ಚಂದ್ರನಾಥ್ ರಥ್ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು; ಕೊಲೆಗೆ ಬಳಸಿದ ದ್ವಿಚಕ್ರ ವಾಹನದ ಮಾಲಕ ಪತ್ತೆ
Chandranath Rath Murder Case: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ ರಥ್ ಹತ್ಯೆಗೆ ಬಳಸಲಾದ ಬೈಕ್ ಪಶ್ಚಿಮ ಬಂಗಾಳ ನೋಂದಣಿ ಸಂಖ್ಯೆ 'WB44D1990' ಅನ್ನು ಹೊಂದಿದ್ದು, ವಿಭಾಷ್ ಕುಮಾರ್ ಭಟ್ಟಾಚಾರ್ಯ ಎಂಬವರ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬೈಕ್ ಅನ್ನು 2012ರ ಮೇ 4ರಂದು ನೋಂದಾಯಿಸಲಾಗಿದೆ.
ಹತ್ಯೆಯಾದ ಚಂದ್ರನಾಥ್ ರಥ್ (ಸಂಗ್ರಹ ಚಿತ್ರ) -
ಕೋಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ (Chandranath Rath) ಮೇಲೆ ಗುಂಡು ಹಾರಿಸಲು ದುಷ್ಕರ್ಮಿಗಳು ಕಳವು ಮಾಡಿದ ಬೈಕ್ ಬಳಸಿದ್ದಾರೆ ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ತಮ್ಮ ಮಹೀಂದ್ರಾ ಸ್ಕಾರ್ಪಿಯೋ ಕಾರಿನ ಮುಂಭಾಗದ ಪ್ಯಾಸೆಂಜರ್ ಸೀಟಿನಲ್ಲಿ ಕುಳಿತಿದ್ದ ರಥ್ ಅವರ ಮೇಲೆ ಬೈಕ್ ಸವಾರರು ಗುಂಡುಗಳ ಸುರಿಮಳೆಗೈದು ಪರಾರಿಯಾಗಿದ್ದರು. ಈ ಘಟನೆ ಬುಧವಾರ (ಮೇ 6) ರಾತ್ರಿ 10ರಿಂದ 10:10ರ ನಡುವೆ, ಉತ್ತರ 24 ಪರಗಣದ ಮಧ್ಯಮ ಗ್ರಾಮದಲ್ಲಿರುವ ರಥ್ ಅವರ ಮನೆಯಿಂದ 200 ಮೀಟರ್ ದೂರದಲ್ಲಿ ನಡೆದಿತ್ತು.
ಕೊಲೆಗೆ ಬಳಸಲಾದ ಬೈಕ್ ಪಶ್ಚಿಮ ಬಂಗಾಳ ನೋಂದಣಿ ಸಂಖ್ಯೆ 'WB44D1990' ಅನ್ನು ಹೊಂದಿದ್ದು, ವಿಭಾಷ್ ಕುಮಾರ್ ಭಟ್ಟಾಚಾರ್ಯ ಎಂಬವರ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬೈಕ್ ಅನ್ನು 2012ರ ಮೇ 4ರಂದು ನೋಂದಾಯಿಸಲಾಗಿದೆ.
ಸುವೇಂದು ಅಧಿಕಾರಿ ಆಪ್ತ ಚಂದ್ರನಾಥ ರಥ್ ಹತ್ಯೆಗೆ ಮುನ್ನ ಆಗಿದ್ದೇನು?
ಗುರುವಾರ (ಮೇ 7) ಪೊಲೀಸರು ವಿಭಾಷ್ ಅವರ ವಿಳಾಸಕ್ಕೆ ಭೇಟಿ ನೀಡಿದಾಗ, ಅವರ ಯಾವುದೇ ಸುಳಿವು ಸಿಗಲಿಲ್ಲ. ಆ ಮನೆಯಲ್ಲಿ ಸರ್ಕಾರಿ ಉದ್ಯೋಗಿ ಧರ್ಮವೀರ್ ಎಂಬುವವರು ವಾಸಿಸುತ್ತಿದ್ದಾರೆ. ಧರ್ಮವೀರ್ 2014 ರಿಂದ ಅಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡಿದ್ದು, ವಿಭಾಷ್ ಎಂಬ ಹೆಸರಿನ ಯಾರೂ ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ದಾಳಿಕೋರರು ಬಳಸಿದ್ದ ಬೈಕ್ ಕೂಡ ಸ್ಥಳದಲ್ಲಿ ಇರಲಿಲ್ಲ.
ಶುಕ್ರವಾರ (ಮೇ 8) ಪೊಲೀಸರು ಮೂಲ ಬೈಕ್ ಮಾಲೀಕರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲಗಳ ಪ್ರಕಾರ, ಅವರು ತಮ್ಮ ಬೈಕ್ ಕಳ್ಳತನವಾಗಿದೆ ಎಂದು ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಟಿಎಂಸಿ ಕೈವಾಡ
ಚಂದ್ರನಾಥ್ ರಥ್ ಹತ್ಯೆಗೆ ಟಿಎಂಸಿಯೇ ಕಾರಣ ಎಂದು ಅವರ ತಾಯಿ ಹಸಿರಾಣಿ ರಥ್ ಆಕ್ರೋಶ ಹೊರಹಾಕಿದ್ದಾರೆ. ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. “ಹೊಸ ಸರ್ಕಾರ ನನ್ನ ಮಗನಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು. ಅಪರಾಧಿಗಳಿಗೆ ಮರಣದಂಡನೆ ವಿಧಿಸಬಾರದು. ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ನಾನು ಬಯಸುತ್ತೇನೆ. ನಾನು ಕೂಡ ಒಬ್ಬ ತಾಯಿ, ಬೇರೆ ಯಾರ ಮಕ್ಕಳು ಕೂಡ ಸಾಯಬಾರದು” ಎಂದು ಅವರು ಹೇಳಿದ್ದಾರೆ.