಮ್ಯಾಜಿಕ ಮಾಡುವಲ್ಲಿ ಸಫಲವಾಗಿದ್ದು, ಈಗಾಗಲೇ 202 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ಎನ್‌ಡಿಎ ಮ್ಯಾಜಿಕ್‌ ಮುಂದೆ ವಿಪಕ್ಷಗಳ ಮಹಾಘಟಬಂಧನ್‌ ಮೈತ್ರಿಕೂಟ ಧೂಳೀಪಟ್ವಾಗಿದ್ದು, ಸತಾಯಗತಾಯ ಅಧಿಕಾರಕ್ಕೆ ಬರಬೇಕು ಎನನುವ ಕನಸು ನುಚ್ಚುನೂರಾಗಿದೆ. ಕೇಂದ್ರ ಸಚಿವ, ಯುವ ನಾಯಕ ಚಿರಾಗ್‌ ಪಾಸ್ವಾನ್‌ ಅವರ ಲೋಕಜನಶಕ್ತಿ ಪಾರ್ಟಿ (ರಾಮ್‌ ವಿಲಾಸ್)‌ ಬಿಹಾರದ 4ನೇ ಅತೀ ದೊಡ್ಡ ಪಕ್ಷವಾಗಿ, ಎನ್‌ಡಿಎ ಮೈತ್ರಿಕೂಟದ 3ನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಸಲ್ಲಿಸುವ ಸಾಧ್ಯತೆ ಇದೆ. ಜೆಡಿ(ಯು) ನಾಯಕ ನಿತೀಶ್‌ ಕುಮಾರ್‌ ದಾಖಲೆ 9ನೇ ಬಾರಿಗೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.

Nov. 14, 2025, 2:02 p.m.

ಬಿಹಾರದಲ್ಲಿ ಐತಿಹಾಸಿಕ ಗೆಲವು; ಎನ್‌ಡಿಎಗೆ ಕ್ಲೀನ್‌ ಸ್ವೀಪ್‌

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ 201ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಚಂಡ ಗೆಲುವು ಸಾಧಿಸಿದೆ. ಬಿಜೆಪಿ 91ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಜೆಡಿಯು 81ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

Nov. 14, 2025, 1:47 p.m.

ನಿತೀಶ್‌ ಕ್ಯಾಬಿನೆಟ್‌ನ ಎಲ್ಲಾ ಸಚಿವರಿಗೂ ಭಾರೀ ಮುನ್ನಡೆ

ನಿತೀಶ್‌ ಸರ್ಕಾರದ ಎಲ್ಲಾ ಕ್ಯಾಬಿನೆಟ್‌ ಸಚಿವರೂ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, ಗೆಲುವಿನತ್ತ ಮನ್ನುಗ್ಗುತ್ತಿದೆ.

Nov. 14, 2025, 1:43 p.m.

ಬಿಜೆಪಿ ಪ್ರಧಾನ ಕಚೇರಿಗೆ ಪ್ರಧಾನಿ ಮೋದಿ ಭೇಟಿ ನೀಡುವ ನಿರೀಕ್ಷೆ

ಎನ್‌ಡಿಎ ಮುನ್ನಡೆ ಸಾಧಿಸುತ್ತಿದ್ದಂತೆ ಮಿತ್ರ ಪಕ್ಷಗಳಾದ ಬಿಜೆಪಿ, ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು, ಚಿರಾಗ್‌ ಪಾಸ್ವಾನ್‌ ಅವರ ಲೋಕ ಜನಶಕ್ತಿ ಪಕ್ಷವು ಸಂಭ್ರಮಾಚರಣೆಯಲ್ಲಿ ತೊಡಗಿದೆ. ಶುಕ್ರವಾರ ಸಂಜೆ 7 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡುವ ನಿರೀಕ್ಷೆ ಇದ್ದು, ಭರ್ಜರಿ ಗೆಲುವಿಗೆ ಕಾರ್ಯಕರ್ತರನ್ನು ಅಭಿನಂದಿಸಲಿದ್ದಾರೆ.

Nov. 14, 2025, 1:01 p.m.

ಚಿರಾಗ್‌ ಪಾಸ್ವಾನ್‌ಗೆ ಬಹುಪರಾಕ್‌ ಎಂದ ಮತದಾರ

ಚಿರಾಗ್‌ ಪಾಸ್ವಾನ್‌ ನೇತೃತ್ವದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.

Nov. 14, 2025, 12:07 p.m.

ತೇಜ್ ಪ್ರತಾಪ್ ಯಾದವ್‌ಗೂ ಭಾರೀ ಹಿನ್ನಡೆ

ಮಹುವಾದಲ್ಲಿ ತೇಜ್ ಪ್ರತಾಪ್ 13,000 ಕ್ಕೂ ಹೆಚ್ಚು ಮತಗಳಿಂದ ಹಿನ್ನಡೆ ಅನುಭವಿಸಿದ್ದು, 4 ನೇ ಸ್ಥಾನದಲ್ಲಿದ್ದಾರೆ.

Nov. 14, 2025, 11:54 a.m.

ಬಿಹಾರ ಅಂದ್ರೆ ನಿತೀಶ್‌ ಕುಮಾರ್‌ ಪೋಸ್ಟ್‌ ವೈರಲ್‌

ಪಾಟ್ನಾದಲ್ಲಿ 'ಬಿಹಾರ ಕಾ ಮತ್ಲಾಬ್ ನಿತೀಶ್ ಕುಮಾರ್' ಎಂಬ ಪೋಸ್ಟರ್ ಅನ್ನು ಹಾಕಲಾಗಿದ್ದು, ಎನ್‌ಡಿಎ ಭರ್ಜರಿ ಗೆಲುವಿನತ್ತ ಸಾಗುತ್ತಿದೆ. ಚುನಾವಣಾ ಆಯೋಗದ ಪ್ರಕಾರ, ಶುಕ್ರವಾರ ಬೆಳಿಗ್ಗೆ ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವಾಗ, ಆಡಳಿತಾರೂಢ ಎನ್ಡಿಎ 166 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಹುಮತದ 122 ಸ್ಥಾನಗಳನ್ನು ಮೀರಿದೆ.

Nov. 14, 2025, 11:50 a.m.

ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ ಖಾತೆ ತೆರೆಯಲು ವಿಫಲ

ಚುನಾವಣಾ ತಂತ್ರಜ್ಞ, ರಾಜಕಾರಣಿ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ (ಜೆಎಸ್ಪಿ) ತನ್ನ ಖಾತೆ ತೆರೆಯಲು ವಿಫಲವಾಗಿದೆ. ಆರಂಭಿಕ ಮತ ಎಣಿಕೆ ವೇಳೆ ಎರಡು ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಜೆಎಸ್‌ಪಿ ಇದೀಗ ಶೂನ್ಯ ಸಾಧನೆ ಮಾಡಿದೆ.

Nov. 14, 2025, 11:26 a.m.

ಭಾರೀ ಮುನ್ನಡೆ ಕಾಯ್ದುಕೊಂಡ ಮೈಥಿಲಿ ಠಾಕೂರ್

ದರ್ಭಾಂಗಾದ ಅಲಿನಗರ ಕ್ಷೇತ್ರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಜನಪದ ಗಾಯಕಿ ಮೈಥಿಲಿ ಠಾಕೂರ್ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ. ಠಾಕೂರ್ 14,000 ಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದಾರೆ ಮತ್ತು ರಾಷ್ಟ್ರೀಯ ಜನತಾದಳದ ಬಿನೋದ್ ಮಿಶ್ರಾ ಅವರಿಗಿಂತ 4,500 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

Nov. 14, 2025, 11:21 a.m.

ಎನ್‌ಡಿಎ ಗೆಲುವಿನ ಬಗ್ಗೆ ಸಿಎಂ ಸಿದ್ಧರಾಮಯ್ಯ ಅನುಮಾನ

ಇನ್ನು ಬಿಹಾರ ಚುನಾವಣೆ ಫಲಿತಾಂಶದ ಬಗ್ಗೆ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಎನ್‌ಡಿಎ ಅಭೂತಪೂರ್ವ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರು ಈ ಗೆಲುವು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

Nov. 14, 2025, 11:18 a.m.

ತೇಜಸ್ವಿ ಯಾದವ್‌ಗೆ ಹಿನ್ನಡೆ

ರಾಘೋಫುರ ಕ್ಷೇತ್ರದಲ್ಲಿ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ಆರ್‌ಜೆಡಿಯ ತೇಜಸ್ವಿಯಾದವ್‌ಗೆ 1200 ಮತಗಳ ಹಿನ್ನಡೆಯಾಗಿದೆ. ಬಿಜೆಪಿಯ ಸತೀಶ್‌ ಕುಮಾರ್‌ ವಿರುದ್ಧ ತೇಜಸ್ವಿ ಯಾದವ್‌ ಹಿನ್ನಡೆ ಅನುಭವಿಸಿದ್ದಾರೆ. ಇದೇ ಸತೀಶ್‌ ಕುಮಾರ್‌ ಅವರು ತೇಜಸ್ವಿ ಯಾದವ್‌ ಅವರ ತಾಯಿ ರಾಬ್ರಿ ದೇವಿಯವರನ್ನು ಸೋಲಿಸಿದ್ದರು.

Nov. 14, 2025, 11:15 a.m.

ದ್ವಿಶತಕದತ್ತ ಎನ್‌ಡಿಎ ಮೈತ್ರಿಕೂಟ

ಬಿಹಾರ ರಾಜಕೀಯ ಭವಿಷ್ಯದ ಸ್ಪಷ್ಟ ಚಿತ್ರಣ ಸಿಕ್ಕಿದ್ದು, ಎನ್‌ಡಿಎ ಗದ್ದುಗೆ ಏರುವುದು ಪಕ್ಕಾ ಆಗಿದೆ. ಬರೋಬ್ಬರಿ 190 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ಕಾಯ್ದುಕೊಂಡು ದ್ವಿಶತಕದತ್ತ ಮುನ್ನುತ್ತಿದೆ. ಇನ್ನು ಬಿಜೆಪಿ ಮತ್ತು ಜೆಡಿಯು ಸಮಾಬ ಕಾಯ್ದುಕೊಂಡಿದೆ.

Nov. 14, 2025, 11:15 a.m.

ಗೆಲುವು ಸಂಭ್ರಮಾಚರಣೆ ಮಾಡದಿರಲು ಬಿಜೆಪಿ ನಿರ್ಧಾರ

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವಿನ ಗದ್ದುಗೆ ಹಿಡಿಯುವುದು ಪಕ್ಕಾ ಆಗಿದೆ. ಆದರೆ ಬಿಜೆಪಿ ದೆಹಲಿ ಬಾಂಬ್‌ ಸ್ಫೋಟ ಪ್ರಕರಣದ ಹಿನ್ನೆಲೆ್ ಸಂಭ್ರಮಾಚರಣೆ ನಡೆಸಿರಲು ನಿರ್ಧರಿಸಿದೆ.

Nov. 14, 2025, 10:28 a.m.

ಭಾರೀ ಸಂಭ್ರಮಾಚರಣೆಗೆ ಬಿಜೆಪಿ ಸಿದ್ಧತೆ

ಪಟನಾದಲ್ಲಿ ಲಡ್ಡು ಮತ್ತು ಬೃಹತ್ ಔತಣಕೂಟಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣ ಸಿಂಗ್ ಕಲ್ಲು ಅವರು 500 ಕಿಲೋಗ್ರಾಂಗಳಷ್ಟು ಲಡ್ಡು ಹಾಗೂ ರಸಗುಲ್ಲಾಗೆ ಆರ್ಡರ್ ಮಾಡಿದ್ದಾರೆ.

Nov. 14, 2025, 10:16 a.m.

ಮ್ಯಾಜಿಕ್‌ ನಂಬರ್‌ ದಾಟಿ ಮುನ್ನುಗ್ಗುತ್ತಿರುವ NDA

ಎನ್‌ಡಿಎ:172
ಮಹಾಘಟಬಂಧನ: 67
ಇತರೆ: 4

Nov. 14, 2025, 10:13 a.m.

ಜೈಲಿನಲ್ಲಿರುವ ಜೆಡಿಯು ಅಭ್ಯರ್ಥಿಗೆ ಮುನ್ನಡೆ

ಜನತಾದಳ ಯುನೈಟೆಡ್ (ಜೆಡಿಯು) ಅಭ್ಯರ್ಥಿ ಮತ್ತು ರಾಜಕೀಯ ಪ್ರಬಲ ವ್ಯಕ್ತಿ ಅನಂತ್ ಸಿಂಗ್ ಪಾಟ್ನಾದ ಮೊಕಾಮಾ ಸ್ಥಾನದಿಂದ ಮುನ್ನಡೆ ಸಾಧಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಇವರು ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದರು.

Nov. 14, 2025, 9:42 a.m.

150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ

ಎನ್‌ಡಿಎ:151
ಮಹಾಘಟಬಂಧನ: 87
JSP: 4

Nov. 14, 2025, 9:40 a.m.

ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷಕ್ಕೆ ಮುನ್ನಡೆ

ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮತ ಎಣಿಕೆಯಲ್ಲಿ ಐದು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

Nov. 14, 2025, 9:32 a.m.

ಮೂರು ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ

ಯಾದವ್‌ ಬಾಹುಳ್ಯವುಳ್ಳ 31 ಕ್ಷೇತ್ರಗಳಲ್ಲಿ ಎನ್‌ಡಿಎ ಹಾಗೂ ಮಹಾಘಟ ಬಂಧನ 27 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

Nov. 14, 2025, 9:27 a.m.

ಪ್ರಶಾಂತ್‌ ಕಿಶೋರ್‌ ಪಕ್ಷ 4 ಕ್ಷೇತ್ರಗಳಲ್ಲಿ ಮುನ್ನಡೆ

ಮೊದಲ ಬಾರಿಗೆ ಸ್ಪರ್ಧಿಸಿರುವ ಪ್ರಶಾಂತ್‌ ಕಿಶೋರ್‌ ಅವರ ಜನ ಸುರಾಜ್‌ ಪಕ್ಷ ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

Nov. 14, 2025, 9:26 a.m.

ಭೋಜ್‌ಪುರಿ ಗಾಯಕ ಮತ್ತು ನಟ ಖೇಸರಿ ಲಾಲ್ ಯಾದವ್‌ಗೆ ಹಿನ್ನಡೆ

ಚಾಪ್ರಾ ಕ್ಷೇತ್ರದಿಂದ, RJD ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಭೋಜ್‌ಪುರಿ ಗಾಯಕ ಮತ್ತು ನಟ ಖೇಸರಿ ಲಾಲ್ ಯಾದವ್ ಅವರನ್ನು ಬಿಜೆಪಿಯ ಛೋಟಿ ಕುಮಾರಿ ಹಿಂದಿಕ್ಕಿದ್ದಾರೆ.

Nov. 14, 2025, 9:12 a.m.

ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ಗೆ ಮುನ್ನಡೆ

ವಿರೋಧ ಪಕ್ಷದ ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, ತಮ್ಮ ಕುಟುಂಬದ ಭದ್ರಕೋಟೆಯಾದ ರಾಘೋಪುರ್‌ನಿಂದ ಆರಂಭಿಕ ಮುನ್ನಡೆ ಸಾಧಿಸುತ್ತಿದ್ದಾರೆ.

Nov. 14, 2025, 9:06 a.m.

ಮ್ಯಾಜಿಕ್‌ ನಂಬರ್‌ ದಾಟಿದ ಎನ್‌ಡಿಎ

ಅಂಚೆ ಮತ ಎಣಿಕೆಯಲ್ಲಿ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿದ್ದು, 126 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಮಹಾಘಟಬಂಧನ 103 ಕ್ಷೇತ್ರ ಹಾಗೂ ಜನ ಸುರಾಜ್‌ ಪಾರ್ಟಿ 4 ಸ್ಥಾನದಲ್ಲಿ ಮುಂದಿದೆ. ನಿತೀಶ್‌ ಕುಮಾರ್‌ ಸಂಪುಟದ 10 ಸಚಿವರು ಭಾರೀ ಮುನ್ನಡೆಯನ್ನು ಸದ್ಯ ಕಾಯ್ದುಕೊಂಡಿದ್ದಾರೆ.

Nov. 14, 2025, 9 a.m.

ಅಂಚೆ ಮತ ಎಣಿಕೆಯಲ್ಲಿ ಹಾವು ಏಣಿ ಆಟ

ಬಿಹಾರ ಮತ ಎಣಿಕೆ ಪ್ರಕ್ರಿಯೆ ಕ್ಷಣ ಕ್ಷಣ ರೋಚಕವಾಗಿದ್ದು, ಅಂಚೆ ಮತ ಎಣಿಕೆಯಲ್ಲಿ ಹಾವು ಏಣಿ ಆಟ ಶುರುವಾಗಿದೆ. ಎನ್‌ಡಿಎ 121ಕ್ಷೇತಗಳಲ್ಲಿ ಮುನ್ನಡೆ ಕಾಯ್ಡುಕೊಂಡಿದೆ. ಮಹಾಘಟಬಂಧನ್‌ 98ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು ಟಫ್‌ ಫೈಟ್‌ ಕೊಟ್ಟಿದೆ.

Nov. 14, 2025, 8:43 a.m.

ಮತ ಎಣಿಕೆ ಆರಂಭ, ಎನ್‌ಡಿಎ ಮುನ್ನಡೆ

ಬಿಹಾರ ವಿಧಾನಸಭಾ ಚುನಾವಣೆ 2025ರ ಮತ ಎಣಿಕೆ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿದೆ. ಆರಂಭದ ಟ್ರೆಂಡ್‌ಗಳಲ್ಲಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಹಲವಾರು ಕ್ಷೇತ್ರಗಳಲ್ಲಿ ಮಹಾಘಟಬಂಧನ್ ಕೂಟಕ್ಕಿಂತ ಮುನ್ನಡೆ ಸಾಧಿಸಿದೆ.

Nov. 14, 2025, 8:41 a.m.

ತೇಜ್ ಪ್ರತಾಪ್ ಯಾದವ್‌ಗೆ ಮುನ್ನಡೆ

ಉಚ್ಚಾಟಿತ ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಮಹುವಾ ಸ್ಥಾನದಲ್ಲಿ ಮುನ್ನಡೆಯಲ್ಲಿದ್ದಾರೆ. ಅವರು ಹೊಸದಾಗಿ ಸ್ಥಾಪಿಸಲಾದ ಜನಶಕ್ತಿ ಜನತಾ ದಳ (ಜೆಜೆಡಿ) ದಿಂದ ಈ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

Nov. 14, 2025, 8:36 a.m.

ಮತ ಎಣಿಕೆಗೂ ಮುನ್ನ ತೇಜಸ್ವಿ ಯಾದವ್‌ ಬಹು ದೊಡ್ಡ ಆರೋಪ

ಅಕ್ರಮಗಳು (Vote Chori) ನಡೆದಿವೆ ಎಂದು ಆರೋಪಿಸಿ ಆರ್‌ಜೆಡಿ ಎಕ್ಸ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಆದರೆ ರೋಹ್ತಾಸ್ ಜಿಲ್ಲಾಡಳಿತ ಈ ಆರೋಪವನ್ನು ತಳ್ಳಿಹಾಕಿದೆ. ಎಲೆಕ್ಟ್ರಾನಿಕ್ ಮತ ಯಂತ್ರಗಳು (EVM) ಮತ್ತು ಮತಪೆಟ್ಟಿಗೆಗಳನ್ನು ತುಂಬಿದ ಟ್ರಕ್ ಬುಧವಾರ ತಡರಾತ್ರಿ ಅನುಮಾನಾಸ್ಪದ ಸಂದರ್ಭಗಳಲ್ಲಿ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಿದೆ ಎಂದು ಪಕ್ಷ ಆರೋಪಿಸಿದೆ.

Nov. 14, 2025, 8:16 a.m.

ಅಂಚೆ ಮತ ಎಣಿಕೆ ಪ್ರಾರಂಭ

ಮೊದಲಿಗೆ ಅಂಚೆ ಮತಗಳ ಎಣಿಕೆಯನ್ನು ಆರಂಭಿಸಲಾಗಿದೆ. ಆರಂಭಿಕವಾಗಿ ಎನ್‌ಡಿಎ 19 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದ್ದರೆ, ಮಹಾಘಟನಬಂಧನ್‌ 9 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

Nov. 14, 2025, 7:53 a.m.

ಸ್ಟ್ರಾಂಗ್‌ ರೂಂ ಓಪನ್‌, ಎಂಟು ಗಂಟೆಗೆ ಎಣಿಕೆ ಶುರು

243 ಸ್ಥಾನಗಳ ಬಿಹಾರ ವಿಧಾನಸಭಾ ಚುನಾವಣೆ 2025ರ ಮತ ಎಣಿಕೆ 8 ಗಂಟೆಗೆ ಆರಂಭವಾಗಲಿದ್ದು, ಸ್ಟ್ರಾಂಗ್‌ ರೂಂನ ಬಾಗಿಲುಗಳನ್ನು ಇದೀಗ ತೆರೆಯಲಾಗುತ್ತಿದೆ. ಎಣಿಕೆ ಮುಂದುವರೆದಂತೆ ಭಾರತೀಯ ಚುನಾವಣಾ ಆಯೋಗ (ECI) ಕ್ಷೇತ್ರವಾರು ಸುದ್ದಿ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಲಿದೆ. ಇವುಗಳನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಹಾಗೂ ʼವಿಶ್ವವಾಣಿʼಯಲ್ಲಿ ನೋಡಬಹುದು. ಮಧ್ಯಾಹ್ನದ ವೇಳೆಗೆ, ಪ್ರಮುಖ ಸ್ಪರ್ಧಿಗಳಲ್ಲಿ ಯಾರು - ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಅಥವಾ ಮಹಾಘಟಬಂಧನ್ - ಗೆಲುವಿನತ್ತ ಸಾಗುತ್ತಿದ್ದಾರೆ ಎಂಬುದು ಗೊತ್ತಾಗಲಿದೆ.

Nov. 14, 2025, 7:07 a.m.

ಆರ್‌ಜೆಡಿ ನಾಯಕನ ʼನೇಪಾಳದಂಥ ಪರಿಸ್ಥಿತಿʼ ಹೇಳಿಕೆ, ದೂರು

ಮತ ಎಣಿಕೆ ಆರಂಭವಾಗಲು ಕೆಲವೇ ಗಂಟೆಗಳು ಬಾಕಿ ಇರುವಾಗ, ಆರ್‌ಜೆಡಿ ನಾಯಕರೊಬ್ಬರು ಬಿಹಾರದಲ್ಲಿ ಭಾರಿ ವಿವಾದ ಹುಟ್ಟುಹಾಕಿದ್ದಾರೆ. ಮತ ಎಣಿಕೆಗೆ ಅಡ್ಡಿಯುಂಟಾದರೆ ಅಥವಾ ವಿಳಂಬವಾದರೆ ರಾಜ್ಯದಲ್ಲಿ "ನೇಪಾಳದಂತಹ ಪರಿಸ್ಥಿತಿ ಉಂಟಾಗಬಹುದು" ಎಂದು ಆರ್‌ಜೆಡಿಯ ಸುನಿಲ್‌ ಸಿಂಗ್ ಅವರು ಹೇಳಿದ್ದಾರೆ. "2020ರಲ್ಲಿ ಮತ ಎಣಿಕೆಯನ್ನು ನಾಲ್ಕು ಗಂಟೆ ಕಾಲ ಸ್ಥಗಿತಗೊಳಿಸಲಾಯಿತು. ಈ ಬಾರಿಯೂ ಅಂತಹದ್ದೇನಾದರೂ ಸಂಭವಿಸಿದರೆ, ಬೀದಿಗಳಲ್ಲಿ ನೇಪಾಳದಂತಹ ಪರಿಸ್ಥಿತಿಯನ್ನು ನಾವು ನೋಡುತ್ತೇವೆ" ಎಂದು ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

Nov. 14, 2025, 7:02 a.m.

ಬಿಗಿ ಭದ್ರತೆ, ವಿಜಯೋತ್ಸವಗಳಿಗೆ ಬ್ರೇಕ್‌

ಬಿಹಾರದ 243 ವಿಧಾನಸಭಾ ಸ್ಥಾನಗಳ ಮತ ಎಣಿಕೆಗೂ ಮುನ್ನ ನೂರಕ್ಕೂ ಹೆಚ್ಚು ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಲ್ಲಲ್ಲಿ ಘರ್ಷಣೆಗಳು ಮತ್ತು ಪ್ರಚೋದನಕಾರಿ ಹೇಳಿಕೆಗಳ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಫಲಿತಾಂಶಗಳ ನಂತರ ವಿಜಯೋತ್ಸವ ಮೆರವಣಿಗೆಗಳನ್ನು ನಿಷೇಧಿಸಲಾಗಿದೆ ಎಂದು ಬಿಹಾರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ವಿನಯ್ ಕುಮಾರ್ ಆದೇಶಿಸಿದ್ದಾರೆ.

Nov. 14, 2025, 6:55 a.m.

ಮತ ಎಣಿಕೆಗೂ ಮುನ್ನವೇ ತೇಜಸ್ವಿ ಯಾದವ್‌ ಆರೋಪ

ಶುಕ್ರವಾರ ಬಿಹಾರ ನಿರ್ಣಾಯಕ ಮತ ಎಣಿಕೆಗೆ ಸಜ್ಜಾಗುತ್ತಿದ್ದಂತೆ, ಆರ್‌ಜೆಡಿ ನಾಯಕ ಮತ್ತು ಮಹಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಪ್ರಸಾದ್ ಯಾದವ್ ಗುರುತರ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿ ಕಚೇರಿಗೆ ಸಂಬಂಧಿಸಿದ ಕೆಲವು ʼನಿವೃತ್ತ ಅಧಿಕಾರಿಗಳುʼ ಮತ್ತು ದೆಹಲಿಯ ʼಪ್ರಮುಖ ನಾಯಕರುʼ ಮಹಾಘಟಬಂಧನದ ವಿಜಯವನ್ನು ಘೋಷಿಸದಿರಲು ಪ್ರಯತ್ನಿಸುತ್ತಿದ್ದಾರೆ ಮತ್ತು ಎಣಿಕೆಯನ್ನು ನಿಧಾನಗೊಳಿಸಲು ಪಿತೂರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Nov. 14, 2025, 6:37 a.m.

ಎಲ್ಲ ಎಕ್ಸಿಟ್‌ ಪೋಲ್‌ಗಳೂ ಎನ್‌ಡಿಎ ಪರ, ಒಂದೇ ಒಂದು ವಿಭಿನ್ನ

ಇದುವರೆಗಿನ ಎಲ್ಲಾ ಎಕ್ಸಿಟ್ ಪೋಲ್‌ಗಳು ಎನ್‌ಡಿಎ ಪರ ಭವಿಷ್ಯ ನುಡಿದಿವೆ. ಎನ್‌ಡಿಎ 121ರಿಂದ 140 ಸ್ಥಾನಗಳನ್ನು ಗೆಲ್ಲುತ್ತದೆ. ಮಹಾಘಟಬಂಧನ್ 98-118 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ ಶೂನ್ಯ ಗಳಿಕೆ ಮಾಡಬಹುದು ಎಂದು ಸಮೀಕ್ಷೆದಾರರು ಅಂದಾಜಿಸಿದ್ದಾರೆ. ಆದರೆ ಆಕ್ಸಿಸ್ ಮೈ ಇಂಡಿಯಾ ಸರ್ವೇ ನಿಕಟ ಸ್ಪರ್ಧೆಯನ್ನು ಎದುರು ನೋಡಿದೆ. ಬಿಹಾರದಲ್ಲಿ ಆಡಳಿತಾರೂಢ ಎನ್‌ಡಿಎ ಬಹುಮತಕ್ಕಿಂತ ಕಡಿಮೆ ಸ್ಥಾನ ಪಡೆಯಬಹುದು ಎಂದು ಭವಿಷ್ಯ ನುಡಿದಿದೆ.

Nov. 14, 2025, 6:35 a.m.

ಎಂಟು ಗಂಟೆಗೆ ಮತ ಎಣಿಕೆ ಶುರು, ಸಿದ್ಧತೆಗಳು ಆರಂಭ

ಎಂಟು ಗಂಟೆಗೆ ಬಿಹಾರ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭವಾಗಲಿದೆ. ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 243 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯವು ಐತಿಹಾಸಿಕವಾಗಿ ಶೇ. 67.13 ರಷ್ಟು ಮತದಾನ ಮಾಡಿದೆ.